“ಈ ಬಾರಿ ಉತ್ತಮ ಫಸಲು ಇತ್ತು, ಆದರೆ ಏನು ಮಾಡೋಣ, ಕೊಳೆರೋಗದಿಂದ ನಷ್ಟವಾಯಿತು” ಎಂದು ಹಲವು ಅಡಿಕೆ ಬೆಳೆಗಾರರು ಹೇಳುತ್ತಾರೆ. ಇಂತಹ ಇಳುವರಿ ಪಡೆಯಲು ಕೃಷಿಕರ ಇಡೀ ವರ್ಷದ ಶ್ರಮ ಇದೆ. ಪ್ರತೀ ತಿಂಗಳ ಆರೈಕೆ ಇದೆ. ಹೀಗಾಗಿ ಅಡಿಕೆ ಬೆಳೆ ಕೊಳೆರೋಗದಿಂದ ನಷ್ಟವಾಗಿರುವುದು ಬೇಸರ ತರಿಸಿದೆ.
ಹಾಗಿದ್ದರೆ, ಬೆಳೆಗಾರರ ಪೂರ್ವತಯಾರಿ ಹೇಗಿತ್ತು. ಉತ್ತಮ ಇಳುವರಿಗಾಗಿ ಬೇಸಗೆಯಲ್ಲಿ ಹಿಂಗಾರಕ್ಕೆ ಔಷಧಿ ಸಿಂಪಡಣೆ, ಸೂಕ್ತ ಕಾಲಕ್ಕೆ ಗೊಬ್ಬರ , ನಿರ್ವಹಣೆ ಇದೆಲ್ಲಾ ಅಗತ್ಯ ಇದೆ. ಇದೆಲ್ಲಾ ಮಾಡಿಯೂ ಮಳೆಯು ಎಲ್ಲವನ್ನೂ ನುಂಗಿತು. ಈ ಬಾರಿ ಬೇಸಗೆಯಲ್ಲಿ ಅಡಿಕೆ ನಳ್ಳಿಗೆ ಔಷಧಿ ಸಿಂಪಡಣೆ ಮಾಡಿದ್ದೀರಾ ಎಂದು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಅದರಲ್ಲಿ ಶೇ.49.8 ಕೃಷಿಕರು ಬೇಸಗೆಯಲ್ಲಿ ಅಡಿಕೆ ಹಿಂಗಾರಕ್ಕೆ, ನಳ್ಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಶೇ.50.2 ರಷ್ಟು ಕೃಷಿಕರು ಸಿಂಪಡಣೆ ಮಾಡಲಿಲ್ಲ. ಅಂದರೆ ಶೇ.50 ರಷ್ಟು ಕೃಷಿಕರು ಬೇಸಗೆಯಲ್ಲಿ ಔಷಧಿ ಸಿಂಪಡಣೆಯ ಬಗ್ಗೆ ಆಸಕ್ತರಾಗಿದ್ದರು. ಸಿಂಪಡಣೆಯೂ ಮಾಡಿದರು. ಆದರೆ, ಮಳೆಯ ಕಾರಣದಿಂದ ಫಸಲು ನಷ್ಟವಾಯಿತು. ಇದರಿಂದಾಗಿ ಕೃಷಿಕರಿಗೆ ಎರಡು ನಷ್ಟ. ಬೆಳೆಯೂ ನಷ್ಟ, ಬೇಸಗೆಯಲ್ಲಿ ಸಿಂಪಡಿಸಿದ್ದ ಔಷಧಿಯೂ ನಷ್ಟ..!. ಇಡೀ ವರ್ಷದ ಆದಾಯಕ್ಕೂ ಹೊಡೆತ. ಈ ಬಾರಿ ಕೆಲವು ಅಡಿಕೆ ಬೆಳೆಗಾರರು ಡಿಸೆಂಬರ್ ತಿಂಗಳಿನಿಂದ ತಿಂಗಳಿಗೊಮ್ಮೆವಿವಿಧ ಬಗೆಯ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಮೇ ಅಂತ್ಯದಿಂದ ಬೋರ್ಡೋ ಅಥವಾ ಕೊಳೆರೋಗ ನಿಯಂತ್ರಣದ ಔಷಧಿ ಸಿಂಪಡಣೆ ಮಾಡಿದ್ದರು. ಆದರೂ ಇಳುವರಿ ಕೈಗೆ ಸಿಗಲಿಲ್ಲ.
ಸಿಂಪಡಣೆ ಅಷ್ಟೇ ಅಲ್ಲ. ಗೊಬ್ಬರ ನೀಡಿರುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅನೇಕ ಕೃಷಿಕರು ಸೂಕ್ತ ಕಾಲಕ್ಕೆ ಗೊಬ್ಬರವನ್ನೂ ನೀಡಿದ್ದರು. ಶೇ.51.7 ರಷ್ಟು ಕೃಷಿಕರು ಒಂದು ಬಾರಿ ಗೊಬ್ಬರ ನೀಡಿದ್ದಾರೆ. ಶೇ.30.3 ರಷ್ಟು ಕೃಷಿಕರು ಎರಡು ಬಾರಿ ಗೊಬ್ಬರ ನೀಡಿದ್ದಾರೆ, ಶೇ.7.7 ಕೃಷಿಕರು ಮೂರು ಬಾರಿ ಗೊಬ್ಬರ ನೀಡಿದ್ದರೆ, ಶೇ.10.2 ರಷ್ಟು ಕೃಷಿಕರು ಗೊಬ್ಬರ ನೀಡಲಿಲ್ಲ ಎಂದು ಹೇಳಿದ್ದಾರೆ. ಈಚೆಗೆ ಕೆಲವು ಕೃಷಿಕರು ಪ್ರತೀ ತಿಂಗಳು ಗೊಬ್ಬರ ನೀಡುವ ಬಗ್ಗೆಯೂ ಯೋಚನೆ ನಡೆಸುತ್ತಿದ್ದಾರೆ. ಕೃಷಿ ಪದ್ಧತಿಯಲ್ಲಿ ಅಂದರೆ, ಗೊಬ್ಬರ ನೀಡುವುದರಲ್ಲಿ ಶೇ. 50 ರಷ್ಟು ಕೃಷಿಕರು ಪದ್ಧತಿಯನ್ನು ಬದಲಾಯಿಸಿಕೊಂಡಿರುವುದು ಇಲ್ಲಿ ತಿಳಿಯುತ್ತಿದೆ.
ಕೊಳೆರೋಗ ನಿಯಂತ್ರಣ ಹಾಗೂ ಬರದಂತೆ ತಡೆಯುವಲ್ಲಿ ತೋಟದ ಬಸಿಗಾಲುವೆಯೂ ಪ್ರಮುಖವಾಗಿದೆ. ಈ ಬಗ್ಗೆ ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಶೇ.80.8 ಕೃಷಿಕರ ತೋಟದಲ್ಲಿ ಬಸಿಗಾಲುವೆ ವ್ಯವಸ್ಥೆ ಇದೆ. ಶೇ.9.6 ರಷ್ಟು ಕೃಷಿಕರ ತೋಟದಲ್ಲಿ ಬಸಿಗಾಲುವೆ ವ್ಯವಸ್ಥೆ ಇಲ್ಲ. ಶೇ.9.6 ರಷ್ಟು ಕೃಷಿಕರ ತೋಟದಲ್ಲಿ ಬಸಿಗಾಲುವೆ ಇದ್ದರೂ ಈ ಬಾರಿ ಸ್ವಚ್ಛ ಮಾಡಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಅಡಿಕೆ ಬೆಳೆಗಾರರು ತೋಟದ ನಿರ್ವಹಣೆಯ ಪ್ರಮುಖ ಕೆಲಸಗಳಲ್ಲಿ ಬಸಿಗಾಲುವೆಯ ಬಗ್ಗೆ ಗಮನಹರಿಸಿದ್ದಾರೆ.
ಇಷ್ಟೆಲ್ಲಾ ಆದರೂ ಮಳೆ ನಿರಂತರ ಸುರಿದು ಕೊಳೆರೋಗ ಬಾಧಿಸಿದೆ. ಅಡಿಕೆ ಬೆಳೆ ನಷ್ಟವಾಗಿದೆ. ಕೃಷಿಕರು ಇಡೀ ವರ್ಷ ಕೃಷಿಗಾಗಿ ಮಾಡಿರುವ ವೆಚ್ಚಗಳು ಮಳೆಗೆ ಕೊಚ್ಚಿ ಹೋದಂತಾಗಿದೆ, ಕೊಳೆರೋಗ ಅಡಿಕೆಗೆ ಹಾನಿಮಾಡಿದೆ.(ನಾಳೆ ಮುಂದುವರಿಯುತ್ತದೆ…. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ದ ರೂರಲ್ ಮಿರರ್.ಕಾಂ ಸಮೀಕ್ಷಾ ವರದಿ) ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!


