ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

September 27, 2026
8:12 PM
ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ ಗುರುತಿನ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ಮಾದರಿ ಕರ್ನಾಟಕದ ಅದರಲ್ಲೂ ಮಲೆನಾಡು ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಪ್ರಯತ್ನ ಮಾಡಬಾರದು ಏಕೆ ? ಆದರೆ ಜಿಐ ಟ್ಯಾಗ್‌ ಮಾತ್ರದಿಂದ ಬೆಲೆ ಹೆಚ್ಚಾಗುವುದಿಲ್ಲ; ಗುಣಮಟ್ಟ, ಟ್ರೇಸಬಿಲಿಟಿ, ಬ್ರ್ಯಾಂಡಿಂಗ್ ಮತ್ತು ಪ್ರತ್ಯೇಕ ಮಾರುಕಟ್ಟೆ ನಿರ್ಮಾಣವಾದಾಗ ಮಾತ್ರ ರೈತನಿಗೆ ನಿಜವಾದ ಆರ್ಥಿಕ ಲಾಭ ಸಿಗಬಹುದು.

ಈಶಾನ್ಯ ಭಾರತದ ಸುಂದರ ರಾಜ್ಯವಾದ ಮೇಘಾಲಯ ತನ್ನ ಸಾಂಪ್ರದಾಯಿಕ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ವಿಶಿಷ್ಟ ಗುರುತು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ 32 ಸ್ಥಳೀಯ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ  ಜಿಐ ಟ್ಯಾಗ್‌ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ.

ಜಿಐ ಟ್ಯಾಗ್‌ ಎಂಬುದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ವಿಶಿಷ್ಟವಾಗಿರುವ ಉತ್ಪನ್ನದ ಮೂಲ, ಗುಣಲಕ್ಷಣ ಮತ್ತು ಪರಂಪರೆಯನ್ನು ಕಾನೂನುಬದ್ಧವಾಗಿ ಗುರುತಿಸುವ ವ್ಯವಸ್ಥೆ. ಇದರಿಂದ ಉತ್ಪನ್ನದ ಹೆಸರಿನ ದುರುಪಯೋಗ ತಡೆಯುವುದರ ಜೊತೆಗೆ, ಅದರ ವಿಶಿಷ್ಟತೆಯನ್ನು ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಗುರುತಿಸುವ ಅವಕಾಶ ಸಿಗುತ್ತದೆ.

ಮೇಘಾಲಯದ ಕೆಲವು ಉತ್ಪನ್ನಗಳಿಗೆ ಈಗಾಗಲೇ ಜಿಐ ಮಾನ್ಯತೆ ದೊರೆತಿದ್ದು, ಲಕಡಾಂಗ್ ಅರಿಶಿನ, ಗಾರೋ ಡಕ್ಮಾಂಡಾ ವಸ್ತ್ರ, ಲಾರ್ನೈ ಮಣ್ಣಿನ ಪಾತ್ರೆ ಕಲೆ, ಚುಬಿಚ್ಚಿ ಅಕ್ಕಿ ಪಾನೀಯ, ಖಾಸಿ ಮಂಡರಿನ್‌ ಕಿತ್ತಳೆ, ರಿಂಡಿಯಾ ರೇಷ್ಮೆ ಹಾಗೂ ಖಾಸಿ ಹಸ್ತತಂತು ಉತ್ಪನ್ನಗಳು ಪ್ರಮುಖವಾಗಿವೆ.

ಇದೀಗ ಮೇಘಾಲಯ ಅಡಿಕೆಗೆ ಕೂಡ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವುದು ಅಡಿಕೆ ಕ್ಷೇತ್ರದಲ್ಲಿ ಗಮನ ಸೆಳೆಯುವ ಬೆಳವಣಿಗೆಯಾಗಿದೆ. ಅರ್ಜಿಯಲ್ಲಿ ಮೇಘಾಲಯ ಅಡಿಕೆಯ ಗಟ್ಟಿಯಾದ ರಚನೆ ಹಾಗೂ ಹೆಚ್ಚು ಕಾಲ ಸವಿಯಲು ಅನುಕೂಲವಾಗುವ ಗುಣಲಕ್ಷಣಗಳನ್ನು ಪ್ರಮುಖ ವೈಶಿಷ್ಟ್ಯಗಳಾಗಿ ಉಲ್ಲೇಖಿಸಲಾಗಿದೆ. ಮೇಘಾಲಯದ ಆರ್ದ್ರ ಬೆಟ್ಟ ಪ್ರದೇಶಗಳ ಕೃಷಿ-ಹವಾಮಾನ ಪರಿಸ್ಥಿತಿ ಹಾಗೂ ಅಲ್ಲಿನ ಪಾರಂಪರಿಕ ಕೃಷಿ-ಅರಣ್ಯ ಪದ್ಧತಿಗಳು ಅಡಿಕೆಯ ವಿಶಿಷ್ಟ ಗುಣಲಕ್ಷಣಗಳಿಗೆ ಕಾರಣವಾಗಿವೆ ಎಂಬ ವಾದವೂ ಇದೆ.

ಮೇಘಾಲಯದ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರ್ನಾಟಕದ ಅಡಿಕೆ ಬೆಳೆಗಾರರು ಗಮನಿಸಬೇಕಾದ ಮಹತ್ವದ ಅಂಶ ಇದೆ.

ಅಡಿಕೆಗೆ ಜಿಐ ಟ್ಯಾಗ್‌ ಸಿಕ್ಕರೆ ರೈತನಿಗೆ ನಿಜವಾಗಿಯೂ ಏನು ಲಾಭ? :  ಕರ್ನಾಟಕದ ಎಲ್ಲಾ ಅಡಿಕೆಗೆ ಒಂದೇ ಜಿಐ ಮಾನ್ಯತೆ ಇಲ್ಲ. ನಿರ್ದಿಷ್ಟ ಪ್ರದೇಶದ ಅಡಿಕೆಗೆ ಈಗಾಗಲೇ ಜಿಐ ಗುರುತು ದೊರೆತಿರುವ ಉದಾಹರಣೆಯಾಗಿ ಸಿರಸಿಯ ಅಡಿಕೆ ಇದೆ. ಸಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಪ್ರದೇಶದ ನಿರ್ದಿಷ್ಟ ಗುಣಲಕ್ಷಣ ಹೊಂದಿರುವ ಅಡಿಕೆಗೆ ಈ ಭೌಗೋಳಿಕ ಗುರುತು ಸಂಬಂಧಿಸಿದೆ.

ಜಿಐ ಟ್ಯಾಗ್‌ ಎಂದರೆ ಬೆಲೆ ಖಾತರಿ ಅಲ್ಲ. ಜಿಐ ಮಾನ್ಯತೆ ದೊರೆತಿದೆ ಎಂದ ಮಾತ್ರಕ್ಕೆ ಸರ್ಕಾರ ಹೆಚ್ಚಿನ ಬೆಲೆ ನಿಗದಿಪಡಿಸುತ್ತದೆ ಅಥವಾ ಮಾರುಕಟ್ಟೆಯಲ್ಲಿ ಆ ಉತ್ಪನ್ನಕ್ಕೆ ಸ್ವಯಂಚಾಲಿತವಾಗಿ ಪ್ರೀಮಿಯಂ ಸಿಗುತ್ತದೆ ಎಂಬುದೂ ಅಲ್ಲ. ಜಿಐಯ ಮೂಲಕ ಅಡಿಕೆ ಮೂಲದ ಗುರುತು, ಗುಣಮಟ್ಟ ಮತ್ತು ಮಾರುಕಟ್ಟೆ ವಿಭಿನ್ನತೆಯನ್ನು ತಿಳಿಸುತ್ತದೆ ಅಷ್ಟೇ.

ಅಡಿಕೆಯ ವಿಷಯದಲ್ಲಿ ಈ ಅಂಶ ಇನ್ನಷ್ಟು ಮುಖ್ಯ : ಮಣ್ಣು, ಮಳೆ, ತಾಪಮಾನ, ತಳಿ, ಕೃಷಿ ಪದ್ಧತಿ, ಕೊಯ್ಲಿನ ಹಂತ, ಸಂಸ್ಕರಣೆ ಮತ್ತು ಒಣಗಿಸುವ ವಿಧಾನ  ಇವೆಲ್ಲವೂ ಅಂತಿಮವಾಗಿ ಅಡಿಕೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಅಡಿಕೆ ಬೆಳೆ ಮತ್ತು ಅಡಿಕೆ ಗುಣಮಟ್ಟಕ್ಕೆ ಮಣ್ಣು ಮತ್ತು ಹವಾಮಾನ , ಅಡಿಕೆ ತಳಿ , ಕೃಷಿ ಪದ್ಧತಿ , ಅಡಿಕೆ ಕೊಯ್ಲು ರೀತಿಗಳು,  ಅಡಿಕೆ ಸಂಸ್ಕರಣೆಯ ಮಾದರಿಗಳು, ಅಡಿಕೆ ಒಣಗಿಸುವಿಕೆಯ ರೀತಿ ಹಾಗೂ ಈ ಮೂಲಕ ಅಡಿಕೆ ಗುಣಮಟ್ಟ ಕಂಡುಬರುತ್ತದೆ.

ಜಿಐ ಟ್ಯಾಗ್‌ ಮಾತ್ರ ಸಾಕಾಗುವುದಿಲ್ಲ :  ಒಂದು ಪ್ರದೇಶದ ಅಡಿಕೆಗೆ ಜಿಐ ಮಾನ್ಯತೆ ದೊರೆತ ನಂತರವೂ ಅದನ್ನು ಸಾಮಾನ್ಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಿದರೆ, ಜಿಐಯಿಂದ ರೈತನಿಗೆ ಹೆಚ್ಚಿನ ಆರ್ಥಿಕ ಲಾಭ ಸಿಗುವುದು ಕಷ್ಟ. ಜಿಐ ವ್ಯವಸ್ಥೆಯ ಜೊತೆಗೆ, ಸ್ಪಷ್ಟ ಗುಣಮಟ್ಟದ ಮಾನದಂಡ, ರೈತನಿಂದ ಮಾರುಕಟ್ಟೆಯವರೆಗೆ ಟ್ರೇಸಬಿಲಿಟಿ,  ಪ್ರತ್ಯೇಕ ಸಂಗ್ರಹಣೆ, ಗುಣಮಟ್ಟ ಆಧಾರಿತ ವಿಂಗಡಣೆ, ಪ್ರಮಾಣೀಕೃತ ಪ್ಯಾಕೇಜಿಂಗ್, ಜಿಐ ಗುರುತಿನೊಂದಿಗೆ ಬ್ರ್ಯಾಂಡಿಂಗ್,  ಪ್ರತ್ಯೇಕ ಮಾರುಕಟ್ಟೆ ಅಥವಾ ಹರಾಜು ವ್ಯವಸ್ಥೆ, ದೇಶೀಯ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಪ್ರಚಾರ ಇವೆಲ್ಲವೂ ಕೂಡಾ ಅಗತ್ಯವಾಗಿದೆ.  ಇವುಗಳಿಲ್ಲದೆ ಜಿಐ ಟ್ಯಾಗ್‌ ಕಾಗದದ ಮೇಲಿನ ಮಾನ್ಯತೆಯಾಗಿ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕೆಯೂ ಅಗತ್ಯ ಇದೆ.

ಅಡಿಕೆ ಬೆಳೆಗಾರನಿಗೆ ನಿಜವಾದ ಲಾಭ ಎಲ್ಲಿದೆ?: ಸಾಮಾನ್ಯ ಅಡಿಕೆಗೆ ಒಂದು ಮಾರುಕಟ್ಟೆ ದರವಿದ್ದರೆ, ನಿರ್ದಿಷ್ಟ ಪ್ರದೇಶದ ಗುಣಮಟ್ಟವನ್ನು ವೈಜ್ಞಾನಿಕವಾಗಿ ದೃಢೀಕರಿಸಿದ ಅಂದರೆ ಜಿಐ ಅಡಿಕೆಯನ್ನು ಪ್ರತ್ಯೇಕ ಉತ್ಪನ್ನವಾಗಿ ಮಾರುಕಟ್ಟೆ ಮಾಡಲು ಸಾಧ್ಯವಾದರೆ, ಅದಕ್ಕೆ ಪ್ರೀಮಿಯಂ ಮಾರುಕಟ್ಟೆ ಸೃಷ್ಟಿಸಬಹುದು. ಆಗ ಅಡಿಕೆ ಬೆಳೆಗಾರನಿಗೆ ಲಾಭ ಇದೆ.

ಹಾಗೆಂದು ಜಿಐ ಅಡಿಕೆ ಬೆಲೆ ಕುಸಿತಕ್ಕೆ ಪರಿಹಾರ ಅಲ್ಲ. ಅಡಿಕೆ ಬೆಲೆಯ ಏರಿಳಿತಕ್ಕೆ ಆಮದು, ದೇಶೀಯ ಬೇಡಿಕೆ, ಸಂಸ್ಕರಣಾ ಉದ್ಯಮ, ವ್ಯಾಪಾರಿಗಳ ಬೇಡಿಕೆ, ಸಂಗ್ರಹ ಪ್ರಮಾಣ, ತೆರಿಗೆ, ಆಮದು ನೀತಿ ಸೇರಿದಂತೆ ಹಲವು ಮಾರುಕಟ್ಟೆ ಅಂಶಗಳು ಕಾರಣವಾಗುತ್ತವೆ. ಹೀಗಾಗಿ ಜಿಐ ಟ್ಯಾಗ್‌ ಅಂದ ಮಾತ್ರಕ್ಕೆ ಅಡಿಕೆ ಬೆಲೆ ಕುಸಿತಕ್ಕೆ ಸಂಪೂರ್ಣ ಪರಿಹಾರವೆಂದು ಹೇಳಲಾಗದು.  ಜಿಐ ಟ್ಯಾಗ್ ಮಾರುಕಟ್ಟೆಯನ್ನು ಬಲಪಡಿಸಬಹುದು.

ಕರ್ನಾಟಕದ ಅಡಿಕೆಗೆ ಮುಂದಿನ ಅವಕಾಶ : ಸಿರಸಿ ಅಡಿಕೆ ಜಿಐ ಮಾನ್ಯತೆ ಪಡೆದಿರುವುದು ಒಂದು ಮಾದರಿ. ಇದೇ ರೀತಿಯಲ್ಲಿ ಕರ್ನಾಟಕದ ಇತರ ಪ್ರದೇಶಗಳ ಅಡಿಕೆಗೂ ವಿಶೇಷ ಮಾನ್ಯತೆ ಇದೆ. ಉದಾಹರಣೆಗೆ ಬಾಯಾರು ಅಡಿಕೆ, ಬದಿಯಡ್ಕ ಅಡಿಕೆ, ವಿಟ್ಲ ಅಡಿಕೆ, ಪಾಣಾಜೆ ಅಡಿಕೆ, ಪುತ್ತೂರು ಅಡಿಕೆ… ಹೀಗೇ ಮೊದಲಾದ ಪ್ರದೇಶ ಅಡಿಕೆಗೆ ವಿಶಿಷ್ಟ ಗುಣಲಕ್ಷಣಗಳು ಇವೆ. ಅದಕ್ಕೆ ವಿಶೇಷ ಬೇಡಿಕೆಯೂ ಇದೆ. ಅವುಗಳನ್ನು ವೈಜ್ಞಾನಿಕವಾಗಿ ದಾಖಲಿಸುವ ಕೆಲಸ ಆರಂಭವಾಗಬೇಕು. “ನಮ್ಮ ಅಡಿಕೆ ವಿಭಿನ್ನ” ಎಂಬ ಹೇಳಿಕೆ ಮಾತ್ರ ಸಾಕಾಗುವುದಿಲ್ಲ. ಅದಕ್ಕೆ, ದಾಖಲೆ, ಅಧ್ಯಯನ , ಗುಣಮಟ್ಟದ ಮಾನದಂಡ,  ಮಾರುಕಟ್ಟೆ ಗುರುತು ಇತ್ಯಾದಿಗಳು ಅಗತ್ಯ ಇದೆ.  ಕರಾವಳಿ ಅಡಿಕೆ, ಮಲೆನಾಡಿನ ಅಡಿಕೆ ಅಥವಾ ನಿರ್ದಿಷ್ಟ ಪ್ರದೇಶದ ಸಂಸ್ಕರಿತ ಅಡಿಕೆಯನ್ನು ಸಂಶೋಧನೆಯ ಮೂಲಕ ದಾಖಲಿಸಿ, ಭವಿಷ್ಯದ ಭೌಗೋಳಿಕ ಗುರುತಿನ ಸಾಧ್ಯತೆಗಳನ್ನು ಪರಿಶೀಲಿಸಬಹುದು.

ಏನು ಮಾಡಬೇಕು? ಏನು ಮಾಡಬಹುದು..? : ಈಗಾಗಲೇ ಅಡಿಕೆ ಬೆಳೆ ಸಾಕಷ್ಟು ವಿಸ್ತರಣೆಯಾಗಿದೆ. ಈಗಲೂ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಎಲ್ಲಾ ಅಡಿಕೆಯೂ ಒಂದೇ ಎಂಬ ನಿರ್ಧಾರವೂ ಬರಬಹುದು. ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಅಡಿಕೆ ಬಂದು ಇಲ್ಲಿನ ಗುಣಮಟ್ಟದ ಅಡಿಕೆಯ ಜೊತೆ ಸೇರಿ ಸಾಗಾಟವಾಗಬಹುದು. ಇಂತಹ ಸಂದರ್ಭ ಗುಣಮಟ್ಟದ ಅಡಿಕೆಯೂ ಬೆಲೆ ಕಳೆದುಕೊಳ್ಳುತ್ತದೆ. ಹೀಗಾಗಿ ಜಿಐ ಬಗ್ಗೆ ಚರ್ಚೆ ಕೇವಲ ಅರ್ಜಿ ಸಲ್ಲಿಸುವ ಹಂತದಲ್ಲೇ ಇದೆಲ್ಲಾ ನಿಲ್ಲಬಾರದು. ಸಹಕಾರ ಸಂಸ್ಥೆಗಳು, ಸಂಘಟನೆಗಳು ಮುಂದಿನ ಹಂತದ ಕಾರ್ಯಯೋಜನೆಯನ್ನು ರೂಪಿಸಬೇಕು.

ಇದಕ್ಕಾಗಿ ಪ್ರದೇಶವಾರು ಅಡಿಕೆಯ ಗುಣಮಟ್ಟದ ವೈಜ್ಞಾನಿಕ ದಾಖಲೀಕರಣ, ಗುಣಮಟ್ಟದ ಸ್ಪಷ್ಟ ಮಾನದಂಡ ರೂಪಿಸುವುದು, ರೈತನಿಂದ ಮಾರುಕಟ್ಟೆಯವರೆಗೆ ಟ್ರೇಸಬಿಲಿಟಿ ವ್ಯವಸ್ಥೆ ರೂಪಿಸುವುದು, ಜಿಐ ಅಥವಾ ಪ್ರದೇಶಾಧಾರಿತ ಬ್ರ್ಯಾಂಡ್‌ ನಿರ್ಮಿಸುವುದು, ದೇಶೀಯ ಗ್ರಾಹಕರು ಹಾಗೂ ರಫ್ತುದಾರರಿಗೆ ಉತ್ಪನ್ನದ ವೈಶಿಷ್ಟ್ಯ ಪರಿಚಯಿಸುವುದು. ಇದರ ಜೊತೆಗೆ ಜಿಐ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಾನೂನು ರಕ್ಷಣೆಯೂ ಪರಿಣಾಮಕಾರಿಯಾಗಬೇಕು.

ಈಚೆಗಷ್ಟೇ ಅಡಿಕೆ ಬೆಳೆಯನ್ನು ವೇಗವಾಗಿ ಬೆಳೆಸಲು ಆರಂಭಿಸಿದ ಮೇಘಾಲಯದಂತಹ ರಾಜ್ಯದಲ್ಲಿ ಅಡಿಕೆಗೆ ಜಿಐ ಮಾನ್ಯತೆಗೆ ಪ್ರಯತ್ನ ಮಾಡುತ್ತಿದೆಯಾದರೆ, ಅನೇಕ ವರ್ಷಗಳಿಂದ ಮಲೆನಾಡು, ಕರಾವಳಿ ಜಿಲ್ಲೆಯಲ್ಲಿ ಅಡಿಕೆಯೇ ಪ್ರಮುಖ ಬೆಳೆಯಾಗಿ ವಿಶೇಷವಾದ ಗುಣಮಟ್ಟವನ್ನೂ ಹೊಂದಿರುವಾಗ ಜಿಐ ಮಾನ್ಯತೆಗೆ ಪ್ರಯತ್ನಿಸಿದರೆ ತಪ್ಪೇನೂ ಇಲ್ಲ. ಅಂದರೆ, ಅಡಿಕೆಗೆ ಜಿಐ ಟ್ಯಾಗ್‌ ಕೇವಲ ಪ್ರಮಾಣಪತ್ರವಾಗಿ ನೋಡದೆ, ಗುಣಮಟ್ಟದಿಂದ ಮಾರುಕಟ್ಟೆಯವರೆಗೆ ಸಂಪರ್ಕಿಸುವ ವ್ಯವಸ್ಥೆಯಾಗಿ ರೂಪಿಸಿದಾಗ ಅದರ ನಿಜವಾದ ಪ್ರಯೋಜನ ಅಡಿಕೆ ಬೆಳೆಗಾರನವರೆಗೆ ತಲುಪಬಹುದು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Meghalaya has initiated the process of seeking GI recognition for 32 traditional and culturally significant products, including its betel nut. The development is relevant to Karnataka’s areca growers because GI recognition can protect the geographical identity and distinctive qualities of a product, but it does not automatically guarantee higher prices. For farmers to gain economically, GI recognition must be supported by scientific quality standards, traceability, separate grading and storage, branding, dedicated markets and premium pricing. The existing Sirsi Supari GI provides an example of geographical identification, while the larger challenge is to convert such recognition into measurable additional value for growers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!
September 27, 2026
1:53 PM
by: ಸಾಯಿಶೇಖರ್ ಕರಿಕಳ
ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್
September 27, 2026
8:12 AM
by: ದ ರೂರಲ್ ಮಿರರ್.ಕಾಂ
ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror