ಅಡಿಕೆ ಚೊಗರಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಸೀರೆಯ ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡಿತು. ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಅಡಿಕೆಯ ಚೊಗರು ಮತ್ತು ಇತರ ನೈಸರ್ಗಿಕ ಬಣ್ಣಗಳಿಂದ ಜಿಐ ಟ್ಯಾಗ್ ಹೊಂದಿರುವ ಉಡುಪಿ ಸೀರೆಯು ಬಿಡುಗಡೆಯಾಯಿತು.
ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕದಿಕೆ ಟ್ರಸ್ಟ್ ಮಾರ್ಗದರ್ಶನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅಡಿಕೆ ಚೊಗರು ಇತರ ನೈಸರ್ಗಿಕ ಬಣ್ಣಗಳಿಂದ ತಯಾರಾದ ಉಡುಪಿ ಸೀರೆ ಬಿಡುಗಡೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಅಡಿಕೆಯ ಬಣ್ಣ ಹಾಗೂ ನೈಸರ್ಗಿಕ ಬಣ್ಣದಿಂದ ತಯಾರು ಮಾಡಿದ ಬಟ್ಟೆಗಳ ಅನಿವಾರ್ಯತೆ ಬಗ್ಗೆ ಮಾತನಾಡಿದರು. ಜಪಾನ್‌ನ ರಾಜಮನೆತನಗಳು 1,200 ವರ್ಷಗಳ ಹಿಂದೆ ಅಡಿಕೆ ಬಣ್ಣವನ್ನು ಬಳಸುತ್ತಿದ್ದರು. ಅಂದರೆ ಅಂದು ಅಡಿಕೆಯ ಬಣ್ಣ ಪ್ರತಿಷ್ಟೆಯ ಪ್ರತೀಕವಾಗಿತ್ತು. ಜಪಾನಿನ ರಾಜಮನೆತನದವರು ಇಂಡೋನೇಷ್ಯಾದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು ಶ್ರೀ ಪಡ್ರೆ ಹೇಳಿದರು. ಇಂದು ರಾಸಾಯನಿಕ ರಹಿತವಾದ ಬಣ್ಣಗಳ ಅನಿವಾರ್ಯತೆ ಇದೆ. ರಾಸಾಯನಿಕ ಬಣ್ಣಗಳ ಕಾರಣದಿಂದ ಮಾಲಿನ್ಯಗಳು ಹೆಚ್ಚಾಗುತ್ತಿವೆ, ಈ ಕಾರಣದಿಂದ ನೈಸರ್ಗಿಕ ಬಣ್ಣಗಳ ಬಳಕೆ ಅಗತ್ಯವಿದೆ ಎಂದರು.
ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನೈಸರ್ಗಿಕ ಬಣ್ಣಗಳಿಂದ ಕೂಡಿದ ಸೀರೆಗಳು ಪರಿಸರ ಸ್ನೇಹಿಯಾಗಿದ್ದು, ನೇಕಾರರಿಕೆ ಹಾಗೂ ನೇಕಾರರಿಗೂ ಗೌರವ ಸಿಗುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ,ಶಿರ್ವಾದ ಇಕೋ ಗ್ರೋಫಾರ್ಮ್‌ನ ಎಂ ಆರ್ ಪೈ, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಪಸ್ಥಿತರಿದ್ದರು. ಕದಿಕೆ ಟ್ರಸ್ಟ್ ನ ಬಿ ಸಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
2018 ರಲ್ಲಿ ಉಡುಪಿ ಸೀರೆ ಚರಿತ್ರೆಯಲ್ಲೇ ಮೊದಲ ಬಾರಿ ಸಹಜ ಬಣ್ಣದ ಸೀರೆಗಳನ್ನು ತಾಳಿಪಾಡಿ ಸಂಘದಲ್ಲಿ ಚರಕ ಸಂಸ್ಥೆಯ ನೆರವಿನೊಂದಿಗೆ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ತಯಾರಿಸಲಾಗಿತ್ತು. ಈಗ ಸೆಲ್ಕೋ ಇಂಡಿಯಾ ಗ್ರಾಂಟ್ ನಿಂದ ದೊರಕಿದ ಸಹಜ ಬಣ್ಣ ತಯಾರಿಯ ಉಪಕರಣಗಳಿಂದ , ಮಾಮಿ ಸ್ಕೂಲ್ ಹೌಸ್ ಆಫ್ ನ್ಯಾಚುರಲ್ ಡಯಿಂಗ್ ಕೆನಡಾ ಇವರು ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಗೆ ಕೊಡಮಾಡಿದ ಆನ್ಲೈನ್ ಸ್ಕಾಲರ್ಸ್ ಶಿಪ್ ಮಾರ್ಗದರ್ಶನದಲ್ಲಿ ಸಹಜ ಬಣ್ಣ ಸೀರೆಗಳನ್ನು ತಾಳಿಪಾಡಿ ಸಂಘದ ಬಣ್ಣಗಾರರು ಮತ್ತು ನೇಕಾರರು ತಯಾರಿಸಿದ್ದಾರೆ.
ಅಡಿಕೆ ಚೊಗರು , ಮಂಜಿಷ್ಟ , ನೀಲಿ, ಗೊಂಡೇಹೂ , ದಾಳಿಂಬೆ ಸಿಪ್ಪೆ, ಕಾಡು ಬಾದಾಮಿ ಇತ್ಯಾದಿ ಸಸ್ಯ ಮೂಲ ಬಣ್ಣಗಳನ್ನು ಇದಕ್ಕೆ ಬಳಸಲಾಗಿದೆ. ಸಹಜ ಬಣ್ಣದ ಸೀರೆಗಳು ಪರಿಸರ ಸ್ನೇಹಿಯಾಗಿವೆ. ಉತ್ತಮ ಬೇಡಿಕೆ ಇದೆ. ನೇಕಾರರು ಮತ್ತು ಬಣ್ಣ ಮಾಡುವರಿಗೆ ಹೆಚ್ಚುವರಿ ವೇತನ ದೊರೆಯುತ್ತದೆ. ತಯಾರಿಸುವವರು ಮತ್ತು ತೊಡುವವರ ಆರೋಗ್ಯಕ್ಕೂ ಒಳ್ಳೆಯದಾಗಿದೆ.