ಕೊರೋನಾ ನಂತರ ಅಡಿಕೆ ಧಾರಣೆ ಏರಿಕೆಯಾಗಿದೆ. ಈ ಸಮಯದಲ್ಲಿ ಅಡಿಕೆ ಬೆಳೆಗಾರ ತನ್ನ ಮಟ್ಟವನ್ನು ಏರಿಕೆ ಮಾಡಿಕೊಳ್ಳುವುದರ ಜೊತೆಗೆ ತನ್ನ ತೋಟದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸಬೇಕಿದೆ. ಕೃಷಿಕ ತನ್ನ ತೋಟದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಹೇಳಿದರು.
ಅವರು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕ್ಷೇತ್ರ ವಿಟ್ಲದಲ್ಲಿ ಕಲ್ಲಿಕೋಟೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ವಿಜಯವಾಣಿ ಸಹಯೋಗದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಹಕಾರದಲ್ಲಿ ನಡೆದ ಅಡಿಕೆ ತಳಿಗಳು ಮತ್ತು ಅಡಿಕೆಯಲ್ಲಿ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಡಿಕೆ ಹಳದಿ ಎಲೆರೋಗ ಹಲವು ವರ್ಷಗಳಿಂದಲೇ ಇದೆ. ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಈಗ ಎಲೆಚುಕ್ಕಿ ರೋಗ ಕಂಗೆಡಿಸಿದೆ, ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿಕರಲ್ಲಿ ಆತ್ಮವಿಶವಾಸ ಮೂಡಿಸುವ ಕೆಲಸ ಆಗಬೇಕಿದೆ ಎಂದರು. ಕೃಷಿಕರು ವಿಜ್ಞಾನಿಗಳ ನಡುವಿನ ಸಂಬಂಧ ಗಟ್ಟಿಯಾಗಬೇಕು, ಈ ಮೂಲಕ ಕೃಷಿಯ ಅಭಿವೃದ್ಧಿ ಆಗಬೇಕು ಎಂದು ಶಂ ನಾ ಖಂಡಿಗೆ ಹೇಳಿದರು.
ಅಡಿಕೆ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಯಾವುದೇ ರೋಗಗಳಿಗೆ ದೀರ್ಘಕಾಲಿಕ ಪರಿಹಾರಗಳನ್ನು ನೀಡಲು ಅಧ್ಯಯನಗಳು ಅವಶ್ಯಕವಾಗಿದೆ. ಸಂಶೋಧನೆಯಲ್ಲಿ ಹಲವು ಸಮಸ್ಯೆಗಳಿದ್ದು, ಕೇಳಿದ ತಕ್ಷಣ ಪರಿಹಾರ ಸಿಕ್ಕಲು ಸಾಧ್ಯವಿಲ್ಲ. ಸಂಶೋಧಕ ಸಂಶೋಧನೆಯನ್ನು ಆಸಕ್ತಿಗಾಗಿ, ಒತ್ತಡದಿಂದ, ಪ್ರೇರಣೆಯಿಂದ, ಆಕರ್ಷಣೆಯಿಂದ ಮಾಡುತ್ತಿರುತ್ತಾರೆ ಎಂದರು.ವಿಜ್ಞಾನಿಗಳು ಸಾಧ್ಯವಾದಷ್ಟು ವೇಗದಲ್ಲಿ ಸಂಶೋಧನೆಯನ್ನು ಮಾಡುವ ಕಾರ್ಯವಾದಾಗ ಎಲ್ಲಾ ರೈತರು ಒಟ್ಟಿಗೆ ಸದಾ ಇರುತ್ತಾರೆ. ವಿಜ್ಞಾನಿಗಳಿಗೆ ಬೇಡಿಕೆ ಇದ್ದು, ಸಂಶೋಧನೆಯನ್ನು ರೈತರಿಗೆ ಹೆಚ್ಚು ಪೂರೈಕೆಯ ಮಾಡುವ ಕಾರ್ಯಾವಾಗಬೇಕು. ಅಡಕೆ, ತೆಂಗು, ಕೊಕ್ಕೋ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ, ಮೌಲ್ಯ ಹೆಚ್ಚಾಗುತ್ತದೆ. ದೂರದೃಷ್ಟಿಯ ಪರಿಹಾರವನ್ನು ಒದಗಿಸಿದಾಗ ಕೃಷಿಕರಿಗೆ ಒಳ್ಳೆಯ ಲಾಭ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ. ಬಿ. ಹೆಬ್ಬಾರ್ ವಹಿಸಿದ್ದರು.ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್. ವಾಗ್ಲೆ ಉಪಸ್ಥಿತರಿದ್ದರು.
ನಯನಾ ಪ್ರಾರ್ಥಿಸಿದರು. ಭಾರತೀಯ ಕೃಷಿ ಸಂಶೋಧನಾ ಪರಿಷತ್ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ ಮುಖ್ಯಸ್ಥ ಡಾ. ಎಂ. ಕೆ. ರಾಜೇಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಿರಿಯ ವಿಜ್ಞಾನಿ ಡಾ. ನಾಗರಾಜ ಎನ್. ಆರ್. ವಂದಿಸಿದರು. ತನುಜ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ತಾಂತ್ರಿಕ ಅಧಿಕಾರಿ ಶ್ಯಾಮ್ ಪ್ರಸಾದ್ ಕುಂಚಿನಡ್ಕ ಹಾಗೂ ಸಿಪಿಸಿಆರ್ ಐ ಸಿಬ್ಬಂದಿ ವರ್ಗ ಸಹಕರಿಸಿದರು.