ಈಚೆಗೆ ವರದಿಯಾದ, ಭೂತಾನಿನಿಂದ 17,000 ಟನ್ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರಕಾರದ ನಿರ್ಣಯ ತುಂಬಾ ಕಳವಳಕಾರಿ.
ಪತ್ರಿಕಾ ವರದಿಗಳ ಪ್ರಕಾರ, ಈ ಹಿಂದೆ ಭಾರತ ಮಾಡಿಕೊಂಡ ಗರಿಷ್ಠ ಆಮದು 4,000 ಟನ್. ಈ ವರೆಗೆ ಆಮದು ಮಾಡಿಕೊಳ್ಳುವ ಅಡಿಕೆಗೆ ಕನಿಷ್ಠ ಆಮದು ಬೆಲೆ ( MIP, ಮಿನಿಮಮ್ ಇಂಪೋರ್ಟ್ ಪ್ರೈಸ್) ಕಿಲೋಗೆ ರೂ 251 ವಿಧಿಸಲಾಗುತ್ತಿತ್ತು. ಈಗ ಕೊಟ್ಟಿರುವ ಆಮದು ಅನುಮತಿಗೆ ಈ ಶರ್ತವೂ ಇಲ್ಲ!ಭೂತಾನಿನ ಒಟ್ಟು ಇಳುವರಿಯೇ 17,000 ಟನ್. ನೆರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಅದು ಈ ರಫ್ತನ್ನು ನಿರ್ವಹಿಸಬಹುದು ಅನ್ನಿ.
ನಮ್ಮ ದೇಶದಲ್ಲಿ 18 ಲಕ್ಷ ಎಕ್ರೆ ಅಡಿಕೆ ತೋಟವಿದೆ. 12 ಲಕ್ಷ ಟನ್ ಅಡಿಕೆ ಬೆಳೆಯುತ್ತಿದ್ದೇವೆ. ಇದು ಸುಮಾರು 5,400 ಕೋಟಿ ರೂಪಾಯಿ ಮೌಲ್ಯದ್ದು. ದೇಶದಲ್ಲಿ ಏಳು ಮಿಲಿಯನ್, ಅಂದರೆ ಎಂದರೆ 70 ಲಕ್ಷಕ್ಕೂ ಹೆಚ್ಚು ಅಡಿಕೆ ಕೃಷಿ ಕುಟುಂಬಗಳಿವೆ.ಅಡಿಕೆ ಕೃಷಿಯನ್ನೇ ನಂಬಿದವರು ಎರಡು ಕೋಟಿಗಿಂತ ಹೆಚ್ಚು ಮತ್ತು ಈ ಉದ್ದಿಮೆಯಿಂದಲೇ ಉಣ್ಣುವವರು ಆರು ಕೋಟಿ ಮಂದಿ ಇದ್ದಾರಂತೆ. ಇದಿಷ್ಟು ಪ್ರಕಟಿತ ಅಂಕಿ ಅಂಶ.
ಅವಲಂಬಿತ ಕುಟುಂಬಗಳನ್ನೂ ಸೇರಿಸಿದರೆ – ಈ ಬಗ್ಗೆ ಖಚಿತ ಅಂಕೆಸಂಖ್ಯೆ ಸಿಗುತ್ತಿಲ್ಲ – ಅಡಿಕೆಯ ಸಂಭಾವ್ಯ ಆರ್ಥಿಕ ಹೊಡೆತ ದೇಶದ ಕನಿಷ್ಠ ಎರಡು ಕೋಟಿ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಬಹುದು.
ನಿಜವಾಗಿ ಅಡಿಕೆಯ ಅನ್ನ ಉಣ್ಣುವ ಎರಡು ಕೋಟಿ ಕುಟುಂಬಗಳಿಂದು ಕರ್ನಾಟಕದಲ್ಲೇ ಇರಬಹುದು. 10 – 12 ಜಿಲ್ಲೆಗಳಲ್ಲಿ ಅಡಿಕೆಯದೇ ಆರ್ಥಿಕತೆ. 1999 ಮತ್ತು 80ರ ದಶಕದ ಮಧ್ಯೆ ಉಂಟಾದ ಅಡಿಕೆ ಮಾರುಕಟ್ಟೆ ಕುಸಿತದ ಕಾಲದ ನೆನಪು ಕೆಲವರಿಗಾದರೂ ಇರಬಹುದು. ಆಗ ಕಂಗಾಲಾದದ್ದು ಬರೇ ಅಡಿಕೆ ಬೆಳೆಗಾರರಲ್ಲ. ’ಅಡಿಕೆಗೆ ಸಂಬಂಧ ಇರದು’ ಎಂದುಕೊಳ್ಳುವ ರಿಬ್ಬನು, ಬಳೆ ಅಂಗಡಿಗಳೂ ಅಂದು ಕನಿಷ್ಠ ವ್ಯವಹಾರವೂ ಇಲ್ಲದೆ ಭಣಭಣ ಎಂದಿದ್ದುವು.
ಕರ್ನಾಟಕದ 31 ಜಿಲ್ಲೆಗಳಲ್ಲಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದೆಲ್ಲೆಡೆ ಅಡಿಕೆ ಬೆಳೆ ಇದೆ. ಅತಿವೃಷ್ಟಿ – ಅನಾವೃಷ್ಟಿಗಳನ್ನೂ ಸಹಿಸಿ ನಂಬಿದ ಬೆಳೆಗಾರರ ಕೈ ಹಿಯುತ್ತಾ ಬಂದ ಬೆಳೆ ಇದು. ಕೋವಿಡಿನ ಅತಿ ಸಂಕಷ್ಟ ಕಾಲದಲ್ಲೂ ಅಡಿಕೆ ತನ್ನ ಮಾರುಕಟ್ಟೆ ಬೆಲೆ ಕಾದುಕೊಂದು ರೈತರನ್ನು ಉಳಿಸಿದೆ.
ದೇಶದೆಲ್ಲೆಡೆ ಅಡಿಕೆ ಉತ್ಪಾದನೆ ಬಿರುಸಿನಿಂದ ಏರುಗತಿ ಕಾಣುತ್ತಿದೆ. ನಮ್ಮಲ್ಲಿನ ಬೇಡಿಕೆಗಿಂತ ಪೂರೈಕೆ ಕಡಿಮೆ ಇರುವ, ಕಡಿಮೆ ಆಗುವ ಯಾವುದೇ ಸೂಚನೆ – ವರದಿ ಬಂದಿಲ್ಲ. ಹೀಗಿದ್ದಾಗ ಇಷ್ಟು ದೊಡ್ಡ ಪ್ರಮಾಣದ ಅಡಿಕೆಯ ಆಮದಿನ ನಿರ್ಧಾರದ ಹಿಂದೆ ಹಲವು ಅನುಮಾನಗಳು ಏಳುತ್ತಿವೆ.
ಏನಿದ್ದರೂ, ಕೇಂದ್ರ ಸರ್ಕಾರದ ಈ ಆಮದಿನ ನಿರ್ಧಾರ ತೀರಾ ಖಂಡನಾರ್ಹ.ಸರ್ಕಾರ ಕಾಯಬೇಕಾದುದು ನಮ್ಮ ಬೆಳೆಗಾರರ ಹಿತಾಸಕ್ತಿಯನ್ನೇ ಅಥವಾ ವ್ಯಾಪಾರಿಗಳ ಲಾಭಾಸಕ್ತಿಯನ್ನೇ?.
ಒಂದು ಬದಿಯಿಂದ, ದಶಕಗಳಿಂದ ಅಡಿಕೆ ಬೆಳೆಯಲ್ಲಿ ನಾವು ಸ್ವಯಂಪರ್ಯಾಪ್ತತೆ ಸಾಧಿಸಿದ್ದೇವೆ ಎನ್ನುತ್ತವೆ ನಮ್ಮ ಸರ್ಕಾರ ಮತ್ತು ಇಲಾಖೆಗಳು. ಹೀಗಾಗಿ ಅಡಿಕೆ ಬೆಳೆಗೆ ಈಚೆಗೆ ಸಂಶೋಧನೆ ಮತ್ತು ಇತರ ಅಭಿವೃದ್ಧಿಗಳಿಗೆ ಹಣಕಾಸಿನ ನೆರವು ಸಿಗುತ್ತಿಲ್ಲ.
ಅಡಿಕೆ ಬೆಳೆಯ ವಿಸ್ತರಣೆಯನ್ನು ನಿರುತ್ತೇಜಿಸುವುದು ಸ್ವಾಗತಾರ್ಹ – ಭವಿಷ್ಯದ ದೃಷ್ಟಿಯಿಂದ ತುಂಬ ಅಗತ್ಯವೂ ಹೌದು. ಆದರೆ ಈಗಾಗಲೇ ದೇಶದಲ್ಲಿರುವ ಎರಡು ಕೋಟಿ ಅಡಿಕೆ ಅವಲಂಬಿತ ಕುಟುಂಬಗಳ ಸುಗಮ ಬದುಕಿನ ಬಗ್ಗೆ ಸರ್ಕಾರ ಚಿಂತಿಸಬೇಡವೇ?
ಇನ್ನಷ್ಟು ಬೆಳೆ ತೆಗೆಯುವುದಕ್ಕಲ್ಲ, ಈಗ ಇರುವ ಕೃಷಿಯನ್ನು ದೊಡ್ಡ ತಲೆನೋವಿಲ್ಲದೆ ಸುಸ್ಥಿರವಾಗಿ ಮುಂದುವರಿಸಲು ಬೇಕಾದ ಸಂಶೋಧನೆ (ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಸಂತ್ರಸ್ತರಿಗೆ ಫಲಿತಾಂಶ ನಿರ್ದೇಶಿತ ಪರಿಹಾರೋಪಾಯ ಯೋಜನೆ) , ಅಡಿಸ್ಥಾನ ಸೌಕರ್ಯಗಳಿಗೆ ಸಹಾಯ ನೀಡುವುದು ಸರ್ಕಾರದ ಜವಾಬ್ದಾರಿ.
ಅಡಿಕೆ ಬೆಳೆಗಾರರ ಕ್ಷೇಮ, ಸುಸ್ಥಿರತೆಯ ಬಗ್ಗೆ ಕೆಲಸ ಮಾಡಬೇಕಾದ ಸರ್ಕಾರ ಅದಕ್ಕೆ ಬದಲಾಗಿ ಈ ಬಹುದೊಡ್ಡ ಮಾರಕ ನಿರ್ಧಾರ ತೆಗೆದುಕೊಂಡಿರುವುದನ್ನು ಬೆಳೆಗಾರರು ಮತ್ತು ನಮ್ಮ ಎಲ್ಲಾ ಸಂಸ್ಥೆಗಳು ಈಗಿಂದೀಗಲೇ ವಿರೋಧಿಸಿ ಸರ್ಕಾರಕ್ಕೆ ತಕ್ಷಣ ಈ ವಿರೋಧ ತಲಪುವಂತೆ ಮಾಡಬೇಕಾಗಿದೆ.
ನಮ್ಮ ಕ್ಯಾಂಪ್ಕೋ, ಮ್ಯಾಮ್ಕೋಸ್, ಟೀಯೆಸ್ಸೆಸ್, ಆಪ್ಸ್ ಕೋಸ್, ತುಂಕೋಸ್, ಅಡಿಕೆ ಮಾರಾಟ ಮಹಾಮಂಡಲ, ಅರೆಕಾ ಟಾಸ್ಕ್ ಫೋರ್ಸ್ ಮತ್ತಿತರ ಸಂಸ್ಥೆಗಳು , ಇಂದು ತುಂಬಾ ವಿಶಾಲವಾಗಿರುವ ಅಡಿಕೆ ಪ್ರದೇಶದ ಶಾಸಕ, ಸಂಸದರು ಈಗಿಂದೀಗಲೇ ಕಾರ್ಯಪ್ರವೃತ್ತರಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅಡಿಕೆ ಸೋತರೆ ಇಡಿಗಿಡೀ ಸೋಲುವ ಏಕೈಕ ರಾಜ್ಯ ಕರ್ನಾಟಕ.ಈಗ ಮೌನವನ್ನು ಆಯ್ದರೆ, ಆ ಮೌನ ಅಡಿಕೆ ಸಮುದಾಯಕ್ಕೆ ಸರಿಪಡಿಸಲಾಗದ ಆರ್ಥಿಕ ಕುತ್ತು ತರುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…