ಅಡಿಕೆ ಬೆಳೆಗಾರರು ಕಳೆದ ಎರಡು-ಮೂರು ವರ್ಷಗಳಿಂದ ಎಲೆಚುಕ್ಕಿ ರೋಗದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಪರಿಹಾರ ಕ್ರಮಗಳನ್ನು ICAR-CPCRI ವಿಜ್ಞಾನಿಗಳು ಸೂಚಿಸಿದ್ದರು. ಇದೇ ವೇಳೆ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಹಾಗೂ ಕೊಳೆರೋಗಕ್ಕೆ ಒಂದೇ ಔಷಧಿಯಾಗಿ 100% ಗ್ಯಾರಂಟಿ ಎಂದು ಹೇಳಿಕೊಂಡು “ಬಯೋ” ಹೆಸರಿನಲ್ಲಿ ಕೆಲವು ಔಷಧಿಗಳು ಮಾರುಕಟ್ಟೆಯಲ್ಲಿ ರೈತರನ್ನು ಸೆಳೆಯುತ್ತಿದ್ದವು.
ಈ ಬಗ್ಗೆ “ಸಿಪಿಸಿಆರ್‌ಐ ಈ ಉತ್ಪನ್ನಗಳ ಅಧ್ಯಯನ ಮಾಡಿದೆಯೇ?” ಎಂದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ICAR ಗೆ ರೈತರು ಪತ್ರ ಬರೆದು ನೇರ ಉತ್ತರಿಸುವಂತೆ ಕೋರಿದ್ದರು. ಇದಕ್ಕೆ ICAR ಅಧಿಕೃತವಾಗಿ ಉತ್ತರಿಸಿದೆ.
50 ಹೆಕ್ಟೇರ್ ತೋಟಗಳಲ್ಲಿ ಪ್ರಾಯೋಗಿಕ ಪ್ರದರ್ಶನ: ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿಯ ಶಿಫಾರಸುಗಳಂತೆ, ಅಡಿಕೆಯ ಎಲೆಚುಕ್ಕೆ ರೋಗ ನಿರ್ವಹಣೆಗೆ ಕೆಲವು ಕ್ರಮಗಳನ್ನು ICAR-CPCRI ಶಿಫಾರಸು ಮಾಡಿದೆ.
ಏಪ್ರಿಲ್ 2025ರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 10 ತಾಲ್ಲೂಕುಗಳಲ್ಲಿ ರೈತರ 50 ಹೆಕ್ಟೇರ್ ಅಡಿಕೆ ತೋಟಗಳಲ್ಲಿ ಈ ಕ್ರಮಗಳ ಪ್ರಾಯೋಗಿಕ ಪ್ರದರ್ಶನ ನಡೆಯುತ್ತಿದ್ದು, ಈ ಪ್ರಯೋಗ ಇನ್ನೂ ಮುಂದುವರಿಯುತ್ತಿದೆ ಎಂದು ICAR ಸ್ಪಷ್ಟಪಡಿಸಿದೆ.
ಶಿಫಾರಸು ಮಾಡಿದ ಪ್ರಮುಖ ಕ್ರಮಗಳು
ಫೈಟೋ ಸ್ಯಾನಿಟೇಷನ್: ತೀವ್ರವಾಗಿ ರೋಗಬಾಧಿತ ಕೆಳಗಿನ ಎಲೆಗಳು ಹಾಗೂ ಬಿದ್ದ ಎಲೆಗಳನ್ನು ತೋಟದ ಹೊರಗೆ ತೆಗೆದು ಸುಡುವುದು ಅಥವಾ ಕಾಂಪೋಸ್ಟ್ ಮಾಡುವುದು.
ಶಿಲೀಂಧ್ರನಾಶಕ ಸಿಂಪಡಣೆ:
-
ಮುಂಗಾರು (ಜೂನ್-ಆಗಸ್ಟ್) ವೇಳೆ ಫೈಟೋಫ್ತೋರಾ ಕೊಳೆ ರೋಗ ನಿಯಂತ್ರಣಕ್ಕೆ ಸಿಂಪಡಿಸುವ 1% ಬೋರ್ಡೊ ಮಿಶ್ರಣವನ್ನು ಎಲೆಚುಕ್ಕೆ ಕಾಣುವ ತೋಟಗಳಲ್ಲಿ ಎಲೆಗಳಿಗೂ ಸಿಂಪಡಿಸಬೇಕು.
-
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹೊಸ ರೋಗ ಕಾಣಿಸಿದರೆ ಪ್ರೋಪಿಕೋನಜೋಲ್ 25 EC ಅಥವಾ ಟೆಬುಕೋನಜೋಲ್ (1 ಮಿ.ಲಿ./ಲೀ.) ಸಿಂಪಡಣೆ.
-
20-30 ದಿನಗಳ ಬಳಿಕ ಪ್ರೋಪಿನೆಬ್ 70% WP (2 ಗ್ರಾಂ/ಲೀ.) ಎರಡನೇ ಸಿಂಪಡಣೆ.
-
ಸ್ಟಿಕ್ಕರ್-ಸ್ಪ್ರೆಡರ್ 1 ಮಿ.ಲಿ./ಲೀ. ಸೇರಿಸುವುದು ಉಪಯುಕ್ತ.
ಪೋಷಕಾಂಶ ನಿರ್ವಹಣೆ: ಪ್ರತಿ ಗಿಡಕ್ಕೆ ವರ್ಷಕ್ಕೆ 100 ಗ್ರಾಂ ನೈಟ್ರೋಜನ್, 40 ಗ್ರಾಂ ಫಾಸ್ಫರಸ್ ಮತ್ತು 140 ಗ್ರಾಂ ಪೊಟಾಶ್ ಎರಡು ಹಂತಗಳಲ್ಲಿ (ಅಕ್ಟೋಬರ್, ಫೆಬ್ರವರಿ) ನೀಡಬೇಕು. ಗೊಬ್ಬರ ನೀಡುವ ಮೊದಲು ಮಣ್ಣಿನ pH ಸಮತೋಲನಕ್ಕೆ ಸುಣ್ಣ ಬಳಕೆ ಮಾಡುವುದು ಉತ್ತಮ.
ಸಮುದಾಯ ಮಟ್ಟದ ನಿಯಂತ್ರಣ: ಈ ರೋಗ ಗಾಳಿ ಮೂಲಕ ಹರಡುವುದರಿಂದ ಒಟ್ಟಾಗಿ ಕ್ರಮ ಕೈಗೊಳ್ಳಬೇಕು. ತೋಟದಲ್ಲಿ ನೀರುಹೊರೆ ವ್ಯವಸ್ಥೆ ಹಾಗೂ ರೋಗಬಾಧಿತ ನಾಟಿ ಸಾಗಣೆ ತಪ್ಪಿಸುವುದು ಅಗತ್ಯ.
ಹಳದಿ ಎಲೆರೋಗ ಮತ್ತು ಇತರ ರೋಗಗಳಿಗೂ ತಂತ್ರಜ್ಞಾನ : ಅಡಿಕೆಯ ಹಳದಿ ಎಲೆರೋಗ (YLD) ಆರಂಭಿಕ ಪತ್ತೆಗೆ ಡಯಾಗ್ನೊಸ್ಟಿಕ್ ಲ್ಯಾಬ್, ಪೋಷಕಾಂಶ-ಕೀಟ-ರೋಗ ನಿರ್ವಹಣಾ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಡ್ ರಾಟ್, ಕೊಳೆರೋಗ ಹಾಗೂ ಕ್ರೌನ್ ರಾಟ್ ನಿಯಂತ್ರಣಕ್ಕೂ ತಂತ್ರಜ್ಞಾನ ಅಭಿವೃದ್ಧಿಯಾಗಿದೆ ಎಂದು ICAR ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
“100% ಬಯೋ ಔಷಧಿ”ಗೆ ICAR ಸ್ಪಷ್ಟನೆ: ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ICAR,
-
ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಯಾವುದೇ ಬಯೋಫಾರ್ಮುಲೇಷನ್ ಅನ್ನು ICAR-CPCRI ಶಿಫಾರಸು ಮಾಡಿಲ್ಲ, ಹಾಗೂ ಇದುವರೆಗೂ
-
ಈಗಿನ ಮಾಹಿತಿಯಂತೆ ಎಲೆಚುಕ್ಕಿ ರೋಗಕ್ಕೆ ಕೃಷಿ ವಿಶ್ವವಿದ್ಯಾಲಯಗಳು ಅಥವಾ CPCRI ಪರೀಕ್ಷಿಸಿ 100% ಪರಿಣಾಮಕಾರಿ ಎಂದು ದೃಢೀಕರಿಸಿದ ಬಯೋ ಉತ್ಪನ್ನ ಇಲ್ಲ.
-
ಕೆಲವು ಖಾಸಗಿ ಸಂಸ್ಥೆಗಳು 100% ಗ್ಯಾರಂಟಿ ಹೇಳಿ ಮಾರಾಟ ಮಾಡುತ್ತಿರುವ ಬಯೋ ಉತ್ಪನ್ನಗಳಿಗೆ ಅಧಿಕೃತ ಅನುಮೋದನೆ ಇಲ್ಲ.
-
ಇಂತಹ ಉತ್ಪನ್ನಗಳಿಗೆ ನೋಂದಣಿ ನೀಡುವುದು Central Insecticides Board ಹಾಗೂ ನೋಂದಣಿ ಸಮಿತಿ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದೆ.

ರೋಗ ಪತ್ತೆ — ಗ್ಯಾರಂಟಿ ಪರೀಕ್ಷೆ ಯಾವಾಗ?: ಎಲೆಚುಕ್ಕಿ ರೋಗ ಸಾಮಾನ್ಯವಾಗಿ ಮಳೆ ಹೆಚ್ಚಾದ ಬಳಿಕ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕಾಣಿಸುತ್ತದೆ. ಈಗ ಹೊಸ ಎಲೆಗಳಲ್ಲಿ ಈ ರೋಗ ಪತ್ತೆಯಾಗುವುದಿಲ್ಲ. ಹೀಗಾಗಿ ಈಗ ನೀಡಲಾಗುತ್ತಿರುವ ಯಾವುದೇ “100% ಗ್ಯಾರಂಟಿ” ಈ ವರ್ಷದ ಡಿಸೆಂಬರ್ ಬಳಿಕವೇ ನಿಜವಾಗಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದೂ ಅಲ್ಲದೆ, ನೇರವಾಗಿ ಯಾವುದೇ ಉತ್ಪನ್ನಗಳನ್ನು ರೈತರ ತೋಟದಲ್ಲಿಯೇ ಪ್ರಯೋಗ ಮಾಡುವುದಕ್ಕೆ ಅನುಮತಿ ಇದೆಯೇ ಎಂದೂ ರೈತರು ಪ್ರಶ್ನೆ ಕೇಳಿದ್ದರು. ಈ ಬಗ್ಗೆ ಇನ್ನೂ ಸ್ಪಷ್ಟವಾದ ಉತ್ತರಗಳು ಲಭ್ಯವಾಗಿಲ್ಲ. ಸಂಬಂಧಿತ ಇಲಾಖೆಗಳಿಂದ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.
ICAR has clarified that no bio-formulation has been officially recommended or scientifically proven to be 100% effective against arecanut leaf spot or yellow leaf disease. Ongoing field demonstrations in Karnataka are still in progress, and the real effectiveness of any such claims can only be verified after the disease reappears post-monsoon.

