ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ

April 7, 2026
11:25 AM
ಅಡಿಕೆ ಎಲೆಚುಕ್ಕೆ ರೋಗಕ್ಕೆ ತಕ್ಷಣದ ಪರಿಹಾರವಿಲ್ಲ, 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಸಲಹೆ. ಅಜಾಗರೂಕ ಔಷಧಿ ಬಳಕೆ ತಪ್ಪಿಸಿ, ವೈಜ್ಞಾನಿಕ ಕ್ರಮ ಅನುಸರಿಸುವಂತೆ ತಜ್ಞರ ಸಲಹೆ.

ನಿನ್ನೆ ಸಿಪಿಸಿಆರ್‌ಐ ನಿರ್ದೇಶಕರಾದ ಡಾ. ಬಾಲಚಂದ್ರ ಹೆಬ್ಬಾರ್ ಹಾಗೂ ವಿಜ್ಞಾನಿಗಳ ತಂಡವು ರೈತರ ತೋಟಕ್ಕೆ ಭೇಟಿ ನೀಡಿ ಅಡಿಕೆಯ ಎಲೆಚುಕ್ಕೆ ರೋಗ ನಿಯಂತ್ರಣದ ಪ್ರಾತ್ಯಕ್ಷಿಕೆಯನ್ನು ಪರಿಶೀಲಿಸಿದೆ. ಮಳೆಗಾಲದ ನಂತರ ಆರಂಭವಾದ ಈ ಅಧ್ಯಯನವು ಮೂರು ವರ್ಷಗಳ ಕಾಲ ಮುಂದುವರಿಯಲಿದೆ. ಈ ಅವಧಿಯಲ್ಲಿ ಹವಾಮಾನದಿಂದ ಹಿಡಿದು ಮಣ್ಣಿನ ಗುಣಮಟ್ಟದವರೆಗೆ ಎಲ್ಲಾ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಯಾವ ಪರಿಸ್ಥಿತಿಯಲ್ಲಿ ರೋಗ ಹೆಚ್ಚಾಗುತ್ತದೆ, ಯಾವ ಕ್ರಮಗಳು ಪರಿಣಾಮಕಾರಿಯಾಗುತ್ತವೆ ಎಂಬುದರ ಬಗ್ಗೆ ಸಂಪೂರ್ಣ ವಿಶ್ಲೇಷಣೆ ನಡೆಸಲಾಗುತ್ತಿದೆ.

ಕೃಷಿಯಲ್ಲಿ ಯಾವುದೇ ವಿಧಾನ ಯಶಸ್ವಿಯೇ ಅಥವಾ ವಿಫಲವೇ ಎಂಬುದನ್ನು ತಕ್ಷಣ ನಿರ್ಧರಿಸಲು ಸಾಧ್ಯವಿಲ್ಲ. ಕನಿಷ್ಠ ಮೂರು ವರ್ಷದ ಅಧ್ಯಯನ ಮತ್ತು ಅನುಭವದ ನಂತರವೇ ಸ್ಪಷ್ಟವಾದ ಸಲಹೆ ನೀಡಲು ಸಾಧ್ಯ. ಆದ್ದರಿಂದ ವಿಜ್ಞಾನಿಗಳು ಈಗ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ತಕ್ಷಣ ಉತ್ತರ ನಿರೀಕ್ಷಿಸುವುದು ಸೂಕ್ತವಲ್ಲ. ಅಧ್ಯಯನ ವರದಿ ಬರುವವರೆಗೆ ಕಾಯುವುದು ಅಗತ್ಯ.

ತೋಟದಲ್ಲಿ ರೈತರೊಂದಿಗೆ ಮಾತನಾಡಿದ ಡಾ. ಹೆಬ್ಬಾರ್ ಅವರು, ಇತ್ತೀಚೆಗೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು. ವಿಶೇಷವಾಗಿ ಅಡಿಕೆ ತೋಟಗಳಲ್ಲಿ ಗಿಡಗಳ ಸರಿಯಾದ ಅಂತರ, ಬಸಿಗಾಲುವೆಗಳನ್ನು ಕಾಪಾಡಿಕೊಳ್ಳುವುದರಿಂದ ರೋಗ ನಿಯಂತ್ರಣ ಸುಲಭವಾಗುತ್ತದೆ ಮತ್ತು ಇಳುವರಿಯೂ ಉತ್ತಮವಾಗುತ್ತದೆ ಎಂದು ಅವರು ಸೂಚಿಸಿದರು. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸುವುದು ಇಂದಿನ ಅವಶ್ಯಕತೆಯಾಗಿದೆ.

ಇದಕ್ಕೆ ವಿರುದ್ಧವಾಗಿ, ಕೆಲ ರೈತರು ತಕ್ಷಣದ ಪರಿಹಾರಕ್ಕಾಗಿ ಸಿಕ್ಕ ಸಿಕ್ಕ ಔಷಧಿಗಳನ್ನು ಸಿಂಪಡಿಸುವ ಪ್ರವೃತ್ತಿ ಹೊಂದಿದ್ದಾರೆ. “ಯಾರೋ ಹೇಳಿದರು” ಎಂಬ ಆಧಾರದ ಮೇಲೆ ಔಷಧಿ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಅದರಲ್ಲಿರುವ ಅಂಶಗಳು ಏನು, ಗಿಡ ಮತ್ತು ಮಣ್ಣಿನ ಮೇಲೆ ಅದರ ಪರಿಣಾಮ ಏನು ಎಂಬುದನ್ನು ಗಮನಿಸುವುದಿಲ್ಲ. ಒಂದು ಔಷಧಿ ಕೆಲಸ ಮಾಡದಿದ್ದರೆ ಮತ್ತೊಂದು, ಹೀಗೆ ಕ್ರಮೇಣ ಬದಲಾವಣೆ ಮಾಡುತ್ತಾ ಹೋಗುವುದು ದೀರ್ಘಕಾಲದಲ್ಲಿ ಗಿಡದ ಆರೋಗ್ಯ ಮತ್ತು ಮಣ್ಣಿನ ಗುಣಮಟ್ಟಕ್ಕೆ ಹಾನಿ ಉಂಟುಮಾಡುತ್ತದೆ. ಇದು ಕೂಡಾ ಅಪಾಯವೇ ಆಗಿದೆ.

ಯಾವುದೇ ಔಷಧಿ ಸಿಂಪಡಣೆ ಮಾಡಿದ ನಂತರ ಅದರ ಪರಿಣಾಮಕಾರಿತ್ವ ಸಾಮಾನ್ಯವಾಗಿ 15 ರಿಂದ 20 ದಿನಗಳಷ್ಟೇ ಇರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಗಿಡದಲ್ಲಿ ಅಥವಾ ಫಲದಲ್ಲಿ ರಾಸಾಯನಿಕ ಅವಶೇಷಗಳು ದೀರ್ಘಕಾಲ ಉಳಿಯಬಾರದು ಎಂಬುದರಿಂದ ಈ ಅವಧಿ ಕಡಿಮೆ ಇರುತ್ತದೆ. ಹೀಗಾಗಿ 20 ರಿಂದ 25 ದಿನಗಳೊಳಗೆ ಸಿಂಪಡಣೆ ಪುನರಾವರ್ತನೆ ಮಾಡುವ ಸಲಹೆ ನೀಡಲಾಗುತ್ತದೆ. ಎರಡು ತಿಂಗಳುಗಳವರೆಗೆ ಒಂದೇ ಸಿಂಪಡಣೆ ಪರಿಣಾಮಕಾರಿಯಾಗಿ ಉಳಿಯುವುದು ಸಾಧ್ಯವಿಲ್ಲ.

ಇತ್ತೀಚಿನ ಹವಾಮಾನ ಬದಲಾವಣೆಗಳ ಹಿನ್ನೆಲೆಯಲ್ಲಿ ರೋಗಗಳ ಸ್ವರೂಪವೂ ಬದಲಾಗುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಒಂದು ಔಷಧಿ ಮೇಲೆ ಅವಲಂಬನೆ ಹೆಚ್ಚಾದರೆ ರೋಗಾಣುಗಳು ರೋಗನಿರೋಧಕ ಶಕ್ತಿ ವೃದ್ಧಿಸಿಕೊಂಡು ಮತ್ತಷ್ಟು ಬಲಿಷ್ಠವಾಗುವ ಸಾಧ್ಯತೆಯಿದೆ. ಇದರಿಂದಾಗಿ ಕಾಂಟಾಕ್ಟ್‌ ಫಂಗಿಸೈಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅನಗತ್ಯ ಮತ್ತು ಪರಿಶೀಲನೆಯಿಲ್ಲದ ಔಷಧಿಗಳ ಬಳಕೆ ತಪ್ಪಿಸಿಕೊಳ್ಳುವುದು ಅತ್ಯಂತ ಮುಖ್ಯ.

ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾನೋ ಔಷಧಿಗಳು ಅಥವಾ ಹೊಸ ಉತ್ಪನ್ನಗಳ ಬಗ್ಗೆ ಕೂಡ ಜಾಗ್ರತೆ ಅಗತ್ಯ. ಅವುಗಳ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಇಲ್ಲದೆ ಬಳಸುವುದು ಅಥವಾ ಇತರರಿಗೆ ಶಿಫಾರಸು ಮಾಡುವುದು ಅಪಾಯಕಾರಿಯಾಗಿದೆ. ಅಡಿಕೆ ಗಿಡ, ಮರಗಳ ಮೇಲೆ ನ್ಯಾನೋ ಔಷಧಿಗಳ ಬಗ್ಗೆ ಇನ್ನೂ ವೈಜ್ಞಾನಿಕ ಸಂಸ್ಥೆಯ ಶಿಫಾರಸು ಆರಂಭವಾಗಿಲ್ಲ. ಒಂದು ವೇಳೆ ಗಿಡಗಳಿಗೆ ಹಾನಿಯಾದರೆ ಅದರ ಹೊಣೆಗಾರಿಕೆ ಯಾರು ಎಂಬ ಪ್ರಶ್ನೆಗೂ ಉತ್ತರ ಇಲ್ಲ.

ಈ ನಡುವೆ, ಈಗಾಗಲೇ ತಿಳಿದಿರುವ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಉತ್ತಮ. ಎಲೆಚುಕ್ಕೆ ರೋಗ ಇರುವ ತೋಟಗಳಲ್ಲಿ ಮಳೆಗಾಲದಲ್ಲಿ ಕೊಳೆರೋಗ ನಿಯಂತ್ರಣಕ್ಕಾಗಿ ಸಿಂಪಡಣೆ ಮಾಡುವಾಗ ಸಿಂಗಾರದ ಜೊತೆಗೆ ಸೋಗೆಗಳಿಗೂ ಸಿಂಪಡಣೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕನಿಷ್ಠ ಕೊನೆಯ ಎರಡು ಸಿಂಪಡಣೆಯಾದರೂ ಬೋರ್ಡೋ ಮಿಶ್ರಣವನ್ನು ಬಳಕೆ ಮಾಡುವುದರಿಂದ ಎಲೆಚುಕ್ಕೆ ಹಾಗೂ ಸುಳಿ ಕೊಳೆ ರೋಗವನ್ನು ನಿಯಂತ್ರಿಸಲು ಸಹಕಾರಿ. ಸದ್ಯ ಅಡಿಕೆ ಮರದ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವುದು ಅಗತ್ಯ. ರೋಗ ನಿಯಂತ್ರಣಕ್ಕೆ ತಕ್ಷಣದ ಪರಿಹಾರಕ್ಕೆ ರಾಸಾಯನಿಕ ಬಳಕೆ ಅನಿವಾರ್ಯ. ಅದರ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಬೇಕು.

ಒಟ್ಟಿನಲ್ಲಿ, ಕೃಷಿಯಲ್ಲಿ ಆತುರದ ನಿರ್ಧಾರಗಳು ಅಪಾಯಕಾರಿಯಾಗಬಹುದು. ವಿಜ್ಞಾನಕ್ಕೆ ಸಮಯ ಬೇಕು. ಅಧ್ಯಯನ ವರದಿ ಬರುವವರೆಗೆ ಜಾಗ್ರತೆ ಮತ್ತು ಈಗಿರುವ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದೇ ರೈತರಿಗೆ ಉತ್ತಮ ಮಾರ್ಗವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Scientists from CPCRI have begun a three-year field study on arecanut leaf spot disease, emphasizing that validated solutions require long-term data. Farmers are advised to avoid indiscriminate fungicide use and instead follow scientifically proven practices like proper spacing and scheduled spraying.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ
April 6, 2026
6:59 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror