ಅಡಿಕೆ ಬೆಳೆಗಾರರಿಗೆ ಈಗ ಶ್ರಮ ಉಳಿತಾಯದ ದಾರಿಗಳ ಅಗತ್ಯವಿದೆ. ಕಾರ್ಮಿಕರ ಕೊರತೆಯ ನಡುವೆ ತಾಂತ್ರಿಕತೆ ಹಾಗೂ ನೈಪುಣ್ಯಗಳೂ ಬೇಕಾಗಿದೆ. ಅಂತಹ ನೈಪುಣ್ಯಗಳಲ್ಲಿ ಒಂದು ಗೋಣಿ ಗೊನೆ. ಗೋಣಿ ಗೊನೆಯ ಪ್ರಾತ್ಯಕ್ಷಿಕೆ ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಕೌಶಲ್ಯ ಪಡೆ ತರಬೇತಿ ಸಂದರ್ಭ ನಡೆಯಿತು.
ಉತ್ತರ ಕನ್ನಡದ ಕೆಲವು ಭಾಗ ಹಾಗೂ ಶಿವಮೊಗ್ಗದ ಕೆಲವು ಕಡೆ ಅಡಿಕೆ ಕೊಯ್ಲು ಸಂದರ್ಭ ಗೋಣಿ ಗೊನೆಯ ಮೂಲಕ ಅಡಿಕೆ ಹಿಡಿಯುವ ಕೆಲಸ ಮಾಡಲಾಗುತ್ತದೆ. ಅಡಿಕೆ ಕೊಯ್ಲು ಮಾಡುವ ವೇಳೆ ವಿಶೇಷ ವಿನ್ಯಾಸ ಗೋಣಿಯಲ್ಲಿ ಕೊಯ್ಲು ಮಾಡುವ ಮರದ ಕೆಳ ಭಾಗಕ್ಕೆ ಎಸೆಯಲಾಗುತ್ತದೆ. ಈ ಸಮಯದಲ್ಲಿ ಅಡಿಕೆ ಗೊನೆಯು ಗೋಣಿಗೆ ಬೀಳುವ ಮೂಲಕ ಗೋಣಿಯಲ್ಲಿಯೇ ಅಡಿಕೆ ಉಳಿಯುತ್ತದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಶ್ರಮ ಉಳಿತಾಯವಾಗುತ್ತದೆ. ಅಡಿಕೆ ಹೆಕ್ಕುವ ಸಮಯ ಕಡಿಮೆಯಾಗುತ್ತದೆ ಎನ್ನುವುದು ಶಿವಮೊಗ್ಗದ ಮಲೆನಾಡು ಅಡಿಕೆ ಸಮುದಾಯ ಸಂಘಟನೆಯ ಸತ್ಯನಾರಾಯಣ ಕೂಳೂರು ಹೇಳುತ್ತಾರೆ.
ಇದೇ ಮಾದರಿಯಲ್ಲಿ ದೊಡ್ಡದಾದ ಬುಟ್ಟಿ ಮಾದರಿಯಲ್ಲಿಯೂ ಅಡಿಕೆ ಕೊಯ್ಲು ವೇಳೆ ಅಡಿಕೆಯನ್ನು ಹಿಡಿಯುವ ಕೆಲಸ ಮಾಡುತ್ತಾರೆ. ಇದರಿಂದಲೂ ಅಡಿಕೆ ಹೆಕ್ಕುವ ಶ್ರಮ ಕಡಿಮೆಯಾಗುತ್ತದೆ ಎನ್ನುವುದು ಈ ಮಾದರಿ ಬಳಕೆ ಮಾಡುವ ಕೃಷಿಕರ ಅಭಿಪ್ರಾಯ.
ಇದೆರಡೂ ಮಾದರಿಗಳಲ್ಲಿ ತಾಂತ್ರಿಕವಾದ ಮಾಹಿತಿ ಇರಬೇಕಾಗುತ್ತದೆ ಹಾಗೂ ಅಡಿಕೆ ಹಿಡಿಯುವ ಚಾಕಚಕ್ಯತೆಯೂ ಅಗತ್ಯವಾಗಿದೆ. ಆರಂಭದಲ್ಲಿ ಅಭ್ಯಾಸ ಮಾಡಿಕೊಂಡು ನಂತರ ಸಲೀಸಾಗಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ಸತ್ಯನಾರಾಯಣ ಅವರು ಹೇಳುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಅಡಿಕೆ ಬೆಳೆಯುವ ಹಲವು ಪ್ರದೇಶಗಳಲ್ಲಿ ಇಂದಿಗೂ ಅಡಿಕೆ ಎಳೆದು ಹಾಕಿದ ಬಳಿಕ ಹೆಕ್ಕುವ ಸಂಪ್ರದಾಯ ಇದೆ. ಇದರಿಂದ ಶ್ರಮ ಹೆಚ್ಚಾಗುತ್ತದೆ. ಇದಕ್ಕಾಗಿ ಈ ಮಾದರಿ ಬಳಕೆ ಮಾಡಿದರೆ ಅಡಿಕೆ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕೃಷಿಕರ ಈ ಅಭ್ಯಾಸ ಮಾಡುತ್ತಿದ್ದಾರೆ.