ಬೆಳಗಾವಿ ಅಧಿವೇಶನದಲ್ಲಿ ಅಡಿಕೆ ತೊಗರಿ ಬೆಳೆಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದ ಗಮನ ಸೆಳೆದರು. ಶಾಸಕ ರೇವಣ್ಣ ಅವರೂ ಮಾತನಾಡಿದರು.ಈ ಸಂದರ್ಭದಲ್ಲಿ ಕೃಷಿ ಸಚಿವರು ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಪ್ರಚಲಿತ ಅಡಿಕೆ ಬೆಳೆಯ ಸ್ಥಿತಿ ಗತಿಗಳ ಬಗ್ಗೆ ಮಾತನಾಡುತ್ತಿರುವಾಗ ಇನ್ಮೇಲೆ ಅಡಿಕೆ ಬೆಳೆಗೆ ಸರ್ಕಾರ ಪ್ರೋತ್ಸಾಹ ಕೊಡುವುದನ್ನ ನಿಲ್ಲಿಸುವುದು ಉತ್ತಮ ಎಂದರು. ಅಧ್ಯಕ್ಷರ ಪ್ರಕಾರ ಅಡಿಕೆ ಬೆಳೆ ವಿಸ್ತರಣೆ ನಿಲ್ಲದಿದ್ದರೆ ಭವಿಷ್ಯದ ಹತ್ತು ವರ್ಷಗಳಲ್ಲಿ ಅಡಿಕೆ ದರ ಸಂಪೂರ್ಣವಾಗಿ ನೆಲಕಚ್ಚಲಿದೆ. ನಿಜ… ಎಗ್ಗಿಲ್ಲದೆ ಅಡಿಕೆ ವಿಸ್ತಾರ ಆಗುತ್ತಿರುವುದನ್ನು ನೋಡಿದರೆ ಎಂಥವರಿಗೂ ಈ ವಿಚಾರ ಅರ್ಥವಾಗುತ್ತದೆ.
ಆದರೆ, ಈಚೆಗೆ ಮೂವತ್ತು ವರ್ಷಗಳ ಹಿಂದೆ ಅಡಿಕೆ ಮಲೆನಾಡು ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತ ವಾಗಿತ್ತು.
ಅಡಿಕೆ ಬೆಳೆ ಮಲೆನಾಡು ಕರಾವಳಿ ಪ್ರದೇಶದಿಂದ ಬಯಲು ಸೀಮೆಗೆ ವಿಸ್ತರಿಸಿದ್ದು ಹೇಗೆ….!?
ಇದೇ ಸಂಧರ್ಭದಲ್ಲಿ ಭದ್ರಾವತಿಯಲ್ಲಿದ್ದ ತಮಿಳುನಾಡು ಮೂಲದ ಮಾಲೀಕರ ಸಕ್ಕರೆ ಕಾರ್ಖಾನೆ ನಿಂತು ಹೋಯಿತು.
ಇದೂ ಒಂದು ಕಾರಣ. ಅಡಿಕೆ ಸಲೀಸಾಗಿ ಭದ್ರಾವತಿ ಶಿವಮೊಗ್ಗ ದ ಬಯಲು ಸೀಮೆಯ ಉತ್ಕೃಷ್ಟ ಫಲವತ್ತಾದ ಮಣ್ಣಿನಲ್ಲಿ ಆಣೆಕಟ್ಟಿನ ಯಥೇಚ್ಛವಾದ ನೀರಿನಲ್ಲಿ ಭಲವಾಗಿ ಬೇರೂರಿ ಮಲೆನಾಡಿಗಿಂತ ಹೆಚ್ಚು ಅಡಿಕೆ ಇಳುವರಿ ಕೊಡತೊಡಗಿತು. ಭತ್ತ, ಕಬ್ಬಿಗಿಂತ ಹೆಚ್ಚು ಬೆಲೆ ಅಡಿಕೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು.ಇದರ ಜೊತೆಯಲ್ಲಿ ಅಡಿಕೆಯಂತಹ ಅತ್ಯುತ್ತಮ ವ್ಯವಸ್ಥಿತ ಮಾರುಕಟ್ಟೆ ಇರುವ ಇನ್ನೊಂದು ಇರುವ ಬೆಳೆ ಈ ದೇಶದಲ್ಲೇ ಇಲ್ಲ. ಇದೂ ಅಡಿಕೆ ಬೆಳೆ ವಿಸ್ತರಣೆಯಾಗಲು ಕಾರಣವಾಯಿತು. ಈ ವಿಸ್ತರಣೆ ಇಂದು ಎಲ್ಲಾ ಬಗೆಯ ಅಡಿಕೆ ಬೆಳೆಗಾರರನ್ನೂ ಚಿಂತೆಗೀಡು ಮಾಡಿದೆಯಾದರು ವಿಶೇಷವಾಗಿ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಮುಂದಿನ ಭವಿಷ್ಯ ಏನೆಂಬ ಪ್ರಶ್ನೆ ಮೂಡಿದೆ…?. ಈಗ ಅಡಿಕೆ ವಿಪರೀತ ಎನ್ನುವ ವಿಸ್ತರಣೆಯ ಜೊತೆಯಲ್ಲಿ ಅಡಿಕೆ ಗೆ ಬಾದಿಸುತ್ತಿರುವ ” ಅಡಿಕೆ ಎಲೆಚುಕ್ಕಿ” ರೋಗ ದ ಸಮಸ್ಯೆ ಕಾಡತೊಡಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ,ಮೇಗರವಳ್ಳಿ, ನಾಲೂರು ,ಕೌರಿಹೆಕ್ಕಲು, ಕೊಪ್ಪ ತಾಲೂಕಿನ ಜಯಪುರ ನಾರ್ವೆ, ಎನ್ ಆರ್ ಪುರದ ಸುತ್ತಮುತ್ತಲಿನ ಪ್ರದೇಶಗಳು, ಹೊಸನಗರ ತಾಲೂಕಿನ ಯಡೂರು, ಮಾಸ್ತಿಕಟ್ಟೆ , ನಗರ , ಸಂಪೆಕಟ್ಟೆ , ನಿಟ್ಟೂರು, ಸಾಗರ ತಾಲೂಕಿನ ಕೆಲ ಪ್ರದೇಶಗಳು, ಕಾರ್ಕಳ, ಬೆಳ್ತಂಗಡಿ, ಸುಳ್ಯ, ಪುತ್ತೂರಿನ ಕೆಲ ಪ್ರದೇಶದಲ್ಲಿ ಈ ಮಾರಕ ರೋಗ ಎಲೆಚುಕ್ಕಿ ಗೆ ಸಂಪೂರ್ಣವಾಗಿ ಅಡಿಕೆ ತೋಟಗಳೇ ನಾಶವಾಗಿದೆ. ತಿಂಗಳ ಹಿಂದೆ ತೀರ್ಥಹಳ್ಳಿ ಗೆ ಮುಖ್ಯಮಂತ್ರಿ ಗಳು ಬಂದಾಗ ಒಂದು ಎಲೆಚುಕ್ಕಿ ರೋಗಪೀಡಿತ ಅಡಿಕೆ ತೋಟಕ್ಕೆ ಹೋಗಿ ಪರಿಶೀಲನೆ ಮಾಡಿದ್ದರು.
ನಂತರದ ಸಭಾ ಕಾರ್ಯಕ್ರಮದಲ್ಲಿ ಸಂಪೂರ್ಣ ಎಲೆಚುಕ್ಕಿ ಬಾಧಿತ ಅಡಿಕೆ ತೋಟವನ್ನು “ಬೆಳೆ ವಿಮೆ” ವ್ಯಾಪ್ತಿಗೆ ತರಲಾಗುತ್ತದೆ ಎಂದಿದ್ದರು. ಸನ್ಮಾನ್ಯ ಮುಖ್ಯಮಂತ್ರಿ ಈ ಮಾತಿಗೆ ಎಲ್ಲಾ ಸಭಿಕರು ಅಪಾರ ಕರತಾಡನ ಮಾಡಿದ್ದರು. ಸರಿ ಸಂಪೂರ್ಣ ಎಲೆಚುಕ್ಕಿ ರೋಗ ಪೀಡಿತ ವಾಗಿ ನಾಶವಾದ ಅಡಿಕೆ ತೋಟಕ್ಕೆ ಬೆಳೆ ವಿಮೆ ನಿಯಮಾವಳಿಯ ಪ್ರಕಾರ ಎಷ್ಟು ಪ್ರಮಾಣದ ಮೊತ್ತ “ಪರಿಹಾರ” ನೀಡುತ್ತೀರ..? ಅಂತ ಯಾರೂ ಕೇಳಲೂ ಇಲ್ಲ. ಮುಖ್ಯಮಂತ್ರಿಗಳು ಆ ಬಗ್ಗೆ ವಿವರಿಸಿ ಹೇಳಲೂ ಇಲ್ಲ…!! ಮುಖ್ಯಮಂತ್ರಿ ಗಳ ಆ ಮಾತಿನ ವಿಶ್ಲೇಷಣೆ ಯ ಅಗತ್ಯ ಈಗಾಗಲೇ ಎಲೆಚುಕ್ಕಿ ರೋಗದಿಂದ ಸಂಪೂರ್ಣ ಅಡಿಕೆ ತೋಟವೇ ನಾಶ ವಾಗಿರುವ ಮಲೆನಾಡಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದವರಿಗೆ ಆ ಬಗ್ಗೆ ಸ್ಪಷ್ಟನೆ ಬೇಕಿದೆ. ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯ ಅತಿಹೆಚ್ಚು ಮಳೆ ಬೀಳುವ ಭಾಗದ ಅಡಿಕೆ ಬೆಳೆಗಾರ ಎಲೆಚುಕ್ಕಿ ರೋಗದಿಂದ ಸಂಪೂರ್ಣ ಅಡಿಕೆ ತೋಟವೇ ನಾಶವಾಗಿ ಮುಂದೇನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಸಿಗದೆ ದಿಕ್ಕೆಟ್ಟಿದ್ದಾರೆ.ನಮ್ಮ ಜನ ಪ್ರತಿನಿಧಿಗಳು ಅಡಿಕೆ ಕೃಷಿ ವಿಸ್ತರಣೆ ಯ ಬಗ್ಗೆ ಮಾತನಾಡಿ ಅಡಿಕೆ ಎಲೆಚುಕ್ಕಿ ರೋಗವೋ ಹಳದಿ ಎಲೆ ರೋಗವೋ ಏನಾದರೂ ಆಗಿಯಾದರೂ ಅಡಿಕೆ ಬೆಳೆ ವಿಸ್ತರಣೆ ಕಡಿಮೆಯಾದರೆ ಸಾಕು ಎನ್ನುವ ದಾಟಿಯಲ್ಲಿ ಮಾತನಾಡುತ್ತಾರೆ.
ಆದರೆ ಅಡಿಕೆ ಕೃಷಿ ಬಿಟ್ಟು ಬೇರೇನೂ ಬೆಳೆ ಬೆಳೆಯಲಾಗದ ಅಮಾಯಕ ಮಲೆನಾಡು ಕರಾವಳಿಯ ರೈತರ ಭವಿಷ್ಯದ ಬಗ್ಗೆ ಚಿಂತನೆ ಮಾಡುವರಾರು. ಈ ಭಾಗದ ರೈತರಿಗೆ ಪರ್ಯಾಯ ಜೀವನೋಪಾಯವೇನು…?
ಒಂದು ಕಾಲದಲ್ಲಿ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶದಿಂದ ದಕ್ಷಿಣ ಭಾರತದ ಆಂದ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಿಗೆ ಸಾಂಪ್ರದಾಯಿಕ ಬೆಳೆಗಾರರ ಅಡಿಕೆ ರವಾನೆಯಾಗುತ್ತಿತ್ತು.
ಅಡಿಕೆ ಉತ್ಪನ್ನ ದಲ್ಲಿ ಹತ್ತಾರು ಮಾದರಿಗಳಿದ್ದವು.ಈ ಒಂದೊಂದು ಮಾದರಿಯಲ್ಲೂ ಮತ್ತೆ ಹತ್ತು ಹತ್ತು ಮಾದರಿಯಿದ್ದವು. ಆಗಿನ ಕಾಲದ ಖರೀದಿದಾರ ಅದನ್ನು ಖಾಯಿಶ್ ಪಟ್ಟು ಖರೀದಿ ಮಾಡುತ್ತಿದ್ದ.
ತೀರ್ಥಹಳ್ಳಿ ಭಾಗದ “ಹಸ ” ಎಂಬ ಮಾದರಿಗೆ ಅತಿಹೆಚ್ಚು ಬೆಲೆ. ಆದರೆ ಅಡಿಕೆ “ಹಸ ” ಮಾದರಿಗೆ ಸುಮಾರು ಎರಡು ಕ್ವಿಂಟಾಲ್ ಇಪ್ಪತ್ತು ಕೆಜಿಯಷ್ಟು “ರಾಶಿ ಇಡಿ” ಅಡಿಕೆ ಬೇಕಾಗುತ್ತದೆ. ಈ ಲೆಕ್ಕಾಚಾರದಲ್ಲಿ ಒಂದು ಕ್ವಿಂಟಾಲ್ “ಹಸ” ಮಾದರಿಯ ಅಡಿಕೆಗೆ ಇಂದು ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂಪಾಯಿ ಇರಬೇಕಿತ್ತು. ಆದರೆ ಇವತ್ತು ಅಡಿಕೆ ಸುಲಿಯುವ ಯಂತ್ರ ಬಂದ ಮೇಲೆ ಈ “ಹಸ ” ಮಾದರಿಯ ಅಡಿಕೆ ಹೆಚ್ಚು ಮಾರುಕಟ್ಟೆಗೆ ಅವಕವಾಗುವುದೂ ಇಲ್ಲ…! ಜೊತೆಗೆ ಮಾರುಕಟ್ಟೆಯಲ್ಲಿ “ಹಸ ” ಮಾದರಿಗೆ ಹೆಚ್ಚೆಂದರೆ ದರ ಎಪ್ಪತ್ತರಿಂದ ಎಪ್ಪತ್ತೈದು ಸಾವಿರ ರೂಪಾಯಿ ಮಾತ್ರ …. !!! ರಾಶಿ ಇಡಿ ಮಾದರಿಯ ಅಡಿಕೆ ಉತ್ಪನ್ನದ ಬೆಲೆಗೆ ಹೋಲಿಸಿದರೆ ಕ್ವಿಂಟಾಲ್ ಗೆ ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ಬೆಳೆಗಾರರಿಗೆ ನಷ್ಟವಾಗುತ್ತದೆ.
ಮಲೆನಾಡಿನ ಅಡಿಕೆಯಲ್ಲಿ ಇನ್ನೊಂದು ಜನಪ್ರಿಯ ಅಡಿಕೆ ಮಾದರಿಯೆಂದರೆ “ಬೆಟ್ಟೆ” ಅಡಿಕೆ .! ಇದು ಮನುಷ್ಯರೇ ಹಸಿ ಅಡಿಕೆ ಸುಲಿದು ಮದ್ಯೆ ಕತ್ತರಿಸಿದಾಗ “ಬೆಟ್ಟೆ” ಆಗುತ್ತದೆ. ವಿಪರ್ಯಾಸವೆಂದರೆ ಈ ಮನುಷ್ಯನ ಶ್ರಮದಿಂದ ಉತ್ಪನ್ನ ವಾದ ಈ “ಬೆಟ್ಟೆ” ಮಾದರಿಯ ಅಡಿಕೆಗೂ ಅಡಿಕೆ ಸುಲಿಯುವ ಯಂತ್ರದಲ್ಲಿ ಸುಲಿದ ಅಡಿಕೆ ಮಾದರಿ “ರಾಶಿ ಇಡಿ” ಅಡಿಕೆ ಗೂ ಮಾರುಕಟ್ಟೆ ಯಲ್ಲಿ ಅಡಿಕೆ ದರ ಹೆಚ್ಚು ಕಮ್ಮಿ ಹತ್ತಿರ ಹತ್ತಿರ ಒಂದೇ ದರ. ಕೆಲವು ಸತಿ ಒಂದೆರಡು ಸಾವಿರ “ಬೆಟ್ಟೆ” ಅಡಿಕೆ ಗೆ ಬೆಲೆ ಹೆಚ್ಚಿರುತ್ತದಷ್ಟೇ.
ಇದೆಲ್ಲಾ ಸಾಂಪ್ರದಾಯಿಕ ಶೈಲಿಯ ಅಡಿಕೆ ಬೆಳೆ ಸಂಸ್ಕರಣೆಯ ಅಡಿಕೆ ಉತ್ಪನ್ನಗಳು. ದುರಂತವೆಂದರೆ ಮಾರುಕಟ್ಟೆಗೆ ಗುಟ್ಕಾ ಕಂಪನಿಗಳು ಬಂದು ಅವೇ ಅಡಿಕೆ ಯ ಪ್ರಮುಖ ಖರೀದಿದಾರರಾದ ಮೇಲೆ ಅತಿ ಮುಖ್ಯವಾದ ಅತಿ ಕೆಟ್ಟ ದುಷ್ಪರಿಣಾಮವೆಂದರೆ ಆ ಅಡಿಕೆ ಖರೀದಿದಾರರ ಕೇವಲ Quantity ಮಾತ್ರ ನೋಡತೊಡಗಿದ.
ಗುಟ್ಕಾ ದವರಿಗೆ ತಮ್ಮ ರಾಸಾಯನಿಕ ಯುಕ್ತ ಅಮಲುಕಾರಕ ಬೆರೆಸಲು strength ಇರುವ ಮಾದ್ಯಮ ಬೇಕಿತ್ತು. ಅದಕ್ಕಾಗಿ ಅಡಿಕೆಯನ್ನು ಬಳಸಿಕೊಂಡ. ಒಂದು ವೇಳೆ ಮೊದಲಿನಂತೆ ಅಡಿಕೆ ಉತ್ಪನ್ನ ವನ್ನು ನೇರವಾಗಿ ಬಳಸುವವನೇ ಅಡಿಕೆ ಯ ಮುಖ್ಯ ಖರೀದಿದಾರನಾಗಿದ್ದಾರೆ ಯಾವುದೇ ಕಾರಣಕ್ಕೂ ಬಯಲು ಸೀಮೆಯ ಅಡಿಕೆ ಯನ್ನು ಖರೀದಿಸುತ್ತಿರಲಿಲ್ಲ…!!
ಹಿಂದೆ ಸಾಂಪ್ರದಾಯಿಕ ಮಾದರಿಯ ಅಡಿಕೆ ಯನ್ನು ಖರೀದಿಸಿ ತಿನ್ನುತ್ತಿದ್ದವ ಈಗ compact ಎನ್ನುವ ಕಾರಣಕ್ಕೆ ಗುಟ್ಕಾ ಕ್ಕೆ ಬದಲಾದ…!! ಅಥವಾ ಆ ಬಳಕೆದಾರನಿಗೆ ಸಾಂಪ್ರದಾಯಿಕ ಮಾದರಿಯ ಅಡಿಕೆ “ಅಲಭ್ಯ” ವಾದ ಕಾರಣ ಆತ ಅನಿವಾರ್ಯ ವಾಗಿ ಗುಟ್ಕಾಕ್ಕೆ ಬದಲಾಗಿ ರಬಹುದು.
ಅಡಿಕೆಯನ್ನ ಕುಟ್ಟಿ ಪುಡಿ ಮಾಡಿ ಗುಟ್ಕಾ ತಯಾರಿಸುವ ಮೂಲಕ ಬಳಕೆಯಾಗು ವುದರಿಂದ, ಅಡಿಕೆಯ ಬಣ್ಣ ರುಚಿ ಗುಣಮಟ್ಟಗಳು ಗಣನೆಗೆ ಬರದಿರುವುದರ ಕಾರಣಕ್ಕೆ ಬಯಲು ಸೀಮೆಯ ಅಡಿಕೆ ಖರೀದಿಯಾಗುತ್ತಿದೆ. ತೀರ್ಥಹಳ್ಳಿಯ ಹಸವೋ ಬೆಟ್ಟೆಯೋ ರಾಶಿ ಇಡಿಯೋ ಗುಣಮಟ್ಟದಲ್ಲಿ ಸ್ಪರ್ಧೆಯಲ್ಲಿ ನಿಂತರೆ ಬಯಲು ಸೀಮೆಯ ಅಡಿಕೆ ಮಲೆನಾಡಿನ ಅಡಿಕೆಯ ಹತ್ತಿರಕ್ಕೂ ಬಾರದು.ಆದರೆ ಈಗ ಅಡಿಕೆ ಖರೀದಿದಾರರಿಗೆ ಗುಣಮಟ್ಟದ ಅಡಿಕೆ ಬೇಡ.
ಇದೊಂದೇ ಕಾರಣಕ್ಕೆ ಅಡಿಕೆ ವ್ಯಾಪಾರಿ ಮತ್ತು ಖರೀದಿದಾರರು ಗುಟ್ಕಾ ತಯಾರಕರ ಮೇಲಾಟಕ್ಕೆ ವಿದೇಶಿ ಕಳಪೆ ಅಡಿಕೆ ಭಾರತಕ್ಕೆ ಕಳ್ಳ ದಾರಿಯಲ್ಲಿ ಆಮದಾಗಿ ಆ ಅಡಿಕೆಗೆ ಅಪಾಯಕಾರಿ ರಾಸಾಯನಿಕ ಬಣ್ಣದ ಸಂಸ್ಕರಣೆಯಾಗಿ
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಅಪವಾದ ಹೊರ ಬೇಕಾಗಿ ಬಂತು…!
ಅಡಿಕೆ ಅತ್ಯಂತ ಪೂಜನೀಯ ಆರೋಗ್ಯ ದಾಯಕವಾದ ಉತ್ಪನ್ನದ ಬೆಳೆ. ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶದ ಮಣ್ಣು ಹವಾಗುಣಕ್ಕೆ ಅನುಗುಣವಾದ ರುಚಿ ಬಣ್ಣ ದ ಅಡಿಕೆ ಬೆಳೆಯಲಾಗುತ್ತದೆ. ಈ ಪ್ರದೇಶದ ಮಣ್ಣಿನ ಕಂಪಿನ ಅಡಿಕೆ ಉತ್ಪನ್ನವನ್ನು ಇಡೀ ದೇಶದಲ್ಲಿ ಇನ್ಯಾವ ಊರಿನಲ್ಲೂ ಅಡಿಕೆ ಬೆಳೆದರೂ ಸರಿಗಟ್ಟಲು ಸಾದ್ಯವಿಲ್ಲ.
ಉದಾಹರಣೆಗೆ ತೀರ್ಥಹಳ್ಳಿ ಟಾಲ್ ಮಾದರಿಯ ಅಡಿಕೆ ಗಿಡವನ್ನು ತಿಪಟೂರಿನಲ್ಲಿ ನೆಟ್ಟರೆ ಖಂಡಿತವಾಗಿಯೂ ತೀರ್ಥಹಳ್ಳಿ ಪ್ರದೇಶದಲ್ಲಿ ಬರುವ ಗುಣಮಟ್ಟ ರುಚಿ ತಿಪಟೂರಿನಲ್ಲಿ ಬಾರದು. ಇದು ಮಣ್ಣು ವಾತಾವರಣ ಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ. ಇದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಅಡಿಕೆ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಉತ್ಪನ್ನಕ್ಕೆ ಮೌಲ್ಯ ಕೊಡಿಸಬೇಕು. ಸರ್ಕಾರ ಮಲೆನಾಡು ಮತ್ತು ಕರಾವಳಿ ಪ್ರದೇಶದ ಸಾಂಪ್ರದಾಯಿಕ ಅಡಿಕೆ ಬೆಳೆಯನ್ನು ಮತ್ತು ಬೆಳೆಗಾರರನ್ನ ಉಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರಾಗಬೇಕಿದೆ.ಮಾರುಕಟ್ಟೆ ಯಲ್ಲಿ “ತೀರ್ಥಹಳ್ಳಿ ಹಸ, ಸಾಗರ ರಾಶಿ ಇಡಿ, ಶಿರಸಿ ತಟ್ಟಿಬೆಟ್ಟೆ, ಪುತ್ತೂರಿನ ಚಾಲಿ ” ಮುಂತಾದ ಮಾದರಿಯಲ್ಲಿ “ಬ್ರಾಂಡ್” ಆಗಿ ದೇಶ ವಿದೇಶಗಳಲ್ಲಿ ಪ್ರಚಾರವಾಗಿ ಪ್ರಸಿದ್ಧಿಯಾಗಿ ಮಾರುಕಟ್ಟೆ ಕಂಡುಕೊಳ್ಳುವಂತೆ ಸರ್ಕಾರ ಅಡಿಕೆ ಸಹಕಾರಿ ಮಾರಾಟ ಸಹಕಾರಿ ಸಂಘ ಗಳ ಮೂಲಕ ಮಾಡಿ ನಮ್ಮ ಸಾಂಪ್ರದಾಯಿಕ ಅಡಿಕೆ ಉತ್ಪನ್ನ ಗುಣಮಟ್ಟದ ಕಾರಣಕ್ಕೆ ಮಾರುಕಟ್ಟೆ ಕಂಡುಕೊಳ್ಳಬೇಕು.
ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ಗುಟ್ಕಾ ಸಹವಾಸವೇ ಬೇಡ. ಏನೇ ಪ್ರಯತ್ನ ಪಟ್ಟರೂ ನಮ್ಮ ಮಲೆನಾಡು ಮತ್ತು ಕರಾವಳಿಯ ಪ್ರದೇಶದಲ್ಲಿ ಎಷ್ಟೇ ಅಡಿಕೆ ಬೆಳೆ ವಿಸ್ತರಣೆ ಯಾದರೂ ನಮ್ಮದೇ ಮಲೆನಾಡು/ಕರಾವಳಿ ಪ್ರದೇಶದಲ್ಲಿ ಮತ್ತೊಂದು ಕಡೆಯಲ್ಲಿ ಹವಮಾನ ವೈಪರಿತ್ಯ, ಮಾರಕ ರೋಗ ಇತ್ಯಾದಿಗಳಿಂದ ಅಡಿಕೆ ಬೆಳೆ ನಾಶ ವಾಗಿ ವಿಸ್ತರಣೆಯನ್ನು Balance ಮಾಡುತ್ತದೆ. ನಮ್ಮ ಬಾಗದ ವಿಸ್ತರಣೆ ನಮ್ಮ ಬಾಗದ ರೈತರಿಗೆ ಯಾವತ್ತೂ ಸ್ಪರ್ಧೆಯಾಗದು.
ದಕ್ಷಿಣ ಕನ್ನಡದ ಕ್ಯಾಂಪ್ಕೋ ಸಂಸ್ಥೆಯ ಅಡಿಕೆ ಮಾರುಕಟ್ಟೆ ಮತ್ತು ಮೌಲ್ಯ ವರ್ಧನೆಯಯ ಪ್ರಯತ್ನಗಳು ಮಲೆನಾಡಿನ ಇತರೆ ಅಡಿಕೆ ವ್ಯಾಪಾರಿ ಸಹಕಾರಿ ಸಂಸ್ಥೆಗಳಿಗೆ ಮಾದರಿ.
ಶಿವಮೊಗ್ಗದ ಮ್ಯಾಮ್ಕೋಸ್ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕು. ಮ್ಯಾಮ್ಕೋಸ್ ಸಂಸ್ಥೆ ಅಡಿಕೆ ಯ ಮೌಲ್ಯ ವರ್ಧನೆ ಮಾರುಕಟ್ಟೆ ಹಿಡಿತದ ಬಗ್ಗೆ ಗಮನ ಕೊಡುವುದು ಬಿಟ್ಟು ಯಾವುದೋ ಸಕ್ಕರೆ ಕಾರ್ಖಾನೆಯ ಪ್ರೆಸ್ ಮಡ್ ನ್ನ ಗೊಬ್ಬರ ಅಂತ ಹೇಳಿ ಗಿಲೀಟು ಮಾಡಿ ಬಣ್ಣದ ಬ್ಯಾಗಡೆ ಚೀಲದಲ್ಲಿ ಹಾಕಿ ಮಾರಾಟ ಮಾಡುವ ತನ್ನ ವ್ಯಾಪ್ತಿಗಲ್ಲದ ಕೆಲಸ ಮಾಡುತ್ತಿದೆ. ಇಂತಹ ಅಸಂಬದ್ದ ಕೆಲಸ ಮಾಡುವುದನ್ನ ಬಿಟ್ಟು “ಅಡಿಕೆ ಮೌಲ್ಯ ವರ್ಧನೆಯ” ವಿಷಯದಲ್ಲಿ ಮಾಮ್ಕೋಸ್ ಕ್ಯಾಂಪ್ಕೋವನ್ನು ಮಾರ್ಗದರ್ಶಿಯಾವಾಗಿ ತೆಗೆದು ಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.
ರಾಜಕೀಯ ನಾಯಕರು , ಜನ ಪ್ರತಿನಿಧಿಗಳು “ಬುದ್ದ ” ನಂತೆ “ಆಸೆಯೇ ದುಃಖ ಕ್ಕೆ ಮೂಲ” ಎಂಬ ಉಪದೇಶ ಮಾಡಿದಂತೆ “ಅತಿಯಾದ ಅಡಿಕೆ ವಿಸ್ತರಣೆ ಅಡಿಕೆ ಬೆಲೆ ಕುಸಿತಕ್ಕೆ” ಅಡಿಕೆ ಬೆಳಿಬೇಡಿ ಎಂಬಂತಹ ಮಾತನಾಡುವುದು “ಹೊಣಗೇಡಿತನದ ಮಾತಾಗುತ್ತದೆ”. ಬಯಲು ಸೀಮೆಯ ಪ್ರದೇಶದಲ್ಲಿ ಅಡಿಕೆ ವಿಸ್ತರಣೆ ಯಾಗಿರುವುದಕ್ಕೆ ಮಲೆನಾಡು ಕರಾವಳಿ ಪ್ರದೇಶದ ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಹೊಣೆಗಾರನಾಗಬೇಕಾದ್ದಿಲ್ಲ. ಅಡಿಕೆ ಬೆಳೆ ವಿಸ್ತರಣೆ ಬಗ್ಗೆ ಮಾತನಾಡುವ ನಮ್ಮ ಜನ ನಾಯಕರು ಅಡಿಕೆ ಯಾಕಾಗಿ ವಿಸ್ತರಣೆ ಯಾಗುತ್ತಿದೆ ಎಂಬುದರ ಬಗ್ಗೆ ಚೆರ್ಚೆ ಮಾಡಬೇಕು.
ನಮ್ಮ ಭಾಗದ ಜನ ಪ್ರತಿನಿಧಿಗಳು ಸರ್ಕಾರ ಹಂತ ಹಂತವಾಗಿ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರನ್ನ ಅಡಿಕೆ ಪರ್ಯಾಯ ಉತ್ಪನ್ನ ತಯಾರಿಕೆ ಮತ್ತು ಅಡಿಕೆಗೆ ಪರ್ಯಾಯ ಬೆಳೆಗಳತ್ತ ಗಮನ ಹರಿಸುವಂತೆ ಮಾಡಬೇಕು. ಆ ಬಗ್ಗೆ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು.
ಕೊರೋನ ಸಾಂಕ್ರಾಮಿಕ ರೋಗದ ಅಲೆಯ ನಂತರ ಬಹು ದೊಡ್ಡ ಪ್ರಮಾಣದಲ್ಲಿ ಮಲೆನಾಡು ಮತ್ತು ಕರಾವಳಿಯ ಯುವ ಪೀಳಿಗೆ ಮಹಾ ನಗರಗಳಿಂದ ತಮ್ಮ ತಮ್ಮ ಹಳ್ಳಿಗಳಿಗೆ ವಾಪಾಸಾಗಿ ನಮ್ಮ ಚಿಕ್ಕ ಪುಟ್ಟ ಪಟ್ಟಣ ಮತ್ತು ಹಳ್ಳಿಗಳಲ್ಲಿ ಚಿಕ್ಕ ಚಿಕ್ಕ ಉದ್ಯಮ ಕಟ್ಟಿಕೊಂಡು ಹೊಸ ಬದುಕು ಕಂಡು ಕೊಳ್ಳುತ್ತಿದ್ದಾರೆ.
ಅಡಿಕೆ ಎಲೆಚುಕ್ಕಿ ರೋಗವೋ ಅಥವಾ ಅಡಿಕೆ ವಿಸ್ತರಣೆಯ ಕಾರಣದಿಂದಾಗಿ ಅಡಿಕೆ ಬೆಲೆ ಗಂಭೀರ ಪ್ರಮಾಣದಲ್ಲಿ ಕುಸಿದಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದ ವ್ಯವಹಾರದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಇದು ಅಡಿಕೆಯನ್ನೇ ನಮ್ಮ ಭವಿತವ್ಯ ಎಂದು ಒಂದೇ ಬೆಳೆಯನ್ನು ನಂಬಿಕೊಂಡ ಚಿಕ್ಕ , ಮಧ್ಯಮ ಪ್ರಮಾಣದ ರೈತರು ಮತ್ತು ಈ ರೈತರ ಹಣಕಾಸಿನ ವ್ಯವಹಾರದ ಆಧಾರದಲ್ಲಿ ಬಂಡವಾಳ ಹೂಡಿಕೊಂಡಿರುವ ಮಲೆನಾಡು ಕರಾವಳಿ ಪ್ರದೇಶದ ಎಲ್ಲಾ ಉದ್ಯಮಗಳ ಬಾಳು ಭವಿಷ್ಯದ ವಿಷಯ.ಈ ದೇಶದಲ್ಲಿ ಈ ಹೊತ್ತಿನಲ್ಲಿ ಕೇಂದ್ರ -ರಾಜ್ಯ ಎರಡೂ ಕಡೆ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಆಹಾರ ಸಂಶೋಧನೆಗಾಗಿಯೇ ದೇಶದಾದ್ಯಂತ ಸರ್ಕಾರದ್ದೇ ಸಂಶೋಧನಾ ಕೇಂದ್ರಗಳಿವೆ, ಸರ್ಕಾರ ಈ ಸಂಶೋಧನಾ ಕೇಂದ್ರಗಳಿಗೆ ಅಡಿಕೆಯ ಗುಟ್ಕೇತರ ಉತ್ಪನ್ನಗಳ ತಯಾರಿಸಲು ಮಾರ್ಗದರ್ಶನ ಮಾಡಬೇಕು. ಬಿಜೆಪಿ ಪಕ್ಷವನ್ನು ಆರಂಭದ ಲಗಾಯ್ತಿನಿಂದಲೂ ದಕ್ಷಿಣ ಭಾರತದಲ್ಲಿ ಅಡಿಕೆ ಬೆಳೆಯುವ ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನರು ತಮ್ಮ ತನು-ಮನ ವನ್ನು ಪಕ್ಷ ಸಂಘಟನೆಗೆ ಧಾರೆಯೆರೆದು ನೆಲೆ ಕೊಟ್ಟು ಬೆಳೆಸಿದ್ದಾರೆ. ಈ ಕಾರಣಕ್ಕೆ ಅಡಿಕೆ ಬೆಳೆಗಾರರ ಹಿತ ಕಾಪಾಡುವುದು ಬಿಜೆಪಿ ಪಕ್ಷಕ್ಕೆ ಆದ್ಯ
“ಕೃತಜ್ಞತಾ ಧರ್ಮ” ವಾಗಿರುತ್ತದೆ.ಈ ನಿಟ್ಟಿನಲ್ಲಿ ಸಂಘ ಪರಿವಾರವೂ ಗಮನ ಕೊಡಲೆಂದು ಆಶಿಸೋಣ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಉಳಿಯಲಿ.ಈ ಮೂಲಕ ಮಲೆನಾಡು ಕರಾವಳಿ ಪ್ರದೇಶದ ಜನ ಜೀವನ ಸಮೃದ್ಧವಾಗಲಿ.