ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪೆರುವಾಜೆ ಆಳ್ವಫಾರ್ಮ್ಸ್ ಸಹಯೋಗದಲ್ಲಿ ಆಳ್ವಫಾರ್ಮ್ಸ್ ನಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಆಳ್ವಫಾರ್ಮ್ಸ್ ನ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರು ಹಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು ಮಾತನಾಡಿ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕೃಷಿಕರಿಗೆ ಪೂರಕವಾದ ಕಾರ್ಯಕ್ರಮ ಅನುಷ್ಠಾನಿಸುವುದು ಉತ್ತಮ ಸಂಗತಿ. ಆಳ್ವಫಾರ್ಮ್ಸ್ ನಲ್ಲಿ ನಡೆದ ಯಂತ್ರಗಳ ಪ್ರಾತ್ಯಕ್ಷಿಕೆ ಶ್ಲಾಘನೀಯ ಕಾರ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲದ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಮಾಜದ ಸರ್ವರ ಅನುಕೂಲಕ್ಕೆ ಪೂರಕವಾಗಿ ನಮ್ಮ ಸಂಘಟನೆ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಭವಿಷ್ಯದಲ್ಲಿ ಇನ್ನಷ್ಟು ಯೋಚನೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಆಳ್ವಫಾರ್ಮ್ಸ್ ನ ಸಹಯೋಗದಲ್ಲಿ ನಡೆದ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಳ್ಳಲು ಸರ್ವರ ಸಹಕಾರ ಕಾರಣವಾಗಿದೆ ಎಂದರು.
ಬೆಳ್ಳಾರೆ ಮಂಡಲದ ಮಾಜಿ ಪ್ರಧಾನ, ಪ್ರಗತಿಪರ ಕೃಷಿಕ ಜಯಸೂರ್ಯ ರೈ ಬೋರಡ್ಕ ಮಾತನಾಡಿ, ಆಧುನಿಕ ಪದ್ಧತಿಯೊಂದಿಗೆ ಕೃಷಿಯನ್ನು ಅವಲಂಬಿಸಿದರೆ ಅದರಿಂದ ಯಶಸ್ಸು ಸಾಧ್ಯವಿದೆ. ಕೃಷಿ ಚಟುವಟಿಕೆ ಸುಲಭವಾಗಿ, ಕಡಿಮೆ ಅವ„ಯಲ್ಲಿ ಕೆಲಸ ಸಾಗಲು ಹೊಸ ಹೊಸ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೃಷಿಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ, ಮುಕ್ಕೂರು ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ, ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಮುಕ್ಕೂರು ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಅಡೀಲು, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.
ಶ್ರಾವ್ಯ ರೈ ಪೂವಾಜೆ ರೈತಗೀತೆ ಹಾಡಿದರು. ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಸ್ವಾಗತಿಸಿ, ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.
ಸನ್ಮಾನ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಮಿನಿ ಸ್ಕೂಟಿ ಟಿಪ್ಪರ್ ಸಂಶೋಧಕ ಮಂಜುನಾಥನಗರದ ಪುರುಷೋತ್ತಮ ಅವರನ್ನು ಸನ್ಮಾನಿಸಲಾಯಿತು. ಆಳ್ವಫಾರ್ಮ್ಸ್ ನ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಅಡಿಕೆ ಸಸಿ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ಬೃಂದಾ ಮುಕ್ಕೂರು ಮತ್ತು ರಕ್ಷಿತ್ ಕಾನಾವು ಸಮ್ಮಾನ ಪತ್ರ ವಾಚಿಸಿದರು. ಸಭಾ ವೇದಿಕೆಯನ್ನು ಪಾರಂಪರಿಕ ಶೈಲಿಯಲ್ಲಿ ಅಲಂಕರಿಸಲಾಗಿತ್ತು.
ಪ್ರಾತ್ಯಕ್ಷಿಕೆ, ಪ್ರದರ್ಶನ:
ಅಗ್ರಿ ಡಿಪೋ ಇದರ ಮಾರುಕಟ್ಟೆ ಮುಖ್ಯಸ್ತ ರಾಜರಾಮ ಕಾಡೂರು ಅವರು ಕೃಷಿ ಯಂತ್ರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಅಡಿಕೆ ಮರ ಏರುವ ಯಂತ್ರ, ತೆಂಗಿನ ಮರ ಏರುವ ಯಂತ್ರ, ಹುಲ್ಲು ಕತ್ತರಿಸುವ, ಅಡಿಕೆ ಮರದ ಬುಡ ಅಗತೆ ಯಂತ್ರ, ಮಿನಿ ಸ್ಕೂಟಿ ಟಿಪ್ಪರ್, ರಿಕ್ಷಾ ಟಿಪ್ಪರ್ ಇದರ ಪ್ರಾತ್ಯಕ್ಷಿಕೆ ನಡೆಯಿತು. ನೂರಾರು ಕೃಷಿಕರು ಇದರ ಮಾಹಿತಿ ಪಡೆದರು.