Advertisement
The Rural Mirror ಕಾಳಜಿ

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

Share

ಕರಾವಳಿ ಕರ್ನಾಟಕದಲ್ಲಿ ಅಡಿಕೆ ಕೃಷಿ ಬರೀ ಕೃಷಿಯಲ್ಲ. ಅದು ಸಂಸ್ಕೃತಿಯ ಪ್ರತೀಕ, ಬದುಕಿನ ಉಸಿರು. ಅಷ್ಟೇ ಅಲ್ಲ, ಮಕ್ಕಳ ಶಿಕ್ಷಣ, ಸಾಲದ ಹೊಣೆ, ಮದುವೆಯ ಕನಸು, ವೃದ್ಧಾಪ್ಯದ ಭರವಸೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕಾಡಂಚಿನ ಹಳ್ಳಿಗಳಲ್ಲಿನ ಅಡಿಕೆ ತೋಟ ಎಂದರೆ ಅದು ಕೇವಲ ಗಿಡಗಳ ಸಾಲು ಅಲ್ಲವೇ ಅಲ್ಲ. ಅದು ತಲೆತಲಾಂತರದಿಂದ ಕಟ್ಟಿಕೊಂಡ ಬದುಕು. ಆದರೆ ಇವತ್ತು ಆ ಬದುಕು ಭಯದಲ್ಲಿ ನಲುಗುತ್ತಿದೆ. ಕಾರಣ, ಕಾಡು ಪ್ರಾಣಿಗಳ ಹಾವಳಿ. ಕಾಡು ಪ್ರಾಣಿಗಳ ಹಾವಳಿ ಈ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲ ಕೊಡಗು, ಹಾಸನ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಸಮಸ್ಯೆ ಇದೆ.

ಮಂಗ, ಕಾಡು ಹಂದಿ, ನವಿಲು, ಜಿಂಕೆ, ಕಡವೆ, ಕಾಡಾನೆ… ಇಲ್ಲಿ ಹೆಸರು ಬದಲಾದರೂ ನೋವು ಒಂದೇ. ಒಂದು ರಾತ್ರಿ ಸಾಕು, ವರ್ಷಗಳ ಶ್ರಮ ಮಣ್ಣಾಗಲು. ಬೆಳಗಿನ ಜಾವ ತೋಟಕ್ಕೆ ಹೋದ ರೈತನಿಗೆ ಉಳಿಯುವುದು ಮುರಿದ ಗಿಡಗಳು, ಚಿದ್ರವಾದ ನೆಲ, ಮತ್ತು ಎದೆಯೊಳಗೆ ಚುಚ್ಚುವ ನಿರಾಶೆ. “ನಮ್ಮ ತೋಟ ಕಾಡಿಗೆ ಸೇರಿಲ್ಲ, ಆದರೂ ನಾವು ಕಾಡಿನ ಬೆಲೆ ಕಟ್ಟುತ್ತಿದ್ದೇವೆ” ಎಂದು ಈಚೆಗೆ ಹೇಳಿದ ರೈತನ ಮಾತು,  ಕರಾವಳಿಯ, ಕಾಡು ಪ್ರಾಣಿಗಳ ಹಾವಳಿ ಎದುರಿಸುತ್ತಿರುವ ರೈತ ಹೃದಯದ ಧ್ವನಿಯಾಗಿದೆ.

