ಕಡಬದ ಇಡಾಳದ ಅಡಿಕೆ ತೋಟದಲ್ಲಿ ಅಡಿಕೆ ಸುಳಿಕೊಳೆ ರೋಗ ಪತ್ತೆ | ಸಿ ಪಿ ಸಿ ಆರ್‌ ಐ ವಿಜ್ಞಾನಿಗಳ ತಂಡ ಭೇಟಿ | ಬೆಳೆಗಾರರಿಗೆ ಮುನ್ನೆಚ್ಚರಿಕಾ ಕ್ರಮದ ಮಾಹಿತಿ ನೀಡಿದ ವಿಜ್ಞಾನಿಗಳು |

September 7, 2021
11:17 PM
ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ  ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಅಡಿಕೆ ಬೆಳೆಗಾರರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ ಅಡಿಕೆ ಮರಗಳು ಸಿರಿ ಕೊಳೆತು ಕಳೆದ ಕೆಲವು ಸಮಯಗಳಿಂದ ಸಾಯುತ್ತಿದ್ದವು. ಅಡಿಕೆ ಮರ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಮರದಮ ಕೊಬೆ ಮುರಿದು ಮರ ಬೀಳುತ್ತಿತ್ತು. ಈ ಸಮಸ್ಯೆ ಬಗ್ಗೆ ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿತ್ತು. ಮಂಗಳವಾರ ವಿಟ್ಲದ ವಿಜ್ಞಾನಿಗಳಾದ ಡಾ. ಥವಪ್ರಕಾಸ ಪಾಂಡಿಯನ್, ಡಾ. ನಾಗರಾಜ, ಎನ್.ಆರ್. ಮತ್ತು ಡಾ. ಭವಿಷ್ಯ ಇವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಧಿಕ ಇಳುವರಿ ನೀಡುತ್ತಿರುವ ಸುಮಂಗಳ ಮತ್ತು ಮೋಹಿತನಗರ್ ತಳಿಗಳಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗವನ್ನು ಗಮನಿಸಲಾಯಿತು. ಅಲ್ಲದೆ, ಪೋಷಕಾಂಶಗಳ ಅಸಮತೋಲನ ಉಂಟಾಗಿ ಸೂಕ್ಷ್ಮ ಪೋಷಕಾಂಶವಾದ ಸತುವಿನ ಕೊರತೆಯನ್ನು ವಿಜ್ಞಾನಿಗಳ ತಂಡ ಗಮನಿಸಿದರು.
ಅಡಿಕೆಗೆ ಬಾಧಿಸುವ ಕೊಳೆರೋಗವನ್ನು ಉಂಟುಮಾಡುವ ಫೈಟೋಪ್ತೋರ ಮೀಡೀ ಎನ್ನುವ ಶಿಲೀಂಧ್ರವು ಚಂಡೆಕೊಳೆ ಮತ್ತು ಸುಳಿಕೊಳೆರೋಗವನ್ನು ಕೂಡ ಉಂಟುಮಾಡುತ್ತದೆ. ಸಾಮಾನ್ಯವಾಗಿ ಇವು ಆಗಸ್ಟ್ ನಂತರದಲ್ಲಿ ಕಂಡುಬಂದರೂ, ಸುರೇಶ್‌ ಅವರ ತೋಟದಲ್ಲಿ ಜೂಲೈ ತಿಂಗಳ ಕೊನೆಯಲ್ಲಿ ಕಂಡುಬಂದಿದ್ದು ವಿಶೇಷವಾಗಿದೆ. ಚಂಡೆಕೊಳೆ ರೋಗದಲ್ಲಿ ಮೊದಲು ಕುಬೆಯ ಕೆಳ ಭಾಗದ ಎಲೆಗಳು ಹಳದಿಯಾಗುತ್ತದೆ, ನಂತರ ಕ್ರಮೇಣ ಮೇಲ್ಭಾಗದ ಎಲೆಗಲೂ ಹಳದಿಯಾಗಿ ಬಾಗುತ್ತವೆ. ಕೊನೆಗೆ, ಹೊಸ ಎಲೆ ಮತ್ತು ತಿರಿ ಕೂಡ ಹಳದಿಯಾಗಿ ಪೂರ್ತಿ ಚೆಂಡೆಯೇ ಮುರಿದು ಬೀಳಬಹುದು.  ಸುಳಿ ಕೊಳೆರೋಗದಲ್ಲಿ ಮೊದಲು ಸುಳಿ ಹಳದಿಯಾಗಿ ನಂತರ ಒಣಗಿ, ಬಾಗುತ್ತದೆ. ಮೆಲ್ಲನೆ ಎಳೆದಾಗ ಸುಳಿಯು ಹೊರಬರುವುದಲ್ಲದೆ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಸುಳಿಗೆ ತೊಂದರೆಯಾದ ನಂತರ ಬೆಳವಣಿಗೆಯಾಗದೆ ಮರವು ಸತ್ತು ಹೋಗುತ್ತದೆ.
