ವಿಜಯಕರ್ನಾಟಕ ಪತ್ರಿಕೆ ವತಿಯಿಂದ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶ ಪುತ್ತೂರಿನ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಕ್ಯಾಂಪ್ಕೋ ಅಡಿಕೆ ಬೆಳೆಗಾರರ ಪರವಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಅಡಿಕೆ ಬೇಡಿಕೆ ಹಾಗೂ ಪೂರೈಕೆಗಳನ್ನು ಗಮನಿಸಿಕೊಂಡು ಬೆಳೆಗಾರರಿಗೆ ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುತ್ತಾ ಬಂದಿದೆ. ಉಪಬೆಳೆಗಳ ಕಡೆಗೂ ಮಾಹಿತಿ ನೀಡುತ್ತಿದೆ. ಈಗಾಗಲೇ ಕೊಕೋ, ರಬ್ಬರ್ , ಕಾಳುಮೆಣಸು ಖರೀದಿ ನಡೆಸುತ್ತಿದೆ. ಮುಂದೆ ಔಷಧೀಯ ಗಿಡಗಳ ಕಡೆಗೂ ಗಮನಹರಿಸಲಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಅಡಿಕೆ ಬೆಳೆಗಾರರು ಸಂಘಟಿತರಾಗಬೇಕು. ಆಗ ಮಾತ್ರಾ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಈಗ ಅಡಿಕೆಯ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿದೆ, ಈ ಸಮಯದಲ್ಲಿ ಅಡಿಕೆ ಬೆಳೆಗಾರರು ಒಂದಾಗಬೇಕಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಟಂದೂರು ಮಾತನಾಡಿ, ಅಡಿಕೆ ಬೆಳೆಗಾರನಾಗಿ ಜಿಲ್ಲೆಯ ಬೆಳೆಗಾರರ ಪರವಾಗಿ ಧ್ವನಿ ಎತ್ತುವೆ. ಅಡಿಕೆ ಬೆಳೆಯ ಜೊತೆ ಇತರ ಬೆಳೆಗಳೂ ಇಂದು ಅನಿವಾರ್ಯವಾಗಿ ಬೆಳೆಯಬೇಕಿದೆ. ಅಡಿಕೆಯ ವಿವಿಧ ರೋಗಗಳ ಕಡೆಗೂ ವಿಜ್ಞಾನಿಗಳು ಗಮನಹರಿಸಬೇಕು, ಇದಕ್ಕಾಗಿ ಅಗತ್ಯ ನೆರವು ನೀಡಲು ಬದ್ಧರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಿಪಿಸಿಆರ್‌ಐ ವಿಜ್ಞಾನಿ ಡಾ.ನಾಗರಾಜ್ , ತೋಟಗಾರಿಕಾ ಇಲಾಖಾ ಅಧಿಕಾರಿಗಳಾದ ಪ್ರದೀಪ್, ರೇಖಾ , ವಿಜಯಕರ್ನಾಟಕ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಕೃಷಿಕರು ಭಾಗವಹಿಸಿದ್ದರು.