ಮೊನ್ನೆಯಿಂದ ಹಲವಾರು ಮಾಧ್ಯಮಗಳಲ್ಲಿ ಬಯಲುಸೀಮೆಯ ಪ್ರದೇಶದ ಅಡಿಕೆ ತೋಟಗಳು ಈ ಬಾರಿ “ಬರ”ಕ್ಕೆ ಒಣಗಿ ನಷ್ಟವಾಗುತ್ತಿದೆ ಎಂಬ ಸುದ್ದಿ ಪ್ರಕಟಿಸುತ್ತಿದ್ದಾರೆ.
ಹೌದು, ಈ ಬಾರಿ ಬಯಲುಸೀಮೆ ಅಂತಲ್ಲ. ಮಲೆನಾಡಿನ ಗುಡ್ಡ, ಬಯಲು, ಮಕ್ಕಿ ಭಾಗದಲ್ಲಿ “ಬೋರ್‌ವೆಲ್” ನೀರಾವರಿ ಆಧಾರದಲ್ಲಿ ನಿರ್ಮಾಣ ಮಾಡಿದ ತೋಟಗಳು ಈ ಬಾರಿ “ಬರ”ಕ್ಕೆ ಶರಣಾಗುವುದು ದಿಟ.
ಬಯಲುಸೀಮೆಯ ಪ್ರದೇಶದ ಅಡಿಕೆ ಬೆಳೆಗಾರರು ಅಡಿಕೆ ಬೆಳೆಯ ವಿಚಾರದಲ್ಲಿ ಮಲೆನಾಡಿಗರಿಗಿಂತ ಹೆಚ್ಚು ಗಟ್ಟಿಯಾಗಿದ್ದಾರೆ. ಅವರು ಶತಾಯಗತಾಯ ಅಡಿಕೆ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಯಾಕೆ? ಎಂಬುದರ ಬಗ್ಗೆ ಬೆಳಕು ಚೆಲ್ಲುವ ಚಿಂತನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಿದು…
ಅದು ಮೂವತ್ತು ವರ್ಷಗಳ ಹಿಂದಿನ ಘಟನೆಗಳಿರಬಹುದು… ಆಗ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಚೆನ್ನಗಿರಿ ಸಮೀಪದಲ್ಲಿ ತಾಳೆ ಎಣ್ಣೆ ಕಾರ್ಖಾನೆಯೊಂದು ತಲೆ ಎತ್ತಿ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ರೈತರು ತಾಳೆ ಗಿಡ ನೆಟ್ಟಿದ್ದರು. ಆರಂಭದಲ್ಲಿ ಸರ್ಕಾರವೂ ತಾಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಿತ್ತು. ಆಗ ಕಾರ್ಖಾನೆಗೂ ಆಗಿನ ಸರ್ಕಾರ (ಎಸ್. ಬಂಗಾರಪ್ಪ) ಕ್ಕೂ ಕಟಿಪಿಟಿಯುಂಟಾಗಿ ತಾಳೆ ಎಣ್ಣೆ ಕಾರ್ಖಾನೆ ಆರಂಭಿಕವಾಗಲಿಲ್ಲ…
ತಾಳೆ ಗಿಡ ನೆಟ್ಟವರು ತಾಳೆ ಗಿಡ ಕತ್ತು ಬಿಸಾಡಿ ಅಡಿಕೆ ಬೆಳೆಯಲು ಆರಂಭಿಸಿದರು. ಆಗ ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಅಡಿಕೆ ತೋಟವಾಗಲು ಶುರುವಾಗಿತ್ತು. ಇದೇ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭದ್ರಾವತಿಯಲ್ಲಿ ನಡೆಯುತ್ತಿದ್ದ ಸಕ್ಕರೆ ಕಾರ್ಖಾನೆ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು… ಆಗಷ್ಟೇ ಅಡಿಕೆಗೆ ಗುಟ್ಕಾ ಎಂಬ ಉದ್ಯಮ ಖರೀದಿದಾರನಾಗಿ ಹೊರಹೊಮ್ಮಿದ್ದ..!!
ಬಯಲುಸೀಮೆಯ ಚಾನಲ್ ಏರಿಯಾದ ಸಾಂಪ್ರದಾಯಿಕ ಆಹಾರ ಧಾನ್ಯ ಬೆಳೆಯುವ ರೈತರು ತಾಳೆ ಗಿಡ ಕೀಳುವಾಗ ನೋಡೋಣ ಎಂದು ಅಡಿಕೆ ಗಿಡ ಹಾಕಿದರು… ಅಡಿಕೆ ನಾಲ್ಕೇ ನಾಲ್ಕು ವರ್ಷಗಳಲ್ಲಿ ಫಸಲು ನೀಡುವ ಹಂತಕ್ಕೆ ಬಂತು.. ವರ್ಷ ವರ್ಷವೂ ಅಡಿಕೆ ಬೇಡಿಕೆ ಹೆಚ್ಚುತ್ತಲೇ ಹೋಯಿತು.. ಅಡಿಕೆ ಬೆಳೆ ವಿಸ್ತರಣೆಯೂ ಹೆಚ್ಚುತ್ತಲೇ ಹೋಯಿತು. ದಾವಣಗೆರೆಯ ಅನ್ನದ ಬಟ್ಟಲಿನಲ್ಲಿ ಗುಟ್ಕಾ ಬೆಳೆ ಅಡಿಕೆ ಬೆಳೆಯತೊಡಗಿತು.
ಇವತ್ತು ಯಾವ ಮಟ್ಟದಲ್ಲಿ ದಾವಣಗೆರೆಯ ಚಾನಲ್ ಏರಿಯಾದಲ್ಲಿ ಅಡಿಕೆ ವಿಸ್ತರಣೆ ಆಗಿದೆಯೆಂದರೆ ಅಲ್ಲಿನ ಕೆಲವೊಂದು ಊರಿನಲ್ಲಿ ಶಾಲಾ ಮೈದಾನದ ಹೊರತುಪಡಿಸಿ ಬೇರೆ ಬಯಲಿಲ್ಲ..!!
ನಮ್ಮ ಮಲೆನಾಡು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಡಿಕೆ ಬೆಳೆ ಕ್ಷೇತ್ರದಲ್ಲಿ ಅಡಿಕೆ ಬೆಳೆ ವಿಸ್ತರಣೆಯ ವೇಗ ಕಂಡಿದ್ದು ಕೊರೊನಾ ನಂತರ. ಆದರೆ ಬಯಲುಸೀಮೆಯ ಚಾನಲ್ ಪ್ರದೇಶ ದಾಟಿ, ಬೋರ್ ನೀರಾವರಿ, ಕೆರೆ ನೀರಾವರಿ ದಾಟಿ ಈಗ ಟ್ಯಾಂಕರ್ ನೀರು ಸಿಗುತ್ತದೆ ಅಂತಾದರೆ ಅಂತವರೂ ಅಡಿಕೆ ತೋಟ ಮಾಡುತ್ತಾರೆ.
ನಮ್ಮ ಮಲೆನಾಡಿನಲ್ಲಿ ಅಥವಾ ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರ ಅಡಿಕೆ ಬೆಳೆ ವಿಸ್ತೀರ್ಣ ಮೂರು, ಹತ್ತು, ಇಪ್ಪತ್ತು ಗುಂಟೆಯಿಂದ ಆರಂಭವಾಗುತ್ತದೆ. ನಮ್ಮಲ್ಲಿ ಐದು ಎಕರೆ ಅಡಿಕೆ ತೋಟ ಇದ್ದ ಅಡಿಕೆ ಬೆಳೆಗಾರ ಭಾರೀ ಶ್ರೀಮಂತ..!!
ಅದೇ ನೀವು ಬಯಲುಸೀಮೆಯ ಅಡಿಕೆ ಬೆಳೆಗಾರರಲ್ಲಿ ಅತ್ಯಂತ ಕಡಿಮೆ ವಿಸ್ತೀರ್ಣ ಅಥವಾ ಸಣ್ಣ ರೈತರು ಎಂದರೆ ಐದು ಎಕೆರೆಯವರು. ಅಲ್ಲಿ ಎರಡು, ಮೂರು ಎಕರೆ ಅಡಿಕೆ ಬೆಳೆಗಾರರ ಸಂಖ್ಯೆ ಕಡಿಮೆ..!!
ಸುಮಾರು ಹತ್ತು ಎಕರೆ ಅಡಿಕೆ ಬೆಳೆಗಾರ ಸಾಮಾನ್ಯ ಮಧ್ಯಮ ವರ್ಗದ ಅಡಿಕೆ ಬೆಳೆಗಾರ…!! ಅಲ್ಲಿ ಎಕರೆಗೆ ಹದಿನಾಲ್ಕು ಕ್ವಿಂಟಾಲ್ ಅಡಿಕೆ ಆಗುತ್ತದೆ. ಹತ್ತು ಎಕರೆ ಅಡಿಕೆ ತೋಟದವ ನೂರೈವತ್ತು ಕ್ವಿಂಟಾಲ್ ಅಡಿಕೆ ಸುಲಭವಾಗಿ ಬೆಳೆಯುತ್ತಾನೆ….
- ಮಂಗ ತಿಂದು ತರಿದು ಹಾಳು ಮಾಡದ
- ಕೆಂಜಳಿಲು ಅಡಿಕೆ ಚೀಪಿ ಹಾಳು ಮಾಡದ
- ಕಾಡುಕೋಣದ ಹಿಂಡು ತೋಟಕ್ಕೆ ದಾಳಿ ಮಾಡದ..
- ಅಡಿಕೆ ಕೊಳೆ ಏನೆಂದೇ ಗೊತ್ತಿಲ್ಲದ…
- ಎಲೆಚುಕ್ಕಿ ರೋಗ ಇಲ್ಲದ…
- ತೋಟದ ಯಾವುದೇ ದಿಕ್ಕಿನಲ್ಲೂ ವಾಹನ ಓಡಾಡುವ..
- ಸಾವಿರಾರು ವರ್ಷಗಳಿಂದ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಅತ್ಯಂತ ಪೋಷಕಾಂಶಗಳ, ಶ್ರೀಮಂತ ಸಾಯಿಲ್ ಕಾರ್ಬನ್ ಹೊಂದಿದ ಭೂಮಿ..
- ಅಗತೆ ಕೊಚ್ಚಬೇಕು, ಕೊಟ್ಟಿಗೆ ಗೊಬ್ಬರ ಹಾಕಬೇಕು, ಅದರ ಮೇಲೆ ಮಣ್ಣು ಹಾಕಬೇಕು ಎನ್ನುವ ಪ್ರಮೇಯವೇ ಬೇಡ.. ಒಂದು ಬಾರಿ ಇಡೀ ತೋಟದಲ್ಲಿ ಟ್ರಾಕ್ಟರ್‌ನಲ್ಲಿ ರೋಟವೇಟರ್ ಹೊಡೆದು ಅಡಿಕೆ ಮರದ ಸುತ್ತ ಒಂದೆರಡು ಕೆಜಿ ರಾಸಾಯನಿಕ ಗೊಬ್ಬರ ಹಾಕಿದರೆ ಬೇಸಾಯ ಮುಗೀತು.
- ತೋಟಕ್ಕೆ ಕಪ್ಪು ಯಾನೆ ಬಸಿಗಾಲುವೆ ಬೇಡ..
- ಬೇಸಿಗೆಯಲ್ಲಿ ಚಾನಲ್ ನೀರು ಬಿಟ್ಟಾಗ ನೀರನ್ನು ತೋಟದ ಅಡಿಕೆ ಮರದ ಬುಡದಲ್ಲಿ ನಿಲ್ಲಿಸಿದರೆ ನೀರಾವರಿ ಮುಗೀತು… ಬಹುತೇಕರಿಗೆ ನೀರಾವರಿಗೆ ಮೋಟರ್ ಬೇಡ…!!
- ಈ ಪ್ರದೇಶದ ಅಡಿಕೆ ತೋಟ ನಿರ್ವಹಣೆಗೆ ಹೆಚ್ಚು ಕಾರ್ಮಿಕರು ಬೇಡ.
- ತೋಟ ಬಯಲು, ಕಪ್ಪು ಯಾನೆ ಬಸಿಗಾಲುವೆ ಇಲ್ಲದಿದ್ದರಿಂದ ಟ್ರಾಕ್ಟರ್ ಥ್ರಾಶರ್ (ಕಳೆ ಕತ್ತರಿಸುವ ಯಂತ್ರ) ಅಥವಾ ರೋಟೋವೇಟರ್ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಳೆ ನಿರ್ವಹಣೆ ಆಗುತ್ತದೆ.
- ಮಲೆನಾಡಿನಲ್ಲಿ ಅಕಾಲಿಕ ಮಳೆಯ ಕಾರಣಕ್ಕೆ ಬಹುತೇಕ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಸ್ವಂತ ಅಡಿಕೆ ಸಂಸ್ಕರಣೆ ಮಾಡುವುದನ್ನೇ ಬಿಟ್ಟಿದ್ದಾರೆ. ಬಯಲುಸೀಮೆಯ ಪ್ರದೇಶದಲ್ಲಿ ಹೆಚ್ಚಿನ ಬೆಳೆಗಾರರು ಆರಂಭಿಕ ಹಂತದಿಂದಲೇ ಫಸಲು ಗುತ್ತಿಗೆ ನೀಡುತ್ತಿದ್ದಾರೆ. ಅಕಸ್ಮಾತ್ತಾಗಿ ಅವರು ಅಡಿಕೆ ಸಂಸ್ಕರಣೆ ಮಾಡುವುದಾದರೂ ಅವರಿಗೆ ಮಳೆ, ಮೋಡ ತಾಪತ್ರಯ ನೀಡದು. ಅವರ ಎಳೆಗಾಯಿಯಿಂದ ಸಂಸ್ಕರಣೆಯ ತನಕವೂ ಎಲ್ಲೂ ಹೋರಾಟ ಮಾಡರು…
- ಅಡಿಕೆ ಬೆಲೆಯ ವಿಚಾರದಲ್ಲೂ ಬಯಲುಸೀಮೆಯ ಪ್ರದೇಶದ ಅಡಿಕೆ ಬೆಳೆಗಾರರಿಗೆ ಮಲೆನಾಡಿನ ಅಡಿಕೆ ಬೆಳೆಗಾರರಿಗಿಂತ ಸುಮಾರು ನಾಲ್ಕೈದು ಸಾವಿರ ರೂಪಾಯಿ ಹೆಚ್ಚು ದೊರೆಯುತ್ತಿದೆ. ಇವತ್ತು ನಲವತ್ತೆಂಟು, ಐವತ್ತು ಸಾವಿರ ಅಡಿಕೆ ದರ ಇದ್ದರೆ ಮಲೆನಾಡಿನ ಭಾಗದ ಅಡಿಕೆ ಕೊಯ್ಲಾಗಿ ಮಾರುಕಟ್ಟೆಗೆ ಹೋದರೆ ಮಲೆನಾಡಿನ ಗುಣಮಟ್ಟದ, ರುಚಿಕರ, ನೈಸರ್ಗಿಕ ಚೊಗರಿನ ಅಡಿಕೆಗೆ ನಲವತ್ತೆರಡರಿಂದ ನಲವತ್ತನಾಲ್ಕು ಸಾವಿರ ರೂಪಾಯಿ ಸಿಗಬಹುದು ಅಷ್ಟೇ.
- – ನೀವು ಒಂದು ಗಮನಿಸಿ…. ಮಲೆನಾಡಿನ ಪ್ರದೇಶದಲ್ಲಿ ಎಷ್ಟೇ ಮಳೆ ಕಡಿಮೆಯಾದರೂ ತುಂಗಾ (ಗಾಜನೂರು ಆಣೆಕಟ್ಟು), ಭದ್ರಾ (ಬಿ.ಆರ್. ಪ್ರಾಜೆಕ್ಟ್) ಆಣೆಕಟ್ಟುಗಳು ಸಾಮಾನ್ಯವಾಗಿ ಯಾವತ್ತೂ ಭರ್ತಿಯಾಗುತ್ತವೆ. ನೀವು ಈ ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಬರ ತಾಂಡವವಾಡಿದರೂ ಈ ಆಣೆಕಟ್ಟು ಪಾತ್ರದ ಅಡಿಕೆ ತೋಟದೊಳಗೆ ಮೊಳಕಾಲುದ್ದ ನೀರು ನಿಲ್ಲಿಸಿರುತ್ತಾರೆ. ಇಷ್ಟು ಸಮೃದ್ಧ ನೀರಾವರಿ ಮಲೆನಾಡಿನ ನೂರೈವತ್ತು ಇಂಚು ಮಳೆ ಬೀಳುವ ಪ್ರದೇಶದ ಕೃಷಿ ಜಮೀನಿಗೂ ಇಲ್ಲ…!!
- ಮಲೆನಾಡಿನಲ್ಲಿ ಇವತ್ತಿಗೂ ಅಡಿಕೆ ಸಂಸ್ಕರಣೆಯನ್ನು ಮನೆಯ ಅಡುಗೆಯಂತೆ ಮುಚ್ಚಟೆಯಿಂದ ಮಾಡುವವರಿದ್ದಾರೆ. ಆದರೆ ಬಯಲುಸೀಮೆಯ ಪ್ರದೇಶದ ಅಡಿಕೆ ಸಂಸ್ಕರಣೆ ಒಂದು ಬಗೆಯಲ್ಲಿ ಯಾಂತ್ರಿಕ… ಅಲ್ಲಿ ಭಾವನಾತ್ಮಕತೆ, ಪೂಜನೀಯತೆಯಿಲ್ಲ.
- ಇವತ್ತಿನ ಅಡಿಕೆ ಖರೀದಿದಾರನಿಗೆ ಅಡಿಕೆಯ ಬಣ್ಣ, ರುಚಿ ಮುಖ್ಯವಲ್ಲ. ಅಡಿಕೆಯ durability ಮತ್ತು ಪ್ರಮಾಣ ಮುಖ್ಯ. ಹಾಗಾಗಿ ಬಯಲುಸೀಮೆಯ ಪ್ರದೇಶದ ಅಡಿಕೆ ಮಾರುಕಟ್ಟೆಯಲ್ಲಿ ಮಲೆನಾಡಿನ ಅಡಿಕೆಗಿಂತ ಹೆಚ್ಚು ಬೆಲೆ ಪಡೆದುಕೊಳ್ಳುತ್ತದೆ.
- ಮಲೆನಾಡಿನ ಅಡಿಕೆ ಸುಗ್ಗಿಯಾಗುವ ಮೊದಲೇ ಬಯಲುಸೀಮೆಯ ಅಡಿಕೆ ಮಾರುಕಟ್ಟೆಯಲ್ಲಿ ಆವಕವಾಗಿ ಖರೀದಿದಾರ ಅವನಿಗೆ ಬೇಕಾದಷ್ಟು ಖರೀದಿಸಿ ಆಗಿರುತ್ತದೆ. ಇದು ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಸಕಾರಾತ್ಮಕತೆ. ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಕ್ಷೇತ್ರದ ಬೆಳೆಗಾರರಿಗೆ ಭವಿಷ್ಯದಲ್ಲಿ ಮಾರುಕಟ್ಟೆ ತಿರಸ್ಕಾರಕ್ಕೆ ಕಾರಣವಾಗಬಹುದು.
ಹೀಗಾಗಿ ಬಯಲುಸೀಮೆಯ ಪ್ರದೇಶದ ಚಾನಲ್ ವಲಯದ ಅಡಿಕೆ ಬೆಳೆಗಾರರು “ಕೃಷಿ ಕ್ಷೇತ್ರದಲ್ಲೇ” ಅತ್ಯಂತ ಸಮೃದ್ಧಿಯ ರೈತರು.
ನನ್ನ ಮಲೆನಾಡಿನ ಅಡಿಕೆ ಬೆಳೆಗಾರ ಮಿತ್ರರೊಬ್ಬರಿಗೆ ಸುಮಾರು ಆರು ಎಕರೆ ಅಡಿಕೆ ತೋಟವಿದೆ. ಅವರ ಔಷಧ ಮತ್ತು ಕೊನೆ ಕೆಲಸ ಮಾಡುವವ ಭದ್ರಾವತಿಯ ಅಡಿಕೆ ಬೆಲ್ಟ್‌ನವ. ಅವ ಇಲ್ಲಿನ ಅಡಿಕೆ ಕೊಳೆ ಗಲಾಟೆ, ಮಂಗನ ಉಪದ್ರವ ನೋಡಿ ಆ ಅಡಿಕೆ ಬೆಳೆಗಾರರಿಗೆ, “ಸೌಕಾರ್ರೆ.. ನೀವು ಈ ಆರು ಎಕರೆ ಅಡಿಕೆ ತೋಟ ಮಾರಾಟ ಮಾಡಿ.. ನಿಮಗೆ ನಮ್ಮ ಕಡೆ ಎರಡು ಎಕರೆ ಅಡಿಕೆ ತೋಟ ಕೊಡಿಸ್ತೇನೆ, ನೀವು ನೆಮ್ಮದಿಯ ಅಡಿಕೆ ಕೃಷಿ ಮಾಡಬಹುದು” ಅಂತಾನಂತೆ.
ನಮ್ಮ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಒಂದು ಎಕರೆ ಅಡಿಕೆಗೆ ಬೋರ್ಡೋ ಸಿಂಪಡಣೆಯ ಖರ್ಚೇ ಐವತ್ತು ಸಾವಿರ ದಾಟಬಹುದು, ಕಪ್ಪು, ಕಳೆ, ಬೇಸಾಯ, ಮಂಗ, ಕೆಂಜಳಿಲು ತರಿದು ಬಿಟ್ಟ ಉಳಿದ ಫಸಲಿನ ಮೊಬಗಲು ಒಂದು ಅರವತ್ತರಿಂದ ಎಂಬತ್ತು ಪ್ರತಿಶತ.
ಒಮ್ಮೆ ಬಯಲುಸೀಮೆಯ ಪ್ರದೇಶದ ಅಡಿಕೆ ಬೆಳೆ ಮತ್ತು ಬೆಳೆಗಾರರ ಕೃಷಿ ಬದುಕಿನ ಜೊತೆಯಲ್ಲಿ ಮಲೆನಾಡಿನ ಅಡಿಕೆ ಬೆಳೆ, ಬೆಳೆಗಾರರ ಬದುಕನ್ನು ಹೋಲಿಸಿ ನೋಡಿ.
ಇವತ್ತು ಅಡಿಕೆ ತೋಟ ವಿಸ್ತರಣೆಯಾಗಿದ್ದರ ಲೆಕ್ಕಾಚಾರದಲ್ಲಿ ನೋಡಿದರೆ ಇನ್ನೂ ಕೆಲ ವರ್ಷಗಳಲ್ಲಿ ಅಡಿಕೆ ಬೆಳೆ ಸ್ಪರ್ಧಾತ್ಮಕ ಬೆಲೆಗೆ ಬರುವುದು ನಿಶ್ಚಿತ. ಆಗ ಅಡಿಕೆ ಬೆಲೆ ಮೂವತ್ತು ಸಾವಿರ, ಮೂವತ್ತೈದು ಸಾವಿರ ಬೆಲೆಗೆ ಕುಸಿದಲ್ಲಿ, ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಕ್ಷೇತ್ರದ ನಾಲ್ಕು ಸಾರಿ ಔಷಧ ಸಿಂಪಡಣೆ ಮಾಡಿದ, ಕಾಡು ಪ್ರಾಣಿಗಳ ಹಾವಳಿ, ಕೊಳೆ, ಇತರ ಬಾಧೆಗಳಿಂದ ಮೂವತ್ತು, ನಲವತ್ತು ಪರ್ಸೆಂಟ್ ಇಳುವರಿ ಕಡಿಮೆಯಾಗುವುದರ ಜೊತೆಯಲ್ಲಿ ಅಡಿಕೆ ಬೆಲೆಯೂ ಕುಸಿದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರಲ್ಲಿ, ಅದರಲ್ಲೂ ಸಣ್ಣ, ಅತಿ ಸಣ್ಣ ಅಡಿಕೆ ಬೆಳೆಗಾರರು ಅಡಿಕೆ ತೋಟ ನಿರ್ವಹಣೆ ಮಾಡುವುದೇ ನಷ್ಟ ಆಗುತ್ತದೆ.
ಅಡಿಕೆ ವಿಸ್ತರಣೆಯ ಕಾರಣಕ್ಕೆ ಅಡಿಕೆ ಕುಸಿತದೆ ಎಂದಾಗಲೆಲ್ಲ ಇಂದಿಗೂ ನಮ್ಮ ಮಲೆನಾಡಿನಲ್ಲಿ ಅಡಿಕೆ ತೋಟ ವಿಸ್ತರಣೆ ಮಾಡುವವರು, “ನೀವು ಹೀಗೆ ಹೇಳ್ತಾ ಹತ್ತು ವರ್ಷ ಆಯಿತು. ಆದರೂ ಅಡಿಕೆ ದರ ಗಣನೀಯವಾಗಿಯೇನೂ ಕಡಿಮೆ ಆಗಿಲ್ಲ, ಅಡಿಕೆ ಬೆಳೆ ಎಷ್ಟೇ ವಿಸ್ತರಣೆ ಆದರೂ ಬೆಲೆ ಕುಸಿಯೋಲ್ಲ” ಎಂದು ವಾದ ಮಾಡುವ ಅನೇಕರನ್ನು ನಾನು ನೋಡಿದ್ದೇನೆ.
ಆದರೆ, ಒಮ್ಮೆ ಶಿವಮೊಗ್ಗ ದಾಟಿ ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರಿನ ಕೃಷಿ ಕ್ಷೇತ್ರಗಳಲ್ಲಿ ಅಡಿಕೆ ನಾಟಿ ಆಗಿರುವುದು ಮತ್ತು ಆಗುತ್ತಿರುವುದನ್ನು ನೋಡಿದರೆ ನಿಜಕ್ಕೂ ಆತಂಕವಾಗುತ್ತದೆ. ಬಯಲುಸೀಮೆಯ ಕೃಷಿಕರಿಗೆ ಅಡಿಕೆ ಬೆಲೆ ಎಷ್ಟೇ ಕಡಿಮೆಯಾದರೂ ಒಂದು ಎಕರೆ ಭತ್ತ, ಎಕರೆ ಜೋಳ, ಎಕರೆ ಕಬ್ಬು, ಎಕರೆ ಹತ್ತಿ ಹೀಗೆ ಯಾವುದೇ ಬಗೆಯ ಆಹಾರ ಧಾನ್ಯ ಬೆಳೆಯ ಲಾಭಾಂಶವನ್ನು ಅಡಿಕೆ ಉತ್ಪತ್ತಿಯ ಜೊತೆಗೆ ತುಲನಾತ್ಮಕವಾಗಿ ನೋಡಿದರೆ ಅಡಿಕೆ ಲಾಭದಾಯಕ…
ಅವರಿಗೆ ಅಡಿಕೆ ಅತ್ಯಂತ ಸುಲಭದ, ಯಾವುದೇ ರಿಸ್ಕ್ ಇಲ್ಲದ ಬೆಳೆ..!. ಹಾಗಾಗಿ ಭವಿಷ್ಯದಲ್ಲಿ ಬೆಲೆ ಕುಸಿತವೋ, ಮಿತಿಯಲ್ಲದ ಅಡಿಕೆ ಬೆಳೆ ವಿಸ್ತರಣೆಯ ಕಾರಣವೋ, ರೋಗದ ಕಾರಣಕ್ಕೋ ಮಲೆನಾಡಿನಲ್ಲಿ ಅಡಿಕೆ ಬೆಳೆ ಇಲ್ಲವಾದರೂ ಬಯಲುಸೀಮೆಯ ಪ್ರದೇಶದಲ್ಲಿ ಮುಂದಿನ ನೂರಾರು ವರ್ಷಗಳ ಕಾಲ ಅಡಿಕೆ ಬೆಳೆ ಉಳಿಯುತ್ತದೆ.
ಬಹಳಷ್ಟು ಮಲೆನಾಡಿಗರು ಅಡಿಕೆ ಬೆಲೆ ಕುಸಿದರೆ ಬಯಲುಸೀಮೆಯ ಪ್ರದೇಶದ ಅಡಿಕೆ ಬೆಳೆಗಾರರು ಅಡಿಕೆ ಕಿತ್ತೆಸೆಯುತ್ತಾರೆ ಅಂತಾರೆ. ಆದರೆ ಹಾಗಾಗೋಲ್ಲ… ಬಯಲುಸೀಮೆಯ ಪ್ರದೇಶದ ಅಡಿಕೆ ಬೆಳೆಗಾರರು ಅಡಿಕೆಗೆ ಎಷ್ಟೇ ಬೆಲೆ ಕಡಿಮೆಯಾದರೂ ಅಡಿಕೆ ಬೆಳೆ ತೆಗೆಯೋಲ್ಲ..!!
ಅವರು ಸಾವಿರಾರು ರೂಪಾಯಿ ಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸಿ ತೋಟವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಅವರು ಎಷ್ಟು ಅಡಿಕೆಗೆ ಅಂಟಿಕೊಂಡಿದ್ದಾರೆಂಬ ಅರಿವಾಗುತ್ತದೆ.
ಅಡಿಕೆಗೆ ಬೆಲೆ ಎಷ್ಟೇ ಕಡಿಮೆಯಾದರೂ ಅಡಿಕೆಗೆ ಇರುವಷ್ಟು ಉತ್ತಮ ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆ ಇನ್ಯಾವುದೇ ಬೆಳೆಗೂ ಇಲ್ಲ. ಈ ಎಲ್ಲಾ ಕಾರಣಕ್ಕೆ ಬಯಲುಸೀಮಾ ಪ್ರದೇಶದಲ್ಲಿ ಅಡಿಕೆ ಬೆಳೆ ಶಾಶ್ವತವಾಗಿ ಉಳಿಯುತ್ತದೆ.
ಇವತ್ತು ಬಯಲುಸೀಮೆಯ ಪ್ರದೇಶದ ಮಧ್ಯಮ, ದೊಡ್ಡ ವಿಸ್ತೀರ್ಣದ ಅಡಿಕೆ ಬೆಳೆಗಾರರ ಕಾರುಬಾರು ನೋಡಬೇಕು ನೀವು….
ನೋಡಲು ಒಂದು ಟವೆಲ್ ಹೊದ್ದುಕೊಂಡು, ಲುಂಗಿ ಉಟ್ಟುಕೊಂಡು ಸೀದಾಸಾದ ಇರುವ ಇವರುಗಳ ಬಳಿ ಇರುವ ಹಣದ ಬಗ್ಗೆ ನೀವು ತಿಳಿದುಕೊಂಡರೆ ಅಚ್ಚರಿ ಪಡುತ್ತೀರ..!!
ಇವರ ಮಕ್ಕಳು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ವಸತಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ವರ್ಷಗಟ್ಟಲೇ ಇಲ್ಲೇ ಇದ್ದು ವ್ಯಾಸಂಗ ಮಾಡಿದ ಈ ಬಯಲುಸೀಮಾ ಪ್ರದೇಶದ ಅಡಿಕೆ ಬೆಳೆಗಾರ ಅಥವಾ “ಕುಳ”ಗಳ ಮಕ್ಕಳು ತುಳು ಮಾತನಾಡುತ್ತಾರೆ…!!
ನಿಜಕ್ಕೂ ಅಡಿಕೆ ಬೆಳೆ ಮತ್ತು ಅಡಿಕೆಯ ಮಾರ್ಜಿನ್ ಬಯಲುಸೀಮಾ ಪ್ರದೇಶದ ರೈತರು ಕಬ್ಬು, ಭತ್ತ, ರಾಗಿ, ಜೋಳ ಮತ್ತು ತರಕಾರಿ ಬೆಳೆದು ಸೋತಿದ್ದ ಬಯಲುಸೀಮಾ ಪ್ರದೇಶದ ರೈತರ ಕೈ ಹಿಡಿದೆತ್ತಿರುವುದು ಗಮನಾರ್ಹ. ಅವರಿಗೆ ಒಳಿತಾಗಲಿ…
ಅಡಿಕೆ ಬಯಲುಸೀಮೆಯಲ್ಲಾದರೂ ಉಳಿಯಲಿ. ಆ ಬಗ್ಗೆ ಮಲೆನಾಡಿಗರಿಗೆ ಯಾವುದೇ ಹೊಟ್ಟೆಕಿಚ್ಚು ಇಲ್ಲ. ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಈ ವರ್ಷ ಮಳೆ ಕಡಿಮೆಯಾಗಿ ಎಲೆಚುಕ್ಕಿ ರೋಗ ಬಾಧೆ ಒಂದು ವರ್ಷ ಪೋಸ್ಟ್‌ಪೋನ್ ಆಗಿದೆ. ಬಹುತೇಕ ಇತ್ತೀಚಿನ ವರ್ಷದಲ್ಲಿ ಮಲೆನಾಡಿಗರಿಗೆ ಈ ವರ್ಷ ಉತ್ತಮ ಫಸಲಿದೆ.
ಈ ಗ್ರೇಸ್ ಸಮಯದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರು ಭವಿಷ್ಯದಲ್ಲಿ ಬರುವ ಅಡಿಕೆ ಕಾಂಪಿಟೇಶನ್ ದರದಲ್ಲಿ ಉಳಿಯುವ ಬಗೆಯ ಬಗ್ಗೆ ಚಿಂತನ-ಮಂಥನ ಮಾಡುವುದೊಳಿತು ಎನ್ನುವುದು ನನ್ನ ಸಲಹೆ…
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
This reflective piece compares traditional arecanut cultivation in Malnad and coastal Karnataka with the rapidly expanding arecanut belt in the dryland and canal-irrigated regions of central Karnataka. It argues that differences in irrigation, labour, pests, diseases, cultivation costs, processing practices, market access and farm size have made dryland arecanut cultivation comparatively less risky and more economically attractive for many farmers. The article cautions that continued expansion could eventually intensify competition in the arecanut market and place greater pressure on small and marginal traditional growers in Malnad.


