ಹವಾಮಾನ ವೈಪರೀತ್ಯದ ಬಗ್ಗೆ ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಪರವಾಗಿ ಮತ್ತೆ ಗಮನ ಸೆಳೆದಿದೆ. ಹವಾಮಾನದ ಕಾರಣದಿಂದ ಎಳೆಕಾಯಿ ಉದುರುವಿಕೆ ಮತ್ತು ಕೊಳೆರೋಗಕ್ಕೆ ಕಂಗಾಲಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.
ಬೇಸಿಗೆಯಲ್ಲಿ ಬಿಸಿಲ ಅಡಿಕೆ ಬೆಳೆಗಾರರು ಬಸವಳಿದ್ದರು. ಮುಂಗಾರಿನ ಆರ್ಭಟಕ್ಕೆ ಅಡಿಕೆಗೆ ತಗುಲಿದ ಮಹಾಮಾರಿ ಕೊಳೆರೋಗವು ಆಘಾತವಾಗಿ ಕಾಡಿದೆ. ಹೀಗಾಗಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸುವಂತೆ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಯವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ ಕೊಡ್ಗಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹವಾಮಾನ ವೈಪರೀತ್ಯಗಳಿಂದ ಭೂ ತಾಪಮಾನ ಹೆಚ್ಚಾಗಿ ಎಪ್ರಿಲ್ -ಮೇ ತಿಂಗಳಲ್ಲಿ ಅಡಿಕೆ ಕಾಯಿ ಉದುರುವಿಕೆಯಿಂದಾಗಿ ಅರ್ಧಕ್ಕರ್ಧ ಬೆಳೆ ನಾಶವಾಗಿತ್ತು. ಲಕ್ಷಾಂತರ ಹಣ ವ್ಯಯಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಬೆಳೆ ರಕ್ಷಣೆ ಮಾಡಲು ಹೆಣಗಾಡಿದ ರೈತ, ಈಗ ತೀವ್ರತರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದ ಅಡಿಕೆಗೆ ಕೊಳೆರೋಗ ಹರಡಿ ಬೆಳೆಗಾರರ ಬಾಳನ್ನು ಅಕ್ಷರಶಃ ನರಕಸದೃಶವಾಗಿಸಿದೆ. ಇದರಿಂದ ಜೀವನಾಧಾರವೇ ಕುಸಿದು ಬೆಳೆಗಾರರ ಜೀವನೋತ್ಸಾಹ ಕುಗ್ಗಿ ಹೋಗಿದೆ.
ಕ್ಯಾಂಪ್ಕೊ ಮತ್ತು ಇತರ ಸಹಕಾರಿ ಸಂಸ್ಥೆಗಳು ಸರ್ವ ಪ್ರಯತ್ನಗಳ ಮೂಲಕ ಕೆ.ಜಿ ಗೆ 400 ರೂಪಾಯಿಗಳ ಅಸುಪಾಸಿನಲ್ಲಿ ಅಡಿಕೆಯ ದರವನ್ನು ಸ್ಥಿರೀಕರಿಸಿ ರೈತರ ಬೆಂಬಲಕ್ಕೆ ನಿಂತಿವೆ. ಆದರೂ, ಅಡಿಕೆ ಕೃಷಿಗೆ ತಗುಲಿದ ಅಡಿಕೆ ಉದುರುವಿಕೆ ಮತ್ತು ಕೊಳೆರೋಗ ಬಾಧೆಯಿಂದ ಬೆಳೆ ನಷ್ಟವಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ. ರೈತರ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿರುವ ಮುಖ್ಯಮಂತ್ರಿಯವರ ಸಹಾಯ ಹಸ್ತಕ್ಕಾಗಿ ಅಡಿಕೆ ಬೆಳೆಗಾರರು ಎದುರು ನೋಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಡಿಕೆ ಬೆಳೆ ನಾಶದ ಬಗ್ಗೆ ತುರ್ತು ಸಮೀಕ್ಷ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಿ, ಆ ಪ್ರಕಾರ ಅಡಿಕೆ ಕೃಷಿಕರಿಗೆ ಪರಿಹಾರ ಘೋಷಣೆ ಮಾಡುವಂತೆ ಪತ್ರ ಮುಖೇನ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಮಂತ್ರಿಯವರಲ್ಲಿ ಕ್ಯಾಂಪ್ಕೊ ವಿನಂತಿ ಮಾಡಿದೆ.
The President of CAMPCO, Kishore Kumar Kodgi, has requested the Chief Ministers of Karnataka and Kerala to offer compensation to the Arecanut farmers affected by weather-induced nutfall and Mahali.