ಅಡಿಕೆ ಬೆಳೆಗಾರರಿಗೆ ಪ್ರತೀ ಎರಡು-ಮೂರು ವರ್ಷಗಳಿಗೊಮ್ಮೆಕೆಲವು ಆತಂಕ. ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಮಾರುಕಟ್ಟೆ ಇದೆಲ್ಲಾ ಪ್ರತೀ ಬಾರಿ ಎದುರಾಗುವ ಸಮಸ್ಯೆ. ಇಂದಿಗೂ ಇದ್ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಇದೀಗ ಮತ್ತೆ ಆತಂಕ ಶುರುವಾದ್ದು ಅಡಿಕೆ ಆಮದು. ಶ್ರೀಲಂಕಾದಿಂದ ಅಡಿಕೆ ಆಮದಾಗುತ್ತದೆ, ಬರ್ಮಾದಿಂದ ಅಡಿಕೆ ಬರುತ್ತದೆ, ಇಂಡೋನೇಶ್ಯಾದಿಂದ ಬರುತ್ತದೆ… ಹೀಗೇ ಸುದ್ದಿಗಳು. ಆದರೆ ಇಲ್ಲ ಅಡಿಕೆ ಬರುವುದಿಲ್ಲ ಎಂದು ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲ. ಅಡಿಕೆ ಮಾರುಕಟ್ಟೆಯೇ ಊಹಾಪೋಹಾ…!. ಹಾಗೆಂದು ಈ ಸುದ್ದಿಗಳು ಸುದ್ದಿಗಳಾಗುತ್ತಾ ಮತ್ತೆ ಸದ್ದಿಲ್ಲದೆ ಇರುತ್ತದೆ.….ಮುಂದೆ ಓದಿ…..
ಎರಡು ದಿನಗಳ ಹಿಂದೆ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಆಗುವುದಕ್ಕೆ ಒಪ್ಪಂದವಾಗಿದೆ ಎಂಬ ಸುದ್ದಿಸಂಸ್ಥೆಗಳ ವರದಿ ಎಲ್ಲೆಡೆಯೂ ಹರಿದಾಡಿತು. ಹಾಗಂತ ಅದು ಸುಳ್ಳು ಸುದ್ದಿಯಲ್ಲ, ಏಕೆಂದರೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳೇ ವರದಿ ಮಾಡಿದೆ. ಶ್ರೀಲಂಕಾದಿಂದ ಅಡಿಕೆ ಆಮದು ಸಂಬಂಧ ಬ್ರಿಟನ್ ಮೂಲದ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಅಡಿಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ಶುಕ್ರವಾರ ತಿಳಿಸಿತ್ತು. ಇದೆರಡೂ ಸಂಸ್ಥೆಗಳು ಸಣ್ಣ ಸಂಸ್ಥೆಗಳಲ್ಲ. ಬ್ರಿಟನ್ ಮೂಲದ ಎಸ್‌ರಾಂ ಅಂಡ್ ಎಂರಾಂ ಸಂಸ್ಥೆಯು ಕೃಷಿ ಸಹಿತ ವಿವಿಧ ಕ್ಷೇತ್ರದಲ್ಲಿ ತನ್ನ ಉದ್ಯಮವನ್ನು ನಡೆಸುತ್ತಿದೆ.100 ಕ್ಕೂ ಹೆಚ್ಚು ದೇಶದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡುತ್ತಿದೆ ಎಂದು ತನ್ನ ವೆಬ್‌ಸೈಟ್ ನಲ್ಲಿ ಹೇಳಿಕೊಂಡಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಕೂಡಾ ಟೆಕ್ಸ್‌ಟೈಲ್ ಸೇರಿದಂತೆ ವಿವಿಧ ಉತ್ಪನಗನಳನ್ನು ರಫ್ತು ಮಾಡುವ ಹಾಗೂ ಇತರ ಕ್ಷೇತ್ರಗಳಲ್ಲಿ ಬೆಳೆದಿರುವ ಸಂಸ್ಥೆಯಾಗಿದೆ. ಹೀಗಾಗಿ ಈ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದ ಕೇವಲವಾಗಿ ಪರಿಗಣಿಸಲು ಸಾಧ್ಯವಿಲ್ಲ. ….ಮುಂದೆ ಓದಿ…..
ಆದರೆ , ಶ್ರೀಲಂಕಾದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿಲ್ಲ. ಹಾಗಾಗಿ ಯಾವ ಸಮಸ್ಯೆಯೂ ಇಲ್ಲ. ಭಾರತ ಹಾಗೂ ಶ್ರೀಲಂಕಾ ನಡುವೆ ಇರುವ ಒಪ್ಪಂದದ ಪ್ರಕಾರ ಮುಕ್ತವಾಗಿ ರಫ್ತು-ಆಮದು ನಡೆಯಬಹುದು. ಶ್ರೀಲಂಕಾದಲ್ಲಿ ಕಳೆದ ಅಕ್ಟೋಬರ್ ವೇಳೆಗೆ ಚರ್ಚೆಯಾಗಿತ್ತು. ಅಲ್ಲಿನ ಆಡಳಿತವು ತನ್ನ ದೇಶದ ಅಡಿಕೆ ಉತ್ಪಾದನೆಗಿಂತಲೂ ಹೆಚ್ಚುವರಿಯಾಗಿ ಅಡಿಕೆಯು ಭಾರತಕ್ಕೆ ರವಾನೆಯಾಗುತ್ತದೆ ಎನ್ನುವುದನ್ನು ಗಮನಿಸಿ ಆಮದು ತೆರಿಗೆಯನ್ನು ವಿಧಿಸಿತ್ತು. ಭಾರತ ಮತ್ತು ಪಾಕಿಸ್ತಾನದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಲಾಭ ಪಡೆದು ಈ ಮರು-ರಫ್ತು ದಂಧೆಯನ್ನು ಮುಂದುವರಿಸುತ್ತಿರುವ ಕೆಲವು ವ್ಯಾಪಾರಿಗಳ ಮೋಸದ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಶೇ.35 ರಷ್ಟು ಮೌಲ್ಯವರ್ಧನೆಯೊಂದಿಗೆ ಅಡಿಕೆಮರು-ರಫ್ತು ಮಾಡಲು ಸರ್ಕಾರವು ಅವಕಾಶ ನೀಡಿತ್ತು. ಶ್ರೀಲಂಕಾ ಕಸ್ಟಮ್ಸ್ ಪ್ರತಿ ಮೆಟ್ರಿಕ್ ಟನ್ ಅಡಿಕೆ ಅಡಿಕೆಗೆ ಸುಮಾರು US$300,000 ನಷ್ಟವಾಗುತ್ತಿದೆ, ಇದರಿಂದಾಗಿ ದೊಡ್ಡ ಪ್ರಮಾಣದ ಅಡಿಕೆಗಳನ್ನು ದೇಶಕ್ಕೆ ತರಲಾಗುತ್ತದೆ ಮತ್ತು ಅದನ್ನು ಮರು-ರಫ್ತು ಮಾಡಲು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಲಾಗುತ್ತದೆ ಎಂದು ಶ್ರೀಲಂಕಾದ ಹಣಕಾಸು ಸಚಿವಾಲಯದ ಮೂಲಗಳು ಬಹಿರಂಗಪಡಿಸಿದ್ದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿತ್ತು.….ಮುಂದೆ ಓದಿ…..
2021-22 ರಲ್ಲಿ ಭಾರತದಲ್ಲಿನ ಒಟ್ಟು ಉತ್ಪಾದನೆಯ ಕೇವಲ 2% ಮಾತ್ರಾ ಅಡಿಕೆ ಆಮದಾಗಿತ್ತು. ಅಂದರೆ 7.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 13.99 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು.2021-22ರಲ್ಲಿ 25,979 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಆ ನಂತರದ ಕೊರೋನಾ ಸಮಯದಲ್ಲಿ ಅಡಿಕೆ ಆಮದು ಸಂಪೂರ್ಣವಾಗಿ ಸ್ಥಗಿತವಾಗಿ, ಅಡಿಕೆ ಮಾರುಕಟ್ಟೆಯೂ ಏರಿಕೆಯ ಹಾದಿಯಲ್ಲಿ ಸಾಗಿತ್ತು. ಹಾಗಾಗಿ ಈಗ ಅಡಿಕೆ ಆಮದು ಕಾರಣದಿಂದಲೇ ಅಡಿಕೆ ಧಾರಣೆ ಮೇಲೆ ಪರಿಣಾಮ ಎನ್ನುವುದು ಕೂಡಾ ಸ್ಪಷ್ಟವಾಗಿದೆ. ಇದೀಗ ಧಾರಣೆ ಏರಿಕೆಯ ಕಾರಣದಿಂದ ಅಡಿಕೆ ಸಿಕ್ಕ ಸಿಕ್ಕಲ್ಲೆಲ್ಲಾ ಆಮದಾಗುತ್ತಿರುವುದು ಕಸ್ಟಮ್ಸ್, ಅಸ್ಸಾಂ ಭದ್ರತಾ ಪಡೆ ವಶಪಡಿಸಿಕೊಳ್ಳುತ್ತಿರುವ ಅಧಿಕೃತ ಮಾಹಿತಿಗಳಿಂದ ತಿಳಿಯುತ್ತಿದೆ.….ಮುಂದೆ ಓದಿ…..
ಹೀಗಾಗಿ ಅಡಿಕೆ ಬೆಳೆಗಾರರು ಈ ಸುದ್ದಿಗಳ ಪ್ರಸಾರದಿಂದ ಅಡಿಕೆ ಧಾರಣೆ ಇಳಿಯುತ್ತದೆ ಎನ್ನುವ ಕಾರಣ ಮುಂದಿಟ್ಟು, ಇದೆಲ್ಲಾ ಸುಳ್ಳು ವರದಿಗಳು ಎಂದು ರಾಜಕೀಯ ಕಾರಣ ಮುಂದಿಟ್ಟು ಮೌನ ವಹಿಸಿದರೆ ಅಥವಾ ಸುಳ್ಳು ಎಂದು ಪ್ರತಿಪಾದನೆ ಮಾಡುತ್ತಲೇ ಇದ್ದರೆ ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆಯೇ ಅಪಾಯ ನಿಶ್ಚಿತ. ಈಗಾಗಲೇ ಏರಿದ ವೆಚ್ಚಗಳ ನಡುವೆ ಅಡಿಕೆ ಬೆಳೆಗಾರನ ಬದುಕು ದುಸ್ತರವಾಗುವುದೂ ಅಷ್ಟೇ ಸತ್ಯ. ಚುನಾವಣೆ ನಡೆದು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಪಕ್ಷಗಳು ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಹಿಂದೆಯೇ.….ಮುಂದೆ ಓದಿ…..
ಈಗಾಗಲೇ ಅಡಿಕೆ ಹಾನಿಕಾರಕ ಎಂಬ ಅಂಶ ಹಲವು ಸಮಯಗಳಿಂದ ನ್ಯಾಯಾಲಯದ ಮುಂದೆ ಇದೆ. ಇಂದಿಗೂ ಈ ಅಪವಾದ ದೂರ ಮಾಡಲು ಸಾಧ್ಯವಾಗಿಲ್ಲ. ಯಾವ ಪಕ್ಷಗಳೂ ಬೆಳೆಗಾರರ ಪರವಾಗಿ ಕೆಲಸ ಮಾಡಿಲ್ಲ. ಅಡಿಕೆ ಹಳದಿ ಎಲೆ ರೋಗದಿಂದ ಬೆಳೆಗಾರರು ಸಂಕಷ್ಟ ಪಡುತ್ತಿದ್ದಾರೆ ಯಾವ ಪಕ್ಷಗಳೂ, ರಾಜಕಾರಣಿಗಳು ಅಡಿಕೆ ಬೆಳೆಗಾರರ ಪರವಾಗಿ ಹೋರಾಟ ಮಾಡಿ ಯಶಸ್ಸು ದೊರಕಿಸಿಲ್ಲ. ಈಗಾಗಲೇ ಅಡಿಕೆ ಹಳದಿ ಎಲೆ ಪೀಡಿತ ಪ್ರದೇಶದಲ್ಲಿ ಒಂದಿಬ್ಬರು ಬೆಳೆಗಾರರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಎಲೆಚುಕ್ಕಿ ರೋಗದಂತಹ ಸಮಸ್ಯೆ ಬಂದಾಗಲೂ ಹೇಳಿಕೆಗಳೇ ಬಂದವೇ ಹೊರತು ಪರಿಹಾರ ದೊರತಿಲ್ಲ. ಈಗಲೂ ಅಡಿಕೆ ಆಮದು , ಮಾರುಕಟ್ಟೆಯ ಕುಸಿತದ ಭೀತ ಎದುರಾದಾಗಲೂ ಇದೆಲ್ಲಾ ಸುಳ್ಳು ಎನ್ನುತ್ತಲೇ ಇರುವುದು ಅಪಾಯಕಾರಿ. ಇಂತಹ ಸಂಗತಿಗಳು ಬಂದಾಗ ಪಕ್ಷಗಳು, ರಾಜಕೀಯ ನೇತಾರರು, ಖಡಕ್ ಆಗಿರುವ ನಿರ್ಣಯ, ನಿರ್ಧಾರದ ಬಗ್ಗೆ ಹೇಳಿಕೆಗಳನ್ನು ನೀಡಲೂ ಹಿಂದೆ ಮುಂದೆ ನೋಡುವಾಗ ಅಡಿಕೆ ಬೆಳೆಗಾರರೇ ಇದೆಲ್ಲಾ ಸುಳ್ಳು ಎನ್ನುವುದು ಮೂರ್ಖತನವಷ್ಟೇ.….ಮುಂದೆ ಓದಿ…..
ಅಡಿಕೆ ಹಾನಿಕಾರಕ ಎನ್ನುವ ಅಂಶ ನ್ಯಾಯಾಲಯದಲ್ಲಿ ಇದೆ. ಹೊಗೆಸೊಪ್ಪು ಲಾಬಿಯೂ ಇಲ್ಲಿ ಜೋರಾಗಿ ಕೆಲಸ ಮಾಡುತ್ತಿದೆ ಎನ್ನುವುದೂ ಅಷ್ಟೇ ಸ್ಪಷ್ಟ. ಅಡಿಕೆ ಬೆಳೆಗಾರರ ಪರವಾಗಿ ಒಂದೆರಡು ನ್ಯಾಯವಾದಿಗಳು ಕೆಲಸ ಮಾಡಿದರೆ ಸಿಗರೇಟು ಕಂಪನಿಗಳ ಪರವಾಗಿ ಹತ್ತಾರು ನ್ಯಾಯವಾದಿಗಳು ಕೆಲಸ ಮಾಡುತ್ತಿರುವುದು ಕೂಡಾ ಅರಿಯಬೇಕಾದ ಸತ್ಯ. ಈಗಲೂ ಅಡಿಕೆ ಆಮದು ಸಂದರ್ಭದಲ್ಲಿ ಬೃಹತ್ ಕಂಪನಿಗಳು ಕಡಿಮೆ ಅಡಿಕೆ ಉತ್ಪಾದನೆಯಾಗುವ ದೇಶದಿಂದ ದೊಡ್ಡ ಪ್ರಮಾಣದಲ್ಲಿ ಏಕೆ ಒಪ್ಪಂದ ಮಾಡಿಕೊಳ್ಳುತ್ತಾರೆ ? ಈ ವಿಚಾರವೇ ಬಹುದೊಡ್ಡದಾಗಿ ಕಾಡುವ ಪ್ರಶ್ನೆ. ಇದಕ್ಕಾಗಿಯೇ ಈಗ ಪ್ರಶ್ನಿಸಬೇಕಾದ್ದು.….ಮುಂದೆ ಓದಿ…..
ಅಡಿಕೆ ಮಾರುಕಟ್ಟೆಯು ಕಳೆದ ಕೆಲವು ಸಮಯಗಳಿಂದ ಮಧ್ಯಮ ಗತಿಯಲ್ಲಿತ್ತು. ಕೊರೋನಾ ನಂತರ ಧಾರಣೆ ಏರಿಕೆಯಾಗಿದೆ. ಅದಕ್ಕೂ ಮುನ್ನ 1990 ರಿಂದ 2016 ರ ಆಸುಪಾಸಿನಲ್ಲೂ ಅಡಿಕೆ ಧಾರಣೆ ಏರಿಕೆಗೆ ಬಹುಮುಖ್ಯ ಪಾತ್ರ ವಹಿಸಿದ್ದು ಅಡಿಕೆ ಬೆಳೆಗಾರರನ್ನು ಮಾರುಕಟ್ಟೆ ಸಂಗತಿಗಳಲ್ಲಿ ಜಾಗೃತಿಗೊಳಿಸಿದ್ದು. ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ಮಾಧ್ಯಮಗಳ ಮೂಲಕ ಆಗಾಗ ಅಡಿಕೆ ಮಾರುಕಟ್ಟೆಯ ಏರಿಳಿತ ಹಾಗೂ ಆಮದು, ಆಮದು ತಡೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು, ಅಡಿಕೆ ಮಾರುಕಟ್ಟೆಯ ಏರಿಕೆಯ ಸಮಯ ಇತ್ಯಾದಿಗಳ ಬಗ್ಗೆ ಆಗಾಗ ಎಚ್ಚರಿಸುತ್ತಿದ್ದರು. ಕೊನೆಗೆ ಅಡಿಕೆ ಬೆಳೆಗಾರರೇ ಅವರ ವಿರುದ್ಧ ಮಾತನಾಡಿದರು. ಒಮ್ಮೆ ಅಡಿಕೆ ಧಾರಣೆಯು ಹಲವಾರು ಕಾರಣಗಳಿಂದ ನಿರೀಕ್ಷಿಸಿದಂತೆ ಏರಿಕೆ ಕಾಣಲಿಲ್ಲ. ಇದಕ್ಕಾಗಿ ಬೆಳೆಗಾರರು ಮಾರುಕಟ್ಟೆ ವಿಶ್ಲೇಷಣೆಯನ್ನೇ ವ್ಯಂಗ್ಯ ಮಾಡಿದರು. ಡಾ.ವರ್ಮುಡಿ ಅವರು ಮಾರುಕಟ್ಟೆ ಮಾಹಿತಿ ನೀಡುವುದನ್ನು ನಿಲ್ಲಿಸಿದರು.….ಮುಂದೆ ಓದಿ…..
ಅಡಿಕೆ ಮಾರುಕಟ್ಟೆಯು ಊಹಾಪೂಹದ ವಾತಾವರಣದಿಂದಲೇ ಏರಿಕೆ ಕಾಣುತ್ತದೆ. ವಾಸ್ತವ ಸ್ಥಿತಿ ಬೇರೆಯೇ ಇರುತ್ತದೆ. ಕೆಲವು ಸಮಯದ ಹಿಂದೆ ಒಂದು ಪ್ರದೇಶದಲ್ಲಿ ಅಡಿಕೆ ಧಾರಣೆ ಏರಿಕೆಯಲ್ಲಿದೆ ಎಂದು ಮಾಧ್ಯಮವೊಂದರಲ್ಲಿ ಪದೇ ಪದೇ ಪ್ರಕಟವಾಗುತ್ತಿತ್ತು. ಇದರ ಆಧಾರದಲ್ಲಿ ಇತರ ಕಡೆಯೂ ಧಾರಣೆ ಏರಿಕೆಯಾಗುತ್ತಿತ್ತು. ಆಗ ಸೋಶಿಯಲ್ ಮೀಡಿಯಾ ಇಷ್ಟೊಂದು ವ್ಯಾಪಿಸಿರಲಿಲ್ಲ. ಆ ಪ್ರದೇಶಕ್ಕೆ ಕೆಲವು ಬೆಳೆಗಾರರು ದೂರದಿಂದಲೂ ಅಡಿಕೆ ತಂದಾಗ ವ್ಯಾಪಾರಿಯೇ ಒಮ್ಮೆ ಗಲಿಬಿಲಿಯಾಗುವಂತೆ ಆಗಿತ್ತು.….ಮುಂದೆ ಓದಿ…..
ಕೆಲವು ಪತ್ರಿಕೆಗಳಲ್ಲಿ ಅಡಿಕೆ ಧಾರಣೆ ಏರಿಕೆಯ ಸುದ್ದಿ ಪದೇ ಪದೇ ಬರುತ್ತದೆ. ಯಾವ ಬೆಳೆಗಾರರೂ ಆ ಧಾರಣೆಗೆ ಅಡಿಕೆ ಮಾರಾಟ ಮಾಡುವುದಿಲ್ಲ. ಏಕೆಂದರೆ, ಧಾರಣೆ ಏರಿಕೆಯ ನಿರೀಕ್ಷೆ ಹುಟ್ಟಿಸಲಾಗುತ್ತಲೇ ಇರುತ್ತದೆ, ಹೀಗಾಗಿ ಬೆಳೆಗಾರ ಮಾರಾಟ ಮಾಡುವುದಿಲ್ಲ. ಇದರ ಹಿಂದೆಯೂ ಕಾರಣ ಬೇರೆಯೇ ಇರುತ್ತದೆ. ಕೊನೆಗೆ ಧಾರಣೆ ಇಳಿಕೆಯಾಗುವ ವೇಳೆ ಒಮ್ಮೆಲೇ ಮಾರುಕಟ್ಟೆಗೆ ಅಡಿಕೆ ಸರಬರಾಜು ಆಗುತ್ತದೆ, ಧಾರಣೆ ಕುಸಿಯುತ್ತದೆ. ಇದರ ಹಿಂದೆಯೂ ಜಾಲವು ಇರುತ್ತದೆ ಎನ್ನುವುದು ಅಡಿಕೆ ಬೆಳೆಗಾರರಿಗೆ ತಿಳಿಯುವುದೇ ಇಲ್ಲ. ಇಂದಿಗೂ ಅಂತಹ ಸುದ್ದಿಗಳು ಹರಿದಾಡುತ್ತದೆ, ಅಡಿಕೆ ಧಾರಣೆ, ಮಾರುಕಟ್ಟೆಯಲ್ಲಿ ಯಾವ ಉತ್ಸಾಹವೂ ಇಲ್ಲದ ವೇಳೆ ಸದ್ಯದಲ್ಲೇ ಅಡಿಕೆ ಧಾರಣೆ ಏರಿಕೆಯ ಸುದ್ದಿ ಬರುತ್ತದೆ. ಅಡಿಕೆ ಮಾರುಕಟ್ಟೆಗೆ ಬರುವುದು ಸ್ಥಗಿತವಾಗುತ್ತದೆ.
ಧಾರಣೆ ಏರಿಕೆಯಾಗಿ ಇಳಿಕೆಯಾಗುವ ವೇಳೆ ಅಡಿಕೆ ಬೆಳೆಗಾರ ಅಡಿಕೆಯನ್ನು ಮಾರುಕಟ್ಟೆ ತರುತ್ತಾನೆ. ಅಡಿಕೆಗೆ ಯಾವುದೇ ಸ್ಥಿರವಾದ ಧಾರಣೆ, ಸ್ಟಾಂಡರ್ಡ್ ಮಾರುಕಟ್ಟೆ ಎನ್ನುವುದೇ ಇಲ್ಲ..!. ಇದಕ್ಕಾಗಿಯೇ ಅಡಿಕೆ ಮಾರುಕಟ್ಟೆಗೆ ಸಣ್ಣ ಸಣ್ಣ ಸಂಗತಿಗಳೂ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ಸುಳ್ಳು, ಇದು ಸಾಧ್ಯವಿಲ್ಲ ಎನ್ನುವುದು ಹಾಗೂ ಈ ಸುದ್ದಿ ಹರಡಿದರೆ ಮಾರುಕಟ್ಟೆ ಇಳಿಯುತ್ತದೆ ಎನ್ನುವುದು ತಾತ್ಕಾಲಿಕವಾದ ಪರಿಹಾರ ಅಷ್ಟೇ. ಅಡಿಕೆ ಇಂದಿಗೇ ನಿಲ್ಲುವುದಿಲ್ಲ, ನಾಳೆಯೂ ಮಾರುಕಟ್ಟೆ ಇರಬೇಕು, ನಾಳೆಯೂ ಅಡಿಕೆ ಬೆಳೆ ಇರುವುದರಿಂದ ಶಾಶ್ವತವಾದ ಪರಿಹಾರದ ಕಡೆಗೇ ಬೆಳೆಗಾರರು ಯೋಚಿಸಬೇಕಾಗಿದೆ. ಅದಕ್ಕಾಗಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಣ್ಣ ಸಣ್ಣ ಸಂಗತಿಗಳೂ ಬಹಳ ಗಂಭೀರವಾಗಿ ತಿಳಿದುಕೊಳ್ಳಬೇಕಾದ್ದು ಅಡಿಕೆ ಬೆಳೆಗಾರ. ….ಮುಂದೆ ಓದಿ…..
ಅಡಿಕೆ ಇಳುವರಿ ಕುಸಿತ, ಅಡಿಕೆ ಕೊಳೆರೋಗದಂತಹ ಸಂಗತಿಗಳೂ ಅಡಿಕೆ ಮಾರುಕಟ್ಟೆ ಮೇಲೆ ಇಲ್ಲಿ ಪರಿಣಾಮ ಬೀರುತ್ತದೆ. ಅನೇಕ ಬಾರಿ ಆಂಗ್ಲ ಪತ್ರಿಕೆಗಳಲ್ಲಿ ಅಡಿಕೆ ಕೊಳೆರೋಗ, ಅಡಿಕೆ ಫಸಲು ಕೊರತೆಯ ಸುದ್ದಿಗಳು ಪ್ರಸಾರವಾದ ಮರುದಿನವೇ ಅಡಿಕೆ ಧಾರಣೆಯ ಮೇಲೂ ಪರಿಣಾಮ ಬೀರುವುದು ಈಗಾಗಲೇ ಕಂಡಿದೆ. ಅಡಿಕೆ ದಾಸ್ತಾನು ಇರಿಸುವುದು ಕೂಡಾ ಬಹುಮುಖ್ಯವಾದ ಸಂಗತಿ ವ್ಯಾಪಾರಿಗಳಿಗೆ ಇರುವುದರಿಂದ ಅಡಿಕೆ ಬೆಳೆಯ ಮೇಲಿನ ಪರಿಣಾಮಗಳೂ ಧಾರಣೆ ಏರಿಕೆಗೆ ಕಾರಣವಾಗಿವೆ. ಈಗ ಗುಣಮಟ್ಟದ ಕಡೆಗೆ ಹೆಚ್ಚು ಆಸಕ್ತವಾಗದ ವ್ಯಾಪಾರಿಗಳು ಸಿಕ್ಕ ಸಿಕ್ಕ ಅಡಿಕೆಯನ್ನು ಖರೀದಿ ಮಾಡುತ್ತಾರೆ. ಗ್ರಾಹಕರೂ ವಿಪರೀತ ಧಾರಣೆಯ ಕಾರಣದಿಂದ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಮಾರುಕಟ್ಟೆ ವಲಯ ಹೇಳುತ್ತದೆ. ಹೀಗಾಗಿ ಕಳ್ಳಸಾಗಾಣಿಕೆಯ ಮೂಲಕ ಕಳಪೆ ಗುಣಮಟ್ಟದ ಅಡಿಕೆ ಬಂದು ಇಲ್ಲಿ ಮಿಶ್ರಣಗೊಂಡು ಮಾರುಕಟ್ಟೆಗೆ ಪ್ರವೇಶವಾಗುತ್ತದೆ.….ಮುಂದೆ ಓದಿ…..
ಅಡಿಕೆ ಬೆಳೆ ವಿಸ್ತರಣೆಯು ಕೂಡಾ ಭವಿಷ್ಯದಲ್ಲಿ ಅಡಿಕೆ ಬೆಳೆಗೆ ಮಾರಕವಾಗಲಿದೆ. ಈ ಬಗ್ಗೆ ಮಾತುಗಳು ಬಂದಾಕ್ಷಣವೇ 1980 ರಿಂದಲೇ ಈ ಮಾತುಗಳು ಇವೆ ಎಂಬ ಉಡಾಫೆ ಬರುತ್ತದೆ. ಆದರೆ ಕೊರೋನಾ ನಂತರ ಅಡಿಕೆ ಧಾರಣೆ ಏರಿಕೆಯಾದ ಬಳಿಕ ಎಲ್ಲೆಡೆಯೂ ಒಬ್ಬಬ್ಬ ಕೃಷಿಕ 100 ಎಕ್ರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯುವುದು ಹಲವು ಕಡೆ ಇದೆ. ಇದೆಲ್ಲಾ ಅಡಿಕೆಯಾಗಿ ಮಾರುಕಟ್ಟೆಗೆ ಬರುವ ವೇಳೆ ಎಲ್ಲಿದೆ ಬೇಡಿಕೆ ? ಅಡಿಕೆ ಕೇವಲ ತಿಂದು ಉಗುಳುವ ವಸ್ತು, ಈಗಿನ ಅಡಿಕೆ ಬೇಡಿಕೆ ಎಷ್ಟು-ಪೂರೈಕೆ ಎಷ್ಟು ? ಎಷ್ಟು ಕೊರತೆ ಇದೆ ? ಈ ಬಗ್ಗೆ ಯಾವ ಅಧಿಕೃತ ಡಾಟಾಗಳು ಎಲ್ಲೂ ಇಲ್ಲ. ಎಲ್ಲವೂ ಅಂದಾಜಿನ ಮೇಲೆಯೇ ಅಡಿಕೆ ಮಾರುಕಟ್ಟೆ ಇದೆ. 1956-57 ರಲ್ಲಿ 2.90 ರೂಪಾಯಿ ಇದ್ದರೆ 2000-2001 ರಲ್ಲಿ 78 ರೂಪಾಯಿಗೆ ತಲಪಿತ್ತು. 2020 ರ ವೇಳೆಗೆ 400 ರೂಪಾಯಿ ಆಸುಪಾಸಿಗೆ ಅಡಿಕೆ ಧಾರಣೆ ಏರಿಕೆಯಾಗಿತ್ತು. ಹೀಗಾಗಿ ಈಗ ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆಯ ವ್ಯತ್ಯಾಸ ಕೂಡಾ ಚರ್ಚೆಯೇ ಆಗದ ವಿಷಯವಾಗಿದೆ.….ಮುಂದೆ ಓದಿ…..
ಈಗ ಅಡಿಕೆ ಆಮದು ಆತಂಕ ಹೌದು. ಚುನಾವಣೆ ಹತ್ತಿರ ಇರುವುದರಿಂದ ಇದೊಂದು ರಾಜಕೀಯ ವಿಷಯವಾಗಿ ಬಿಡುತ್ತದೆ. ಅದಕ್ಕಾಗಿಯೇ ದೊಡ್ಡ ದೊಡ್ಡ ಸಂಸ್ಥೆಗಳು ಇಂತಹ ಸಂದರ್ಭವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಚುನಾವಣೆ ಘೋಷಣೆಯ ಬಳಿಕ ಎಲ್ಲವೂ ಅಧಿಕಾರಿಗಳ ಹಿಡಿತ…!. ಈಗ ಚುನಾವಣೆಯ ಸಮಯ ಹತ್ತಿರವಾದ್ದರಿಂದ ಅಡಿಕೆಯ ಯಾವ ವಿಷಯವೂ ಹೆಚ್ಚು ಚರ್ಚೆಯಾಗುವುದು ಮತ್ತು ತಡೆಯಾಗುದಕ್ಕಿಂತ ಇದೊಂದು ಸುಳ್ಳು ಎಂದೇ ಹೆಚ್ಚು ಬಿಂಬಿಸಲಾಗುತ್ತದೆ. ಈಗ ಅಡಿಕೆ ಧಾರಣೆ ಏರಿಕೆಯ ಭರವಸೆ ಸಿಗುತ್ತದೆ. ಆದರೆ ನಾಳೆ ಈ ಧಾರಣೆ ಇರಲು ಸಾಧ್ಯವಿಲ್ಲ. ದಾಸ್ತಾನು ಮುಗಿದ ತಕ್ಷಣವೇ ಏರಿಳಿತವಾಗಬಹುದು. ಹೀಗಾಗಿ ಅಡಿಕೆಯೇ ಪ್ರಮುಖ ಆದಾಯ ಮೂಲವಾಗಿರುವ ಅಡಿಕೆ ಬೆಳೆಗಾರನಿಗೆ ಭವಿಷ್ಯ ಭದ್ರವಾಗಿರಬೇಕಾದರೆ ರಾಜಕೀಯ ರಹಿತವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಅಷ್ಟೇ. ಅದೂ ಅಲ್ಲದೆ, ಸಂಸ್ಥೆಗಳೂ ಅಡಿಕೆ ಮಾತ್ರವಲ್ಲ ಪರ್ಯಾಯ ಬೆಳೆಯಿರಿ ಎನ್ನುತ್ತಲೇ ಇರುವ ಕಾರಣವನ್ನೂ ಅಡಿಕೆ ಬೆಳೆಗಾರರು ಗಮನಿಸಬೇಕು.