ಸುಳಿಯು ಹಳದಿಯಾದರೆ ಅಥವಾ ಚಂಡೆಯ (ಕುಬೆ) ಕೆಳಭಾಗದ ಎಲೆಗಳು ಹಳದಿಯಾದರೆ ಮುಂದಿನ ಸುತ್ತಿನ ಬೋರ್ಡೋ ಮಿಶ್ರಣವನ್ನು ಗೊನೆಗೆ ಸಿಂಪರಣೆ ಮಾಡುವಾಗ ಕುಬೆಗೆ ಕೂಡ ತಪ್ಪದೆ ಸಿಂಪರಣೆ ಮಾಡಬೇಕು. ಈ ರೀತಿ ರೋಗ ಬಂದು ಸತ್ತು ಹೋದ ಮರಗಳನ್ನು ತೆಗೆದು ತೋಟದಿಂದ ಹೊರ ಹಾಕುವುದು ಒಳ್ಳೆಯದು. ಕಾಂಡವು ಪೊಟಾಷ್ ಆಗರವಾದುದರಿಂದ ಸಾಧ್ಯವಾದರೆ ಸುಟ್ಟು, ಬೂದಿಯನ್ನು ಅಡಿಕೆ ಮರಗಳಿಗೆ ಹಾಕಬಹುದು. ಮುಂದಿನ ವರ್ಷಗಳಲ್ಲಿ ಬೋರ್ಡೋ ಮಿಶ್ರಣವನ್ನು ಗೊನೆಗಳಿಗೆ ಸಿಂಪರಣೆ ಮಾಡುವಾಗ ಕನಿಷ್ಟ ಎರಡು ಸುತ್ತಿನ ಸಿಂಪರಣೆಯನ್ನು ಕುಬೆಗೆ ಕೂಡ ನೀಡುವುದು ಮುಖ್ಯ. ಕನಿಷ್ಠ, ರೋಗ ಬಂದ ಮರದ ಸುತ್ತ ಮುತ್ತಲಿನ ಮರಗಳ ಕುಬೆಗೆ ಬೋರ್ಡೋ ಮಿಶ್ರಣವನ್ನು ಸಿಂಪರಣೆ ಮಾಡುವುದು ಹಾಗೂ ರೋಗ ಬಂದು ಸತ್ತ ಮರಗಳನ್ನು ನಿರ್ಮೂಲನೆ ಮಾಡುವುದು ಮುಖ್ಯವೆಂದು ರೋಗಶಾಸ್ತ್ರಜ್ಞ ಡಾ. ಥವಪ್ರಕಾಸ್ ಪಾಂಡಿಯನ್ ತಿಳಿಸಿದರು.
ಸಂಕೀರ್ಣ ರಸಗೊಬ್ಬರದ ಬಳಕೆ ಹೆಚ್ಚಾಗಿ ಸೂಕ್ಷ್ಮಾ ಪೋಷಕಾಂಶವಾದ ಸತುವಿನ ಕೊರತೆಯ ಲಕ್ಷಣವಾದ ಚೆಂಡೆ ಬಾಗುವಿಕೆ, ಒರೆಗೆಣ್ಣು ಮತ್ತು ಮುಂಡುತಿರಿಗೆ ಸಂಕೀರ್ಣ ರಸಗೊಬ್ಬರದ ಬಳಕೆ ಬದಲು ನೇರ ಗೊಬ್ಬರಗಳಾದ  ಯೂರಿಯ, ರಾಕ್ ಫಾಸ್ಫೇಟ್ ಮತ್ತು ಪೊಟಾಷ್ ಬಳಕೆ  ಮಾಡುವಂತೆ ಡಾ. ನಾಗರಾಜ, ಎನ್.ಆರ್ ತಿಳಿಸಿದರು. ಕುರಿಗೊಬ್ಬರ   ಬಳಸುವುದಾದರೆ ಕಾಂಪೋಸ್ಟ್ ಮಾಡಿ ಬಳಸಿ. ಜೊತೆಗೆ 200ಗ್ರಾಂ ರಾಕ್ ಫಾಸ್ಫೇಟ್, 220ಗ್ರಾಂ ಯೂರಿಯ ಮತ್ತು 350ಗ್ರಾಂ ಪೊಟಾಷ್ ಬಳಸುವಂತೆ ವಿಜ್ಞಾನಿಗಳು ಸೂಚಿಸಿದರು. ಯೂರಿಯ ಮತ್ತು ಪೊಟಾಷ್ ಗೊಬ್ಬರವನ್ನು ಆದಷ್ಟು ಹೆಚ್ಚು ಕಂತುಗಳಲ್ಲಿ ಹಾಕುವುದು (3-4), ಹಾಗೂ ಸತುವಿನ ಸಲ್ಫೇಟ್ (10ಗ್ರಾಂ) ಮತ್ತು ಬೊರಾಕ್ಸ್ (5ಗ್ರಾಂ) ಗೊಬ್ಬರಗಳನ್ನು ಡಿಸೆಂಬರ್ ತಿಂಗಳಲ್ಲಿ ಬಳಕೆ ಮಾಡುವಂತೆ ಡಾ. ಭವಿಷ್ಯ ತಿಳಿಸಿದರು.
ರೋಗಗಳಿಗೆ ತಕ್ಷಣ ಪರಿಹಾರ
ರೋಗ ಲಕ್ಷಣ ಇರುವ ಮರಗಳಿಗೆ ತಕ್ಷಣ Metalaxyl ಹಾಗೂ Mancozeb(2g/Ltr) ಸಿಂಪಡಣೆ ಮಾಡುವುದು ಹಾಗೂ ಅಡಿಕೆ ಗೊನೆಗೆ ಮುಂದಿನ ಸುತ್ತಿನ ಬೋರ್ಡೋ ಸಿಂಪಡಣೆ ವೇಳೆ ಕುಬೆಗೆ ಕೂಡಾ ಔಷಧಿ ಸಿಂಪಡಣೆ ಮಾಡುವುದು ಉತ್ತಮ  – ಡಾ.ಭವಿಷ್ಯ, ವಿಜ್ಞಾನಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ
March 14, 2025
6:54 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ
ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror