ಅಡಿಕೆ ನಿಷೇಧದ ಬಗ್ಗೆ ಅನೇಕ ಸಮಯಗಳಿಂದ ಚರ್ಚೆಯಾಗುತ್ತಿತ್ತು. ಆದರೆ ಅಡಿಕೆ ನಿಷೇಧ ಸಾಧ್ಯವಿಲ್ಲ, ಅದರ ಬದಲಾಗಿ ಅಡಿಕೆ ಬಳಕೆಯ ನಿಯಂತ್ರಣದ ಮೇಲೆ ಹೆಚ್ಚು ಗಮನಹರಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ಗಮನಹರಿಸಿದೆ.
ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಗಂಭೀರ ಆರೋಗ್ಯ ಸವಾಲುಗಳನ್ನು ಎದುರಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಇಂದು ಮಹತ್ವದ ವೆಬ್‌ನಾರ್ ಆಯೋಜಿಸಿತ್ತು. “ಅಡಿಕೆ ಸವಾಲು: ಆಗ್ನೇಯ ಏಷ್ಯಾದಲ್ಲಿ ನೀತಿಯನ್ನು ಪ್ರಭಾವವನ್ನಾಗಿ ಪರಿವರ್ತಿಸುವುದು” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಡಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ‘ಏಳು ಪ್ರಮುಖ ಕಾರ್ಯತಂತ್ರದ ಗುರಿಗಳನ್ನು’ ಘೋಷಿಸಲಾಯಿತು.
ಈ ವೆಬಿನಾರ್ ನಲ್ಲಿ 160 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಥೈಲ್ಯಾಂಡ್ ನ ಪ್ರಮುಖರು ಅಡಿಕೆಯ ಬಳಕೆ ನಿಯಂತ್ರಣದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮವನ್ನು WHO ಆಗ್ನೇಯ ಏಷ್ಯಾ ಕಚೇರಿ, ಲಂಡನ್‌ನ ಕಿಂಗ್ಸ್ ಕಾಲೇಜ್ ಮತ್ತು ಭಾರತದ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಜಂಟಿಯಾಗಿ ಆಯೋಜಿಸಿದ್ದವು. ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮಗಳ ವ್ಯವಸ್ಥಾಪಕರು ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ತಂಡಗಳು ಈ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ವಿಷಯ ಮಂಡಿಸಿದ ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ, ವೈಜ್ಞಾನಿಕ ಅಧ್ಯಯನಗಳು, ತಂಬಾಕು ಸೇರಿಸದೇ ಕೂಡ ಕೇವಲ ಅಡಿಕೆ ಜಗಿಯುವುದು ಬಾಯಿಕ್ಯಾನ್ಸರ್‌ಗೆ ಅಪಾಯಕಾರಕ ಎಂದು ದೃಢಪಡಿಸಿವೆ ಎಂದು ಪ್ರತಿಪಾದಿಸಿದರು. ಅಡಿಕೆ ಬಳಕೆಯಲ್ಲಿ ಜಾಗತಿಕ ವ್ಯತ್ಯಾಸ ಕಂಡುಬರುತ್ತದೆ. ಅಡಿಕೆ ಬಳಕೆಯ ಪದ್ಧತಿಯಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸ ಇದೆ. ಕೆಲವೆಡೆ ಹಣ್ಣಿನ ರೂಪದಲ್ಲಿ ಅಥವಾ ಎಳೆ ಅಡಿಕೆ ಬಳಸಲಾಗುತ್ತದಾದರೆ, ಇನ್ನೂ ಕೆಲವೆಡೆ ಪಾನ್ ಎಲೆಯೊಂದಿಗೆ ತಂಬಾಕು ಸೇರಿಸಿ ಬಳಸುತ್ತಾರೆ. ಇದನ್ನೇ ಬೆಟಲ್ ಕ್ವಿಡ್ ಎಂದು ಕರೆಯಲಾಗುತ್ತದೆ. ತೈವಾನ್, ಪಾಪುವಾ ನ್ಯೂಗಿನಿಯಾ ಮೊದಲಾದ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ತಂಬಾಕು ಇಲ್ಲದೇ ಕೇವಲ ಅಡಿಕೆ ಜಗಿಯುವ ಪದ್ಧತಿ ಸಾಮಾನ್ಯವಾಗಿದೆ ಎಂದು ವರದಿ ತಿಳಿಸುತ್ತದೆ ಎಂದರು.
2002ರಲ್ಲಿಯೇ ಲಂಡನ್‌ನಲ್ಲಿ ನಡೆದ ಅಧ್ಯಯನದಲ್ಲಿ, ಸಂಶೋಧಕರು ಅಡಿಕೆ ಬಳಕೆಯ ಪ್ರದೇಶಗಳು ಹಾಗೂ ಬಾಯಿಕ್ಯಾನ್ಸರ್ ಹೆಚ್ಚಿರುವ ಪ್ರದೇಶಗಳು ಒಂದೇ ಎಂದು ಗುರುತಿಸಿದ್ದರು. ಅಡಿಕೆ ಹೆಚ್ಚು ಬಳಕೆಯಾಗುವ ಪ್ರದೇಶಗಳಲ್ಲಿಯೇ ಬಾಯಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ ಎಂಬುದು ನಕ್ಷೆಗಳ ಮೂಲಕ ಸ್ಪಷ್ಟವಾಗಿದೆ.
“ತಂಬಾಕು ಇಲ್ಲದೇ ಅಡಿಕೆ ಕ್ಯಾನ್ಸರ್ ಆಗುತ್ತದೆಯೇ?” ಎಂಬ ಪ್ರಶ್ನೆಗೆ ಉತ್ತರ ಇದೆ. ಬಹು ಕಾಲ ಜನರಲ್ಲಿ “ಕ್ಯಾನ್ಸರ್ ತಂಬಾಕಿನಿಂದಲೇ ಆಗುತ್ತದೆ” ಎಂಬ ಅಭಿಪ್ರಾಯವಿತ್ತು. ಆದರೆ IARC ಮೌಲ್ಯಮಾಪನ ಸ್ಪಷ್ಟಪಡಿಸಿದ್ದು, ಅಡಿಕೆ ಒಂದು Class-1 Carcinogen. ಅಂದರೆ ಮಾನವರಿಗೆ ಕ್ಯಾನ್ಸರ್ ಉಂಟುಮಾಡುವುದು ಖಚಿತ ಎಂದು ಸಭೆಯಲ್ಲಿ ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಉಲ್ಲೇಖಿಸಿದರು.
1933 ರಿಂದಲೇ ಅಡಿಕೆಯ ಬಗ್ಗೆ ದಾಖಲೆ ಇದೆ. ಇದು ಹೊಸ ವಿಚಾರವಲ್ಲ. 1933ರಲ್ಲೇ ಬ್ರಿಟಿಷ್ ಶಸ್ತ್ರಚಿಕಿತ್ಸಕ ಇಯಾನ್ ಮೋರಿಸನ್ ಅವರು The Lancet ನಲ್ಲಿ ಅಡಿಕೆ ಹಾಗೂ ಪಾನ್ ಜಗಿಯುವುದರಿಂದ ಬಾಯಿಕ್ಯಾನ್ಸರ್ ಅಪಾಯವಿದೆ ಎಂದು ಉಲ್ಲೇಖಿಸಿದ್ದರು. ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಧ್ಯಯನಗಳು, ತಂಬಾಕು ಇಲ್ಲದೇ ಕೂಡ ಅಡಿಕೆ ಅಪಾಯ ಹೆಚ್ಚಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ.
ಮಕ್ಕಳಲ್ಲಿಯೂ ಅಪಾಯ ಗಂಭೀರವಾಗಿದೆ. ಉತ್ತರ ಮರಿಯಾನಾ ದ್ವೀಪಗಳ ಅಧ್ಯಯನಗಳು ಆತಂಕಕಾರಿ ಚಿತ್ರವನ್ನು ಮುಂದಿಟ್ಟಿವೆ. 11–13 ವರ್ಷದ ಮಕ್ಕಳಲ್ಲೂ ಅಡಿಕೆ ಬಳಕೆ ಕಂಡುಬಂದಿದೆ. ಅದರ ಪರಿಣಾಮವಾಗಿ, 13% ಮಕ್ಕಳಲ್ಲಿ Leukoplakia, 8% ಮಕ್ಕಳಲ್ಲಿ Submucous Fibrosis ಕಾಣಿಸಿಕೊಂಡಿವೆ ಎಂದರು.