ಇದು ಅಪರೂಪದ ಘಟನೆ ಅಲ್ಲ. ಗೋವಾದ ಸತ್ತಾರಿಯಲ್ಲಿ ಗೇರು ತೋಟಗಳ ನಾಶ, ಪುತ್ತೂರಿನಲ್ಲಿ ಅಡಿಕೆ ಗಿಡಗಳ ಉಜ್ಜುವಿಕೆ, ಉತ್ತರ ಕನ್ನಡದಲ್ಲಿ ಬಾಳೆ ತೋಟಗಳ ಧ್ವಂಸ, ಸುಳ್ಯದಲ್ಲಿ ರಬ್ಬರ್‌ ಬೆಳೆಗಳಿಗೆ ಕಡವೆಗಳ ದಾಳಿ, ಕೊಡಗಿನಲ್ಲಿ ಕಾಫಿ ತೋಟ ಹಾನಿ, ಸಕಲೇಶಪುರದಲ್ಲಿ ಗದ್ದೆ ಹುಡಿ.. ಇವೆಲ್ಲ ಒಂದೇ ಕಥೆಯ ಬೇರೆ ಬೇರೆ ಅಧ್ಯಾಯಗಳು. ಒಂದೊಂದು ಕಥೆಗಳು. ಅರಣ್ಯ ಅಂಚಿನ ಕೃಷಿ ಭೂಮಿಗಳು ಇಂದು ಮಾನವ–ವನ್ಯಜೀವಿ ಸಂಘರ್ಷದ ಶಾಶ್ವತ ರಣರಂಗಗಳಾಗಿವೆ. ಆದರೆ, ಆ ರಣರಂಗದಲ್ಲಿ ರಕ್ಷಣೆಯಿಲ್ಲದ ಸೈನಿಕನಂತೆ ನಿಂತಿರುವುದು ರೈತ.

ಕಾಡು ಪ್ರಾಣಿಗಳನ್ನು ತಡೆಯಲು ರೈತನ ಕೈಯಲ್ಲಿ ಏನಿದೆ? ದುಬಾರಿ ವಿದ್ಯುತ್ ಅಥವಾ ಸೌರ ಬೇಲಿ – ಇದು ಎಲ್ಲರಿಗೂ ಸಾಧ್ಯವಿಲ್ಲ. ಕಾನೂನುಗಳಿವೆ, ಆದರೆ ಅವು ರಕ್ಷಣೆಗೆಲ್ಲಾ ಕಡಿವಾಣವಾಗಿವೆ. “ತೋಟ ನಮ್ಮದು, ಆದರೆ ರಕ್ಷಣೆ ನಮ್ಮ ಕೈಯಲ್ಲಿಲ್ಲ” ಎಂಬ ಅಸಹಾಯಕತೆಯೇ ಇಂದು ಕೃಷಿಕನ ಬದುಕು. ಪ್ರತಿ ದಾಳಿಯ ನಂತರ ಪರಿಹಾರ ಘೋಷಣೆ, ಸಮಿತಿ, ಸಭೆ. ಪರಿಹಾರದ ಭರವಸೆ. ಇವು ಕಾಗದದಲ್ಲೇ ಉಳಿಯುತ್ತಿವೆ. ತೋಟದಲ್ಲಿ ನಿಂತು ರೈತನ ಕಣ್ಣಲ್ಲಿ ನೀರು ನೋಡುವವರು ಅಪರೂಪ. ಅಂತೂ ಪರಿಹಾರ ಸಿಕ್ಕಿದರೆ ಮೂರುಕಾಸು ಎಸೆದು ಬಿಡುವ ಮನೋಭಾವ.

