ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಡಿಕೆಗೆ ಹಳದಿ ರೋಗ ಬಾಧಿಸಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದರು. ಯಾವುದೇ ಪರಿಹಾರ ಇಲ್ಲದೆ ಪರ್ಯಾಯ ಬೆಳೆಯತ್ತ ಚಿಂತನೆ ಮಾಡುತ್ತಿದ್ದಾರೆ. ಈ ನಡುವೆ ಇದೀಗ ಜೈವಿಕ ಗೊಬ್ಬರವೊಂದು ಪರಿಹಾರವಾಗುತ್ತದೆ ಎನ್ನುವ ಆಶಾವಾದ ಗರಿಗೆದರಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ ಪ್ರದೇಶದಲ್ಲಿ ಅಡಿಕೆ ಹಳದಿ ರೋಗ ಬಾಧಿಸಿದೆ. ಹಲವು ವರ್ಷಗಳಿಂದ ಹಳದಿ ರೋಗದಿಂದ ಪೀಡಿತವಾಗಿದ್ದ ಮಡಪ್ಪಾಡಿ ಗ್ರಾಮದ ಯತೀಶ್ ಗೋಳ್ಯಾಡಿ ಅವರ ತೋಟದಲ್ಲಿ ಇದೀಗ ಪ್ರಾಯೋಗಿಕವಾಗಿ ಈ ಜೈವಿಕ ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈ ಜೈವಿಕ ಗೊಬ್ಬರ ಬಳಕೆಯಿಂದ ಹಳದಿಯಾಗಿರುವ ಎಲೆಗಳು 6 ತಿಂಗಳಲ್ಲಿ ಮರು ಸ್ಥಿತಿಗೆ ಬರುತ್ತದೆ ಎನ್ನುವುದು ಈ ಜೈವಿಕ ಗೊಬ್ಬರದ ಫಲಿತಾಂಶ ಎಂದು ಹೇಳಲಾಗಿದೆ. ಹೀಗಾಗಿ 6 ತಿಂಗಳ ಕಾಲ ಈಗ ಕೃಷಿಕರು ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಜೈವಿಕ ಗೊಬ್ಬರದ ಮೂಲಕ ಹಳದಿ ರೋಗ ನಿಯಂತ್ರಣವಾದರೆ ಜಿಲ್ಲೆಯ ಎಲ್ಲಾ ಕೃಷಿಕರು ಈ ಬಗ್ಗೆ ಯೋಚಿಸಬಹುದಾಗಿದೆ. 6 ತಿಂಗಳ ಬಳಿಕದ ಫಲಿತಾಂಶ ವೀಕ್ಷಿಸಿ ಬಳಿಕ ಅಡಿಕೆ ಕೃಷಿಕರು ನಿರ್ಧಾರ ಮಾಡಬಹುದಾಗಿದೆ.