ಬಾಯಿ ಪ್ರಕರಣಗಳಲ್ಲಿ 50% ಅಡಿಕೆ ಸಂಬಂಧಿತ : ವೈಜ್ಞಾನಿಕ ಅಧ್ಯಯನದಲ್ಲಿ ಪರಿಶೀಲಿಸಿದಾಗ, ಭಾರತದಲ್ಲಿ: 49.5% , ತೈವಾನ್‌ನಲ್ಲಿ: 53.7% ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿನ ಸುಮಾರು ಅರ್ಧದಷ್ಟು ಭಾಗ ಅಡಿಕೆ / ಬಿಟಲ್ ಕ್ವಿಡ್ ಬಳಕೆಗೆ ಸಂಬಂಧಿಸಿದೆ ಎಂಬುದು ಕಂಡುಬಂದಿದೆ. ಭಾರತದಲ್ಲಿ ಒಂದು ವರ್ಷದಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳು 69,000 ಇದ್ದವು. ಈಗ ಅದು 1 ಲಕ್ಷ ದಾಟಿದೆ. ಅದರಲ್ಲಿಯೇ ಸುಮಾರು 34,000 ಪ್ರಕರಣಗಳು ಅಡಿಕೆಗೆ ಸಂಬಂಧಿಸಿದೆ ಎಂದು ವರದಿ ಹೇಳುತ್ತದೆ ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಹೇಳಿದರು. ಹೀಗಾಗಿ ಅಡಿಕೆಯ ಅಭ್ಯಾಸ ನಿರ್ಮೂಲನೆ ಮಾಡಿದರೆ ಸಾವಿರಾರು ಪ್ರಕರಣ ತಡೆ ಸಾಧ್ಯ ಎಂದರು.
ಅಧ್ಯಯನದ ತೀರ್ಮಾನದಂತೆ ಅಡಿಕೆ ಅಥವಾ ಬಿಟೆಲ್ ಕ್ವಿಡ್ (ಅಡಿಕೆ ಹುಡಿ) ಬಳಕೆಯನ್ನು ಕಡಿಮೆ ಮಾಡಿದರೆ, ಭಾರತದಲ್ಲಿ ಸುಮಾರು 34,000 ಬಾಯಿ ಕ್ಯಾನ್ಸರ್ ಪ್ರಕರಣಗಳು ತಡೆಯಬಹುದು. ತೈವಾನ್‌ನಲ್ಲಿ ಸುಮಾರು 2,600 ಪ್ರಕರಣಗಳನ್ನು ತಡೆಯಬಹುದು ಎನ್ನುವುದು ಸಮನ್ ವರ್ನಕುಲಸೂರಿಯಾ ಅಭಿಪ್ರಾಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಬಿಟೆಲ್ ನಟ್ ಪದಕ್ಕಿಂತ “Arecanut” ಬಳಸಬೇಕು ಎನ್ನುವುದು ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಅವರ ಅಭಿಪ್ರಾಯ, “Betel nut ಎಂಬುದು ವೈಜ್ಞಾನಿಕ ಪದವಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ arecanut ಎಂಬ ಪದವನ್ನು ಬಳಸಬೇಕು, ಅಡಿಕೆಯೇ ಒಂದು carcinogen ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಾಕ್ಷ್ಯಾಧಾರ ಇದೆ ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಹೇಳುತ್ತಾರೆ.
ಅಡಿಕೆ ಕುರಿತು ಅತ್ಯಂತ ಮಹತ್ವದ ಮಾಹಿತಿ ವಾಸ್ತವವಾಗಿ ಭಾರತದಿಂದ ಅಲ್ಲ, ದಕ್ಷಿಣ ಆಫ್ರಿಕಾದಿಂದ ಬಂದಿದೆ. ಅಲ್ಲಿ ಸಂಶೋಧಕರು ಒಂದು ಅಧ್ಯಯನ ವರದಿ ನಡೆಸಿದರು. ಅದು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುವ ಎರಡನೇ ತಲೆಮಾರಿನ ಭಾರತೀಯ ಮಹಿಳೆಯರ ಮೇಲೆ ನಡೆಸಿದ ಅಧ್ಯಯನವಾಗಿತ್ತು. ಈ ಮಹಿಳೆಯರು ತಂಬಾಕು ಸೇವಿಸುವುದಿಲ್ಲ, ಕೇವಲ ಅಡಿಕೆಯನ್ನು ಮಾತ್ರ ಜಗಿಯುತ್ತಾರೆ. ಆದರೂ ಅವರಲ್ಲಿಬಾಯಿ ಕ್ಯಾನ್ಸರ್ ಅಪಾಯ ಹೆಚ್ಚಿದೆ ಎಂಬುದು ಸ್ಪಷ್ಟವಾಯಿತು. ಈ ಅಧ್ಯಯನವೇ 1993 ರಲ್ಲಿ ಅಡಿಕೆ ಕುರಿತು ಜಾಗತಿಕ ಚರ್ಚೆಯನ್ನು ಆರಂಭಿಸಿತು ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಉಲ್ಲೇಖಿಸಿದರು.
ಆ ಸಮಯದಲ್ಲಿ ಲಭ್ಯವಿದ್ದ ಸಾಕ್ಷ್ಯಗಳ ಆಧಾರದಲ್ಲಿ IARC ತಜ್ಞರ ತಂಡವು ಒಂದು monograph ಪ್ರಕಟಿಸಿತು. ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು: ತಂಬಾಕು ಇಲ್ಲದೇ ಇರುವ ಬಿಟೆಲ್ ಕ್ವಿಡ್ ಕೂಡ ಮಾನವರಿಗೆ carcinogenic ಆಗಿದೆ. ಈ ತೀರ್ಮಾನವನ್ನು ಪ್ರಕಟಿಸಲು ಸುದ್ದಿಗೋಷ್ಠಿಯನ್ನೂ ನಡೆಸಲಾಗಿತ್ತು. “betel quid without tobacco” ಮಾನವರಿಗೆ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ಘೋಷಿಸಲಾಯಿತು ಎಂಬುದನ್ನು ಉಲ್ಲೇಖಿಸಿದರು.
2012ರಲ್ಲಿ ಮರುಪರಿಶೀಲನೆ ಮತ್ತು ಮತ್ತೊಮ್ಮೆ ದೃಢೀಕರಣ ನಡೆಸಲಾಗಿತ್ತು. ನಾವು 2012ರಲ್ಲಿ ಮತ್ತೊಮ್ಮೆ ಡೇಟಾವನ್ನು ಮರುಪರಿಶೀಲಿಸಿದೆವು. ಇದು IARC Volume 108ರಲ್ಲಿ ಪ್ರಕಟವಾಯಿತು. ಅಲ್ಲಿ ವಿಭಿನ್ನ ಜೀವನಶೈಲಿಗಳಲ್ಲಿನ ವೈಯಕ್ತಿಕ ಅಭ್ಯಾಸಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಚರ್ಚಿಸಲಾಯಿತು. 2012ರ ಅಂತಿಮ ಮೌಲ್ಯಮಾಪನದಲ್ಲಿ IARC ಹೇಳಿದ್ದು, ತಂಬಾಕು ಇಲ್ಲದೇ ಇರುವ betel quid ಮತ್ತು ಅಡಿಕೆ oral cavity ಕ್ಯಾನ್ಸರ್‌ಗೆ ಸಾಕಷ್ಟು ದೃಢ ಸಾಕ್ಷ್ಯ ಹೊಂದಿದೆ. ಮತ್ತು ಪುರುಷರಲ್ಲಿ esophagus ಕ್ಯಾನ್ಸರ್ ಮತ್ತು liver cancer ಜೊತೆಗೆ ಸಹ ಸಂಬಂಧವಿದೆ ಎಂದು ತಿಳಿಸಲಾಯಿತು. ಹೀಗಾಗಿ betel quid without tobacco ಮತ್ತು arecanut ಅನ್ನು carcinogen ಎಂದು ವರ್ಗೀಕರಿಸಲಾಯಿತು ಎಂದು ವಿವರವಾಗಿ ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಹೇಳಿದರು.
ಈ ಕುರಿತು ಯಾವುದೇ ಸಂಶಯ ಇರಬಾರದು. ಇದಕ್ಕಾಗಿ ವೈಜ್ಞಾನಿಕ ಸಾಕ್ಷ್ಯ ಸ್ಪಷ್ಟವಾಗಿದೆ. 2012ರ IARC ಸಭೆಯ ನಂತರ ನಾವು systematic review ಮತ್ತು meta-analysis ಪ್ರಕಟಿಸಿದೆವು. ಇದು International Journal of Cancer ನಲ್ಲಿ ಪ್ರಕಟವಾಗಿದೆ. ಏಕೆಂದರೆ monograph ನಲ್ಲಿ systematic review ಅಥವಾ meta-analysis ಇರಲಿಲ್ಲ. ನಾವು IARC ತಂಡದೊಂದಿಗೆ ಇದನ್ನು ಮಾಡಿದೆವು. 25 ಅಧ್ಯಯನಗಳ Forest Plot ಸಾಕ್ಷ್ಯ ಆಗಿವೆ. ಬಹುತೇಕ ಅಧ್ಯಯನಗಳು ಭಾರತ, ದಕ್ಷಿಣ ಏಷ್ಯಾ ಮತ್ತು ತೈವಾನ್‌ನಿಂದ ಬಂದಿವೆ. ಭಾರತದಲ್ಲಿ ಹೊಗೆಸೊಪ್ಪು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ಹೀಗಾಗಿ betel quid with tobacco ಕುರಿತು ಸಾಕ್ಷ್ಯ ಹೆಚ್ಚು ಕಾಣುತ್ತದೆ. ಹೀಗಾಗಿ ಇಂದು ಇದೆಲ್ಲಾ ಸಂಗತಿಗಳನ್ನು ನೀತಿ ನಿರೂಪಕರೊಂದಿಗೆ ಚರ್ಚಿಸಬೇಕಾದ ಅತ್ಯಂತ ಮಹತ್ವದ ಅಂಶ ಎಂದು ಸಮನ್ ವರ್ನಕುಲಸೂರಿಯಾ ಹೇಳಿದರು.
2012 ನಂತರ ನಾವು 2022ರಲ್ಲಿ ಮತ್ತೊಮ್ಮೆ ಈ ವಿಶ್ಲೇಷಣೆಯನ್ನು ಮತ್ತೊಮ್ಮೆ ಮಾಡಿದೆವು. ಇದು ತೈವಾನ್‌ನ ಸಹೋದ್ಯೋಗಿಯೊಂದಿಗೆ ನಡೆಸಿದ ಅಧ್ಯಯನ ಆಗಿದೆ. ಈ ಅಧ್ಯಯನವು ದಕ್ಷಿಣ ಏಷ್ಯಾ ಪ್ರದೇಶದ ಮಾನವ ಅಧ್ಯಯನಗಳಿಂದ ಸಾಕ್ಷ್ಯವನ್ನು ಸಂಗ್ರಹಿಸಿದೆ. ಇದು ಕೂಡಾ ಬಿಟೆಲ್ ಕ್ವಿಡ್ ಅಪಾಯವನ್ನು ಮತ್ತೊಮ್ಮೆ ದೃಢಪಡಿಸಿದೆ. IARC ಮರುಮೌಲ್ಯಮಾಪನಕ್ಕೂ ಮುಂದಾಗಿದೆ, ಇದೀಗ IARC monograph ಮರುಮೌಲ್ಯಮಾಪನ ಹಂತಕ್ಕೂ ಸಾಗುತ್ತಿದೆ. ಯಾರಾದರೂ ಪ್ರಶ್ನಿಸಿದರೂ, ವೈಜ್ಞಾನಿಕ ಸಾಕ್ಷ್ಯ ತುಂಬಾ ಸ್ಪಷ್ಟವಾಗಿದೆ ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಸಮನ್ ವರ್ನಕುಲಸೂರಿಯಾ ಸ್ಪಷ್ಟವಾಗಿ ಹೇಳಿದರು.
ಇನ್ನು ಈ ಹಂತದಲ್ಲಿ ಅಡಿಕೆಯ ಬೆಳೆಯ ನಿಷೇಧ ಸಾಧ್ಯವಿಲ್ಲ. ಅದಕ್ಕಾಗಿ ಅಡಿಕೆ ಬಳಕೆಯನ್ನು ನಿಯಂತ್ರಿಸಲು ಬೇಕಾದ ಕ್ರಮಗಳ ಕಡೆಗೆ ಗಮನಹರಿಸಬೇಕು ಎಂದು ಉಲ್ಲೇಖಿಸಿದರು.
ಬಳಿಕ ನೇಪಾಳ, ಬಾಂಗ್ಲಾದೇಶ, ಥೈವಾನ್, ಭಾರತ, ಶ್ರೀಲಂಕಾದ ಪ್ರತಿನಿಧಿಗಳು ಆಯಾ ದೇಶದಲ್ಲಿ ಅಡಿಕೆ ಬಳಕೆಯ ನಿಯಂತ್ರಣದ ಬಗ್ಗೆ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಹಾಗೂ ಅಧ್ಯಯನಗಳ ಬಗ್ಗೆ ಹೇಳಿದರು. ಇದೇ ವೇಳೆ ಅಡಿಕೆಯ ಸಾಂಸ್ಕೃತಿಕ ನೆಲೆಗಟ್ಟು, ಅಡಿಕೆಯ ಭಾವನಾತ್ಮಕ ಸಂಬಂಧಗಳು, ಅಡಿಕೆಯ ಬೆಳೆಯ ಬಗ್ಗೆಯೂ ಬಾಂಗ್ಲಾದೇಶ, ಶ್ರೀಲಂಕಾದ ಪ್ರತಿನಿಧಿಗಳು ಉಲ್ಲೇಖಿಸಿದರು.
ಸಭೆಯ ಕೊನೆಯಲ್ಲಿ ಅಡಿಕೆಯ ಬಳಕೆಯ ನಿಯಂತ್ರಣಕ್ಕಾಗಿ ‘ಏಳು ಪ್ರಮುಖ ಕಾರ್ಯತಂತ್ರದ ಗುರಿಗಳನ್ನು’ ಘೋಷಿಸಲಾಯಿತು. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕೆಳಗಿನ ಏಳು ಗುರಿಗಳನ್ನು ಆದ್ಯತೆಯ ಮೇಲೆ ಜಾರಿಗೆ ತರಲು ನಿರ್ಧರಿಸಲಾಗಿದೆ:
- ರಾಷ್ಟ್ರೀಯ ಚೌಕಟ್ಟು: ದೇಶದ ಆರೋಗ್ಯ ಆದ್ಯತೆಗಳಿಗೆ ಅನುಗುಣವಾಗಿ ಅಡಿಕೆ ಜಾಗೃತಿ, ಸಂಶೋಧನೆ ಮತ್ತು ಕಣ್ಗಾವಲು ಒಳಗೊಂಡ ರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸುವುದು.
- ಭಾಗೀದಾರರ ಸಂವಾದ: ಆರೋಗ್ಯ, ಶಿಕ್ಷಣ, ಕೃಷಿ ಮತ್ತು ವಾಣಿಜ್ಯ ವಲಯಗಳ ಪ್ರತಿನಿಧಿಗಳೊಂದಿಗೆ ರಾಷ್ಟ್ರೀಯ ಮಟ್ಟದ ಸಮಾಲೋಚನೆ ನಡೆಸಿ ಅಡಿಕೆ ಬಳಕೆಯ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಪತ್ತೆಹಚ್ಚುವುದು.
- ಜಾಗೃತಿ ಅಭಿಯಾನ: ಹದಿಹರೆಯದವರು, ಮಹಿಳೆಯರು ಮತ್ತು ಗ್ರಾಮೀಣ ಜನರನ್ನು ಗುರಿಯಾಗಿಸಿಕೊಂಡು ಅಡಿಕೆ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಸಂವಹನ ಅಭಿಯಾನಗಳನ್ನು ನಡೆಸುವುದು.
- ಆರೋಗ್ಯ ಸೇವೆಗಳ ಸಂಯೋಜನೆ: ತಂಬಾಕು ಮುಕ್ತಿ ಕೇಂದ್ರಗಳಲ್ಲಿ ಅಡಿಕೆ ವ್ಯಸನ ಮುಕ್ತ ಚಿಕಿತ್ಸೆಗಳನ್ನು ಅಳವಡಿಸುವುದು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು.
- ವೈಜ್ಞಾನಿಕ ಸಂಶೋಧನೆ: ಅಡಿಕೆ ಮತ್ತು ಅಡಿಕೆ ಮಿಶ್ರಿತ ತಂಬಾಕು ಉತ್ಪನ್ನಗಳ ಆರೋಗ್ಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದು.
- ಕಣ್ಗಾವಲು ವ್ಯವಸ್ಥೆ: ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಅಡಿಕೆ ಬಳಕೆಯ ಅಂಕಿಅಂಶಗಳನ್ನು ಸಂಗ್ರಹಿಸಲು ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವುದು.
ನಿಯಂತ್ರಣ ಕ್ರಮಗಳು: ಅಡಿಕೆ ಉತ್ಪನ್ನಗಳ ಸುಲಭ ಲಭ್ಯತೆ ಮತ್ತು ದಾರಿತಪ್ಪಿಸುವ ಪ್ರಚಾರಗಳನ್ನು ತಡೆಯಲು ಕಾನೂನಾತ್ಮಕ ನಿಯಮಗಳನ್ನು ಅನ್ವೇಷಿಸುವುದು.
ಈ ಕಾರ್ಯತಂತ್ರಗಳು ಕೇವಲ ಕಾಗದದ ಮೇಲಿರುವ ನೀತಿಗಳಾಗದೆ, ಜನರ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರುವಂತೆ ಜಾರಿಗೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.
ಅಡಿಕೆ ನಿಷೇಧ ಎನ್ನುವುದು ಪ್ರಾಯೋಗಿಕವಾಗಿ ಅಸಾಧ್ಯವಾದರೂ, ಅದರ ಬಳಕೆಯ ನಿಯಂತ್ರಣದ ಕಡೆಗೆ ಈಗ ಗಮನಹರಿಸಲಾಗುತ್ತಿದೆ. WHO ವೆಬಿನಾರ್‌ನಲ್ಲಿ ಈ ಬಗ್ಗೆ ಸಂದೇಶ ಸ್ಪಷ್ಟವಾಗಿದೆ. ಅಡಿಕೆ ಸಂಸ್ಕೃತಿಯ ಭಾಗ, ಸಂಸ್ಕೃತಿ ಎಂದೆಲ್ಲಾ ಹೇಳುವುದರ ಜೊತೆಗೇ ವೈಜ್ಞಾನಿಕವಾದ ಯಾವ ಆಧಾರಗಳೂ ಅಡಿಕೆ ಬೆಳೆಯುವ ನಾಡಿನಲ್ಲಿ ಇನ್ನೂ ಗಟ್ಟಿಯಾಗಿಲ್ಲ. ಈಗ ಅಡಿಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲು ಎನ್ನುವ ಅಂಶವೇ ಅಂತರಾಷ್ಟ್ರೀಯಮಟ್ಟದಲ್ಲಿ ಬಿಂಬಿಸಲಾಗುತ್ತಿದೆ. Class-1 carcinogen ಎಂದು IARC ಗುರುತಿಸಿರುವ ಅಡಿಕೆಯನ್ನು ಈಗ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುವ ವೈಜ್ಞಾನಿಕ ಪುರಾವೆಯನ್ನು ಸಲ್ಲಿಸುವುದು ತಡವಾಗಿದೆಯಷ್ಟೇ ಅಲ್ಲ, ಇಂದಿಗೂ ಸಾಧ್ಯವಾಗಿಲ್ಲ. ಅಂತಹ ವರದಿ ತಯಾರು ಮಾಡಲು ಸಾಮಾನ್ಯ ಬೆಳೆಗಾರರಿಗೂ ಸಾಧ್ಯವಿಲ್ಲದ ಸಂಗತಿ. ಈಗ ಅಡಿಕೆ ಬೆಳೆಯೇ ನಿಷೇಧ ಎನ್ನುವ ಅಪಾಯ ತಪ್ಪಿದೆ. ನಿಷೇಧಕ್ಕಿಂತ ನಿಯಂತ್ರಣ, ಜಾಗೃತಿ ಮತ್ತು ವೈಜ್ಞಾನಿಕ ನೀತಿ ಕ್ರಮಗಳ ಮೂಲಕವೇ ಆರೋಗ್ಯ ರಕ್ಷಣೆಯ ಕಡೆಗೆ ಗಮನರಿಸಲಾಗುತ್ತಿದೆ. ಇದು ಅಡಿಕೆ ಬೆಳೆಗಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




