ಅಡಿಕೆಗೆ ಕೊಳೆರೋಗ ವ್ಯಾಪಕವಾಗುತ್ತಿದೆ. ವಾರದ ಮೊದಲು ಕೆಲವು ಕಡೆ ಮಾತ್ರವೇ ಅಡಿಕೆಗೆ ಕೊಳೆರೋಗ ಇರುವ ಬಗ್ಗೆ ಮಾತನಾಡುತ್ತಿದ್ದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆಯೂ ಅಡಿಕೆ ಬೆಳೆಗಾರರು ಕೊಳೆರೋಗದ ಬಗ್ಗೆ ಮಾತನಾಡುತ್ತಿದ್ದಾರೆ. ಮಲೆನಾಡು-ಕರಾವಳಿ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಕೊಳೆರೋಗವೂ ಹೆಚ್ಚಾಗುವ ಆತಂಕ ಇದೆ. ಮಳೆಯ ಮಧ್ಯೆಯೇ ಇಂದು ಕೆಲವು ಕಡೆ, ಔಷಧಿ ಸಿಂಪಡಣೆ ಮಾಡುವ ಬಗ್ಗೆ ಕೃಷಿಕರು ಮಾಹಿತಿ ಹಂಚಿಕೊಂಡಿದ್ದಾರೆ. ಅಡಿಕೆ ಕೊಳೆರೋಗದ ತೀವ್ರತೆ ಹಾಗೂ ನಷ್ಟದ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ದ ರೂರಲ್ ಮಿರರ್ ಆನ್ ಲೈನ್ ಮೂಲಕ ಸಮೀಕ್ಷೆ ಮಾಡಲು ಮುಂದಾಗಿದೆ. ಅದರ ಲಿಂಕ್ ಕೂಡಾ ಇಲ್ಲಿದೆ.
ವಾರದ ನಂತರ ಮಳೆ ಕಡಿಮೆಯಾಗುತ್ತದೆ ಎನ್ನುವ ಹವಾಮಾನ ಮಾಹಿತಿಯಿಂದ ಔಷಧಿ ಸಿಂಪಡಣೆಗೆ ಸಿದ್ಧತೆ ನಡೆಸಿದ್ದ ಅಡಿಕೆ ಬೆಳೆಗಾರರಿಗೆ ಮತ್ತೆ ನಿರಾಸೆ ಕಾದಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಇದೆ ಎನ್ನುವ ಹವಾಮಾನ ಮಾಹಿತಿಯು ಮತ್ತಷ್ಟು ಕಂಗೆಡಿಸಿದೆ. ಹೀಗಾಗಿ ಈಗ ಮಳೆ ಇರುವಾಗಲೂ ಔಷಧಿ ಸಿಂಪಡಣೆ ಮಾಡಬಹುದಾ? ಎನ್ನುವ ಬಗ್ಗೆ ಕೃಷಿ ಗುಂಪಿನಲ್ಲಿ ಚರ್ಚೆ ನಡೆಯುತ್ತಿದೆ. ಕೆಲವು ಕಡೆ ಬೋರ್ಡೋ ಬದಲಾಗಿ ಮೆಟಲಾಕ್ಸಿಲ್ ಸಿಂಪಡಣೆ ಮಾಡಿ ಮಳೆ ಕಡಿಮೆಯಾದ ಬಳಿಕ ಬೋರ್ಡೋ ಸಿಂಪಡಣೆಯ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಯಾವುದಕ್ಕೂ ಮಳೆ ಕಡಿಮೆಯಾಗಬೇಕಲ್ಲ ಎನ್ನುವುದೇ ಎಲ್ಲರ ಅಭಿಪ್ರಾಯದ ನಡುವೆ, ಪೈಬರ್ ದೋಟಿಯ ಮೂಲಕ ಔಷಧಿ ಸಿಂಪಡಿಸುವ ಬಗ್ಗೆ ಕೃಷಿಕರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಳೆ ಬಿಟ್ಟು 20-25 ನಿಮಿಷದಲ್ಲಿ ದೋಟಿಯ ಮೂಲಕ ಔಷಧಿ ಸಿಂಪಡಣೆ ಮಾಡಬಹುದಾಗಿದೆ, ಗಾಳಿಯ ಸಂಚಾರ ಇದ್ದರೆ ಅಡಿಕೆ ಗೊನೆ ಈ ಸಮಯದಲ್ಲಿ ಒಣಗುತ್ತದೆ. ತಕ್ಷಣವೇ ದೋಟಿಯಲ್ಲಿ ಔಷಧಿ ಸಿಂಪಡಿಸಿ ರೋಗವನ್ನು ಹರಡದಂತೆ ಕ್ರಮ ಕೈಗೊಳ್ಳಬಹುದು. ಆದರೆ, ಇಂತಹ ಹೊತ್ತಲ್ಲಿ ಔಷಧಿಯನ್ನು ಸ್ವಲ್ಪ ಹೆಚ್ಚು ಕಾಲ ಸಿಂಪಡಿಸಬೇಕು ಹಾಗೂ ಔಷಧಿ ಬಿಟ್ಟ ಬಳಿಕ ಕನಿಷ್ಟ 5-10 ನಿಮಿಷ ಮಳೆ ಬಾರದೇ ಇದ್ದರೆ ಉತ್ತಮ, ಈ ಅಭಿಪ್ರಾಯವನ್ನು ಹಂಚಿಕೊಂಡವರು ಕೃಷಿಕ ದೇವಿಪ್ರಸಾದ್ ಪುಣಚ. ಇಂತಹ ಉಪಾಯಗಳು ಇದ್ದರೆ ನೀವೂ ಹಂಚಿಕೊಂಡರೆ ಇತರ ಕೃಷಿಕರಿಗೂ ಅನುಕೂಲ. ನಮ್ಮಗೂ ವ್ಯಾಟ್ಸಪ್ ಮೂಲಕ ಕಳುಹಿಸಬಹುದು, ಅಥವಾ ಕೃಷಿ ಗುಂಪುಗಳಲ್ಲಿ ಹಂಚಿಕೊಳ್ಳಿ. ನಮ್ಮ ವ್ಯಾಟ್ಸಪ್ ಸಂಖ್ಯೆ – 9449125447
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ದ ರೂರಲ್ ಮಿರರ್ ಮೂಲಕ ಸಮೀಕ್ಷೆ ಮಾಡಲು ಮುಂದಾಗಿದೆ ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ನಿಮ್ಮ ಅಭಿಪ್ರಾಯ ಹಾಗೂ ಮಾಹಿತಿ ದಾಖಲಿಸಿ. …… ಮುಂದೆ ಓದಿ……
ಈ ಫೋಟೊದ ಮೇಲೆ ಕ್ಲಿಕ್ ಮಾಡಿ ಅಭಿಪ್ರಾಯ ದಾಖಲಿಸಬಹುದು :