ಶಾಸನಬದ್ಧ ಅಧಿಸೂಚನೆಯು ಅಡಿಕೆಗೆ ನಿರ್ದಿಷ್ಟ ತೆರಿಗೆ ದರವನ್ನು ನಿಗದಿಪಡಿಸಿದಾಗ ಅಡಿಕೆಯ ದರ್ಜೆ ಮತ್ತು ಗುಣಮಟ್ಟವನ್ನು ಸಹ ಘೋಷಿಸಬೇಕು ಎಂಬ ಅಭಿಪ್ರಾಯ ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಹೇಳಿದೆ.
ಅಡಿಕೆ (Arecanut ) ಮಾರಾಟಗಾರರಿಗೆ ಸಂಬಂಧಿಸಿದ ತೀರ್ಪಿನ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಈ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಅಡಿಕೆ ಮಾರಾಟಗಾರರಿಗೆ ಸಂಬಂಧಿಸಿದ ತೀರ್ಪಿನಲ್ಲಿ ತೆರಿಗೆ ಉದ್ದೇಶಕ್ಕಾಗಿ ಅಡಿಕೆಯ ದರ್ಜೆಯನ್ನು ಘೋಷಿಸುವ ಅಗತ್ಯವಿಲ್ಲ ಎಂಬ ಅಂಶ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಅರ್ಜಿದಾರ ಕಂಪನಿಗೆ ಸೇರಿದ ಏಳು ಟ್ರಕ್‌ಗಳನ್ನು ಸೆಪ್ಟೆಂಬರ್ 2021 ರಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನಂತರ ತೆರಿಗೆ ವಂಚನೆಗಾಗಿ ಜಪ್ತಿ ಮಾಡಲಾಯಿತು. ಅಡಿಕೆ ಸಾಗಾಟದ ಸಂದರ್ಭ ಅಡಿಕೆಯ ದರ್ಜೆಯಲ್ಲಿನ ವ್ಯತ್ಯಾಸ ಕಂಡುಬರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಹೊಂದಿದ್ದರೂ ಅಡಿಕೆಯ ದರ್ಜೆಯಲ್ಲಿನ ವ್ಯತ್ಯಾಸ ತೋರಿಸಿ ಸಾಗಿಸಲಾಗುತ್ತದೆ. ಹೀಗಾಗಿ ಅಡಿಕೆಯ ದರ್ಜೆಯನ್ನು ಬಹಿರಂಗಪಡಿಸದಿರುವುದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ನಿಯಮಗಳ ಅಡಿಯಲ್ಲಿ ಕಡಿಮೆ ಮೌಲ್ಯಮಾಪನವಾಗಿದೆ. ಇದರಿಂದ ತೆರಿಗೆ ನಷ್ಟವಾಗುತ್ತಿದೆ ಎಂದು ದೂರುಗಳು ಇತ್ತು.
ಸಿಜಿಎಸ್ ಟಿ ಅಡಿಯಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಹೊರತು ಸರಕುಗಳ ಮಾರುಕಟ್ಟೆ ಮೌಲ್ಯವು ಪ್ರಸ್ತುತವಾಗಿರುವುದಿಲ್ಲ. ಎಲ್ಲಾ ಸಾಮಾನ್ಯ ಉದ್ದೇಶಗಳಿಗಾಗಿ, ಕಾಯಿದೆಯ ಸೆಕ್ಷನ್ 15 ರ ಪ್ರಕಾರ ಮೌಲ್ಯವನ್ನು ನಿರ್ಧರಿಸಬೇಕು ಅದು ನಿಜವಾಗಿ ಪಾವತಿಸಿದ ಅಥವಾ ಪಾವತಿಸಬೇಕಾದ ಬೆಲೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.