ಅಡಿಕೆ ಮಾರುಕಟ್ಟೆ ಕಳೆದ ಸುಮಾರು 15 ದಿನಗಳಿಂದ ಸ್ಥಿರವಾಗಿರುವಂತೆಯೇ ಮಾರುಕಟ್ಟೆಯ ಒಳಗೆ ಸಂಚಲನ ಶುರುವಾಗಿದೆ. ಅಡಿಕೆ ಧಾರಣೆಗೆ ಇನ್ನೊಂದು ಜಂಪ್ ಸಿಗಲಿದೆ. ಪೂರಕ ವಾತಾವರಣ ಇದ್ದರೂ ಜಂಪ್ ಯಾವಾಗ ಎನ್ನುವುದು ಪ್ರಶ್ನೆಯಾಗಿದೆ. ಮಾರುಕಟ್ಟೆಯಲ್ಲಿನ ಬೇಡಿಕೆ ಈಗ ಮತ್ತೆ ಹೆಚ್ಚಾಗುತ್ತಿದೆ. ಹೀಗಾಗಿ ದೀಪಾವಳಿ ಆಸುಪಾಸಿನಲ್ಲಿ ಒಂದು ಜಂಪ್ ಸಿಗುವ ನಿರೀಕ್ಷೆ ಇದೆ. ಈ ನಡುವೆಯೇ ಬೃಹತ್ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಗೆ ಪತ್ತೆಯಾಗಿದ್ದು ಸುಮಾರು 40 ಸಾವಿರ ಕೆಜಿಯ ಸುಮಾರು 1.56 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಶುಕ್ರವಾರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕೊರೋನಾ ನಂತರ ಭಾರತದ ಒಳಗೆ ಯಾವುದೇ ವಸ್ತುಗಳು ಕಳ್ಳಸಾಗಾಣಿಕೆಗೆ ಕಷ್ಟವಾಗಿದೆ. ಹೀಗಾಗಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿತ್ತು. ಅದರ ಜೊತೆಗೆ ಈಗ ನೇಪಾಳದ ಮೂಲಕವೂ ಅಡಿಕೆ ಆಮದು ತಡೆಯಾಗಿದೆ. ಹೀಗಾಗಿ ಈಗ ಮತ್ತೆ ಅಡಿಕೆ ಕಳ್ಳಸಾಗಾಣಿಗೆಯು ಭಾರತ -ಮ್ಯಾನ್ಮಾರ್ ಗಡಿಯ ಮೂಲಕ ಸಾಗಾಟಕ್ಕೆ ಪ್ರಯತ್ನವಾಗುತ್ತಿದೆ. ಅಸ್ಸಾಂ ಮೂಲಕ ದೇಶದೊಳಕ್ಕೆ ಆಗಮಿಸಿ ಅಲ್ಲಿಂದ ಪೂರೈಕೆ ನಡೆಯುತ್ತಿತ್ತು.
ಇದೀಗ ಮತ್ತೆ ಅಸ್ಸಾಂನಲ್ಲಿ ಗಡಿಭದ್ರತಾ ಪಡೆಯ ಸಿಬಂದಿಗಳು ವಿಶೇಷ ಕಾಳಜಿ ವಹಿಸಿ ಅಡಿಕೆ ಕಳ್ಳಸಾಗಾಣಿಕೆ ತಡೆಹಿಡಿದಿದ್ದಾರೆ. ಮಾಯನ್ಮಾರ್ ಗಡಿ ಸಮೀಪದ ಚಾಂಫೈ ಜಿಲ್ಲೆಯ ಕುವಾಂಗ್‌ಫಾ ಗ್ರಾಮದಲ್ಲಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಇಲಾಖೆಯು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ.
ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವುದರಿಂದ ಗಡಿಭದ್ರತಾ ಅಧಿಕಾರಿಗಳು ಹಾಗೂ ಕಸ್ಟಮ್ಸ್ ಅಧಿಕಾರಿಗಳು ನಿರಂತರ ತಪಾಸಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಭಾರೀ ಪ್ರಮಾಣದ ಅಡಿಕೆ ಸಾಗಾಣಿಕೆ ಮತ್ತೆ ಪತ್ತೆಯಾಗಿದೆ.
ಕಳೆದ ಹಲವು ದಿನಗಳಿಂದ ಅಡಿಕೆ ಖರೀದಿ ಹಾಗೂ ಮಾರಾಟವು ನಿಧಾನಗತಿಯಲ್ಲಿ ಸಾಗುತ್ತಿತ್ತು. ಮಾರುಕಟ್ಟೆಯಲ್ಲಿ ಹಣದ ಕೊರತೆಯ ಕಾರಣದಿಂದ ಧಾರಣೆಯಲ್ಲೂ ಏರುಗತಿ ಇರಲಿಲ್ಲ. ಅದರ ಜೊತೆಗೆ ವ್ಯಾಪಾರಿಗಳಲ್ಲೂ ಹೆಚ್ಚಿನ ಧಾರಣೆ ನೀಡಿ ಖರೀದಿ ಮಾಡಲು ಮಾರುಕಟ್ಟೆಯ ಸ್ಥಿತಿ ಭದ್ರವಾಗಿರಲಿಲ್ಲ. ಖರೀದಿದಾರರ ಸಂಖ್ಯೆಯೂ ಕಡಿಮೆಯಾಗಿತ್ತು.
ವಿಪರೀತ ಧಾರಣೆ ಏರಿಕೆಯ ಕಾರಣದಿಂದ ಅಡಿಕೆ ಖರೀದಿ ಮಾಡುವ ಹಾಗೂ ತಿನ್ನುವ ಮಂದಿಯೂ ಮಂದಗತಿಯಲ್ಲಿತ್ತು. ದೀಪಾವಳಿ ಆಸುಪಾಸಿನಲ್ಲಿ ಮತ್ತೆ ಧಾರಣೆ ಏರಿಕೆ ನಿರೀಕ್ಷೆ ಸದ್ಯಕ್ಕಿದ್ದು, ಅದಕ್ಕೆ ಪೂರಕವಾಗಿ ಕಳಪೆ ಗುಣಮಟ್ಟದ ಅಥವಾ ವಿದೇಶ ಅಡಿಕೆ ಕಳ್ಳಸಾಗಾಣಿಕೆಗೆ ತಡೆಯಾಗುತ್ತಿದೆ.
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ ಸ್ಥಿರತೆಯ ಕಡೆಗೆ ಹೆಚ್ಚು ಗಮನಹರಿಸಿದೆ. ಬೆಳೆಗಾರರಿಗೆ ಉತ್ತಮ ಧಾರಣೆ ಲಭ್ಯವಾಗಬೇಕು ಎಂದು ಧಾರಣೆಯ ಇಳಿಕೆ ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡು ಮಾರುಕಟ್ಟೆಗೆ ಸ್ಥಿರತೆ ನೀಡಿದೆ.