ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಕ್ಯಾಂಪ್ಕೋ ನೇತೃತ್ವದಲ್ಲಿ ಎಆರ್‌ಡಿಎಫ್ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಕೃಷಿ ಪ್ರಮುಖರು ಹಾಗೂ ವಿಜ್ಞಾನಿಗಳ ಸಭೆ ಶುಕ್ರವಾರ ನಡೆಯಿತು. ಸಭೆಯಲ್ಲಿ ವಿಜ್ಞಾನಿಗಳು ಹಾಗೂ ಕೃಷಿ ಪ್ರಮುಖರು ವಿಷಯ ಮಂಡಿಸಿದರು.
ಅಡಿಕೆ ಮತ್ತು ಸಾಂಬಾರ ಮಂಡಳಿಯ ನಿರ್ದೇಶಕ ಡಾ.ಹೋಮಿ ಚೆರಿಯನ್ ಪ್ರಸ್ತಾವನೆಗೈದರು. ಬಳಿಕ ಅಡಿಕೆ ಹಳದಿ ಎಲೆರೋಗದ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಸಿಪಿಸಿಆರ್ ಐ ವಿಜ್ಞಾನಿ ಡಾ. ವಿನಾಯಕ ಹೆಗಡೆ, ಎಆರ್‌ಡಿಎಫ್ ವಿಜ್ಞಾನಿ ಡಾ.ಕೇಶವ ಭಟ್, ISIRI ಯ ಡಾ.ನಂದಿನಿ ಎಂ ಘಂಟೆ, ಶಿವಮೊಗ್ಗ ವಿವಿಯ ಡಾ.ಗಂಗಾಧರ ನಾಯಕ್, ನಿಟ್ಟೆಯ ಇಂದ್ರಾಣಿ ಕರುಣಾಸಾಗರ್, ವಿಷಯ ಮಂಡಿಸಿದರು. ಕೃಷಿಕರ ಪರವಾಗಿ ಬದನಾಜೆ ಶಂಕರ ಭಟ್, ಶೃಂಗೇರಿಯ ಬಾಲಕೃಷ್ಣ ಅವರು ಮಾಹಿತಿ ಹಂಚಿಕೊಂಡರು. FSSAI ಯ ಡಾ ಐ ಕರುಣಾಸಾಗರ್ ಇದ್ದರು.
ವಿಜ್ಞಾನಿಗಳು ಅಡಿಕೆ ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಕಾರಣವಾಗಿದ್ದು ಇದಕ್ಕೆ ಸೂಕ್ತವಾದ ಔಷಧಿ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ರೋಗ ನಿರೋಧಕ ತಳಿ ಹಾಗೂ ಕೃಷಿ ನಿರ್ವಹಣೆಯೇ ಹೆಚ್ಚಿನ ಪರಿಹಾರ ನೀಡಬಲ್ಲುದು ಎಂದರು.
ಆದರೆ ISIRI ಯ ಡಾ.ನಂದಿನಿ ಎಂ ಘಂಟೆ ಅವರು ಫೈಟೋಪ್ಲಾಸ್ಮಾ ಮಾತ್ರಾ ಕಾರಣವಲ್ಲ ಎಂದರು. ಕೃಷಿಕರು ಹಾಗೂ ಇತರ ವಿಜ್ಞಾನಿಗಳು ರೋಗ ನಿಯಂತ್ರಣ ಹಾಗೂ ಹರಡುವಿಕೆ ಕಡಿಮೆ ಮಾಡಲು ಕೃಷಿ ನಿರ್ವಹಣೆ ಹಾಗೂ ಗೊಬ್ಬರ ನಿರ್ವಹಣೆಯೇ ಸೂಕ್ತ ಪರಿಹಾರ ಎಂದರು.
ಇಡೀ ಸಂವಾದವನ್ನು ಮುಕ್ತಾಯಗೊಳಿಸಿದ ಅಡಿಕೆ ಮತ್ತು ಸಾಂಬಾರ ಮಂಡಳಿಯ ನಿರ್ದೇಶಕ ಡಾ.ಹೋಮಿ ಚೆರಿಯನ್ ಮಾತನಾಡಿ, ಅಡಿಕೆ ಹಳದಿ ಎಲೆರೋಗಕ್ಕೆ ರೋಗನಿರೋಧಕ ತಳಿಯೇ ಪರಿಹಾರವಾಗಿದೆ. ಅದು ಟಿಶ್ಯು ಕಲ್ಚರ್ ಮೂಲಕವೂ ಅಥವಾ ರೋಗನಿರೋಧಕ ತಳಿಗಳ ಅಭಿವೃದ್ಧಿಯ ಮೂಲಕವೂ ಆಗಬೇಕಿದೆ. ಇದಕ್ಕೆ ಅಗತ್ಯವಾದ ಕೆಲಸಗಳು ನಡೆಯುತ್ತದೆ. ಇದಕ್ಕಾಗಿ ಅಗತ್ಯ ನೆರವು ಸರ್ಕಾರ ಹಾಗೂ ಇತರೆಡೆಯಿಂದ ಲಭ್ಯವಾಗಲಿ, ವಿಜ್ಞಾನಿಗಳಿ ನಿರಂತರವಾಗಿ ಈ ಬಗ್ಗೆ ಕೆಲಸ ಮಾಡುತ್ತಾರೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಅಡಿಕೆ ರೋಗ ನಿರ್ವಹಣೆಯ ಸಂದರ್ಭ ವಿಜ್ಞಾನಿಗಳ ನಡುವೆ ಸಂವಹನ ನಡೆಯಬೇಕಿದೆ, ಸಮಯದ ಮಿತಿಯೊಳಗೆ ಕೆಲಸ ಮಾಡುವ ಅನಿವಾರ್ಯತೆ ಇದೆ ಎಲ್ಲರೂ ಜೊತೆಯಾಗಿ ಸಾಗಬೇಕಿದೆ ಎಂದರು. ಅಡಿಕೆ ಮಾರುಕಟ್ಟೆಗೆ ಸಂಬಂಧಿಸಿ ಕ್ಯಾಂಪ್ಕೋ ಕೆಲಸ ಮಾಡುತ್ತದೆ, ಅಡಿಕೆ ಹಳದಿ ಎಲೆರೋಗದ ವಿಷಯದಲ್ಲೂ ಕ್ಯಾಂಪ್ಕೋ ರೈತರ ಜೊತೆ ಇದೆ. ಆದರೆ ಅಡಿಕೆ ತೆರಿಗೆ ಸರ್ಕಾರಕ್ಕೆ ನೇರವಾಗಿ ಲಭ್ಯವಾಗುತ್ತದೆ, ಹೀಗಾಗಿ ಶೇ.2 ರಷ್ಟು ಅಡಿಕೆ ಸಂಶೋಧನೆಗೆ ಮೀಸಲು ಇಡಬೇಕು ಇದಕ್ಕೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಮಾಜಿ ಅಧ್ಯಕ್ಷರುಗಳಾದ ನಾಗರಾಜ ಶೆಟ್ಟಿ, ಪದ್ಮನಾಭ ಕೊಂಕೋಡಿ, ಎಸ್ ಆರ್ ಸತೀಶ್ಚಂದ್ರ, ಕ್ಯಾಂಪ್ಕೋ ನಿರ್ದೇಶಕರುಗಳು, ಟಿಎಸ್‌ಎಸ್, ಮ್ಯಾಂಮ್ಕೋಸ್ , ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಸೇರಿದಂತೆ ಪ್ರಮುಖ ಕೃಷಿಕರು ಭಾಗವಹಿಸಿದ್ದರು.