ಈ ಹಾವಳಿಯ ಪರಿಣಾಮ ಬೆಳೆ ನಷ್ಟಕ್ಕೆ ಮಾತ್ರ ಸೀಮಿತವಲ್ಲ. ಅದು ಗ್ರಾಮೀಣ ಆರ್ಥಿಕತೆಯ ನರನಾಡಿಗಳನ್ನೇ ಕತ್ತರಿಸುತ್ತಿದೆ. ಅಡಿಕೆ ಅಥವಾ ಭತ್ತ, ಕಾಫಿ, ತೆಂಗು ಅಥವಾ ಯಾವುದೇ ಬೆಳೆ ನಾಶವಾದರೆ ರೈತನ ಆದಾಯ ಮಾತ್ರ ಕುಸಿಯುವುದಿಲ್ಲ; ಕೂಲಿ ಕಾರ್ಮಿಕನ ಕೆಲಸ, ಸ್ಥಳೀಯ ವ್ಯಾಪಾರ, ಮಾರುಕಟ್ಟೆ, ಎಲ್ಲವೂ ಕುಗ್ಗುತ್ತವೆ. ಸಾಲದ ಒತ್ತಡ ಹೆಚ್ಚುತ್ತದೆ. ಮಕ್ಕಳ ಶಿಕ್ಷಣ ಪ್ರಶ್ನಾರ್ಥಕವಾಗುತ್ತದೆ. ಯುವಕರು ಕೃಷಿಯಿಂದ ಕೈಬಿಟ್ಟು ನಗರಗಳತ್ತ ಹೊರಡುತ್ತಾರೆ. ಹಳ್ಳಿಯಲ್ಲಿ ಉಳಿಯುವುದು ವೃದ್ಧರು, ಮಹಿಳೆಯರು ಮತ್ತು ಭಯ..! ಮತ್ತೆ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎನ್ನುವ ಕೂಗು, ರೋದನವೇ ಹೆಚ್ಚುತ್ತದೆ. ಇದಕ್ಕೆ ಪರಿಹಾರಗಳು ಕಾಣುವುದಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಜೊತೆಗೆ ಮೌನವಾಗಿ ಬೆಳೆಯುತ್ತಿರುವ ಮತ್ತೊಂದು ದುರಂತ ಇದೆ, ಮಾನಸಿಕ ಆರೋಗ್ಯ. ರಾತ್ರಿ ಹೊಲ ಕಾಯುವ ಭಯ, ಆನೆ–ಹಂದಿ–ಚಿರತೆ ಎದುರಾಗುವ ಆತಂಕ, ನಿದ್ರಾಹೀನತೆ ,ಇವು ರೈತನ ದೇಹವನ್ನಷ್ಟೇ ಅಲ್ಲ, ಮನಸ್ಸನ್ನೂ ಕುಗ್ಗಿಸುತ್ತಿವೆ. ತೋಟಕ್ಕೆ ರಾತ್ರಿ ನೀರುಣಿಸಲು ಅಥವಾ ಗೇಟ್‌ವಾಲ್ವ್‌ ತಿರುಗಿಸಲೂ ತೆರಳಲು ಭಯ,”ಚಿರತೆ ಇದೆಯಂತೆ” ಎಚ್ಚರ, ನಾಳೆ ನೀರುಣಿಸೋವಂತೆ ಎನ್ನುವ ಭಯ ಹೆಚ್ಚಾಗುತ್ತದೆ. ಕೃಷಿ ಇಂದು ಗೌರವಯುತ ವೃತ್ತಿ ಅಲ್ಲ, ಅಪಾಯಕರ ಬದುಕು ಎಂಬ ಭಾವನೆ ಬೆಳೆದುಬರುತ್ತಿದೆ. ಇದು ಯಾವ ಸಮಾಜಕ್ಕೂ ಒಳ್ಳೆಯ ಸೂಚನೆ ಅಲ್ಲ.

ತಜ್ಞರು ಹಲವು ಕಾರಣಗಳನ್ನು ಹೇಳುತ್ತಿದ್ದಾರೆ, ಅರಣ್ಯ ಕಡಿಮೆಯಾಗುತ್ತಿದೆ, ಕಾಡಿನೊಳಗಿನ ಆಹಾರ ಕಡಿಮೆಯಾಗಿದೆ, ಹವಾಮಾನ ಬದಲಾವಣೆ ಆಹಾರ ಚಕ್ರವನ್ನು ಹಾಳುಮಾಡಿದೆ. ಇವೆಲ್ಲ ಸತ್ಯವೇ. ಆದರೆ, ಆ ಸತ್ಯಗಳ ಬೆಲೆಯನ್ನು ಒಬ್ಬ ರೈತ ಮಾತ್ರ ಕಟ್ಟಬೇಕೇ? ಕಾಡು ಉಳಿಯಬೇಕು ಎಂಬುದು ಎಷ್ಟು ಅಗತ್ಯವೋ, ಕೃಷಿ ಮತ್ತು ಕೃಷಿಕ ಉಳಿಯಬೇಕು ಎಂಬುದೂ ಅಷ್ಟೇ ಅನಿವಾರ್ಯ. ಕಾಡಿನ ನಡುವೆ ದೊಡ್ಡ ದೊಡ್ಡ ಯೋಜನೆಗಳೂ ಅನುಷ್ಟಾನವಾಗುವುದಕ್ಕೆ ಕೂಡಾ ಈಗ ರೈತ ಬೆಲೆ ತೆರಬೇಕಾಗಿ ಬಂದಿದೆ. ಹಣ ಮುಂದೆ ರೈತನ ಧ್ವನಿ ಕ್ಷೀಣವಾಗುತ್ತಿದೆ.

ಬೆಳೆ ವಿಮೆಯಲ್ಲಿ ಕಾಡು ಪ್ರಾಣಿ ದಾಳಿಯನ್ನು ಸೇರಿಸುವಂತಹ ನಿರ್ಧಾರಗಳು ಭರವಸೆ ಕೊಡುತ್ತವೆ. ಆದರೆ ಹಣದಿಂದ ಮಾತ್ರ ಈ ಗಾಯ ಗುಣವಾಗದು. ರೈತನಿಗೆ ಬೇಕಿರುವುದು ಭದ್ರತೆ. ತೋಟಕ್ಕೆ, ಬದುಕಿಗೆ, ಭವಿಷ್ಯಕ್ಕೆ. ಸರ್ಕಾರಿ ಸಹಾಯಧನದ ರಕ್ಷಣಾ ಬೇಲಿ, ಕಾಡು ಪ್ರಾಣಿ ನಿರ್ವಹಣೆಗೆ ಪ್ರತ್ಯೇಕ ಕಾಡಂಚಿನ ಕಾರ್ಯಯೋಜನೆ, ಅರಣ್ಯ ಪುನರುಜ್ಜೀವನ, ಇಲಾಖೆಗಳ ಕಾರ್ಯಾಚರಣೆ, ಇವೆಲ್ಲ ಕೇವಲ ಶಿಫಾರಸುಗಳಾಗಿ ಉಳಿಯಬಾರದು.

ಒಟ್ಟಿನಲ್ಲಿ, ಇದು ಕಾಡು ಮತ್ತು ಕೃಷಿಯ ನಡುವೆ ನಡೆಯುತ್ತಿರುವುದು ಯುದ್ಧವಲ್ಲ. ಇದು ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ನಡುವಿನ ಹೋರಾಟ. ಕಾಡು ನಾಶವಾಗುತ್ತಿದೆ… ಪ್ರಾಣಿಗಳು ತೋಟಕ್ಕೆ ಇಳಿಯುತ್ತಿವೆ. ಆದರೆ ರೈತ ಮೌನವಾಗಿ ಕರಗುತ್ತಿದ್ದಾನೆ. ಆ ಮೌನವನ್ನು ಈಗಲೂ ಕೇಳದಿದ್ದರೆ, ನಾಳೆ ಉಳಿಯುವುದು ಕಾಡೂ ಅಲ್ಲ, ಕೃಷಿಯೂ ಅಲ್ಲ. ಬದಲಾಗಿ ಪಶ್ಚಾತ್ತಾಪ ಮಾತ್ರ. ಎಚ್ಚರಗೊಳ್ಳುವುದು ಮುಖ್ಯ ಅಷ್ಟೇ.

ಕಾಡಂಚಿನ ಪ್ರದೇಶದ ಕೃಷಿಕರು ಈಗಾಗಲೇ  ಅನುಭವಿಸುತ್ತಿರುವ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಇಲ್ಲಿ ಅಭಿಪ್ರಾಯ ತಿಳಿಸಿ….

https://docs.google.com/forms/d/e/1FAIpQLSes3rhIGu_bSq7C8d6D6BzON705uxzQRI7i4T8hsX4-3EyfRQ/viewform?usp=publish-editor

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

13 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

19 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

1 day ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago