Advertisement
MIRROR FOCUS

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

Share

ದಕ್ಷಿಣ-ಪೂರ್ವ ಏಷ್ಯಾ ದೇಶಗಳಿಂದ ಭಾರತಕ್ಕೆ ಅಡಿಕೆ ಆಮದು ಮಾಡಿಕೊಂಡು, ಅದರ ಮೂಲ ದೇಶವನ್ನು ಬಾಂಗ್ಲಾದೇಶವೆಂದು ತಪ್ಪಾಗಿ ಘೋಷಿಸಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಪ್ರದೇಶ (SAFTA) ಅಡಿಯಲ್ಲಿ ಲಭ್ಯವಿರುವ ಸುಂಕ ವಿನಾಯಿತಿಯನ್ನು ಅಕ್ರಮವಾಗಿ ಪಡೆಯುತ್ತಿದ್ದ ದೊಡ್ಡ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.

ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ಪ್ರಕಾರ, ತಿಂಗಳ ಕಾಲ ನಡೆದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ನಡೆದ ತನಿಖೆಯಿಂದ ಕಳೆದ ಕೆಲವು ವರ್ಷಗಳಲ್ಲಿ ₹2,500 ಕೋಟಿಗೂ ಅಧಿಕ ಕಸ್ಟಮ್ಸ್‌ ಸುಂಕದ ಸಂಭಾವ್ಯ ಆದಾಯ ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದೆ.

ಭಾರತಕ್ಕೆ ಅಡಿಕೆ ಆಮದು ಮಾಡಿಕೊಳ್ಳುವಾಗ ಸಾಮಾನ್ಯವಾಗಿ 100% ಮೂಲ ಕಸ್ಟಮ್ಸ್‌ ಸುಂಕ ವಿಧಿಸಲಾಗುತ್ತದೆ. ಆದರೆ SAFTA ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ಅರ್ಹವಾಗಿರುವ ಬಾಂಗ್ಲಾದೇಶ ಮೂಲದ ಅಡಿಕೆಗೆ ಸಂಪೂರ್ಣ ಕಸ್ಟಮ್ಸ್‌ ಸುಂಕ ವಿನಾಯಿತಿ ದೊರೆಯುತ್ತದೆ. ಇದೇ ನಿಯಮವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು DRI ತನಿಖೆ ತಿಳಿಸಿದೆ.

ಇಂಡೋನೇಷ್ಯಾ, ಥಾಯ್ಲೆಂಡ್, ಮಲೇಷ್ಯಾದ ಅಡಿಕೆ :  DRI ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜಾಲದ ಸದಸ್ಯರು ಇಂಡೋನೇಷ್ಯಾ, ಥಾಯ್ಲೆಂಡ್, ಮಲೇಷ್ಯಾ ಹಾಗೂ ಇತರ ದಕ್ಷಿಣ-ಪೂರ್ವ ಏಷ್ಯಾ ದೇಶಗಳಿಂದ ಅಡಿಕೆಯನ್ನು ಸಂಗ್ರಹಿಸಿ ಭಾರತಕ್ಕೆ ಆಮದು ಮಾಡುತ್ತಿದ್ದರು. ಆದರೆ ಭಾರತಕ್ಕೆ ಆಮದು ಮಾಡುವ ದಾಖಲೆಗಳಲ್ಲಿ ಅಡಿಕೆಯ ಮೂಲ ದೇಶವನ್ನು ಬಾಂಗ್ಲಾದೇಶವೆಂದು ತಪ್ಪಾಗಿ ಘೋಷಿಸಲಾಗುತ್ತಿತ್ತು.

ತನಿಖೆಯ ಪ್ರಕಾರ, ದಕ್ಷಿಣ-ಪೂರ್ವ ಏಷ್ಯಾದಿಂದ ಬಂದ ಅಡಿಕೆಯನ್ನು ಬಾಂಗ್ಲಾದೇಶದ ಒಂದು ರಫ್ತು ಸಂಸ್ಕರಣಾ ವಲಯ (EPZ)ಕ್ಕೆ ಸಾಗಿಸಿ, ನಂತರ ಕಂಟೇನರ್‌ಗಳು ಮತ್ತು ಚೀಲಗಳನ್ನು ಬದಲಿಸಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಈ ಸರಕುಗಳನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ಬಿಂಬಿಸಲಾಗುತ್ತಿತ್ತು. ಇದಕ್ಕಾಗಿ ಬಾಂಗ್ಲಾದೇಶದ ಅಧಿಕಾರಿಗಳಿಂದ SAFTA ಮೂಲ ಪ್ರಮಾಣಪತ್ರಗಳನ್ನು (Certificate of Origin) ಅಕ್ರಮವಾಗಿ ಪಡೆದುಕೊಳ್ಳಲಾಗಿತ್ತು ಎಂದು DRI ಹೇಳಿದೆ.

ದಾಖಲೆ, ಸಾಗಣೆ, ಹಣದ ವಹಿವಾಟಿನಲ್ಲೂ ಜಾಲ :  ಈ ಜಾಲದ ಪ್ರಮುಖರು ಭಾರತೀಯ ಆಮದುದಾರರಿಂದ ಸರಕುಗಳ ಮಾರ್ಗ ಬದಲಾವಣೆ, ದಾಖಲೆ ಸಿದ್ಧಪಡಿಸುವುದು, ಕಸ್ಟಮ್ಸ್‌ ಕ್ಲಿಯರೆನ್ಸ್‌ ಮತ್ತು ಸಾಗಣೆ ವ್ಯವಸ್ಥೆಗಾಗಿ ದೊಡ್ಡ ಪ್ರಮಾಣದ ಕಮಿಷನ್‌ ಪಡೆಯುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಕ್ರಮ ಹಣದ ವಹಿವಾಟಿನಲ್ಲಿ ಹವಾಲಾ ಮಾರ್ಗಗಳು ಹಾಗೂ ನಕಲಿ ಸಂಸ್ಥೆಗಳನ್ನು ಬಳಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೋಲ್ಕತ್ತಾ ಮತ್ತು ವಿಶಾಖಪಟ್ಟಣಂನಲ್ಲಿ ಆಮದುದಾರರು, ಕಸ್ಟಮ್ಸ್‌ ಬ್ರೋಕರ್‌ಗಳು ಹಾಗೂ ಆಮದು-ರಫ್ತು ನೋಂದಣಿ ಹೊಂದಿರುವ ಸಂಸ್ಥೆಗಳಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿತ್ತು. ಶೋಧದ ವೇಳೆ ದಕ್ಷಿಣ-ಪೂರ್ವ ಏಷ್ಯಾದ ಮೂಲದ ಅಡಿಕೆ ಎಂಬುದನ್ನು ಸೂಚಿಸುವ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳು ಪತ್ತೆಯಾಗಿವೆ. ಸುಮಾರು ₹75 ಲಕ್ಷ ನಗದು ಹಾಗೂ ಸುಮಾರು 160 ಮೆಟ್ರಿಕ್ ಟನ್ ಅಡಿಕೆ ಸರಕು ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್‌ ಬ್ರೋಕರ್‌ ಪರವಾನಗಿ ಅಮಾನತು : ಪ್ರಕರಣದಲ್ಲಿ ಗುರುತಿಸಲಾದ ಬಹುತೇಕ ಅಕ್ರಮ ಅಡಿಕೆ ಆಮದು ಸರಕುಗಳ ಕಸ್ಟಮ್ಸ್‌ ಕ್ಲಿಯರೆನ್ಸ್‌ಗೆ ಒಂದು ಕಸ್ಟಮ್ಸ್‌ ಬ್ರೋಕರ್‌ ಸಂಸ್ಥೆ ಪ್ರಮುಖವಾಗಿ ಕಾರಣವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. DRI ತನಿಖೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ಆ ಸಂಸ್ಥೆಯ ಕಸ್ಟಮ್ಸ್‌ ಬ್ರೋಕರ್‌ ಪರವಾನಗಿಯನ್ನು ಅಮಾನತುಗೊಳಿಸಿದೆ. ಪ್ರಕರಣದಲ್ಲಿ ಇದುವರೆಗೆ 9 ಮಂದಿ ಬಂಧನಕ್ಕೊಳಗಾಗಿದ್ದಾರೆ.

ದೇಶೀಯ ಅಡಿಕೆ ಬೆಳೆಗಾರರಿಗೆ ಏನು ಪರಿಣಾಮ? :  ಈ ಪ್ರಕರಣದ ಅತ್ಯಂತ ಮಹತ್ವದ ಅಂಶವೆಂದರೆ, ಇದು ಕೇವಲ ಸರ್ಕಾರದ ತೆರಿಗೆ ಆದಾಯಕ್ಕೆ ಉಂಟಾದ ನಷ್ಟದ ವಿಚಾರವಲ್ಲ.  ಕೇಂದ್ರ ಹಣಕಾಸು ಸಚಿವಾಲಯವೇ ಅಕ್ರಮ ಅಡಿಕೆ ಆಮದುಗಳು ದೇಶೀಯ ಅಡಿಕೆ ಬೆಳೆಗಾರರು ಮತ್ತು ಕಾನೂನುಬದ್ಧ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಹೇಳಿದೆ. ಇಂತಹ ಆಮದುಗಳು ಮಾರುಕಟ್ಟೆಯಲ್ಲಿ ಅನ್ಯಾಯದ ಬೆಲೆ ವ್ಯತ್ಯಾಸವನ್ನು ಸೃಷ್ಟಿಸಿ, ಕಾನೂನುಬದ್ಧ ವ್ಯಾಪಾರಿಗಳಿಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಹಾಳುಮಾಡಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The Directorate of Revenue Intelligence (DRI) has dismantled a major network allegedly importing areca nuts from Indonesia, Thailand, Malaysia and other Southeast Asian countries while falsely declaring Bangladesh as the country of origin to fraudulently claim customs duty exemptions under SAFTA. According to the Ministry of Finance, the investigation has revealed a potential customs revenue loss of more than ₹2,500 crore over recent years. DRI seized around ₹75 lakh in cash and a live consignment of about 160 metric tonnes of areca nuts, while nine people have been arrested. Investigators also found evidence of routing the nuts through an Export Processing Zone in Bangladesh, changing containers and bags, and obtaining fraudulent SAFTA Certificates of Origin. The ministry said such illegal imports can adversely affect domestic areca nut growers by creating unfair price distortions and disrupting legitimate trade.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

20 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 days ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

3 days ago