ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಅಡಿಕೆ ಕೃಷಿಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೇ ತಿಂಗಳಲ್ಲಿ ಸುಮಾರು 2500 ಮಿಮೀ ಗಿಂತಲೂ ಅಧಿಕ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಗೆ ಅಡಿಕೆ ಕೊಳೆರೋಗ ಆರಂಭವಾಗಿದ್ದು, ಇದೀಗ ವ್ಯಾಪಕವಾಗಿದೆ. ಅಡಿಕೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾರ್ಷಿಕ ಬೆಳೆಯಾದ ಅಡಿಕೆಗೆ ಈ ಬಾರಿಯ ಮಳೆ ಹೊಡೆತ ನೀಡಿದೆ. 2018 ರಲ್ಲಿ ಉಂಟಾದ ಪರಿಸ್ಥಿತಿ ಬಹುತೇಕ ಕಡೆಗಳಲ್ಲಿ ಉಂಟಾಗಿದೆ. ಭಾರೀ ಮಳೆ, ನಿರಂತರವಾಗಿ ಸುರಿದ ಮಳೆಗೆ ಕೊಳೆರೋಗ ಆರಂಭವಾಗಿದೆ. ಎಡೆಬಿಡದೆ ಸುರಿದ ಮಳೆಯ ಕಾರಣದಿಂದ ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಣೆಗೆ ಸಾಧ್ಯವಾಗದೆ ಕೃಷಿಕರು ಸೋತು ಹೋದರು. ದೋಟಿ ಸಹಾಯದಿಂದ ಅನೇಕ ಕೃಷಿಕರು ಸಾಹಸ ಮಾಡಿದರೂ ಕೊಳೆರೋಗ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಮಲೆನಾಡು ಭಾಗದಲ್ಲಿ, ಸುಳ್ಯ, ಕಡಬ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ನಿರಂತರವಾದ ಭಾರೀ ಮಳೆಗೆ ವಾತಾವರಣದ ಉಷ್ಣತೆಯೂ ತೀವ್ರವಾಗಿ ಇಳಿಕೆಯಾಯಿತು. ಪರಿಣಾಮವಾಗಿ ಎಲ್ಲೆಡೆಯೂ ಕೊಳೆರೋಗ ಬಾಧಿಸಿದೆ. ಈಗ ರೋಗದಿಂದ ಅಡಿಕೆ ಬೀಳುತ್ತಿದೆ. ಫಸಲು ಅರ್ಧದಷ್ಟು ನಷ್ಟವಾಗಿದೆ. ಅಡಿಕೆ ಮರದ ಬುಡ ತುಂಬೆಲ್ಲಾ ಅಡಿಕೆ ರಾಶಿ ರಾಶಿ ಬಿದ್ದಿದೆ.
ದಕ್ಷಿಣ ಕನ್ನಡ ಸೇರಿದಂತೆ ಮಲೆನಾಡು ಭಾಗದಲ್ಲಿ ಅಡಿಕೆಗೆ ವ್ಯಾಪಕವಾಗಿ ಬಾಧಿಸಿದೆ ಕೊಳೆರೋಗ |
AdvertisementArecanut falling due to heavy rain and Koleroga. Farmers suffered crop loss.#arecanut #heavyrain #ಅಡಿಕೆ #ಕೊಳೆರೋಗ pic.twitter.com/8TEMfIko76
— theruralmirror (@ruralmirror) August 9, 2022
Advertisement
ಇದೀಗ ಮತ್ತೆ ಮಳೆಯ ಆತಂಕ ಎದುರಾಗಿದೆ. ಕೆಲವು ಕಡೆ ಮಳೆಯ ಕಾರಣದಿಂದ ಒಮ್ಮೆಯೂ ಔಷಧಿ ಸಿಂಪಡಣೆ ಸಾಧ್ಯವಾಗಲಿಲ್ಲ. ಇನ್ನಷ್ಟು ಮಳೆಯಾದರೆ ಅಡಿಕೆ ಬೆಳೆಗಾರರು ಈ ಬಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ವಿವಿಧ ಸಂಕಷ್ಟದಿಂದ ಬಳಲುತ್ತಿರುವ ಅಡಿಕೆ ಬೆಳೆಗಾರರಿಗೆ ಮಳೆಯೂ ಶಾಕ್ ನೀಡಿದೆ. ಧಾರಣೆ ಇದ್ದರೂ ಕೈಗೆ ಸಿಗದ ಪರಿಸ್ಥಿತಿಯಾಗಿದೆ.