ಅಡಿಕೆ ಎಂದಾಕ್ಷಣ ಅದು ಸೀಮಿತ ಪ್ರದೇಶದ ಬೆಳೆಯಲ್ಲ. ಬಹುಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ, ಈಗಲೂ ವ್ಯಾಪಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ದರ ಇಲ್ಲದೇ ಇದ್ದರೂ ಈಗ ಅಡಿಕೆ ಅಂತರಾಷ್ಟ್ರೀಯ ಮಟ್ಟದ ವಿಷಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಈಗಲೂ ಮತ್ತೆ ಚರ್ಚೆ ಶುರುವಾಗಿದೆ. ಪ್ರತೀ ಬಾರಿಯೂ ಅಡಿಕೆ ಧಾರಣೆ ಏರಿಕೆಯಾದಾಗಲೂ ಇಂತಹದ್ದೇ ಚರ್ಚೆಯಾಗಿದೆ. ಈಗಲೂ ಚರ್ಚೆ ಆರಂಭವಾಗಿದೆ. ಅದರ ಮೊದಲ ಹಂತವೇ ಚೀನಾದಲ್ಲಿ ಅಡಿಕೆ ಜಾಹೀರಾತು ನಿಷೇಧ….!.
ಚೀನಾದ ಹುನಾನ್ ಪ್ರಾಂತ್ಯವು ಅಡಿಕೆ ಬಳಕೆಯ ಅತಿದೊಡ್ಡ ಪ್ರದೇಶ. ಚೀನಾ ಬಿಸಿನೆಸ್ ಟೈಮ್ಸ್‌ನ ವರದಿಯ ಪ್ರಕಾರ, ಹುನಾನ್‌ನಲ್ಲಿ ಅಡಿಕೆ ಉತ್ಪಾದನೆಯ ಮೌಲ್ಯವನ್ನು 30 ಬಿಲಿಯನ್ ಯುವಾನ್ ಎಂದು ಅಂದಾಜಿಸಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಅಡಿಕೆ ಮತ್ತೆ ಸುದ್ದಿ ಮಾಡಿರುವುದು ಪ್ರತೀ ಬಾರಿಯಂತೆಯೇ ಕ್ಯಾನ್ಸರ್ ಕಾರಕದ ಸುದ್ದಿ. ಚೀನಾ ಸರಕಾರದ ಸಂಸ್ಥೆಯಾದ “ನ್ಯಾಷನಲ್ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್” ಸೆಪ್ಟೆಂಬರ್‌ನಲ್ಲಿ ಅಡಿಕೆ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ರೇಡಿಯೋ, ಟೆಲಿವಿಷನ್ ಅಥವಾ ಆನ್‌ಲೈನ್ ಶೋಗಳಲ್ಲಿ ಅಡಿಕೆಯ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸಿತು. ಅಲ್ಲಿಗೇ ಆ ಸಂಗತಿ ಚರ್ಚೆಯಾಗಿ ನಿಂತಿತ್ತು. ಈಗ ಮತ್ತೆ ಮುಂದುವರಿದು ಅಡಿಕೆ ಹಾನಿಕಾರಕ ಎಂದು ಹೇಳಲಾಗಿದೆ. ವರದಿಯೊಂದರಲ್ಲಿ ಅಡಿಕೆಯನ್ನು ಮಾತ್ರಾ ಜಗಿಯುವುದು ಹಾನಿಕಾರಕ ಎಂದು ಹೇಳಲಾಗಿದೆ. ಅಡಿಕೆಯನ್ನು ಜಗಿಯುವವರ ಬಾಯಲ್ಲಿ ಕೆಂಪು ಕಲೆಗಳು ಉಳಿಯುತ್ತವೆ ಅದು ಆರೋಗ್ಯದ ಮೇಲೆ ಹಾನಿಕಾರಕ ಎಂದು ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಾಯೋಜಿತವಾದ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ, ಅಡಿಕೆ ಮತ್ತು ವೀಳ್ಯದ ಎಲೆಗಳನ್ನು ಕಾರ್ಸಿನೋಜೆನ್ ಅಥವಾ ಕ್ಯಾನ್ಸರ್ ಉಂಟುಮಾಡುವ ಏಜೆಂಟ್ ಎಂದು ಪಟ್ಟಿ ಮಾಡಿದೆ. ದೀರ್ಘಾವಧಿಯ ಬಳಕೆಯಿಂದ ಹಲ್ಲಿನ ಹುಣ್ಣುಗಳು, ಗಮ್ ಡಿಜೆನರೇಶನ್ ಮತ್ತು ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಉಂಟಾಗಬಹುದು ಎಂದು ಅದು ಹೇಳಿದೆ. ಈಗ ಇದೇ ವರದಿಯನ್ನು ಇರಿಸಿ ವಿವಿಧ ದೇಶಗಳಲ್ಲಿ ವರದಿ ಮಾಡಲಾಗುತ್ತಿದೆ.
ಈಗಾಗಲೇ ಭಾರತದಲ್ಲಿ ಅಡಿಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ವಿವಿಧ ಅಧ್ಯಯನಗಳು ನಡೆದಿವೆ. ಅಡಿಕೆ ಚಹಾ, ಅಡಿಕೆ ಪೇಯ, ಐಸ್ ಕ್ರೀಂ ಮೊದಲಾದವುಗಳನ್ನು ತಯಾರಿಸಲಾಗಿದೆ. ಅನೇಕ ವರ್ಷಗಳಿಂದ ಅಡಿಕೆ ಜಗಿಯುವ, ಎಲೆ ಅಡಿಕೆ ತಿನ್ನುವ ಮಂದಿಯ ಅಧ್ಯಯನವನ್ನೂ ನಡೆಸಿದ ವರದಿಯಲ್ಲಿ ಹಾನಿಕಾರಕವಲ್ಲ ಎಂಬ ಅಂಶ ಬಯಲಾಗಿದೆ. ಆದರೆ ಅಧಿಕೃತ ಮಾನ್ಯತೆಗಾಗಿ ವಿವಿಧ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ, ಇನ್ನಷ್ಟು ಅಧ್ಯಯನ ನಡೆಸುತ್ತಿವೆ. ಹೀಗಾಗಿ ಈ ಬಾರಿಯೂ ಅಡಿಕೆ ಧಾರಣೆ ಏರಿಕೆಯ ಜೊತೆಗೇ ಅಡಿಕೆಯ ಬಗ್ಗೆ ಅಪಪ್ರಚಾರವೂ ಹೆಚ್ಚಾಗುತ್ತಿದೆ.