ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ ತಲಾ ಇಬ್ಬರಂತೆ ಸ್ತ್ರೀರೋಗ, ಅರಿವಳಿಕೆ ಹಾಗೂ ಮಕ್ಕಳ ತಜ್ಞರನ್ನು ಕಡ್ಡಾಯಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಒತ್ತಡ ಇಲ್ಲದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಲಾಗುವುದು. ಅರಿವಳಿಕೆ ಹಾಗೂ ಸ್ತ್ರೀರೋಗ ತಜ್ಞರು ತಲಾ ಇಬ್ಬರು ಇದ್ದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಸಿದ್ಧಗೊಂಡಿರುವ ಕ್ಯಾಥ್‌ಲ್ಯಾಬ್ ಶೀಘ್ರವಾಗಿ ಕಾರ್ಯಾರಂಭಿಸಲಿದೆ. ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಂಜಿಯೋಪ್ಲಾಸ್ಟಿ ಮೂಲಕ ಸ್ಟಂಟ್ ಅಳವಡಿಕೆ ಸೇರಿದಂತೆ ಹೃದ್ರೋಗ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿರಲಿದೆ ಎಂದು ಅವರು ಮಾಹಿತಿ ನೀಡಿದರು.




