#arecanut | ಅಡಿಕೆ ಎಲೆ ಚುಕ್ಕೆ ರೋಗ | ಕಡೆಗಣಿಸಿದರೆ ಇಳಿದೀತು ಬೆಳೆ | ಈ ರೋಗ ನಿರ್ವಹಣೆ ಹೇಗೆ ?

September 11, 2022
5:48 PM
ಅಡಿಕೆ ಎಲೆ ಚುಕ್ಕೆ ರೋಗ ( Arecanut Leaf Spot ) ಇತ್ತೀಚೆಗಿನ ದಿನಗಳಲ್ಲಿ  ವ್ಯಾಪಕವಾಗಿ ಕೇಳಿಬರುತ್ತಿರುವ ರೋಗ. ಅಡಿಕೆ ಕೃಷಿಕರಿಗೆ ತೋಟದಲ್ಲಿ ಈ ರೋಗ ಅರಿವಿಗೆ ಬರುವುದು ತಡವಾಗುತ್ತದೆ. ಇದರಿಂದ ಅಡಿಕೆ ಫಸಲಿನ ಮೇಲೂ ಪರಿಣಾಮ ಬೀರುತ್ತಿದೆ. ಈ ಬಗ್ಗೆ ವಿಜ್ಞಾನಿಗಳಾದ ಡಾ.ಭವಿಷ್ಯ ಹಾಗೂ ಡಾ.ತವಪ್ರಕಾಸ ಪಾಂಡ್ಯನ್ ಅವರು ನೀಡಿದ ಮಾಹಿತಿ ಇಲ್ಲಿದೆ….

ಪಡ್ರೆ ಗ್ರಾಮದಲ್ಲಿ ಎಲೆ ಚುಕ್ಕೆ ಮತ್ತು ಹಿಂಗಾರ ಸಾಯುವ ರೋಗಗಳು ವ್ಯಾಪಕವಾಗಿ ಹೆಚ್ಚುತ್ತಿರುವುದನ್ನು ಮನಗಂಡು, ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮವನ್ನು ಸ್ಥಳೀಯ ಕೃಷಿಕರೇ ಸ್ವರ್ಗ ಶಾಲೆಯಲ್ಲಿ ಸಂಘಟಿಸಿದ್ದರು. ನಾವೂ ಜೊತೆಯಾದೆವು. ಕಾರ್ಯಕ್ರಮಕ್ಕೆ ಎರಡು ದಿನ ಮೊದಲು, ಆ ಪ್ರದೇಶದ ಕೃಷಿಕರೊಬ್ಬರು ಫೋನಾಯಿಸಿದ್ದರು. “ನನ್ನ ತೋಟದಲ್ಲಿ ಅಡಿಕೆ ಕೆಂಪಾಗುತ್ತಿವೆ. ತುಂಡರಿಸಿ ನೋಡಿದಾಗ ತಿರುಳು ಬಲಿತಿರುವುದಿಲ್ಲ. ಕಳೆದ ಹದಿನೈದು ದಿನಗಳಿಂದ ಈ ಸಮಸ್ಯೆಯು ಉಲ್ಬಣವಾಗಿದೆ. ಪಕ್ಕದ ತೋಟದಲ್ಲೂ ಈ ಸಮಸ್ಯೆ ಇದೆ” ಎಂದು ಹೇಳಿದಾಗ, ಫೋಟೊ ಬೇಕಂದೆ. ಪಟ ನೋಡಿದ ನಂತರ ಚುಕ್ಕಿ ರೋಗವೆಂದು ಖಚಿತವಾಗಿ, ಕಾರ್ಯಕ್ರಮಕ್ಕೆ ಬರುವಾಗ ಸೋಗೆ ಮತ್ತು ಅಡಿಕೆ ಗೊನೆ ತರಲು ತಿಳಿಸಿದೆ. ಕಾರ್ಯಕ್ರಮದಲ್ಲಿ ನಾವು ತಂದಿಟ್ಟ ಸ್ಯಾಂಪಲ್ ಜೊತೆ, ಕೃಷಿಕ ಕೊಟ್ಟ ಸ್ಯಾಂಪಲ್ ಅನ್ನೂ ಇಟ್ಟೆವು. ಅನೇಕ ಕೃಷಿಕರದ್ದು ಒಂದೇ ಮಾತು. “ನಮ್ಮಲ್ಲೂ ಈ ಸಮಸ್ಯೆ ಇದೆ. ಸೋಗೆ ಮತ್ತು ಅಡಿಕೆ ಕೆಂಪಾಗುತ್ತಿವೆ. ಪರಿಹಾರ ಏನು?”.

Advertisement
Advertisement
Advertisement
Advertisement

ಮೊತ್ತಮೊದಲು ಎಲೆಚುಕ್ಕೆ ರೋಗದ ತೀವ್ರತೆಯನ್ನು ಗಮನಿಸಿದ್ದು 2016 ರಲ್ಲಿ. ಭಾರತದ ಈಶಾನ್ಯ ರಾಜ್ಯ ತ್ರಿಪುರದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿ ಅಡಿಕೆ ಮರದ ಸೋಗೆಗಳು ಹಳದಿಯಾಗಿ ಒಣಗಿದ್ದುವು. ಆಗ ಕಾಸರಗೋಡಿನ ಸಿಪಿಸಿಆರ್‌ಐ (CPCRI ) ಸಂಸ್ಥೆಯ ವಿಜ್ಞಾನಿಗಳ ತಂಡ ಅಲ್ಲಿಗೆ ಭೇಟಿ ನೀಡಿತ್ತು. ಪರಿಶೀಲಿಸಿದಾಗ, ಅದು ಎಲೆ ಚುಕ್ಕೆ ರೋಗವೆಂದು ಖಚಿತವಾಯಿತು.

Advertisement

ಎಲೆಚುಕ್ಕೆ ರೋಗ ಅಡಿಕೆಗೆ ಹೊಸತಲ್ಲ. ಸಾಮಾನ್ಯವಾಗಿ, ಬೇಸಿಗೆ ಮತ್ತು ಮಳೆಗಾಲದಲ್ಲಿ ಸಣ್ಣ ಪ್ರಾಯದ ತೋಟಗಳಲ್ಲಿ ಇದನ್ನು ಕಾಣಬಹುದು. ರೋಗ ನಿರ್ವಹಣೆಗೆ ಕ್ರಮಗಳು ಸಿದ್ಧವಿದೆ. ಆದರೆ ಯಾರೂ ಪಾಲಿಸುವುದಿಲ್ಲ. ಏಕೆಂದರೆ, ಈ ವರೆಗೆ ಇದೊಂದು ದೊಡ್ಡ ತಲೆನೋವಾಗಿರಲಿಲ್ಲ.

Advertisement

ನಮ್ಮ ಅನಿಸಿಕೆಯೂ ಹೀಗೆಯೇ ಇತ್ತು. ಆದರೆ, ತ್ರಿಪುರದಲ್ಲಿ ಕಾಣಿಸಿದ ರೋಗದ ತೀವ್ರತೆ ತುಸು ಗಾಬರಿ ಹುಟ್ಟಿಸಿತ್ತು. “ಬೆಟ್ಟದಲ್ಲಿ ಅಡಿಕೆಯನ್ನು ವ್ಯವಸ್ಥಿತವಾಗಿ ಬೆಳೆದಿದ್ದರು. ತಪ್ಪಲಿನಿಂದ ನೋಡಿದಾಗ, ಎಲೆಗಳೆಲ್ಲ ಒಣಗಿ ಜೋತು ಬಿದ್ದಿದ್ದವು. ಹತ್ತಿರಕ್ಕೆ ಹೋಗಿ ಪರೀಕ್ಷಿಸಿದಾಗ ಎಲೆ ಚುಕ್ಕೆ ರೋಗವೆಂದು ಖಚಿತವಾಯಿತು. ಕೆಳಭಾಗದ 3-5 ಸೋಗೆಗಳು ಹಳದಿಯಾಗಿ ಪೂರ್ತಿ ಒಣಗಿದ್ದುವು. ಈ ರೀತಿಯ ಲಕ್ಷಣವನ್ನು ಹಿಂದೆದೂ ನೋಡಿರಲಿಲ್ಲ. ನಮಗೆಲ್ಲ ಅಚ್ಚರಿಯಾಗಿತ್ತು” ಎಂದು ನೆನೆಯುತ್ತಾರೆ ರೋಗಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆ.

Advertisement

ಕರ್ನಾಟಕದ ಮೂಡಿಗೆರೆ ತಾಲೂಕಿನ ಕಳಸದ ಮರಸಣಿಗೆ ಪ್ರದೇಶದಲ್ಲೂ ಈ ರೋಗ ಕಾಣಿಸಿಕೊಂಡಿತ್ತು. ಮರಸಣಿಗೆಯಲ್ಲಿ ಮೊದಲು ಕೆಲವೇ ತೋಟಗಳಿಗೆ ಸೀಮಿತವಾಗಿದ್ದ ರೋಗಲಕ್ಷಣ, ಮರು ವರ್ಷದಲ್ಲಿ ಹಲವು ತೋಟಗಳಿಗೆ ಹಬ್ಬಿತ್ತು. ಗಾಳಿ ಮುಖೇನ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡದಿದ್ದರೆ, ಇದನ್ನು ನಿಯಂತ್ರಿಸುವುದು ಕಷ್ಟ.

Advertisement

ಗಂಭೀರವಲ್ಲ ಎಂದು ತಿಳಿಯುವ ಸಮಸ್ಯೆಗಳು ಪ್ರಕೃತಿಯಲ್ಲಿ ಒಮ್ಮೆಲೇ ದೊಡ್ಡದಾಗಿ ಕಾಡುವುದಿದೆ. ಎಲೆ ಚುಕ್ಕೆ ರೋಗವೂ ಹಾಗೆಯೇ. ಈಗ, ಶಿವಮೊಗ್ಗದ ನಿಟ್ಟೂರು, ಚಿಕ್ಕಮಗಳೂರಿನ ಶೃಂಗೇರಿ ಮತ್ತು ಕಳಸ, ಮಡಿಕೇರಿಯ ಸಂಪಾಜೆ, ದ. ಕ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಮತ್ತು ಕಡಬ, ಕಾಸರಗೋಡಿನ ಸ್ವರ್ಗ ಮತ್ತು ಮುಳ್ಳೇರಿಯ ಸೇರಿದಂತೆ ಹಲವು ಪ್ರದೇಶದಲ್ಲಿ ಎಲೆ ಚುಕ್ಕೆ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಕೇರಳ ಮತ್ತು ತಮಿಳುನಾಡಿಗೂ ರೋಗ ಪಸರಿದೆ.

Advertisement

ರೋಗಾಣು : ಫಿಲೋಸ್ಟಿಕ್ಟಾ ಅರೆಕೆ ಮತ್ತು ಕೊಲೆಟೋಟ್ರೈಕಮ್ ಸ್ಪಿಸಿಸ್ ಎನ್ನುವ ಶಿಲೀಂಧ್ರಗಳು ಇದಕ್ಕೆ ಕಾರಣ. ಕೊಲೆಟೋಟ್ರೈಕಮ್ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನೂ ಉಂಟುಮಾಡುತ್ತದೆ. ಈ ಶಿಲೀಂಧ್ರದ ಬೇರೆಬೇರೆ ಉಪಜಾತಿಗಳು ( _C.fructicola, C. karstii, C. siamense etc._ )  ತರುವ ಸಂಕೀರ್ಣ ರೋಗವಿದು. ಹಿಂಗಾರ ಒಣಗುವ ರೋಗದಿಂದ ಒಂದು ವರ್ಷದ ಫಸಲು ಮಾತ್ರ ನಷ್ಟವಾಗುತ್ತದೆ. ಆದರೆ ಎಲೆ ಚುಕ್ಕೆ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲ ದುಷ್ಪರಿಣಾಮ ಬೀರಬಹುದು.

Advertisement

ರೋಗ ಲಕ್ಷಣಗಳು: ಅಡಿಕೆ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕೆ ಮೂಡಿ, ಹಳದಿ ಬಣ್ಣದಿಂದ ಆವೃತವಾಗಿದ್ದರೆ, ಅದು ಎಲೆ ಚುಕ್ಕೆ ರೋಗವೆಂದರ್ಥ. ಕೆಲವೊಮ್ಮೆ, ಕಪ್ಪು ಬಣ್ಣದ ಅಂಚು ಇರುವ ಕಂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಸೇರಿ ಇಡೀ ಸೋಗೆಗೆ ಹಬ್ಬಿ ಅದನ್ನು ಒಣಗಿಸುತ್ತವೆ. ಮೊತ್ತಮೊದಲು ಕೆಳಭಾಗದ ಒಂದೆರಡು ಎಲೆಗಳಲ್ಲಿ ರೋಗಲಕ್ಷಣ ಕಾಣುತ್ತದೆ. ರೋಗ ತೀವ್ರತೆ ಹೆಚ್ಚಾದಾಗ ನಾಲ್ಕೈದು ಎಲೆಗಳಿಗದು ಹಬ್ಬಿರುತ್ತದೆ. ಹೆಚ್ಚು ಗಾಳಿಯಿರುವ ಪ್ರದೇಶದಲ್ಲಿ ಎಲೆಯಲ್ಲಿ ಕಡ್ಡಿ ಮಾತ್ರ ಉಳಿಯುತ್ತದೆ.

ನಿರ್ವಹಣೆ ಹೇಗೆ....?

Advertisement
  • ಅಧಿಕ ರೋಗಬಾಧಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದು ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿ. ಈ ಕೆಲಸ ಪ್ರಾಯೋಗಿಕವಾಗಿ ಕಷ್ಟ. ಆದರೆ, ತೀವ್ರ ಬಾಧೆಯಿರುವಲ್ಲಿ ಅನಿವಾರ್ಯ.
  • ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡುವುದೊಳಿತು.
  • ಇತ್ತೀಚೆಗೆ ಕಂಡು ಬರುತ್ತಿರುವ ರೋಗವಾದ ಕಾರಣ, ತಾತ್ಕಾಲಿಕವಾಗಿ ಕೆಲವೊಂದು ಶಿಲೀಂಧ್ರನಾಶಕಗಳನ್ನು ಶಿಫಾರಸ್ಸು ಮಾಡಲಾಗಿದೆ ( (adhoc recommendation)). ಇದೇ ಅಂತಿಮವಲ್ಲ. ಹೆಚ್ಚು ಬಾಧೆಯಿರುವ ತೋಟಗಳಲ್ಲಿ, ಆಗಸ್ಟ್ – ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನಝೋಲ್ ಶಿಲೀಂಧ್ರನಾಶಕವನ್ನು ಎಲೆಗಳಿಗೆ ಸಿಂಪಡಣೆ ಮಾಡಬೇಕು. ಪ್ರಮಾಣ : ಒಂದು ಲೀಟರ್ ನೀರಿಗೆ ಒಂದು ಮಿಲ್ಲಿಲೀಟರ್. ಎರಡನೆ ಸಿಂಪಡಣೆಗೆ ಕಾರ್ಬೇನ್ಡಜಿಮ್ + ಮಾಂಕೋಜೆಬ್ (ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಬಳಸಬಹುದು. ಅಥವಾ ಅಂತರ್ವ್ಯಾಪಿ ಶಿಲೀಂಧ್ರನಾಶಕಗಳಾದ ಹೆಕ್ಸಾಕೊನಝೋಲ್ (Hexaconazole 5EC) / ಟೆಬುಕೊನಝೋಲ್ (Tebuconazole) ಅನ್ನೂ ಬಳಸಬಹುದು. ಪ್ರಮಾಣ : ಒಂದು ಲೀಟರ್ ನೀರಿಗೆ ಒಂದು ಮಿಲ್ಲಿಲೀಟರ್.
  • ತೀವ್ರ ರೋಗಬಾಧೆ ಇರುವಲ್ಲಿ, ಜನವರಿ ನಂತರ ಸಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನಝೋಲ್ ಶಿಲೀಂಧ್ರನಾಶಕ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬಹುದು.
  • ಅಡಿಕೆ ಮರದ ಆರೋಗ್ಯಕ್ಕೆ ಸಮತೋಲಿತ ಪೋಷಕಾಂಶ ನೀಡುವುದು ಮುಖ್ಯ. ರೋಗಬಾಧೆ ಇರುವ ಕೆಲವು ತೋಟಗಳಲ್ಲಿ ಪೊಟಾಶಿಯಂ ಅಂಶ ಕಡಿಮೆ ಇರುವುದನ್ನು ಗಮನಿದ್ದೇವೆ. ಅಡಿಕೆ ಮರಕ್ಕೆ ಸಾವಯವ ಗೊಬ್ಬರ, ಪೊಟಾಷ್ (240 – 350 ಗ್ರಾಂ), ಯೂರಿಯ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ), ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಗೊಬ್ಬರಗಳನ್ನು ವರುಷಕ್ಕೆ ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ಆಧಾರದ ಮೇಲೆಯೇ ಗೊಬ್ಬರ ನೀಡುವುದು ಉತ್ತಮ.
  • ಈ ರೋಗವು ಸಿಂಗಾರ ಅಥವಾ ಬೆಳೆಗೆ ತೊಂದರೆ ಉಂಟುಮಾಡುವುದಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ, ತೀವ್ರ ಬಾಧಿತ ಎಲೆಗಳ ನಾಶ ಮತ್ತು ಶಿಲೀಂಧ್ರನಾಶಕದ ಸೂಕ್ತ ಬಳಕೆ, ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಬಲು ಮುಖ್ಯವಾಗುತ್ತವೆ.
  • ತೀವ್ರ ಬಾಧಿತ ಎಲೆಗಳನ್ನು ಕತ್ತರಿಸುವುದು ಹಾಗೂ ಶಿಲೀಂಧ್ರನಾಶಕ ಸಿಂಪಡಣೆ ಸುಲಭವಲ್ಲ. ಎಲ್ಲೆಡೆ ನುರಿತ ಕೆಲಸಗಾರರ ಕೊರತೆಯಿದೆ. ಆದರೆ, ಕಾರ್ಬನ್ ಫೈಬರ್ ದೋಟಿ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ನೆರವಾಗಬಹುದು. ಇದನ್ನು ಬಳಸಿ, ಸೋಗೆಯ ಹತ್ತಿರದಿಂದಲೇ ಮಂಜಿನ ರೂಪದಲ್ಲಿ ( ಮಿಸ್ಟ್ ಸ್ಪ್ರೇ) ಸಿಂಪಡಿಸಬಹುದು.
ಬರಹ :
ಡಾ.ಭವಿಷ್ಯ ಮತ್ತು ಡಾ.ತವಪ್ರಕಾಸ ಪಾಂಡ್ಯನ್
ನೆರವು : ಶ್ರೀ ಪಡ್ರೆ ( ಕೃಷಿ ಕಾರ್ಯಕ್ರಮ ಹಮ್ಮಿಕೊಳ್ಳಲು, ಶ್ರೀ ಪಡ್ರೆ, ಶ್ರೀ ಹರಿ ಭಟ್ ಸಜಂಗದ್ದೆ, ಶಿವಪ್ರಕಾಶ್ ಪಾಲೆಪ್ಪಾಡಿ, ಮುಳ್ಳಂಕೊಚ್ಚಿ ಮುರಳಿ, ಸುಬ್ರಮಣ್ಯ ಭಟ್ ಕೆ ವೈ ಸೇರಿದಂತೆ ಪಡ್ರೆ ಗ್ರಾಮದ ಕೃಷಿಕರ ಸಹಕಾರ ಅಭಿನಂದನಾರ್ಹ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯ ರಾಯಚೂರು 21 ದಿನ ಕಾರ್ಯಗಾರ
February 17, 2025
9:20 PM
by: The Rural Mirror ಸುದ್ದಿಜಾಲ
ನವ ಮಂಗಳೂರು ಬಂದರಿನಿಂದ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಸಾಗಾಣಿಕೆ | ಕಾಫಿ ರಫ್ತು ವಹಿವಾಟಿಗೆ ಆದ್ಯತೆ ಅಗತ್ಯ |
February 16, 2025
4:50 PM
by: The Rural Mirror ಸುದ್ದಿಜಾಲ
ಮಂಡ್ಯ ಜಿಲ್ಲೆ| 14 ದಿನದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಬೇಕು | ಜಿಲ್ಲಾಧಿಕಾರಿ ಸೂಚನೆ
February 16, 2025
4:41 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror