ಅಡಿಕೆ ಕೃಷಿ ಪ್ರಧಾನ ತಾಲೂಕಾಗಿರುವ ಸುಳ್ಯದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಹರಡಿರುವ ಎಲೆಚುಕ್ಕಿ ಮಹಾರೋಗ ಅಡಿಕೆ ಬೆಳೆಗಾರರ ಬದುಕನ್ನೇ ಅಲುಗಾಡಿಸಿದೆ. ತಾಲೂಕಿನ ಸುಮಾರು 80% ರೈತರು ಅಡಿಕೆ ಮೇಲೆ ಅವಲಂಬಿತರಾಗಿದ್ದು, ಫಸಲು ನಷ್ಟದ ಜೊತೆಗೆ ಅನೇಕ ಕಡೆ ಅಡಿಕೆ ತೋಟಗಳೇ ನಾಶವಾಗುತ್ತಿರುವುದು ಗಂಭೀರ ಚಿಂತೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ (ರಿ.) ಪುತ್ತೂರು–ಸುಳ್ಯ ತಾಲೂಕು ಅಡಿಕೆ ಬೆಳೆಗಾರ ಕೃಷಿಕರ ಘಟಕ ಇತ್ತೀಚೆಗೆ ಸಭೆ ನಡೆಸಿದ್ದು, ಅಡಿಕೆ ಬೆಳೆ ಮತ್ತು ಬೆಳೆಗಾರರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಸಂಚಾಲಕ ಎಂ ಡಿ ವಿಜಯಕುಮಾರ್ ತಿಳಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಈ ಬಾರಿ ಅಡಿಕೆ ಎಲೆಚುಕ್ಕಿ ರೋಗದಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಅದಕ್ಕೂ ಮೊದಲು ಸುಳ್ಯ ತಾಲೂಕಿನ ಎಲೆಚುಕ್ಕಿ ರೋಗ ಭಾದಿತ ಅಡಿಕೆ ರೈತರ ಸಮೀಕ್ಷೆಯನ್ನು ಕೈಗೊಳ್ಳಲು ಸಂಘ ನಿರ್ಧರಿಸಿದೆ. ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಸಹಕಾರದೊಂದಿಗೆ, ತಾಲೂಕಿನ ವಿವಿಧ ಸಹಕಾರಿ ಸಂಘಗಳ ಮೂಲಕ ಸಮೀಕ್ಷಾ ಅರ್ಜಿಗಳನ್ನು ವಿತರಿಸಿ ರೈತರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಎಲೆಚುಕ್ಕಿ ರೋಗದಿಂದ ಬಾಧಿತರಾದ ರೈತರು, ತಮ್ಮ ವ್ಯಾಪ್ತಿಯ ಸಹಕಾರಿ ಸಂಘಗಳಲ್ಲಿ ನಿಗದಿತ ಶುಲ್ಕ ನೀಡಿ ಅರ್ಜಿಯನ್ನು ಪಡೆದು, ವಿವರಗಳನ್ನು ದಾಖಲಿಸಿ 31-01-2026ರ ಒಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸಂಘ ಮನವಿ ಮಾಡಿದೆ. ಸಂಗ್ರಹಿಸಲಾದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು.
ಈ ಮೊದಲು ಅಡಿಕೆ ಬೆಳೆಗಾರರ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳಂತೆ, ಅಡಿಕೆ ಬೆಳೆಗಾರರು ಪಡೆದಿರುವ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ದೀರ್ಘಾವಧಿ ಸಾಲದ ಮೇಲಿನ ತಿಳಿ ಬಡ್ಡಿಯನ್ನು ರದ್ದುಪಡಿಸಬೇಕು, ತೀವ್ರ ನಷ್ಟದ ಹಿನ್ನಲೆಯಲ್ಲಿ ದೀರ್ಘಾವಧಿ ಸಾಲದ ಅಸಲು ಮರುಪಾವತಿಯನ್ನು ಕನಿಷ್ಠ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಸಂಘ ಒತ್ತಾಯಿಸಿದೆ.
ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ, ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ಸಹಕಾರದೊಂದಿಗೆ, ಸಂಘದ ನಿಯೋಗವು ಸಚಿವರು, ಸಂಸದರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸುವುದಾಗಿ ತೀರ್ಮಾನಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಶೂನ್ಯ ಬಡ್ಡಿಯ ಬೆಳೆಸಾಲ ಹಾಗೂ 3% ಬಡ್ಡಿಯಲ್ಲಿ ದೀರ್ಘಾವಧಿ ಸಾಲಗಳನ್ನು ನೀಡಿರುವ ರೈತಪರ ಸರ್ಕಾರ, ಇಂತಹ ಸಂಕಷ್ಟದ ಸಮಯದಲ್ಲಿ ಅಡಿಕೆ ಕೃಷಿಕರ ನೆರವಿಗೆ ನಿಲ್ಲಲಿದೆ ಎಂಬ ಪೂರ್ಣ ವಿಶ್ವಾಸ ನಮಗಿದೆ ಎಂದು ಸಂಘ ತಿಳಿಸಿದೆ. ಒಂದು ವೇಳೆ ಈ ಭರವಸೆ ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ರೈತರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭ ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಪ್ರಮುಖರಾದ ಮಾಧವ ಗೌಡ ಜಾಕೆ, ಹರೀಶ್ ಕಂಜಿಪಿಲಿ ಇದ್ದರು.


