ಅಡಿಕೆ ಆಮದು | ಸದ್ಯ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಇಲ್ಲ | ಅಡಿಕೆ ಬೆಳೆಗಾರರಿಗೆ ಆತಂಕ ಇರುವುದಕ್ಕೆ ಕಾರಣ ಏನು ? |

October 1, 2022
8:08 PM

ಭೂತಾನ್‌ ದೇಶದಿಂದ 17000 ಟನ್‌ ಹಸಿ ಅಡಿಕೆ ಯಾವುದೇ ಷರತ್ತು  ಇಲ್ಲದೆಯೇ ಆಮದಿಗೆ ಭಾರತ ಅವಕಾಶ ನೀಡಿದೆ. ಇದರಿಂದ ಭಾರತದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಚರ್ಚೆ ಆರಂಭವಾಗಿದೆ. ಅಡಿಕೆ ಬೆಳೆಗಾರರ ನಡುವೆ ಚರ್ಚೆ, ಆತಂಕ ವ್ಯಕ್ತವಾಗಿದೆ. ಹಾಗಿದ್ದರೂ ಜನಪ್ರತಿನಿಧಿಗಳು, ಅಡಿಕೆ ಪರವಾದ ಸಂಸ್ಥೆಗಳು ಆಮದು ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಅಡಿಕೆ ಧಾರಣೆ ಮೇಲೆ ಯಾವುದೇ ಪರಿಣಾಮ ಇಲ್ಲ. ಆದರೆ ದೂರಗಾಮಿ ಪರಿಣಾಮದ ಬಗ್ಗೆ ಇದುವರೆಗೂ ಯಾವುದೇ ಜನಪ್ರತಿನಿಧಿಗಳು, ಸಂಸ್ಥೆಗಳು ಧ್ವನಿ ಎತ್ತಿಲ್ಲ.

Advertisement
Advertisement
Advertisement

ಭೂತಾನ್‌ ನಿಂದ ಒಂದು ವರ್ಷದ ಅವಧಿಗೆ ಅಡಿಕೆ ಆಮದು ಆಗುತ್ತದೆ. ಅದು 17000 ಟನ್‌ ಹಸಿ ಅಡಿಕೆ. ಅಂದರೆ ಭಾರತದಲ್ಲಿ ಬೆಳೆಯುವ ಅಡಿಕೆಯ ಅತೀ ಸಣ್ಣ ಪಾಲು ಆಮದು ಆಗುತ್ತದೆ. ಇಡೀ ಪ್ರಪಂಚದಲ್ಲಿ ಅಡಿಕೆಯ ಅತಿ ದೊಡ್ಡ ಉತ್ಪಾದಕ ಭಾರತ. ಅದರಲ್ಲೂ ಕರ್ನಾಟಕ ಅತೀ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶ. ಉಳಿದಂತೆ ಬಾಂಗ್ಲಾದೇಶ, ಇಂಡೋನೇಷ್ಯಾ, ಮ್ಯಾನ್ಮಾರ್, ಚೀನಾ, ಮಲೇಷ್ಯಾ ಮತ್ತು ಥೈಲ್ಯಾಂಡ್ ಅಡಿಕೆ ಬೆಳೆಯುವ ಇತರ ಪ್ರಮುಖ ದೇಶಗಳು. ಭೂತಾನ್‌ ಅತೀ ಸಣ್ಣ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತದೆ. ಆ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಈ ಹಿಂದಿನ ಒಪ್ಪಂದದ ಪ್ರಕಾರ ಅಡಿಕೆ ಆಮದಿಗೆ ಅವಕಾಶ ನೀಡಲಾಗಿದೆ. ಇದು ಒಂದು ವರ್ಷದ ಅವಧಿಗೆ ಎನ್ನುವುದು  ಈಗಿನ ಹೇಳಿಕೆಗಳು.

Advertisement

ಭಾರತದಲ್ಲಿ ಸುಮಾರು 10 ರಿಂದ 12 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ಸುಮಾರು 9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ ಎನ್ನುವುದು  ಅಂದಾಜು ಲೆಕ್ಕ. ದೇಶದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಇದ್ದಾರೆ. ಇದರಲ್ಲಿ  ಕರ್ನಾಟಕದ ಅಡಿಕೆ ಉತ್ಪಾದನೆಯೇ ಅಧಿಕವಾಗಿದೆ. ಶೇ.50 ರಷ್ಟು ಅಡಿಕೆ ಉತ್ಪಾದನೆ ಕೇರಳ ಹಾಗೂ ಕರ್ನಾಟಕದಿಂದಲೇ ಆಗುತ್ತದೆ. ಉಳಿದಂತೆ ಅಸ್ಸಾಂ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಇಲಾಖೆಗಳ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32,582 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ವಾರ್ಷಿಕ 33,155 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಇತರ ಅಂದಾಜು ಲೆಕ್ಕಾಚಾರದಂತೆ ಇದು  ದ್ವಿಗುಣವಾಗಿದೆ.

ಇಷ್ಟೆಲ್ಲಾ ಅಡಿಕೆ ಹೆಚ್ಚು ಬಳಕೆಯಾಗುವುದು ದೇಶದಲ್ಲಿನ ಪಾನ್‌ ಬೀಡಾ ಅಂಗಡಿಗಳಿಗೆ ಹಾಗೂ  ಗುಟ್ಕಾ ಉದ್ಯಮಗಳಿಗೆ. ದೇಶಾದ್ಯಂತ ಸುಮಾರು 13 ಮಿಲಿಯನ್ ಪಾನ್ ವಾಲಾಗಳು ಅಡಿಕೆ ಮತ್ತುಅಡಿಕೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯವನ್ನು ಮಾಡುತ್ತಿದ್ದಾರೆ. ಸದ್ಯ ಸುಮಾರು 2 ಲಕ್ಷ ಟನ್‌ ಅಡಿಕೆ ಕೊರತೆ ಇರುವುದರಿಂದ ಕರ್ನಾಟದಲ್ಲಿ ಅಡಿಕೆ ಧಾರಣೆ ಏರಿಕೆಯಲ್ಲಿದೆ. ಉತ್ತಮವಾಗಿದೆ. ಹಾಗಿದ್ದರೂ ಈಗಾಗಲೇ ಕಳ್ಳ ದಾರಿಯ ಮೂಲಕ ಭಾರತಕ್ಕೆ ಗುಣಮಟ್ಟ ಇಲ್ಲದ ಅಡಿಕೆ ರವಾನೆಯಾಗುತ್ತಿದೆ. ಆಗಾಗ ಅಧಿಕಾರಿಗಳು ಅಡಿಕೆಯನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ಕಳ್ಳ ದಾರಿಯ ಮೂಲಕ ಬರುವ ಅಡಿಕೆಯನ್ನು ಭಾರತದ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಇಂತಹ ಕಳಪೆ ಗುಣಮಟ್ಟದ ಚಾಲಿ ಅಡಿಕೆ ಕಾಸರಗೋಡು, ಪುತ್ತೂರು ಕಡೆಗೂ  ಆಗಮಿಸಿ ಇಲ್ಲಿನ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿತ್ತು.

Advertisement

ಈಗ ಅಡಿಕೆ ಬೆಳೆ ವಿಸ್ತರಣೆಯೂ ಅದೇ ವೇಗದಲ್ಲಿ ನಡೆಯುತ್ತಿದೆ.ಪರಂಪರಾಗತವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಪ್ರದೇಶದಿಂದಲೂ ದಾಟಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಅಡಿಕೆ ವಿಸ್ತರಣೆಯಾಗುತ್ತಿದೆ. ಈಗ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಇನ್ನೆರಡು ವರ್ಷಗಳಲ್ಲಿ ಅಡಿಕೆ ಫಸಲು ಆರಂಭವಾಗುತ್ತದೆ.  ಪರಂಪರಾಗತವಾಗಿ ಅಡಿಕೆ ಬೆಳೆಯುವ ಪ್ರದೇಶದ ಅಡಿಕೆಯ ಮಾದರಿಯ ಗುಣಮಟ್ಟ ಬಾರದೇ ಇರಬಹುದು. ಆದರೆ ಆಮದಾಗುವ ಅಡಿಕೆಯ ಗುಣಮಟ್ಟ ಲಭ್ಯವಾಗಲು ಸಾಧ್ಯವಿದೆ. ಇಂತಹ ಅಡಿಕೆಯನ್ನು ಈ ಹಿಂದೆಯೂ ಗುಣಮಟ್ಟದ ಅಡಿಕೆಯ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿತ್ತು. ಆಗ ಭಾರತದಲ್ಲಿ ಕೊರತೆ ಇರುವ ಸುಮಾರು 2-3 ಲಕ್ಷ ಟನ್‌ ಅಡಿಕೆಯ ಕೊರತೆ ನೀಗುತ್ತದೆ. ಈ ಸಮಯದಲ್ಲಿ ಆಮದು ಅಡಿಕೆಯ ಪರಿಣಾಮ ಇನ್ನಷ್ಟು ಗಂಭೀರವಾಗಿ ಕೃಷಿಕರ ಮೇಲೆ ಬೀಳುತ್ತದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಆತಂಕ ಇದೆ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಭವಿಷ್ಯದಲ್ಲಿ ಅಡಿಕೆ ಬೆಳೆಗಾರರ ಮೇಲೆ ಬೀಳಬಹುದಾದ ಪರಿಣಾಮಗಳ ಬಗ್ಗೆ ಮಾತನಾಡಿಲ್ಲ.

ಅಷ್ಟೇ ಅಲ್ಲ, ಈಗಾಗಲೇ ಅಡಿಕೆ ಆಮದು ಕಳ್ಳ ದಾರಿಯ ಮೂಲಕ ಭಾರತ ಪ್ರವೇಶ ಮಾಡುತ್ತಿದೆ. ಎಲ್ಲಾ ಬಿಗಿಭದ್ರತೆಗಳ ನಡುವೆಯೂ ಅಡಿಕೆ ಆಮದು ಸಾಧ್ಯವಾಗುತ್ತದೆ. ಈಗ ಭೂತಾನ್‌ ದೇಶದಿಂದ 17000 ಟನ್‌ ಅಡಿಕೆ ಆಮದು ಆಗಬಹುದಾದರೂ ಅದಕ್ಕೆ ಅಗತ್ಯ ಇರುವ ಎಲ್ಲಾ ಮಿತಿಗಳನ್ನು ಅಳವಡಿಕೆ ಮಾಡಿದರೂ ಭಾರತದಂತಹ ದೇಶದಲ್ಲಿ, ಭ್ರಷ್ಟಾಚಾರವೇ ತುಂಬಿರುವ ವ್ಯವಸ್ಥೆ ಒಳಗೆ ಇಷ್ಟೇ ಅಡಿಕೆ ಆಮದು ಸಾಧ್ಯವೇ ? ಒಂದೇ ಪರ್ಮೀಟ್‌ನಲ್ಲಿ 10 ಲೋಡ್‌ ಸಾಗಿಸುವ ಭಾರತದಂತಹ ವ್ಯವಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ವಂಚನೆಗಳು ನಡೆಯುತ್ತದೆ.

Advertisement

ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕೊಕೋ ಬೀನ್ಸ್‌ ಪ್ರಕರಣವೂ ಇದೇ ವೇಳೆ ನೆನಪಿಸಿಕೊಂಡರೆ ಅಡಿಕೆ ಆಮದು ಇಷ್ಟೇ ದೊಡ್ಡ ರೀತಿಯಲ್ಲಿ ವ್ಯವಹಾರ ನಡೆಸಲು ಸಾಧ್ಯವಿದೆ. ಅಡಿಕೆ ಕೂಡಾ ಇಂದು ಕೋಟಿ ವ್ಯವಹಾರವನ್ನು ಹೊಂದಿದೆ. ಆಮದು ಮಾಡುವ ದೇಶದಲ್ಲಿ ಕೊಕೋ ಬೆಳೆಯದೇ ಇದ್ದರೂ ಕೊಕೋ ಆಮದು ಸಾಧ್ಯವಾಗುತ್ತದೆ ಎಂದಾದರೆ ಕಡಿಮೆ ಅಡಿಕೆ ಬೆಳೆಯುವ ಭೂತಾನ್‌ ದೇಶದಿಂದಲೂ ಆ ದೇಶದ ಆರ್ಥಿಕ ವಹಿವಾಟು ವೃದ್ಧಿಯ ಕಾರಣದಿಂದ ಹೆಚ್ಚು ಪ್ರಮಾಣದ ಅಡಿಕೆ ಆಮದು ಮಾಡುವುದಿಲ್ಲ ಎನ್ನುವುದರ ಬಗ್ಗೆ ಜನಪ್ರತಿನಿಧಿಗಳ ಅಧಿಕೃತವಾಗಿ ಹೇಳಬಹುದೇ ? ಈ ಕಾರಣದಿಂದ ಅಡಿಕೆ ಬೆಳೆಗಾರರಿಗೆ ಭವಿಷ್ಯದ ಬಗ್ಗೆ ಆತಂಕ.

ಈ ಹಿಂದೆ ಮುಕ್ತ ಆಮದು ನೀತಿಯ ಪ್ರಕಾರ ನೇಪಾಳದಿಂದ ಭಾರತಕ್ಕೆ ಅಡಿಕೆ ಆಮದು ಆಗುತ್ತಿತ್ತು. ಆದರೆ ನೇಪಾಳದಲ್ಲಿ ಬೆಳೆಯುವ ಅಡಿಕೆ ಅತೀ ಸಣ್ಣ ಪ್ರಮಾಣ. ಹಾಗಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ನೇಪಾಳದ ಮೂಲಕ ಭಾರತಕ್ಕೆ ಆಗಮಿಸುತ್ತಿತ್ತು. ನೇಪಾಳಕ್ಕೆ ಬೇರೆ ದೇಶದಿಂದ ಅಡಿಕೆ ಆಮದು ಆಗಿ ಅಲ್ಲಿಂದ ಭಾರತಕ್ಕೆ ಅಡಿಕೆ ರಪ್ತು ಮಾಡಲಾಗುತ್ತಿತ್ತು. ಅದಕ್ಕೆ ಕಾರಣ ಮುಕ್ತ ಆಮದು ನೀತಿ. ಕೊನೆಗೆ ನೇಪಾಳ ಸರ್ಕಾರಕ್ಕೆ ಇದರಿಂದ ಯಾವುದೇ ಆದಾಯ ಇಲ್ಲದ ಕಾರಣದಿಂದ ನೇಪಾಳ ಸರ್ಕಾರವು ಅಡಿಕೆ ಆಮದು ಸುಂಕ ವಿಧಿಸಿತು. ಹೀಗಾಗಿ ಅಡಿಕೆ ಭಾರತದ ಪ್ರವೇಶಕ್ಕೆ ತಡೆಯಾಯಿತು. ಈಗ ಭೂತಾನ್‌ ಆಮದು ಅವಕಾಶವೂ ಅದೇ ಮಾದರಿಯ ಇನ್ನೊಂದು ಅವಕಾಶ ಆಗಬಹುದೇ ಎಂಬ ಆತಂಕ ಇಲ್ಲಿನ ಅಡಿಕೆ ಬೆಳೆಗಾರರಿಗೆ. ಈ ಬಗ್ಗೆಯೂ ಅಧಿಕೃತವಾಗಿ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ.

Advertisement

ಭೂತಾನ್‌ ದೇಶದಿಂದ ಕೇವಲ ಒಂದು ವರ್ಷಕ್ಕೆ ಮಾತ್ರವೇ ಅಡಿಕೆ ಆಮದು ಎನ್ನುವ ನಿಯಮ ರೂಪಿಸಲಾಗಿದೆ ಎಂಬುದು ಈಗ ನಂಬಿಕೆ. ಅದರಲ್ಲೂ ಭಾರತಕ್ಕೆ ಭೂತಾನ್‌ ನಿಂದ ಹಸಿ ಅಡಿಕೆ ಆಮದಿಗೆ ಅವಕಾಶ ನೀಡಲಾಗಿದೆ. ಈ ಹಸಿ ಅಡಿಕೆ ಎನ್ನುವುದೇ ವಂಚನೆಯ ಇನ್ನೊಂದು ಮುಖ ಎನ್ನುವುದು  ಬೆಳೆಗಾರರಿಗೆ ಆತಂಕ. ಹಸಿ ಅಡಿಕೆ ಭಾರತದಲ್ಲಿ ನೇರವಾಗಿ ಬಳಕೆ ತೀರಾ ಕಡಿಮೆ. ಈಚೆಗೆ ಚೀನಾಕ್ಕೆ ಹಸಿ ಅಡಿಕೆಯ ಚೊಗರಿನಿಂದ , ಅಡಿಕೆಯಿಂದ ತಯಾರಿಸಬಹುದಾದ ಎಲ್ಲಾ ಉತ್ಪನ್ನಗಳು ದುಬಾರಿ ಎಂದು ಚೀನಾದಿಂದಲೇ ವರದಿಯಾದ ಮೇಲೆ ಭಾರತಕ್ಕೆ ಭೂತಾನ್‌ನಿಂದ ಹಸಿ ಅಡಿಕೆ ಆಮದಾಗಿ ಅದರಿಂದ ನಡೆಸುವ ಸಂಸ್ಕರಣೆಗೆ ತಗಲುವ ವೆಚ್ಚ ಇನ್ನಷ್ಟು ದುಬಾರಿಯಾದರೂ ಹಸಿ ಅಡಿಕೆ ಎನ್ನುವ ನಿಯಮ ಜಾರಿಯಾದೀತೇ ? ಏಕೆಂದರೆ ಭಾರತದೊಳಗೆ ಅಡಿಕೆ ಸಾಗಾಟದ ಸಂದರ್ಭವೂ ಪಠೋರಾ ಅಡಿಕೆಯೇ ನಿಜವಾದ ಅಡಿಕೆ ಎಂದು ಸಾಗಾಟವಾಗುತ್ತದೆ, ತೆರಿಗೆ ಧಾರಣೆಯಲ್ಲೂ ಕಡಿಮೆ ಇರುವ ಬಗ್ಗೆ ಈಗಾಗಲೇ ಆರೋಪಗಳು ಇವೆ. ಆಗಾಗ ತೆರಿಗೆ ಇಲಾಖೆಯ ಕೇಸು, ಪ್ರಕರಣ ಈಗಾಗಲೇ ಬೆಳಕಿಗೆ ಬಂದಿವೆ. ಹೀಗಿರುವಾಗ ಹಸಿ ಅಡಿಕೆ ಭಾರತಕ್ಕೆ ಏಕೆ ಎನ್ನುವ ಬಗ್ಗೆಯೂ ಜನಪ್ರತಿನಿಧಿಗಳು ಮಾತನಾಡಿಲ್ಲ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಆತಂಕ.

ಅಡಿಕೆ ಆಮದು ಕಾರಣದಿಂದ ಭವಿಷ್ಯದ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಇದ್ದರೂ, ಸದ್ಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಇಲ್ಲ ಎಂಬ ಧೈರ್ಯ ಇದೆ. ಏಕೆಂದರೆ ಅಡಿಕೆ ಬೆಳೆಗಾರರ ಸಹಕಾರಿ ಸಂಘಗಳು ಅಡಿಕೆ ಧಾರಣೆ ಈಗ ಇಳಿಕೆ ಮಾಡದರೆ ಬೆಳೆಗಾರರ ಪರವಾಗಿ ನಿಲ್ಲುತ್ತವೆ. ಇದೇ ಸಮಯದಲ್ಲಿ ಕೊಂಚ ಧಾರಣೆ ಏರಿಕೆಯ ಮೂಲಕವೂ ಅಡಿಕೆ ಬೆಳೆಗಾರರಿಗೆ ಮಾನಸಿಕ ಧೈರ್ಯವನ್ನು ನೀಡಬಹುದು. ಆಮದು ಅಡಿಕೆ ಸದ್ಯ ಅಡಿಕೆ ಮಾರುಕಟ್ಟೆ ಮೇಲೆ ಯಾವ ಪರಿಣಾಮವೂ ಇರದು. ಇದೇ ಕಾರಣವೊಡ್ಡ ಅಡಿಕೆ ಧಾರಣೆ ಮೇಲೆ ಕೆಲವರು ಹಿಡಿತ ಸಾಧಿಸಲೂಬಹುದು. ಆದರೆ ಅಡಿಕೆ ಧಾರಣೆ ಸದ್ಯ ಇಳಿಕೆಗೆ ಯಾವ ಕಾರಣಗಳೂ ಇಲ್ಲ. ಹೀಗಾಗಿ ಅಡಿಕೆ ಬೆಳೆಗಾರರ ಮಾನಸಿಕ ಧೈರ್ಯ.

Advertisement

ಮೂಲಗಳ  ಪ್ರಕಾರ, ಕರ್ನಾಟಕದ 13  ಗುಟ್ಕಾ ಉದ್ಯಮವು ಸೇರಿದಂತೆ ವಿವಿಧ ಉದ್ಯಮಗಳು 1000 ಕೋಟಿ ರಫ್ತು ಮಾರುಕಟ್ಟೆಯಾಗಿದೆ. ದೇಶದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಇದ್ದಾರೆ. ಈಗ  ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಅಡಿಕೆ ಬೆಳೆಗಾರರಲ್ಲಿ ತಲ್ಲಣ ಮೂಡಿಸುತ್ತವೆ.

ಅಡಿಕೆ ಮಾರುಕಟ್ಟೆ ಮೇಲೆ, ಅಡಿಕೆ ಆಮದು ಬಗ್ಗೆ ಇಷ್ಟೆಲ್ಲಾ ಚರ್ಚೆಗಳು ನಡೆಯುವ ವೇಳೆ, ದೇಶದಲ್ಲಿ ಅಡಿಕೆಯ ಕಾರಣದಿಂದಲೇ ಸಾಕಷ್ಟು ತೆರಿಗೆಯೂ ಸಂಗ್ರಹವಾಗುತ್ತಿರುವ ವೇಳೆ  ಅಡಿಕೆ ಬೆಳೆಗಾರರು ಕಳೆದ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಡಿಕೆ ಹಳದಿ ಎಲೆರೋಗ ವ್ಯಾಪಕವಾಗಿ ಹರಡುತ್ತಿದೆ. ಆದರೆ ಅಡಿಕೆ ಹಾನಿಕಾರಕ ಎಂಬ ಕಾರಣವೊಂದನ್ನು ಮುಂದಿಟ್ಟು ಕೇಂದ್ರ ಸರ್ಕಾರದಿಂದ ಅಡಿಕೆ ಬಗ್ಗೆ ಸಂಶೋಧನೆಗೆ ಯಾವುದೇ ಅನುದಾನಗಳು, ಮಹತ್ವವನ್ನೂ ಸರ್ಕಾರ ನೀಡುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಧ್ವನಿ ಎತ್ತಲು ಯಾರೂ ಮನಸ್ಸು ಮಾಡುತ್ತಿಲ್ಲ ಏಕೆ ಎನ್ನುವುದು  ಅಡಿಕೆ ಬೆಳೆಗಾರರ ಪ್ರಶ್ನೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕಾಳು ಮೆಣಸಿನಲ್ಲಿ ಕಟಾವಿನ ನಂತರ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮಗಳು ಏನು..?
March 19, 2024
11:29 AM
by: The Rural Mirror ಸುದ್ದಿಜಾಲ
Karnataka Weather | 19-03-2024 | ಇಂದಿಲ್ಲ‌ ಮಳೆಯ ಸೂಚನೆ | ಮಾ.21-23 ಮಳೆಯ ಸೂಚನೆ |
March 19, 2024
11:18 AM
by: ಸಾಯಿಶೇಖರ್ ಕರಿಕಳ
ಟ್ರೋಫಿ ಗೆದ್ದ RCB ಮಹಿಳಾ ತಂಡಕ್ಕೆ ಕೋಟಿ ಕೋಟಿ ಬಹುಮಾನ : ಆರ್‌ಸಿಬಿ ಮಹಿಳಾ ಮಣಿಗಳು ದೋಚಿದ ಬಹುಮಾನದ ಮೊತ್ತ ಎಷ್ಟು?
March 19, 2024
11:00 AM
by: The Rural Mirror ಸುದ್ದಿಜಾಲ
ಮಹಿಳೆಯರಿಗೆ ಶಕ್ತಿ ನೀಡಿದ ಶಕ್ತಿ ಯೋಜನೆ : ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರೆಷ್ಟು? : ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆಯಾ..?
March 19, 2024
10:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror