ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅಡಿಕೆಯ ವಿವಿಧ ಬಳಕೆಯ ಬಗ್ಗೆ ಈಗಾಗಲೇ ಹಲವು ಪ್ರಯತ್ನ ನಡೆಯುತ್ತಿದೆ. ಇದೀಗ ಅಡಿಕೆ ಸಿಪ್ಪೆಯ ಬಳಕೆಯಲ್ಲಿ ಇನ್ನೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
ಅಡಿಕೆ ಬೆಳೆಗಾರರು ಅಡಿಕೆಯ ಸುಲಿದ ನಂತರ ಸಿಪ್ಪೆಯನ್ನು ತ್ಯಾಜ್ಯವಾಗಿ ಬಳಕೆ ಮಾಡುತ್ತಾರೆ. ಅನೇಕರು ಬೆಂಕಿ ಹಾಕಿದರೆ, ಕೆಲವರು ಗೊಬ್ಬರವಾಗಿ ಬಳಕೆ ಮಾಡುತ್ತಾರೆ. ಗೊಬ್ಬರವಾಗಿ ಬಳಕೆ ಮಾಡುವಾಗಲೂ ಹಲವು ವಿಧಾನಗಳನ್ನು ಅನುಸರಿಸಬೇಕಿದೆ. ಅಡಿಕೆ ಸಿಪ್ಪೆಯನ್ನು ಸೊಳ್ಳೆ ನಿಯಂತ್ರಕ ಕಾಯಿಲ್ ಆಗಿಯೂ ಬಳಕೆ ಮಾಡುವ ಪ್ರಯತ್ನ ನಡೆದಿದೆ. ಇದೀಗ ಇನ್ನೂ ಒಂದು ಅಧ್ಯಯನ ನಡೆದಿದೆ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITK) ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಶಬ್ದ ನಿರೋಧಕ ಬೋರ್ಡ್ಗಳನ್ನು ರಚಿಸುವ ಮೂಲಕ ಶಬ್ದ ನಿರೋಧಕವಾಗಿ ಬಳಕೆ ಮಾಡಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅನಗತ್ಯ ಶಬ್ದವನ್ನು ನಿಯಂತ್ರಿಸಲು ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗುತ್ತದೆ. ಈಗ ಪ್ಲಾಸ್ಟಿಕ್ ವಸ್ತುಗಳನ್ನು, ಮಡಕೆ, ಬೋರ್ಡ್ ಇತ್ಯಾದಿಗಳ ಬಳಕೆ ಮಾಡಲಾಗುತ್ತದೆ. ಆದರೆ ಅಡಿಕೆಯ ಸಿಪ್ಪೆ ಪರಿಸರ ಸ್ನೇಹಿಯೂ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವರದಿ.
“ಶಬ್ದ ಫಲಕಗಳನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಜೈವಿಕ ಸಂಯೋಜನೆಯನ್ನಾಗಿ ಮಾಡಲು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ ತಂಡವು ಅಡಿಕೆ ಹೊಟ್ಟನ್ನು ಅನ್ವೇಷಿಸಲು ಪ್ರಾರಂಭಿಸಿತು. ಅದರಂತೆ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ” ಎಂದು ಜಯರಾಜ್ ಹೇಳಿದ್ದಾರೆ.