ಜಿಜ್ಞಾಸೆ | ದಕ್ಷಿಣ ಕನ್ನಡದಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪಡಣೆ ಅನಿವಾರ್ಯವೇ? |

January 16, 2023
2:43 PM
ಅಡಿಕೆಗೆ ಪ್ರಮುಖವಾಗಿ ಈಗ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಅನೇಕ ವರ್ಷಗಳಿಂದ ಈ ರೋಗ ಕಂಡುಬಂದಿದ್ದರೂ ಈ ಬಾರಿ ಹೆಚ್ಚು ಪಸರಿಸಿದೆ ಹಾಗೂ ಅಲ್ಲಲ್ಲಿ ವ್ಯಾಪಕವಾಗಿ ಕಂಡುಬಂದಿದೆ. ಈ ಬಗ್ಗೆ ಸೂಕ್ತ ಔಷಧಿಯನ್ನೂ ವಿಜ್ಞಾನಿಗಳು ಹೇಳಿದ್ದಾರೆ. ಈಗ ಹಲವು ಕಡೆ ನಿಯಂತ್ರಣಕ್ಕೆ ಬಂದಿದೆ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ. ಈ ನಡುವೆಯೇ ದಕ್ಷಿಣ ಕನ್ನಡದಲ್ಲೂ ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಣೆ ಈಗಲೂ ನಡೆಯುತ್ತಿದೆ. ಅದಕ್ಕೆ ಡ್ರೋನ್‌ ಬಳಕೆ ಮಾಡಲಾಗುತ್ತಿದೆ. ಇದೀಗ ಈ ಔಷಧಿಗಳೂ ವಿಪರೀತ ಮಟ್ಟಕ್ಕೆ ಹೋಗುತ್ತಿದೆ. ಯಾವುದೇ ಅಧಿಕೃತವ ಅಧ್ಯಯನಗಳೂ ಆಗದೆ ಸಿಂಪಡಣೆ ನಡೆಯುತ್ತಿದೆ.  ಈ ಬಗ್ಗೆ ಪ್ರಗತಿಪರ ಯುವಕೃಷಿಕ ಸಮನ್ಯು ಅವರು ಭವಿಷ್ಯದ ದೃಷ್ಟಿಯಿಂದ ಜಿಜ್ಞಾಸೆ ಮುಂದಿಟ್ಟಿದ್ದಾರೆ….

ಸುಮಾರು 102 ವಿವಿಧ ಜಾತಿಯ ಕೀಟಗಳು ಅಡಿಕೆಯನ್ನು ಬಾಧಿಸುತ್ತವೆ ಎಂಬ ವರದಿಯಿದೆ. ಆದರೆ, ಬೇರು ಹುಳ, ಪೆಂತಿ ಮತ್ತು ಮೈಟ್ ಅಡಿಕೆಗೆ ಹೆಚ್ಚು ಹಾನಿಯುಂಟು ಮಾಡುವ ಕೀಟಗಳು. ಜೊತೆಗೆ, ತಿರಿ ತಿಗಣೆ, ಹಿಂಗಾರ ತಿನ್ನುವ ಕಂಬಳಿ ಹುಳ, ಶಲ್ಕೆ (ಕಜ್ಜಿ ಕೀಟ) ಮುಂತಾದ ಕೀಟಗಳೂ ಅಡಿಕೆಯನ್ನು ಕಾಡುವುದಿದೆ. ಅಂದರೆ, ಅಡಿಕೆಗೆ ಬಾಧಿಸುವ ಎಲ್ಲಾ ಕೀಟಗಳು ಗಂಭೀರ ಸಮಸ್ಯೆ ಉಂಟುಮಾಡುವುದಿಲ್ಲ.

Advertisement

ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿ ಪ್ರದೇಶ ತುಸು ವಿಭಿನ್ನ. ನೂರಾರು ಜಾತಿಯ ಗಿಡ ಮರಗಳು, ವಿಭಿನ್ನ ಕೀಟಗಳು / ಜೀವ ಜಂತುಗಳನ್ನು ಅಡಿಕೆ ಕೃಷಿ ಪರಿಸರದಲ್ಲಿ ಕಾಣಬಹುದು. ಇಂತಹ ಪ್ರದೇಶದಲ್ಲಿ ನಾವು ಬಳಸುವ ಕೃಷಿ ಒಳಸುರಿಗಳ ಬಗ್ಗೆ, ಬಹುಮುಖ್ಯವಾಗಿ ಕೀಟನಾಶಕಗಳ ಕುರಿತು ಅರಿವಿರಬೇಕು. ಯಾಕೆಂದರೆ, ನೂರಕ್ಕಿಂತಲೂ ಹೆಚ್ಚು ಕೀಟಗಳು ಅಡಿಕೆಯನ್ನು ಬಾಧಿಸಿದರೂ ಬೆರಳೆಣಿಕೆಯಷ್ಟು ಕೀಟಗಳು ಮಾತ್ರ ಗಮನಾರ್ಹವಾಗಿ ತೊಂದರೆ ನೀಡುವಂತವು. ಈ ಕೀಟಗಳ ಸಂಖ್ಯೆ ವೃದ್ಧಿಸದಂತೆ ತಡೆಯುವಲ್ಲಿ ನೈಸರ್ಗಿಕ ಶತ್ರು ಕೀಟಗಳ ಪಾತ್ರ ದೊಡ್ಡದು. ಅಡಿಕೆ ತೋಟ ಮತ್ತು ಅದರ ಸುತ್ತಮುತ್ತಲು ಕಾಣ ಸಿಗುವ ಜೇಡ, ಕಣಜ, ಕೆಂಪಿರುವೆ ಮತ್ತು ಇತರ ಜಾತಿಯ ಇರುವೆಗಳು, ಮಿಡತೆ, ಕೆಲವು ಜಾತಿಯ ಜೀರುಂಡೆ ಮತ್ತು ದುಂಬಿಗಳು, ಗುಲಗಂಜಿ ಕೀಟ ಸೇರಿದಂತೆ ಹಲವು ಕೀಟಗಳು ಅಡಿಕೆಗೆ ಹಾನಿಯುಂಟು ಮಾಡುವ ಕೀಟಗಳ ನೈಸರ್ಗಿಕ ಶತ್ರುಗಳು. ಅಡಿಕೆ ಬೆಳೆಗಾರರ ಮಿತ್ರರು. ಯಾವ ಫಲಾಪೇಕ್ಷೆ ಇಲ್ಲದೇ ಅವುಗಳು ಅಡಿಕೆ ಕೃಷಿಕನಿಗೆ ಸಹಾಯ ಮಾಡುತ್ತವೆ. ಅವುಗಳಿಗೆ ತೊಂದರೆ ಕನಿಷ್ಠವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಕೂಡ.

ಅನುಭವಿ ಕೃಷಿಕರೊಬ್ಬರು ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು. ತೊಂಬತ್ತರ ದಶಕದಲ್ಲಿ ಕಜ್ಜಿ ಕೀಟದ ಬಾಧೆಯು ಅವರ ತೋಟದಲ್ಲಿ ಕಂಡು ಬಂದಾಗ, ಕೀಟನಾಶಕ ಬಳಸಿದ್ದರಂತೆ. ಕೀಟನಾಶಕ ಬಳಸಿದ ನಂತರ ಕಜ್ಜಿ ಕೀಟದ ಸಮಸ್ಯೆ ಕಡಿಮೆ ಆಗಲಿಲ್ಲ, ಬದಲಾಗಿ, ತುಸು ಹೆಚ್ಚಾಯಿತಂತೆ. ನಂತರ, ಬೆಂಗಳೂರಿನಲ್ಲಿರುವ ಸಂಸ್ಥೆಯೊಂದರಿಂದ ಗುಲಗಂಜಿ ಕೀಟವನ್ನು ಖರೀದಿಸಿ ತೋಟದೊಳಗೆ ಬಿಡುಗಡೆ ಮಾಡಿದ ನಂತರ, ನಿಧಾನಕ್ಕೆ ಆ ಕೀಟದ ಉಪಟಳ ಕಡಿಮೆಯಾದದ್ದನ್ನು ಅವರು ತಿಳಿಸಿದ್ದರು. ಕೃಷಿಕರಾದ ಗೋವಿಂದ ಪ್ರಕಾಶರು ತನ್ನ ಸಣ್ಣ ಪ್ರಾಯದ ಅಡಿಕೆ ತೋಟದಲ್ಲಿ ಹಿಂಗಾರ ತಿನ್ನುವ ಕಂಬಳಿ ಹುಳುವಿನ ಬಾಧೆ ಇತ್ತೆಂದೂ, ಕೆಂಪಿರುವೆಯ ಕಾರಣದಿಂದಾಗಿ ಕ್ರಮೇಣ ಅದರ ಬಾಧೆ ಕಡಿಮೆ ಆಗಿದ್ದನ್ನು ತಿಳಿಸಿದ್ದರು. ಇತ್ತೀಚೆಗೆ ತೆಂಗಿನ ಮರಗಳಿಗೆ ಬಾಧಿಸುತ್ತಿರುವ ಬಿಳಿ ನೋಣದ ಕಥೆಯೂ ಹೀಗಿದೆ. ಕೀಟನಾಶಕ ಸಿಂಪಡಣೆ ಬೇಡವೆಂದು ಕೀಟಶಾಸ್ತ್ರಜ್ಞ ಡಾ. ಜೋಸೆಫ್ ರಾಜ್ ಕುಮಾರ್ ಹೇಳಿದಾಗ ಎಲ್ಲರಿಗೂ ಗೊಂದಲವಿತ್ತು. ಬಿಳಿ ನೊಣದ ನೈಸರ್ಗಿಕ ಶತ್ರು Encarsia ಸೇರಿದಂತೆ ಅನೇಕ ಕೀಟಗಳು ನಮ್ಮ ಪರಿಸರದಲ್ಲಿ ಇದ್ದು, ಅವುಗಳ ಸಂಖ್ಯೆ ವೃದ್ಧಿಯಾದಲ್ಲಿ ನಿಧಾನವಾಗಿ ಬಿಳಿ ನೊಣದ ಬಾಧೆ ಕಡಿಮೆ ಆಗುತ್ತದೆ ಎಂದು ತಿಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೀಟನಾಶಕ ಬಳಸಿದರೆ ಈ ಪರೋಪಕಾರಿ ಕೀಟಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ, ಸಾಮಾನ್ಯ ಪರಿಸ್ಥಿತಿಯಲ್ಲಿ ಕೀಟನಾಶಕ ಬಳಕೆ ಬೇಡ ಎನ್ನುವುದು ಅವರ ನಿಲುವಾಗಿತ್ತು. ಹಾಗೆಯೇ, ನಿಧಾನಕ್ಕೆ ಅದರ ಬಾಧೆ ಹಲವೆಡೆ ಕಡಿಮೆಯಾಗಿದೆ.

ಇವೆಲ್ಲಾ ನೆನಪಾಗಿದ್ದು ಇತ್ತೀಚೆಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಎಲೆಚುಕ್ಕೆ ರೋಗ ಬಾಧಿತ ಪ್ರದೇಶದಲ್ಲಿ ಕಂಡು ಬರುತ್ತಿರುವ ಡ್ರೋನ್ ಹಾರಾಟದ ಸಮಯದಲ್ಲಿ. ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶಕ್ಕೆ ಔಷಧಿ ಸಿಂಪಡಣೆ ಮಾಡಲು ಸಾಧ್ಯವಿರುವುದು ಮತ್ತು ಸಮುದಾಯಿಕ ಮಟ್ಟದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲು ಈ ಪುಟಾಣಿ ಗಾಳಿತೇರು ಸಹಕಾರಿ. ಆದರೆ, ಅಡಿಕೆ ತೋಟದಲ್ಲಿ ಡ್ರೋನ್ ಮುಖೇನ ಔಷಧ ಸಿಂಪಡಣೆ ಮಾಡಲು ಪ್ರಮಾಣಿತ ಕಾರ್ಯವಿಧಾನಗಳು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ಸ್ – SOP) ಇನ್ನೂ ಸಿದ್ಧವಿಲ್ಲ. ಈ ಹೊಸ ತಂತ್ರಜ್ಞಾನದಲ್ಲಿ ಔಷಧ ಸಿಂಪಡಣೆ ಮಾಡುವ ಸಮಯದಲ್ಲಿ ಕೃಷಿ ಕಾರ್ಮಿಕರಿಗೆ ಮತ್ತು ಕೃಷಿಕನ ಮೇಲೆ ಔಷಧ ಬೀಳುವ ಸಾಧ್ಯತೆ ಕಡಿಮೆ ಎನ್ನುವುದು ಪ್ರಮುಖ ಅಂಶ. ಆದರೆ, ತೋಟದಲ್ಲಿ ಇರುವ ನಮ್ಮ ಮಿತ್ರರ ಪರಿಸ್ಥಿತಿ?

ಎಲೆಚುಕ್ಕೆ ರೋಗ ನಿಯತ್ರಣಕ್ಕೆ ಡ್ರೋನ್ ಮೂಲಕ ಸಿಂಪಡಣೆ ಮಾಡುವಾಗ ಶಿಲೀಂಧ್ರನಾಶಕ, ಕೀಟನಾಶಕ, ಪತ್ರ ಸಿಂಚನ ಪೋಷಕಾಂಶ ಮತ್ತು ಅಂಟನ್ನು ಒಟ್ಟಿಗೆ ಬಳಸುವವರು ಇದ್ದಾರೆ. ನನ್ನ ಗಮನ ಸೆಳೆದದ್ದು ಅವರು ಸಿಂಪಡಣೆ ಮಾಡುವ Dimethoate ಎಂಬ ಕೀಟನಾಶಕ. ಹಲವು ದೇಶಗಳಲ್ಲಿ ಬಳಕೆಗೆ ನಿರ್ಭಂದಿಸಲಾಗಿರುವ broad spectrum ಕೀಟನಾಶಕ ಇದಾಗಿದೆ. ಜೇನು ಹುಳುಗಳಿಗೂ ಇದು ಶತ್ರು. ಅಕ್ಟೋಬರ್ – ಜನವರಿ ಸಮಯದಲ್ಲಿ ಕೀಟನಾಶಕವನ್ನು ಸಿಂಪಡಣೆ ಮಾಡುವ ಉದ್ದೇಶ ಅರ್ಥವಾಗುತ್ತಿಲ್ಲ. ಅಡಿಕೆ ಸಸಿ ಮತ್ತು ಸಣ್ಣ ಪ್ರಾಯದ ಮರಗಳಲ್ಲಿ ತಿರಿ ತಿಗಣೆ ಮತ್ತು ಹಿಂಗಾರ ತಿನ್ನುವ ಕಂಬಳಿ ಹುಳ ಹೊರತುಪಡಿಸಿ, ಔಷಧ ಸಿಂಪಡಣೆ ಮಾಡಲೇಬೇಕಾದ ಕೀಟಗಳನ್ನು ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಲು ಸಾಧ್ಯವಿಲ್ಲ. ಹಾಗಾದರೆ, ಕೀಟನಾಶಕದ ಸಿಂಪಡಣೆ ಯಾಕೆ? ಅದರಲ್ಲೂ, ಬಳಸುವ ಪ್ರಮಾಣವೂ ಅಧಿಕ. ಇಪ್ಪತ್ತು ಲೀಟರ್ ನೀರಿಗೆ 250 ಗ್ರಾಂ Dimethoate ಬಳಸುತ್ತಾರಂತೆ. ಕೆಲವು ಕಡೆ 250 ಎಂ.ಎಲ್. ಇಮಿಡಕ್ಲೋಪ್ರಿಡ್ ಬಳಸಿದ್ದೂ ಇದೆ. ಕೆಲವು ಕೃಷಿ ಒಳಸುರಿ ಮಾರಾಟಗಾರರು ಕೂಡ ಎಲೆಚುಕ್ಕೆ ರೋಗಕ್ಕೆ ಔಷಧಿ ಮಾರಾಟ ಮಾಡುವಾಗ ಕೀಟನಾಶಕವನ್ನೂ ಜೊತೆಗೆ ನೀಡುತ್ತಾರಂತೆ. ಅಡಿಕೆ ತೋಟದಲ್ಲಿ ಉಪಟಳ ನೀಡುವ ಕೀಟಗಳ ಸಂಖ್ಯೆ ಹೆಚ್ಚಿಲ್ಲದ ಈ ಸಮಯದಲ್ಲಿ ಕೀಟ ನಾಶಕದ ಬಳಕೆ ಯಾತಕ್ಕೆ? ಡ್ರೋನ್ ಮೂಲಕ ಪೀಡೆನಾಶಕ ಸಿಂಪಡಣೆ ಮಾಡಿದಾಗ ಅತೀ ಸಣ್ಣ ಕಣವಾಗಿ ತೋಟಕ್ಕೆ ಬೀಳುವ ದ್ರಾವಣದಲ್ಲಿ ಇರುವ high concentration ಕೀಟನಾಶಕವು ಅಡಿಕೆ ಪರಿಸರದಲ್ಲಿ ಇರುವ ಪರೋಪಕಾರಿ ಕೀಟಗಳಿಗೆ ಅಪಾಯಕಾರಿಯಾಗದೇ?

ಸಮಗ್ರ ಕೀಟ ನಿರ್ವಹಣಾ ಕ್ರಮಗಳಲ್ಲಿ ಇರುವ ಪ್ರಮುಖ ಅಂಶ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೀಟನಾಶಕ ಸಿಂಪಡಣೆ ಮಾಡಬೇಕು ಎಂಬುದು. ಅದರ ಪಾಲನೆ ಕೂಡ ಬಹಳ ಮುಖ್ಯ. ಜ್ವರಕ್ಕೆಂದು ಔಷಧ ತೆಗೆದುಕೊಳ್ಳುವಾಗ ಹೊಟ್ಟೆ ನೋವಿಗೂ ಔಷಧ ತೆಗೆದುಕೊಳ್ಳುತ್ತೇವೆಯೇ? ಸಸ್ಯಗಳೂ ಕೂಡ ಇದಕ್ಕೆ ಹೊರತಲ್ಲ. ಹಾಗಾಗಿ, ಅಡಿಕೆ ತೋಟಗಳಿಗೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೀಟನಾಶಕ ಸಿಂಪಡಣೆ ಮಾಡಬೇಕು. ಹೇಗೂ ಶಿಲೀಂಧ್ರನಾಶಕ ಸಿಂಪಡಣೆ ಮಾಡುತ್ತೇವೆ, ಜೊತೆಗೆ ಕೀಟನಾಶಕವೂ ಇರಲಿ ಎನ್ನುವ ನಿಲುವು ಸರಿಯೇ?

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

ಇದನ್ನೂ ಓದಿ

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ
ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
April 12, 2025
8:40 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ
April 12, 2025
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group