ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ – 2024 ಕಾರ್ಯಕ್ರಮದ ಪ್ರಯುಕ್ತ ಕೃಷಿ ವಿಚಾರಗೋಷ್ಠಿ ನಡೆಸಲಾಯಿತು. ಅಡಿಕೆ ಬೆಳೆಯಲ್ಲಿ ಮಿಶ್ರ ಬೆಳೆಯ ಬಗ್ಗೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ ಅವರು ನೀಡಿರುವ ಮಾಹಿತಿ ಇಲ್ಲಿದೆ.. (ಸಂಪೂರ್ಣ ಆಡಿಯೋ ಮೇಲೆ ಇದೆ..)
ಈ ಕಾರ್ಯಕ್ರಮದ ಬಗ್ಗೆ ಕೃಷಿಕ ಸುರೇಶ್ಚಂದ್ರ ಅವರು ಹೀಗೆ ಹೇಳಿದ್ದಾರೆ….
ಸಿಪಿಸಿಆರ್ ಐ ನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ ಮತ್ತು ಡಾ.ಭವಿಷ್ ಅವರು ಗೊಬ್ಬರ ನಿರ್ವಹಣೆ ಮತ್ತು ರೋಗ ನಿರೋಧಕ/ನಿರ್ವಹಣೆ ಬಗ್ಗೆ ಚೆನ್ನಾಗಿ ಮಾಹಿತಿ ಕೊಟ್ಟಿರುತ್ತಾರೆ. ಫಂಗಿಸೈಡುಗಳೊಂದಿಗೆ ನಮ್ಮ ಅನುಕೂಲಕ್ಕಾಗಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಬಾರದು.ಅದು ನಮ್ಮ ಉದ್ದೇಶವನ್ನು ಹಾಳು ಮಾಡುವ ಸಾದ್ಯತೆ ಇದೆ ಎಂದು ತಿಳಿಸಿದರು. ಹಾಗೂ ಸೂಕ್ಷ್ಮ ಪೋಷಕಗಳನ್ನು ಮಿತಿಯಿಂದ ಹೆಚ್ಚು ಬಳಸಿದರೆ ಅದು ಇತರ ಗೊಬ್ಬರಗಳನ್ನು ಹೀರುವಿಕೆಯ ಮೇಲೆ ಅಥವಾ ಗೊಬ್ಬರ ಬಿಡುಗಡೆಗೊಳ್ಳುವಲ್ಲಿ ತಡೆಯಾಗುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದರು.
ಹಾಗಿದ್ದರೆ ಮೊದಲಿನ ಕಾಲದಲ್ಲಿ ಇಂತಹದೆಲ್ಲ ಇತ್ತೋ….ಹೇಗಿತ್ತು ಎಂಬುದನ್ನೂ ಡಾಕ್ಟರ್ ಭವಿಷ್ ಅವರು ಉದಾಹರಣೆಯೊಂದಿಗೆ ವಿವರಿಸಿದರು. ಮೊದಲು ಹಟ್ಟಿ ಗೊಬ್ಬರ, ಸುಡುಮಣ್ಣು ಬೂದಿಗಳೇ ಮುಖ್ಯ ಗೊಬ್ಬರಗಳಾಗಿತ್ತು…. ಹಟ್ಟಿಗೊಬ್ಬರದಲ್ಲಿ ಸಸ್ಯಕ್ಕೆ ಮಿತವಾಗಿ ಘನ ಪೋಷಕಾಂಶಗಳ ಜೊತೆಗೆ ಸೂಕ್ಷ್ಮ ಪೋಷಕಗಳೂ ಲಭಿಸುತಿತ್ತು…ಈ ಮೂಲಕ ಕೃಷಿ ಸಾಗುತಿತ್ತು….ಆಗಿನ ಕೃಷಿಕರಿಗೆ ಈಗಿನ ಥಿಯರಿಗಳು ಗೊತ್ತಿಲ್ಲದಿದ್ದರೂ ಅನುಭವ ನೋಟವಿತ್ತು ಎಂದರು ಹಾಗೂ ಅವರ ಮನೆಯ ತೋಟದಲ್ಲೇ ಮುನ್ನೂರ ಐವತ್ತು ಅಡಿಕೆ ಮರಗಳಲ್ಲಿ ಹದಿನೈದು ಕ್ವಿಂಟಾಲ್ ಅಡಿಕೆ ಕೊಯಿದಿದ್ದರು….ಅದರೆ ಈಗ ಅದೇ ತೋಟದಲ್ಲಿ ರಾಸಾಯನಿಕ ಕೃಷಿಯೊಂದಿಗೆ ಎಂಟತ್ತು ಕ್ವಿಂಟಾಲ್ ಅಡಿಕೆ ಬರುತ್ತಿದೆಯಷ್ಟೇ ಅಂದಾಗ ನಾವೆತ್ತ ಸಾಗುತಿದ್ದೇವೆ ಎಂದೆನಿಸಿತು.
ಈಗ ಇರುವ ವಿಷಯ ಏನೆಂದರೆ…., ಊರಲ್ಲಿ ಇರುವ ಸಹಕಾರಿ ಸಂಘಗಳು ಸುದೃಢವಾಗಿವೆ. ಈ ಸಹಕಾರಿ ಸಂಘಗಳು ಒಬ್ಬೊಬ್ಬ ಅಗ್ರಿಕಲ್ಚರ್ ಬಿಎಸ್ ಸಿ ಮಾಡಿದ ಯುವಕರನ್ನು ಒಬ್ಬ ಕೃಷಿ ಡಾಕ್ಟರ್ ಆಗಿ ನೇಮಿಸಿಕೊಳ್ಳಬೇಕು.ಈ ಡಾಕ್ಟರ್ ಸಂಘಕ್ಕೆ ಗೊಬ್ಬರಕ್ಕಾಗಿ/ಔಷಧಕ್ಕಾಗಿ ಬಂದವರಿಗೆ ಗೊಬ್ಬರಗಳ ಬಗ್ಗೆ, ಅವುಗಳ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಹಾಗೂ ವಾರದಲ್ಲೊಂದೆರಡು ದಿನ ಆ ಸಂಘ ವ್ಯಾಪ್ತಿಯ ತೋಟಗಳಿಗೆ ಬೇಟಿ ನೀಡಿ ಆ ತೋಟದ ಕೃಷಿ, ಗೊಬ್ಬರ ನಿರ್ವಹಣೆ, ನೀರಾವರಿ ಕ್ರಮಗಳನ್ನು ದಾಖಲಿಸಬೇಕು, ತಿಂಗಳಿಗೊಮ್ಮೆ ಎಲ್ಲರನ್ನೂ ಸೇರಿಸಿ ಕೃಷಿ ವಿಚಾರ ವಿನಿಮಯ ಮಾಡಿಕೊಳ್ಲುವ ಜವಾಬ್ದಾರಿ ಕೂಡಾ ಆ ಕೃಷಿ ಡಾಕ್ಟರ್ ಗೆ ವಹಿಸಬೇಕು ಹಾಗೂ ….ಕೊನೆಗೆ ಅವರಿಗೆ ಉತ್ತಮ ಕೃಷಿ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು. ಈ ಕೃಷಿ ಡಾಕ್ಟರ್ ಗೆ ವರ್ಷಕ್ಕೆ ಎರಡು ಮೂರು ಲಕ್ಷ ಸಂಬಳ ಕೊಡುವುದು ಖಂಡಿತವಾಗಿ ಯಾವುದೇ ಸಹಕಾರಿ ಸಂಘಕ್ಕೆ ಅಸಾಧ್ಯವಲ್ಲ…ಮನಸ್ಸು ಬೇಕಷ್ಟೆ. ಈ ಡಾಕ್ಟರ್ ವಿಸಿಟಿಗೆ ಒಂದು ದರವನ್ನೂ ನಿಗದಿಪಡಿಸಲಿ….ಇದು ಖಂಡಿತವಾಗಿ ಇಂದಿನ ದಿನದ ಅವಶ್ಯಕತೆ.
ಇದ್ಯಾಕೆಂದರೆ…, ನಮ್ಮೂರಿನ ಒಬ್ಬ ತಿಳುವಳಿಕೆ ಇಲ್ಲದ ಸಣ್ಣ ಕೃಷಿಕರೊಬ್ಬರು ನನಗೆ ಫೋನ್ ಮಾಡಿ ಅಡಿಕೆ ಗಿಡ ಇದೆಯೇ ಎಂದು ವಿಚಾರಿಸಿದರು….ನಾನು ಈಗಾಗಲೇ ನರ್ಸರಿಯಿಂದ ಗಿಡ ತಂದಿದ್ದೇನೆ….ಅದರಲ್ಲಿ ಸಂಪೂರ್ಣ ಎಲೆಚುಕ್ಕಿ ಇದೆ….ಮದ್ದಿನಂಗಡಿಯಿಂದ ಅವರು ಕೊಟ್ಟ ಮದ್ದೊಂದ ಸ್ಪ್ರೇ ಮಾಡಿದ್ದೇನೆ ,ಯಾವುದೇ ಪ್ರಯೋಜನ ಅಗಲಿಲ್ಲ….ಹಾಗಾಗಿ ಆ ಗಿಡಗಳನ್ನು ನಾಶ ಪಡಿಸಿ ಬೇರೆಯೆ ಉತ್ತಮ ಗಿಡ ನಡಬೇಕೆಂದಿದ್ದೇನೆ ಎಂದರು. ಆಗ ನಾನು ಅಂಗಡಿಯಾತ ಕೊಟ್ಟ ಮದ್ದಿನ ಫೊಟೋ ಕಳಿಸೆಂದೆ….ನೋಡಿದರೆ ನಮ್ಮ ದುರವಸ್ಥೆ ಎಲ್ಲಿ ತನಕ ಮುಟ್ಟಿದೇ ಅನ್ನೋದಕ್ಕೆ ಇದು ಕೈಗನ್ನಡಿ. ಅಂಗಡಿಯಾತ ಕೊಟ್ಟದ್ದೊಂದು ಕ್ರಿಮಿನಾಶಕ, ಈ ಎಲೆ ಚುಕ್ಕೆ ರೋಗಕ್ಕೆ ಬೇಕಾದ್ದು ಶಿಲೀಂಧ್ರ ನಾಶಕ…
ಅಯ್ಯೋ…ಆರೋಗ್ಯ ಸುಧಾರಣೆಗೆ ಹಾಲು ಕುಡಿಯ ಬೇಕಾದವ ಆಲ್ಕೋಹಾಲ್ ಕುಡಿದರಾದೀತೇ…. ಇಂತಹ ದುರವಸ್ಥೆಗಳು ಕೃಷಿ ವಲಯದಲ್ಲಿ ಸಂಭವಿಸುತ್ತಾ ಇರುತ್ತದೆ. ಆದ್ದರಿಂದ, ನಾವೆಲ್ಲರೂ ಸರಿಯಾಗಿ ,ವೈಜ್ಞಾನಿಕವಾಗಿ ಗೊಬ್ಬರ , ಔಷದೋಪಚಾರಗಳನ್ನು ಮಾಡಿದರೆ ಮಾತ್ರ ಉತ್ತಮ ಫಸಲನ್ನು ಪಡೆಯಬಹುದಷ್ಟೇ ಹೊರತು, ಒಟ್ಟಾರೆಯಾಗಿ ಆ ಗೊಬ್ಬರ ಉತ್ತಮ ಈ ಗೊಬ್ಬರ ಉತ್ತಮ ಎಂದು ಬುಡಕ್ಕೆ ನಮಗೆ ತೋಚಿದ ಪ್ರಮಾಣದಲ್ಲಿ ತುಂಬಿದರೆ ಅದು ವ್ಯತಿರಿಕ್ತವಾಗಿ ಪ ಪರಿಣಮಿಸಿತಲ್ಲವೇ.
ಆದ್ದರಿಂದ, ನಾವೂ ಪ್ರತೀ ವರ್ಷ ಯಾವ್ಯಾವ ಗೊಬ್ಬರ/ ಔಷಧ ಎಷ್ಟೆಷ್ಟು ಯಾವ ಯಾವ ತೋಟಕ್ಕೆ ಯಾವ ಯಾವ ಕಾಲಕ್ಕೆ ಹಾಕಿದ್ದೇವೆ ಎಂಬುದನ್ನು ಪ್ರತ್ಯೇಕ ಪುಸ್ತಕದಲ್ಲಿ ದಾಖಲಿಸಬೇಕು ಮತ್ತು ಮುಂದಿನ ವರ್ಷದ ಬಳಕೆಯ ಸಂಧರ್ಭದಲ್ಲಿ ಒಬ್ಬ ಸರಿಯಾದ ಕೃಷಿ ಡಾಕ್ಟರ್ ಲ್ಲಿ ವಿಮರ್ಶೆ ಮಾಡಿ ಮುಂದುವರಿಯಬೇಕೆಂದು ನನಗೆ ಅನಿಸುತ್ತಿದೆ.ಆದ್ದರಿಂದ ಪ್ರತೀ ಸಹಕಾರಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಒಬ್ಬೊಬ್ಬ ಕೃಷಿ ಪದವೀಧರನನ್ನು ನೇಮಿಸಿ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಹೆಸರಿಗೆ ನಿಜಾರ್ಥ ಕೊಡಬೇಕಲ್ಲವೇ.
NPK ಅಂದರೆ ಏನೆಂದೇ ತಿಳಿಯದವರು ತುಂಬಾ ಕೃಷಿಕರಿದ್ದಾರೆ.ಆವತ್ತೊಂದು ರಾಲೀಸ್ ಕಂಪೆನಿಯ 14.6.21 NPK ಅಂತ ಬರುತಿತ್ತು.ಅದೇ NPK. ಅಂತ ಈವತ್ತೂ ತಿಳಿದವರಿದ್ದಾರೆ. ಹಾಗೇ ಶಿಲೀಂಧ್ರ ನಾಶಕ, ಕೀಟ ನಾಶಕ, ಕ್ರಿಮಿನಾಶಕ ಇವುಗಳ ವ್ಯತ್ಯಾಸ ಕೂಡಾ ತಿಳಿಯದವರಿದ್ದಾರೆ.
ಅಂಗಡಿಯವ ಕೊಟ್ಟ ತಗೊಂಡು ಬಂದೆ, ಆಚೆ ಮನೆಯವ ತಂದ, ನಾನೂ ತಂದೆ….ಹಾಗಾಗಬಾರದಲ್ಲಾ. ಇದಕ್ಕೆಲ್ಲ ಉತ್ತರ ಖಂಡಿತವಾಗಿ ಕೃಷಿ ಕ್ಲಿನಿಕ್…ಕೃಷಿ ಡಾಕ್ಟರ್….. ಈ ಮೂಲಕ ಕೃಷಿಗೆ ಉತ್ತೇಜನ ಮತ್ತು ಸರಿಯಾದ ದಾರಿ ತೋರಿಸಬಹುದಲ್ಲಾ…. ನನ್ನಜ್ಜನ ಕಾಲದಿಂದಲೂ ಸುಫಲಾ ಹಾಕುವುದು….ಮೊದಲು ವರ್ಷಕ್ಕೊಮ್ಮೆ ಅರ್ಧ ಕೆಜಿ….ಅದು ಹೋಗಿ ವರ್ಷಕ್ಕೆರಡು ಸಲ ಅರ್ಧರ್ದ ಕೇಜಿ…..ಈಗ ಮತ್ತೂ ಮೇಲೆ ಮೇಲೆ…. ಸಾರಜನಕ 15%, ಪಾಸ್ಪರಸ್ 15%, ಪೊಟೇಶಿಯಂ 15%….
ಅಂದರೆ ವಾರ್ಷಿಕವಾಗಿ ಎಲ್ಲಾ ಪೋಷಕಾಂಶಗಳೂ ನೂರೈವತ್ತು ನೂರೈವತ್ತಕಿಂತಲೂ ಹೆಚ್ಚಾಯಿತು….ಪ್ರತೀ ವರ್ಷ ಹೀಗೇ ಹಾಕುತ್ತಾ ಹೋದಾಗ ರಂಜಕ ಮಿತಿಮೀರಿ ಮಣ್ಣಲ್ಲಿ ಸಂಗ್ರಹವಾಗಿ ಇತರ ಗೊಬ್ಬರಗಳನ್ನು ಬಿಡುಗಡೆಯಾಗದಂತೆ ಮಾಡುತ್ತದೆ…..ಈ ಬಗ್ಗೆ ಈಗ್ಗೆ ಕೆಲವು ವರ್ಷಗಳಿಂದ ಕೃಷಿ ವಿಜ್ಞಾನಿಗಳು ತಿಳುವಳಿಕೆ ಕೊಡುತ್ತಾನೇ ಬರುತ್ತಿದ್ದಾರೆ, ಆದರೂ… ನಾವು ಅಜ್ಜ ನೆಟ್ಟಾಲ ಮರದಲ್ಲೇ ನೇತಾಡುತಿದ್ದೇವೆ…. ಯಾಕೆಂದರೆ ಯಾರು ಈ ತಲೆಬಿಸಿ ಮಾಡೊದು ಮಾರ್ರೇ…. ಸುಫಲ ಒಂದಿಷ್ಟು ಹಾಕಿ ಸುಮ್ಮನೆ ಕೂರೋಣಾಂತ ಅಷ್ಟೇ. (ಇಲ್ಲಿ ಸುಫಲಾ ಅಂತ ಹೆಸರಿಸಿದ್ದು ಸಾಂಕೇತಿಕ, ಹೊರತು ಅಪವಾದ, ಅಪಚಾರಕ್ಕಲ್ಲ)
ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಿ.ಪಿ.ಸಿ.ಆರ್.ಐ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ, ವಿಜ್ಞಾನಿ ಡಾ.ವಿನಾಯಕ ಹೆಗಡೆ, ವಿಜ್ಞಾನಿ ಡಾ. ಭವಿಷ್ಯ, ಕೃಷಿಕರುಗಳಾದ ಸುರೇಶ್ಚಂದ್ರ ಕಲ್ಮಡ್ಕ, ಶಂಕರ ಪ್ರಸಾದ್ ರೈ ಸಂಪಾಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಡಿಕೆ ಬೆಳೆಯಲ್ಲಿ ಮಿಶ್ರ ಬೆಳೆಯ ಬಗ್ಗೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ ಅವರು ನೀಡಿರುವ ಮಾಹಿತಿ ಇಲ್ಲಿದೆ.. (ಸಂಪೂರ್ಣ ಆಡಿಯೋ ಮೇಲೆ ಇದೆ..)