ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಅಡಿಕೆ ಬೆಳೆಗಾರನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ಹಾಗೂ ಇತ್ತೀಚೆಗೆ ಅಡಿಕೆ ಮರವು ಎಲೆಚುಕ್ಕೆರೋಗದಿಂದ ಅಡಿಕೆ ಫಸಲು ನಾಶವಾಗುತ್ತಿತ್ತು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ಸಂದೇಹ ವ್ಯಕ್ತವಾಗಿದೆ. ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (60) ಮೃತ ವ್ಯಕ್ತಿ.
ಅಡಿಕೆ ತೋಟ ಮತ್ತು ಭತ್ತದ ಕೃಷಿ ಮಾಡಿಕೊಂಡಿದ್ದ ಕೃಷ್ಣಪ್ಪಗೌಡ ಎಂಬವರು ಅವರ ಸಹೋದರ ಯೋಗೇಂದ್ರ ಗೌಡ ಜಂಟಿ ಹೆಸರಿನಲ್ಲಿ 4 ಎಕರೆ 11 ಗುಂಟೆ, ಕೃಷ್ಣಪ್ಪಗೌಡ ಹೆಸರಿನಲ್ಲಿ 2 ಎಕರೆ 20 ಗುಂಟೆ ಜಮೀನು ಹೊಂದಿದ್ದರು. ಎಲೆಚುಕ್ಕೆ ರೋಗದಿಂದ ಅಡಿಕೆ ತೋಟ ಸಂಪೂರ್ಣ ಹಾಳಾಗಿದ್ದು ತೊಂದರೆಗೆ ಸಿಲುಕಿದ್ದರು. ಕೃಷಿ ಅಭಿವೃದ್ಧಿಗಾಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದರು. ಅಡಿಕೆ ಬೆಳೆ ಎಲೆಚುಕ್ಕೆ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಮಾಡಿದ ಸಾಲ ಹೇಗೆ ತೀರಿಸೋದು ಎಂದು ಯೋಚನೆಗೀಡಾಗಿ ಮನೆಯಲ್ಲಿ ಹೇಳಿಕೊಂಡಿದ್ದರು. ಈ ಕಾರಣವೇ ನಮ್ಮ ತಂದೆಯ ಆತ್ಮಹತ್ಯೆಗೆ ಕಾರಣ. ಅದು ಬಿಟ್ಟು ಬೇರೆ ಯಾವುದೇ ಕಾರಣ ಇರಲಿಲ್ಲ ಎಂದು ಅವರ ಮಗ ಸತೀಶ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.