ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದಂತೆಯೇ ಅಡಿಕೆ ನಿಷೇಧದ ಗುಮ್ಮ ಪ್ರತೀ ಬಾರಿ ಬರುತ್ತಿದೆ. ಈ ಬಾರಿಯೂ ಮತ್ತೆ ಆ ಸುದ್ದಿ ಪ್ರತ್ಯಕ್ಷವಾಗಿದೆ. ಆದರೆ ಈ ಬಾರಿ ಬಿಜೆಪಿ ಸಂಸದ ಇದರ ರುವಾರಿ…!.
ಅಡಿಕೆ ಧಾರಣೆ ಕಳೆದ ಒಂದು ವರ್ಷದಿಂದ ಏರಿಕೆಯಾಗುತ್ತಲೇ ಇದೆ. ಅಡಿಕೆ ಆಮದಿಗೆ ತಡೆಯಾಗಿರುವುದು ಹಾಗೂ ಭಾರತದಲ್ಲಿ ಅಡಿಕೆ ಬೇಡಿಕೆ ಇರುವುದು ಧಾರಣೆ ಏರಿಕೆಗೆ ಕಾರಣವಾಗಿದೆ. ಧಾರಣೆ ಏರಿಕೆ ಬೆನ್ನಲ್ಲೇ ಅಡಿಕೆ ನಿಷೇಧ ಅಥವಾ ಅಡಿಕೆ ಹಾನಿಕಾರಕದ ಗುಮ್ಮ ಪ್ರತೀ ಬಾರಿಯೂ ಬರುತ್ತಿದೆ. ಈ ಬಾರಿಯೂ ಅಂತಹ ಗುಮ್ಮ ಕಾಣಿಸಿದೆ. ಕಳೆದ ವರ್ಷವೂ ಕಾಣಿಸಿಕೊಂಡಿತ್ತು. ಇದೀಗ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಅಡಿಕೆ ಸೇವನೆ ಹಾನಿಕಾರಕವಾಗಿದ್ದು , ಇದನ್ನು ಜನರ ಸೇವಿಸಿದಂತೆ ನಿಷೇಧ ಮಾಡಬೇಕು ಹಾಗೂ ಪೂಜೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವೇ ಬಳಕೆ ಮಾಡಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಅಡಿಕೆ ನಿಷೇಧದ ಗುಮ್ಮನ ಬಗ್ಗೆ ಎರಡು ತಿಂಗಳ ಹಿಂದೆ ” ರೂರಲ್ ಮಿರರ್ ” ಅಡಿಕೆ ಹಾನಿಕಾರಕ ಸುದ್ದಿಯು ಮತ್ತೆ ಪ್ರಚಲಿತಕ್ಕೆ ಬರಲಿದ್ದು, ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಲಾಬಿಗಳು ನಡೆಯುತ್ತಿರುವ ಬಗ್ಗೆ ವರದಿ ಮಾಡಿತ್ತು. ಇದೀಗ ಭಾರತದಲ್ಲೂ ಅಡಿಕೆ ಹಾನಿಕಾರಕ, ನಿಷೇಧದ ಗುಮ್ಮ ಮತ್ತೆ ಮೇಲೆದ್ದಿದೆ.