ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕ್ಯಾಂಪ್ಕೋ ಸಹಯೋಗದೊಂದಿಗೆ ಪೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ತರಬೇತಿ ಶಿಬಿರ ಗುರುವಾರ ಕೊಕ್ಕಡದ ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಇವರ ಅಡಿಕೆ ತೋಟದಲ್ಲಿ ನಡೆಯಿತು.
ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕ್ಯಾಂಪ್ಕೋ ಹಾಗೂ ಸಾಯ ಎಂಟರ್ ಪ್ರೈಸಸ್ ಪುತ್ತೂರು ಇವರ ಸಹಯೋಗದೊಂದಿಗೆ ನಡೆದ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರವನ್ನು ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ ಉದ್ಘಾಟಿಸಿ, ಶಿಬಿರ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಅಡಿಕೆ ಬೆಳೆಗಾರರ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಗಬೇಕು ಹಾಗೂ ಯುವಕರೂ ಕೂಡಾ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಇಂತಹ ಶಿಬಿರ ಅಗತ್ಯ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರು ಈಶ್ವರ ಭಟ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ ಹಾಗೂ ತರಬೇತುದಾರರಾದ ಮೂರೂರು ಕಲ್ಲಬ್ಬೆಯ ಆರ್ ಜಿ ಹೆಗಡೆ, ರಮೇಶ್ ಭಟ್ , ಸಾಯ ಎಂಟರ್ಪ್ರೈಸಸ್ ಪದ್ಮನಾಭ ಗೌಡ ಉಪಸ್ಥಿತರಿದ್ದರು.
ಮೂರೂರು ಕಲ್ಲಬ್ಬೆ ಗ್ರಾಮದ ಆರ್ ಜಿ ಹೆಗಡೆ ಹಾಗೂ ರಮೇಶ್ ಭಟ್ ಕಾರ್ಬನ್ ಫೈಬರ್ ದೋಟಿಯಲ್ಲಿ ಸುಲಭವಾಗಿ ಅಡಿಕೆ ಕೊಯ್ಲು ಹಾಗೂ ಸಿಂಪಡಣೆ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಶಿಬಿರದಲ್ಲಿ 60 ಕ್ಕೂ ಅಧಿಕ ಕೃಷಿಕರು ಭಾಗವಹಿಸಿದರು.