ಕೇಂದ್ರ ರಾಜ್ಯ ಎಂಬ ಅಪ್ಪ ಅಮ್ಮಂದಿರ ಜಗಳದಲ್ಲಿ ರೈತರೆಂಬ ಕೂಸುಗಳು ಬಡವರಾಗುತ್ತಿದ್ದಾರೆ. ಹೌದು, ಚರ್ಚೆಗೆ ನಿಂತು ಮಾತು ಮುಂದುವರೆಯುವಾಗ ನಿಧಾನವಾಗಿ ನಮಗರಿವಿಲ್ಲದೇಯೋ ಅಥವಾ ಏನೋ ಗೊತ್ತಿಲ್ಲ… ಯಾವುದೋ ಪಕ್ಷದ ರಕ್ಷಣೆಗೆ, ಯಾವುದೋ ಪಕ್ಷದ ದೂಷಣೆಗೆ ನಿಂತು ಬಿಡುತ್ತೇವೆ. “ಅಪ್ಪ ಸರಿ, ಅಮ್ಮ ತಪ್ಪು,”. ಇಲ್ಲ “ಅಮ್ಮ ಸರಿ, ಅಪ್ಪ ತಪ್ಪು” ಎಂಬಂತೆ!!!ಹಾಗಾಗದಿರಲಿ….
ಇವತ್ತಿನ ಕೇಂದ್ರ ಸರಕಾರ, ಇವತ್ತಿನ ರಾಜ್ಯ ಸರಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ, ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಇದುವರೆಗೆ ಏನೂ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.
“ಇದು ನಿನ್ನ ಜವಾಬ್ದಾರಿ, ಇದು ನನ್ನ ಹಕ್ಕು…” ಎಂಬಂತೆ ಫೈಟಿಂಗ್ ನಡಿತಾ ಇದೆ..!! ಒಲೆ ಮೇಲಿದ್ದ ಅಡಿಕೆ ಎಂಬ ಹಾಲು ಉಕ್ಕಿ ಹೋಗ್ತಾ… ಇದೆ!! ಉಳಿಯುತ್ತೋ, ಪೂರ್ತಿ ಸೀದು ಹೋಗುತ್ತೋ ಗೊತ್ತಿಲ್ಲ.
ಅಲ್ಲಿ ಸರಕಾರದಿಂದ 17,000MT ಭೂತಾನ್ ಅಡಿಕೆ ಇಂಪೋರ್ಟ್‌ಗೆ ಒಪ್ಪಿಗೆ ಸುದ್ದಿಯಿಂದ ಅಡಿಕೆ ಬೆಳೆಗಾರರಲ್ಲಿ ರಕ್ತದೊತ್ತಡ ಹೆಚ್ಚುವಂತಹ ಆತಂಕ..!!, ಇಲ್ಲಿ ಅಡಿಕೆ ಸಂಶೋಧನೆಗೆ ಹಣ ಬಿಡುಗಡೆ ಮಾಡ್ತಿವಿ, ನುರಿತ ವಿಜ್ಞಾನಿಗಳು ನಾಳೆ ಬೆಳಗ್ಗೆ ನಿಮ್ಮ ತೋಟಕ್ಕೆ ಬರ್ತಾರೆ, R&D ಶುರು ಮಾಡ್ತಾರೆ ಅನ್ನುವ ಆಶ್ವಾಸನೆಯ ಸುಳ್ಳು ಸುದ್ದಿ…!
ಭೂತಾನ್‌ನಿಂದ ಹಸಿ ಅಡಿಕೆ ಸಾವಿರಾರು ಟನ್ ಪೋರ್ಟಿಗೆ ಬಂದು ಉದುರುತ್ತೆ!!. ಅದೇ ಸಮಯದಲ್ಲಿ… ಮಲೆನಾಡಿನ ಎಲೆ ಚುಕ್ಕಿ ಫಂಗಸ್‌ಗಳು ಹಸಿ ಅಡಿಕೆಯನ್ನು ಮರದಿಂದ ಕೆಳಗೆ ಉದುರಿಸುತ್ತಿವೆ!!!. ಇದು ವಾಸ್ತವ!! ಈ ಸರಕಾರ ಅಲ್ಲಿಗೆ ವಿರೋಧಿ ಸರಕಾರ, ಆ ಸರಕಾರ ಇಲ್ಲಿಗೆ ವಿರೋಧಿ ಸರಕಾರ!! ಎರಡೂ ಸರಕಾರಗಳೂ ಅಡಿಕೆ ರೈತರ ಪೋಷಕರು!!?
ಅಲ್ಲಿ ಕಸ್ತೂರಿ ರಂಗನ್ ವರದಿಗೆ ಫಿಸಿಕಲ್ ವೆರಿಫಿಕೇಷನ್ ಗೆ ನೋಟಿಫಿಕೇಷನ್ ಬ್ರೇಕಿಂಗ್ ನ್ಯೂಸ್, ಇಲ್ಲಿ ಒತ್ತುವರಿ ಭೂಮಿಯನ್ನು ಕೂಡಲೆ ತೆರವುಗೊಳಿಸಲು ಕ್ರಮ ಎನ್ನುವ ಆಘಾತ ಸುದ್ದಿ!!!
ಅಡಿಕೆ ಸಂಬಂಧಿತ ಯಾವುದೇ ವಿಚಾರ ತೆಗೆದುಕೊಂಡರೂ ನೆಡೆಯುತ್ತಿರುವುದು ಇಷ್ಟೇ.
ಬೆಳೆ ವಿಮೆಯ ಇನ್ಷ್ಯೂರೆನ್ಸ್ ಕಂಪನಿಗಳಿಗೆ 5 ರಿಂದ 6 ಪಟ್ಟು ನಷ್ಟ ಆಗಿದೆ ಅಂತ ರಾಜ್ಯದ ಮಂತ್ರಿ ಹೇಳ್ತಾರೆ…. ಮಳೆ ಮಾಪನ ಯಂತ್ರ ಸರಿ ಇಲ್ಲ, ಅನೇಕ ದಶಕಗಳಲ್ಲೇ ಕಂಡು ಕೇಳರಿಯದ ಮಳೆ ಕಳೆದೆರಡು ವರ್ಷಗಳು ಬಂದು ಅಡಿಕೆ ರೈತ ಹೈರಾಣಾಗಿದ್ದರೂ, ಒಂದಿಷ್ಟು ಆತ್ಮ ಹತ್ಯೆ ಆಗಿದ್ದರೂ ಇನ್ಷ್ಯೂರೆನ್ಸ್ ಕಂಪನಿ ಕೋಟಿ ಕೋಟಿ ಲಾಭ ಗಳಿಸಿದ ದಾಖಲೆ ಇದ್ದರೂ, ಅಡಿಕೆ ರೈತರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಹಾರ ಬರದಿದ್ದರೂ ಅದಕ್ಕೆ ದೊಡ್ಡ ಪ್ರೀಮಿಯಮ್ ಕಟ್ಟಿದ ಅಪ್ಪ ಅಮ್ಮಂದಿರ ಸ್ಥಾನದಲ್ಲಿರುವ ಸರಕಾರಗಳು ಆ ವಿಷಯವನ್ನು ಜಗಳಕ್ಕೂ ತರ್ತಾ ಇಲ್ಲ!!
ಕಣ್ಣೀರು ಒರೆಸುವವರು ಯಾರೂ ಇಲ್ಲ. ಸರಕಾರಗಳು, ಜನ ಪ್ರತಿನಿಧಿಗಳು, ಕಾರ್ಯಕರ್ತರು, ಬೆಂಬಲಿಗರು ಆರೋಪ ಪ್ರತ್ಯಾರೋಪದಲ್ಲಿದ್ದಾರೆ. ಕಣ್ಣೀರು ಹೆಚ್ಚಿಸುತ್ತ, ಕಣ್ಣೀರು ಒರೆಸುವ ಡ್ರಾಮಗಳನ್ನೂ ಮಾಡ್ತಾ ಇದ್ದಾರೆ.
ಎಲೆಕ್ಷನ್ ಸಮಯಕ್ಕೆ ಮಧ್ಯಂತರ ಮುಗಿದು ಕ್ಲೈಮ್ಯಾಕ್ಸಿಗೆ ಬರುತ್ತೆ!!. ಎಲ್ಲವನ್ನು ನೋಡ್ತಾ ಇರೋದು ಹಳದಿ ಬಣ್ಣದ ಅಡಿಕೆ ಮರಗಳು!!. ಮಲೆನಾಡ ಕೂಸುಗಳು ಬಡವಾಗುತ್ತಿವೆ. ಅಷ್ಟೆ……