ಈ ಬಾರಿ ಹವಾಮಾನವು ಅಡಿಕೆ ಬೆಳೆಗಾರರಿಗೆ ಕೈಕೊಟ್ಟಿದೆ. ಮಾರ್ಚ್ ತಿಂಗಳ ನಂತರ ವಿಪರೀತವಾದ ತಾಪಮಾನವಾದರೆ, ಇದೀಗ ವಿಪರೀತ ಮಳೆ. ಮೇ.17 ಸುಮಾರಿಗೆ ಆರಂಭವಾದ ಮಳೆ ಇನ್ನೂ ಕಡಿಮೆಯಾಗಿಲ್ಲ. ವಿಪರೀತ ಮಳೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸಿದೆ. ಮಳೆ ಮತ್ತಷ್ಟು ಹೆಚ್ಚಾಗುತ್ತಿದೆ. ಹವಾಮಾನ ವರದಿಗಳು ಇನ್ನೂ 10 ದಿನಗಳ ಕಾಲ ಮಳೆ ಇದೆ ಇನ್ನುತ್ತವೆ. ಕೊಳೆರೋಗ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನವನ್ನು ಕೃಷಿಕರೇ ಮಾಡುತ್ತಿದ್ದಾರೆ. ಈಗಾಗಲೇ ಹಲವು ಸಮಸ್ಯೆಗಳಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರಿಗೆ ಈ ಬಾರಿ ಆತಂಕ ಹೆಚ್ಚಾಗುತ್ತಿದೆ.
ಅಡಿಕೆ ಬೆಳೆಗೆ ಹೆಚ್ಚಾಗಿ ಜೂನ್ ಮೊದಲ ವಾರದಲ್ಲಿ ಮಳೆಯ ಕಾರಣದಿಂದ ಕೊಳೆರೋಗ ಬಾರದಂತೆ ಬೋರ್ಡೋ ದ್ರಾವಣವನ್ನು ಅಡಿಕೆ ಬೆಳೆಗಾರರು ಹಿಂದಿನಿಂದಲೂ ಸಿಂಪಡಿಸಿಕೊಂಡು ಬರುತ್ತಿದ್ದರು. ಈಚೆಗೆ ಅದರ ಮುಂದುವರಿದ ಭಾಗವಾಗಿ ವಿವಿಧ ಔಷಧಿಗಳನ್ನು ಅಂದರೆ, ಶಿಲೀಂದ್ರನಾಶಕಗಳನ್ನು ಸಿಂಪಡಣೆ ಮಾಡುತ್ತಿದ್ದರು. ಕೆಲವು ಸಮಯಗಳಿಂದ ಪೊಟಾಸಿಯಂ ಅಂಶ ಇರುವ ಔಷಧಿಯನ್ನು ಕೂಡಾ ಸಿಂಪಡಿಸುತ್ತಿದ್ದರು. ಹೆಚ್ಚಿನ ಬೆಳೆಗಾರರು ದೀರ್ಘ ಅವಧಿಯ ಪರಿಣಾಮಗಳ ಕಡೆಗೆ ಯೋಚನೆ ಮಾಡುತ್ತಿದ್ದರು. ಜೂನ್ ಗೆ ಆರಂಭವಾದ ಮಳೆ ಜುಲೈ ಅಂತ್ಯ-ಆಗಸ್ಟ್ ಆರಂಭದ ಸಮಯಕ್ಕೆ ಹೆಚ್ಚಾಗಿ ಕಡಿಮೆಯಾಗುತ್ತಿತ್ತು. ಈ ಹಂತದಲ್ಲಿ ಎರಡನೇ ಬಾರಿ ಔಷಧಿ ಸಿಂಪಡಿಸಿ ನೆಮ್ಮದಿಯಿಂದ ಇರುತ್ತಿದ್ದರು. ಒಮ್ಮೆಯೂ ಸಿಂಪಡಣೆ ಆಗದೇ ಇದ್ದರೆ ಮಾತ್ರವೇ ಕೊಳೆರೋಗ ಬಾಧಿಸುತ್ತಿತ್ತು. ಆದರೆ ಈ ಬಾರಿ ಯಾವ ಔಷಧಿಗಳನ್ನು ಸರಿಯಾಗಿ ಸಿಂಪಡಿಸಲು ಅಡಿಕೆ ಬೆಳೆಗಾರರಿಗೆ ಹವಾಮಾನವು ಅವಕಾಶ ನೀಡಲಿಲ್ಲ. ಪರಿಣಾಮವಾಗಿ ಕೊಳೆ ರೋಗ ಉಲ್ಬಣಿಸುತ್ತಿದೆ.
ಬೇಸಗೆಯಲ್ಲಿ ವಾರಗಳಿಗೂ ಹೆಚ್ಚು ದಿನ 40 ಡಿಗ್ರಿ ತಾಪಮಾನ ಇತ್ತು. ವಿಪರೀತ ತಾಪಮಾನದಿಂದ ಎಳೆ ಅಡಿಕೆಯ ಮೇಲೆ ತೀರಾ ಪರಿಣಾಮ ಬೀರಿತ್ತು. ಆಗಲೇ ಅಡಿಕೆ ಬೀಳಲು ಆರಂಭವಾಗಿತ್ತು. ಕೆಲವು ಕೃಷಿಕರು ಜನವರಿಯಿಂದಲೇ ಎಳೆ ಅಡಿಕೆ ಬೀಳುವುದಕ್ಕೆ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಉತ್ತಮವಾದ ಫಸಲಿನ ನಿರೀಕ್ಷೆಯೂ ಇತ್ತು. ಶಿಲೀಂದ್ರನಾಶಕ, ಕೀಟನಾಶಕ ಇತ್ಯಾದಿಗಳ ಸಿಂಪಡಣೆಯನ್ನು ಪ್ರತೀ 30 ದಿನಗಳಿಗೊಮ್ಮೆ ಮಾಡಿರುವ ಕೃಷಿಕರೂ ಇದ್ದಾರೆ. ಆದರೆ ಮೇ.17ರ ಹೊತ್ತಿಗೆ ಮಳೆ ಆರಂಭವಾಗಿದೆ. ಅದೇ ಸಮಯಕ್ಕೆ ಕೊಳೆರೋಗ ಬಾರದಂತೆ ಶಿಲೀಂದ್ರನಾಶಕ ಸಿಂಪಡಣೆಯಾಗಬೇಕಿತ್ತು. ಅಂದು ಆರಂಭವಾದ ಮಳೆ ಜುಲೈ 23 ರವರೆಗೂ ಕಡಿಮೆಯಾಗಿಲ್ಲ. ಇದ್ದ ಫಲಸು ನಷ್ಟವಾಗುವ ಭೀತಿ ಎದರುರಾಗಿದೆ.

ಮೇ.17 ರ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ತಿಯಾಗಿ ಮಳೆ ಬಿಟ್ಟ ದಿನಗಳು ಕೇವಲ 7 ದಿನ ಮಾತ್ರಾ. ಇಂದಿನವರೆಗೆ ಈ ವರ್ಷ ಅಂದಾಜು 3527 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿ 990 ಮಿಮೀ, ಜೂನ್ 1089 ಮಿಮೀ ಹಾಗೂ ಜುಲೈ 22 ರವರೆಗೆ 1336 ಮಿಮೀ ಮಳೆಯಾಗಿದೆ. ಬೇರೆ ಬೇರೆ ಕಡೆಯಲ್ಲಿ ಇದಕ್ಕಿಂತ 100-300 ಮಿಮೀ ಯಷ್ಟು ಮಳೆ ವ್ಯತ್ಯಾಸ ಇರಬಹುದಾಗಿದೆ.

ಮಳೆ ಕಡಿಮೆ ಇದ್ದರೂ ನುರಿತ ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಔಷಧಿ ಸಿಂಪಡಣೆಗೂ ಸಮಸ್ಯೆಯಾಯಿತು. ರಾಜ್ಯದಲ್ಲಿ ಸುಮಾರು ಎಂಟು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಹೆಚ್ಚಿನ ಕಡೆಗಳಲ್ಲಿ ಅಡಿಕೆ ತೋಟಗಳು ಹಳೆಯದಾಗಿದೆ. ಹೀಗಾಗಿ ಮರಗಳಿಗೆ ಏರಿ ಔಷಧಿ ಸಿಂಪಡಣೆ ಮಾಡಬೇಕಾಗಿದೆ. ಇರುವ ಕಾರ್ಮಿಕರು ಮಳೆಯ ಕಾರಣದಿಂದ ಸಿಂಪಡಣೆಯ ಸಮಸ್ಯೆಗೆ ಬಾಕಿಯಾಗಿದ್ದಾರೆ. ಗಿಡ ತೋಟಗಳಿಗೆ ಈಗಿನ ಪೈಬರ್ ದೋಟಿಗಳ ಮೂಲಕ ಸಿಂಪಡಣೆ ಸಾಧ್ಯವಾಗುವ ಕಾರಣದಿಂದ ಕೆಲವು ಕೃಷಿಕರು ಈ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ಇನ್ನೂ ಕೆಲವು ಕಡೆ ರೋಗ ಬಾಧಿಸಿದ್ದು ಕಂಡ ತಕ್ಷಣವೇ ಮಳೆಯ ನಡುವೆಯೂ ಸಿಂಪಡಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಬಾರಿ ವಿಪರೀತವಾಗಿ ಕೊಳೆರೋಗ ಕಂಡಿದೆ. ಅದರ ಜೊತೆಗೆ ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ ಹಾಗೂ ಕಾಸರಗೋಡು ಜಿಲ್ಲೆಯ ಹಲವು ಕಡೆ ಕೊಳೆರೋಗ ಸದ್ದು ಮಾಡುತ್ತಿದೆ. ಕೊಳೆರೋಗ ಎಲ್ಲ ಎನ್ನುವ ಅಡಿಕೆ ಬೆಳೆಗಾರರ ಸಂಖ್ಯೆ ತೀರಾ ಕಡಿಮೆ. ಇನ್ನೊಂದು ಅಂಶ ಎಂದರೆ ರೋಗ ಇದ್ದರೂ ಬೆಳಕಿಗೆ ಬರುವುದು ಔಷಧಿ ಬಿದ್ದ ನಂತರವೇ ಅಥವಾ ಇಡೀ ಅಡಿಕೆ ಗೊನೆಗೆ ಬಾಧಿಸಿದ ನಂತರವೇ. ಹೀಗಾಗಿ ಈ ಮಳೆಗೆ ಕೊಳೆರೋಗ ಇಲ್ಲ ಎನ್ನುವ ಹಾಗಿಲ್ಲ. ಜು.18 ರನಂತರ ವಾತಾವರಣದಲ್ಲೂ ಬದಲಾವಣೆಯಾಗಿದೆ. ತಾಪಮಾನವು 20-23 ಡಿಗ್ರಿಗೆ ಇಳಿಕೆಯಾಗಿದೆ. ಎರಡು ದಿನಗಳಿಂದ ಮಲೆನಾಡು ತಪ್ಪಲು ಭಾಗದಲ್ಲಿ ಶೀತ ಹವೆ, ಚಳಿ ಗಾಳಿ ಕಂಡುಬಂದಿದೆ. ಇದು ಕೊಳೆರೋಗ ವ್ಯಾಪಕವಾಗಲು ಪೂರಕ ವಾತಾವರಣ ಸೃಷ್ಟಿಯಾದಂತಾಗಿದೆ.


ದಕ್ಷಿಣ ಕನ್ನಡ ಮಾತ್ರವಲ್ಲ ಮಲೆನಾಡು ಭಾಗದ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗದಲ್ಲೂ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸಿದೆ. ಕೊಡಗು ಭಾಗದಲ್ಲೂ ಕೊಳೆರೋಗ ಇದೆ. ಉಡುಪಿ, ಕಾರ್ಕಳ ಭಾಗದಲ್ಲೂ ಬೆಳೆಗಾರರು ಅಡಿಕೆ ನಾಶವಾಗುತ್ತಿರುವ ಬಗ್ಗೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಂತಹ ಪ್ರದೇಶದಲ್ಲಿಯೂ ವ್ಯಾಪಕವಾಗಿ ಕೊಳೆರೋಗ ಬಾಧಿಸಿದೆ.
ಜೋಯಿಡಾ ತಾಲೂಕಿನ ಗುಂದ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಎಳೆ ಅಡಿಕೆ ಕೂಡಾ ಉದುರುತ್ತಿದೆ. ಗುಂದ,ಉಳವಿ ,ಯರಮುಖ, ಶೇವಾಳಿ ಸೇರಿದಂತೆ ಇನ್ನೂ ಹಲವು ಹಳ್ಳಿಗಳಲ್ಲಿ ಔಷಧ ಸಿಂಪಡಣೆ ಮಾಡಿದರು ಅಡಿಕೆ ಉದುರುವುದು ಕಡಿಮೆ ಆಗುತ್ತಿಲ್ಲ. ಈ ವರ್ಷ ಹೆಚ್ಚಿನ ರೈತರ ಅಡಿಕೆ ತೋಟದಲ್ಲಿ ಅತಿಯಾದ ಬಿಸಿಲಿನಿಂದ ಅಡಿಕೆ ಹಿಂಗಾರ ಕರಟಿತ್ತು, ಇದ್ದ ಅಡಿಕೆ ಉದುರುತ್ತಿವೆ ,ಹೀಗಾದರೆ ರೈತರ ಬದುಕು ಕಷ್ಟವಾಗುತ್ತದೆ ಎಂಬುದು ಇಲ್ಲಿನ ರೈತರ ಮಾತಾಗಿದೆ.ಜೋಯಿಡಾ ಭಾಗದಲ್ಲಿ ಅತಿಯಾದ ಮಳೆಯಾದರೂ ಮಳೆ ಮಾಪನ ಕೇಂದ್ರಗಳು ಸರಿಯಿಲ್ಲದ ಕಾರಣ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ವಿಮೆ ಬಂದಿಲ್ಲ ಎನ್ನುತ್ತಾರೆ ಬೆಳೆಗಾರರು.

ಮಲೆನಾಡು-ಕರಾವಳಿ ಭಾಗದಲ್ಲಿ ಅಡಿಕೆ ಕೊಳೆರೋಗನಿಯಂತ್ರಣಕ್ಕೆ ಕೃಷಿಕರು ವಿವಿಧ ಪ್ರಯತ್ನ ಮಾಡಿದ್ದಾರೆ. ಕೊಳೆರೋಗ ತಕ್ಷಣ ನಿವಾರಣೆಗೆ ಮೆಟಲ್ಯಾಕ್ಸಿಲ್,ಪ್ಲಾಂಟಾಮೈಸಿನ್, ಲ್ಯಾಂಬ್ಡಾಸಿಹಲೋಥ್ರಿನ್ ಹೀಗೇ ಅವರದೇ ಆದ ಪ್ರಯೋಗ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನ ಸಂಸ್ಥೆಗಳು ಕೊಳೆರೋಗ ನಿವಾರಣೆಗೆ ಬೋರ್ಡೋ ದ್ರಾವಣ ಮಾತ್ರಾ ಶಿಫಾರಸು ಮಾಡುತ್ತಾರೆ. ಈಚೆಗೆ ಮಂಡಿಪ್ರೊಪಮೈಡ್ ಕೂಡಾ ಶಿಫಾರಸು ಮಾಡುತ್ತಾರೆ. ಜೊತೆ ಗಂ ಬಳಕೆ ಮಾಡಲು ಸಲಹೆ ಇದೆ. ಆದರೆ ಬೋರ್ಡೋ ಜೊತೆ ಯಾವುದೇ ಕೀಟನಾಶಕ, ಕ್ರಿಮಿನಾಶಕ ಸೇರಿಸಿ ಸಿಂಪಡಣೆಗೆ ಶಿಫಾರಸುಗಳಿಲ್ಲ. ಕೊಳೆರೋಗ ನಿಯಂತ್ರಣಕ್ಕೆ ಏನೆಲ್ಲಾ ಮಾಡಬಹುದು ಎನ್ನುವ ಕಾರಣದಿಂದ ಮಳೆಯೂ ಕಡಿಮೆಯಾಗದ ಕಾರಣ ಕೃಷಿಕರು ಅವರದೇ ಆದ ಪ್ರಯೋಗ ಮಾಡುವಷ್ಟರವರೆಗೆ ಕೊಳೆರೋಗ ವ್ಯಾಪಿಸುತ್ತಿದೆ. ಪ್ರಯತ್ನಗಳು ನಡೆಯುತ್ತಿವೆ.
ಅಡಿಕೆಯಷ್ಟೇ ಅಲ್ಲ, ಈ ಬಾರಿಯ ಮಳೆ ಕಾಳುಮೆಣಸು, ಕಾಫಿ, ಕೊಕ್ಕೊ, ಏಲಕ್ಕಿ ಬೆಳೆಯ ಮೇಲೂ ಪರಿಣಾಮ ಬೀರಿದೆ. ಅಡಿಕೆಗೆ ಮಳೆ ಕಡಿಮೆಯಾದ ತಕ್ಷಣ ಸಿಂಪಡಿಸಿ ರೋಗ ನಿಯಂತ್ರಣ ತರಬಹುದಾದರೆ ಉಳಿದ ಬೆಳೆಗಳಲ್ಲಿ ಅಷ್ಟು ಸುಲಭವಿಲ್ಲ. ಈ ಬೆಳೆಗಾರರೂ ಸಂಕಷ್ಟಪಡುತ್ತಿದ್ದಾರೆ.
ಹವಾಮಾನ ಮಾಹಿತಿಗಳ ಪ್ರಕಾರ ಇನ್ನೂ 10 ದಿನಗಳ ಮಳೆ ಇದೆ. ಇದರ ಜೊತೆಗೇ ವಾಯುಭಾರ ಕುಸಿತದ ಲಕ್ಷಣಗಳೂ ಕಾಣಿಸುತ್ತಿದೆ ಎಂದು ಹವಾಮಾನ ವರದಿಗಳು ಹೇಳುತ್ತವೆ. ಒಂದು ವೇಳೆ ಇನ್ನೂ 10 ದಿನಗಳ ಕಾಲ ಮಳೆ ಮುಂದುವರಿದರೆ ಕೃಷಿಕರು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಮಳೆ ಒಮ್ಮೆ ನಿಲ್ಲಲಿ ಎನ್ನುವ ಕೃಷಿಕರ ಪ್ರಾರ್ಥನೆ ಈಗ ಹೆಚ್ಚಾಗುತ್ತಿದೆ.
The rain that kicked off around May 17th is still going strong and shows no signs of letting up. Because of this nonstop downpour, arecanut crops in the Malnad and coastal areas are getting hit hard by something called Arecanut Koleroga. With the rain just keeping on, arecanut farmers are starting to get really worried about their crops. It’s a pretty tense time for them as they try to figure out how to deal with these endless showers.


