ಮಿಜೋರಾಂನ ಚಂಪೈ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಗಡಿ ಭದ್ರತಾ ಪಡೆಯು ಪತ್ತೆ ಮಾಡಿದೆ. 3.8 ಕೋಟಿ ರೂ.ಗಳ ಮೌಲ್ಯದ 2,100 ಚೀಲ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಹಸ್ತಾಂತರಿಸಿದೆ. ಈಗಿನ ಮಾಹಿತಿ ಪ್ರಕಾರ ಮಾನ್ಮಾರ್ ನಿಂದ ಅಡಿಕೆಯನ್ನು ಇಂಡೋ ಮಾನ್ಮಾರ್ ಗಡಿ ಮೂಲಕ ಮಿಜೋರಾಂ ದಾರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು.
ಅಡಿಕೆ ಮಾರುಕಟ್ಟೆಗೆ ಮತ್ತೆ ಬಲ ಸಿಗುತ್ತಿದೆ. ಧಾರಣೆ ಸ್ಥಿರತೆ ಹಾಗೂ ಮಾರುಕಟ್ಟೆ ಏರಿಕೆಗೆ ನಿರೀಕ್ಷೆ ಕಂಡುಬಂದಿದೆ. ಲಾಕ್ಡೌನ್ ನಂತರ ದೇಶದ ಎಲ್ಲಾ ಗಡಿಭಾಗಗಳಲ್ಲೂ ಭದ್ರತೆಯನ್ನು ಹೆಚ್ಚಿಸಿರಿಸುವಿದರಿಂದ ಅಡಿಕೆ ಕಳ್ಳ ