ನೇಪಾಳ ಸರ್ಕಾರವು ಅಡಿಕೆ ಆಮದು ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ತೃತೀಯ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ಮತ್ತು ಭಾರತಕ್ಕೆ ಕಳ್ಳಸಾಗಣೆದಾರರನ್ನು ತಡೆಯಲು ಕ್ರಮ ಕೈಗೊಂಡ ಬೆನ್ನಲ್ಲೇ ಬರ್ಮಾ ಸೇರಿದಂತೆ ವಿವಿದೆಡೆಯ ಕಡಿಮೆ ಗುಣಮಟ್ಟದ ಅಡಿಕೆ ಮತ್ತೆ ಭಾರತದೊಳಕ್ಕೆ ಆಗಮನವಾಗುತ್ತಿದೆ. ಮ್ಯಾನ್ಮಾರ್ ಗಡಿಯ ಮೂಲಕ ಅಸ್ಸಾಂ ದಾರಿಯಲ್ಲಿ ಭಾರತೊಳಕ್ಕೆ ಇತರ ವಸ್ತುಗಳ ಜತೆ ಸಾಂಬಾರು ವಸ್ತುಗಳ ಹೆಸರಿನಲ್ಲಿ ಅಡಿಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಇದರಿಂದ ಭಾರತದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಲಿದೆ. ಹೀಗಾಗಿ ಇದೀಗ ಅಡಿಕೆ ಆಮದು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಕ್ಯಾಂಪ್ಕೋ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಕಳೆದ ಕೆಲವು ಸಮಯಗಳಿಂದ ಸದ್ದಿಲ್ಲದೆ ಅಧಿಕೃತ ದಾರಿಯ ಮೂಲಕ ಬರ್ಮಾದ ಕಡಿಮೆ ಗುಣಮಟ್ಟದ ಅಡಿಕೆ ಆಮದು ಆಗುತ್ತಿದೆ. ಇತರ ಸಾಂಬಾರು ವಸ್ತುಗಳ ಹೆಸರಿನಲ್ಲಿ ಅಡಿಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಮ್ಯಾನ್ಮಾರ್ ಗಡಿಯಲ್ಲಿ ಗೇಟ್ ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶದ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಾದರೂ ಇತರ ವಸ್ತುಗಳ ಜೊತೆಗೆ ಅಡಿಕೆಯೂ ಆಮದಾಗುತ್ತಿದೆ. ಇದು ಇಲ್ಲಿನ ಕೃಷಿಕರ ಮೇಲೆ ಪರಿಣಾಂ ಬೀರಲಿದೆ.ಹೀಗಾಗಿ ಕ್ರಮ ಅಗತ್ಯ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್‌ಗೆ ಅವರಿಗೆ ಕ್ಯಾಂಪ್ಕೋ ಪತ್ರ ಬರೆದಿದೆ. ತಕ್ಷಣವೇ ಅಡಿಕೆ ಆಮದು ತಡೆಗೆ ಕ್ರಮ ಆಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಒತ್ತಾಯಿಸಿದ್ದಾರೆ.
ಈ ನಡುವೆ ನೇಪಾಳ ಸರ್ಕಾರವು ಅಡಿಕೆ ಆಮದು ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ತೃತೀಯ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ಮತ್ತು ಭಾರತಕ್ಕೆ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಅಲ್ಲಿನ ಸರ್ಕಾರವು ಅಡಿಕೆ ಆಮದಿನ ಮೇಲೆ ಪ್ರತಿ ಕೆಜಿಗೆ 75 ರೂಪಾಯಿ ಹೆಚ್ಚುವರಿ ತೆರಿಗೆ ವಿಧಿಸಲು ಪ್ರಾರಂಭಿಸಿದೆ. ಭಾರತಕ್ಕಿಂತ ನೇಪಾಳದಲ್ಲಿ ಅಡಿಕೆ ಅಗ್ಗವಾಗಿರುವುದರಿಂದ ಮೂರನೇ ದೇಶಗಳಿಂದ ಅಡಿಕೆಯನ್ನು ಆಮದು ಮಾಡಿಕೊಂಡು ಅಕ್ರಮವಾಗಿ ಭಾರತದ ಮಾರುಕಟ್ಟೆಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಇದರಿಂದ ನೇಪಾಳಕ್ಕೂ ಯಾವುದೇ ಲಾಭವೂ ಇದ್ದಿರಲಿಲ್ಲ. ಹೀಗಾಗಿ ಸುಂಕ ಹೆಚ್ಚು ಮಾಡಿತ್ತು, ಭಾರತಕ್ಕೆ ಕಳ್ಳಸಾಗಾಣಿಕೆ ತಡೆಯೂ ಆಗಿತ್ತು. ನೇಪಾಳ ಹೊರತುಪಡಿಸಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಭಾರತ ನಿಷೇಧಿಸಿರುವ ಅಡಿಕೆಯನ್ನು ನೇಪಾಳದೊಂದಿಗಿನ ಮುಕ್ತ ಗಡಿಯ ಲಾಭ ಪಡೆದು ಇಂಡೋನೇಷ್ಯಾ, ಥಾಯ್ಲೆಂಡ್ ಮತ್ತು ಮಲೇಷ್ಯಾದಿಂದ ನೇಪಾಳ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ವ್ಯವಹಾರದಲ್ಲಿ ರಾಜಕೀಯ ಪ್ರಮುಖರ ಕೈವಾಡವೂ ಇದ್ದಿರುವುದು ಬಹಿರಂಗ ಸತ್ಯವಾಗಿತ್ತು ಕೂಡಾ.ಅಡಿಕೆ ಮಾತ್ರವಲ್ಲ ಮೆಕ್ಕೆಜೋಳ ಮತ್ತು ಕರಿಮೆಣಸಿನ ಮೇಲಿನ ಅಬಕಾರಿ ಸುಂಕವನ್ನೂ ಸರ್ಕಾರ ಹೆಚ್ಚಿಸಿದೆ. ಭಾರತಕ್ಕೆ ಕಳ್ಳಸಾಗಣೆಯಾಗುವ ಪ್ರಮುಖ ವಸ್ತುಗಳ ಪೈಕಿ ಶೇಂಗಾ ಮತ್ತು ಕರಿಮೆಣಸು ಕೂಡ ಸೇರಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಅಸ್ಸಾಂ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿತ್ತು. ಆದರೆ ಅಸ್ಸಾಂ ಗಡಿ ಭದ್ರತಾ ಪಡೆ ಹಾಗೂ ತೆರಿಗೆ ಇಲಾಖೆ ಆಗಾಗ ಅಡಿಕೆಯನ್ನು ವಶಪಡಿಸಿಕೊಂಡು ಅಡಿಕೆ ಆಮದಿಗೆ ಸಾಕಷ್ಟು ಬ್ರೇಕ್ ಹಾಕಿತ್ತು. ಕೊರೋನಾ ನಂತರ ಈಲ್ಲಿನ ಗಡಿಯನ್ನೂ ಹೆಚ್ಚು ನಿಗಾ ಇರಿಸಲಾಗಿತ್ತು. ಆದರೆ ಇದೀಗ ದೇಶದ ಹಿತಾಸಕ್ತಿ ನೆಲೆಯಲ್ಲಿ ನೆರೆಯ ದೇಶಗಳ ಜತೆ ಗಡಿಗಳಲ್ಲಿ ವ್ಯಾಪಾರ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮ್ಯಾನ್ಮಾರ್ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಿಕೆ ಸಹಿತ ಕಾಳುಮೆಣಸು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದೆ. ಆದರೆ ಸಾಂಬಾರ ವಸ್ತುಗಳು ಎಂಬ ಹೆಸರಿನಲ್ಲಿ ಅಡಿಕೆ ಆಮದಾಗುತ್ತಿದೆ. ಇದಕ್ಕೆ ತಡೆಯಾಗಬೇಕು ಎನ್ನುವ ಒತ್ತಾಯ ಈಗ ಕೇಳಿಬಂದಿದೆ.
ಈಗಾಗಲೇ ಮ್ಯಾನ್ಮಾರ್ ಗಡಿ ಮೂಲಕ ಭಾರತದೊಳಕ್ಕೆ ಆಗಮಿಸಿದ ಅಡಿಕೆಯು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಕೆಲವು ಕಡೆ ತಲುಪಿದೆ. ಈ ಅಡಿಕೆಯನ್ನು ಇಲ್ಲಿನ ಅಡಿಕೆ ಜೊತೆ ಸೇರಿಸಲಾಗುತ್ತಿದೆ ಎಂಬ ಅನುಮಾನ ಹೆಚ್ಚಾಗಿದೆ. ಆದರೆ ಧಾರಣೆಯಲ್ಲಿ ಸದ್ಯಕ್ಕೆ ಭಾರೀ ಇಳಿಕೆ ಕಾಣದು ಎಂಬ ನಿರೀಕ್ಷೆ ಇದೆ.
ಅಡಿಕೆ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಕೃಷಿ ವಿಸ್ತರಣೆಯೂ ಆಗಿದೆ. ಈ ಕಾರಣದಿಂದ ಅಡಿಕೆ ಆಮದು ಇಲ್ಲಿ ಅಗತ್ಯವಿಲ್ಲ. ಭಾರತದಲ್ಲಿ ಕಾಳುಮೆಣಸು ಉತ್ಪಾದನೆಯೂ ಭಾರತೀಯ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುತ್ತದೆ. ಈ ಸನ್ನಿವೇಶದಲ್ಲಿ ಅಡಿಕೆ ಮತ್ತು ಕಾಳುಮೆಣಸು ಆಮದು ಅವಶ್ಯಕತೆ ಇಲ್ಲ. ಇವೆರಡೂ ಕೃಷಿ ವಸ್ತುಗಳ ಆಗಮನದಿಂದ ಭವಿಷ್ಯದಲ್ಲಿ ದೇಶದ ಕೆಲ ಪ್ರದೇಶ ಕೃಷಿಕರ ಮೇಲೆ, ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ.
ಈಗ ಅಡಿಕೆ ಆಮದು ಸುಂಕ ಹೆಚ್ಚು ಮಾಡಬೇಕಾದ ಅಗತ್ಯ ಇದೆ. ಈಗಾಗಲೇ ಧಾರಣೆ ಏರಿಕೆಯ ಜೊತೆಗೆ ಅಡಿಕೆಯ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಈ ಹಿಂದೆ ಕ್ಯಾಂಪ್ಕೋ ನೇತೃತ್ವದಲ್ಲಿ ಸಿಪಿಸಿಆರ್‌ಐ ಹಾಗೂ ಅಖಿಲ ಅಡಿಕೆ ಬೆಳೆಗಾರರ ಸಂಘ ಮತ್ತು ಇತರ ಅಡಿಕೆ ಬೆಳೆಗಾರರ ಸಂಘದ ಜಂಟಿ ಸಭೆ ನಡೆದು ಅಡಿಕೆ ಉತ್ಪಾದನಾ ವೆಚ್ಚವನ್ನು 160 ರೂಪಾಯಿಂದ 251 ರೂಪಾಯಿಗೆ ಏರಿಕೆ ಮಾಡಲಾಗಿತ್ತು.
ಇದೀಗ ಮತ್ತೆ ಕ್ಯಾಂಪ್ಕೋ ಹಾಗೂ ಇತರ ಸಂಸ್ಥೆಗಳ ಸಭೆ ನಡೆದು ಅಡಿಕೆಯ ಉತ್ಪಾದನಾ ವೆಚ್ಚದಲ್ಲಿ ಏರಿಕೆ ಮಾಡಬೇಕಾಗಿದೆ. ಸದ್ಯ 350-400 ರೂಪಾಯಿ ಉತ್ಪಾದನಾ ವೆಚ್ಚದ ಬಗ್ಗೆ ಕೃಷಿಕರು ಮಾತನಾಡುತ್ತಿರುವಾಗ ಈ ಬಗ್ಗೆ ಅಧಿಕೃತವಾದ ನಿಗದಿ ಆಗಬೇಕಿದೆ. ಈ ಮೂಲಕ ಸರ್ಕಾರವನ್ನೂ ಆಮದು ಸುಂಕ ಏರಿಕೆಗೆ ಒತ್ತಾಯ ಮಾಡುವುದು ಹಾಗೂ ಆಮದು ಕನಿಷ್ಟ ದರವಾಗಿ ಅಡಿಕೆ ಉತ್ಪಾದನಾ ವೆಚ್ಚವನ್ನೇ ನಿಗದಿ ಮಾಡಬೇಕಿದೆ. ಹೀಗಾದರೆ ಅಡಿಕೆ ಆಮದು ತಡೆ ಹಾಗೂ ಅಡಿಕೆ ಬೆಳೆಗಾರರಿಗೂ ಉತ್ತಮ ಧಾರಣೆ ಲಭ್ಯವಾಗಲಿದೆ.
ನೇಪಾಳದಲ್ಲಿ #ಅಡಿಕೆ ಆಮದು ಸುಂಕ ಏರಿಕೆ | ಮ್ಯಾನ್ಮಾರ್ ಮೂಲಕ ದೇಶಕ್ಕೆ ಕಳಪೆ ಅಡಿಕೆ ರವಾನೆ | ಅಡಿಕೆ ಆಮದು ತಡೆಗೆ ಕ್ಯಾಂಪ್ಕೋ ಒತ್ತಾಯ | ಆಮದು ಸುಂಕ ಏರಿಕೆಗೆ ಬೇಕಿದೆ ಅಗತ್ಯ ಕ್ರಮ | @puchhappady82 https://t.co/ouaKygZaW9#arecanut
Advertisement— theruralmirror (@ruralmirror) June 2, 2022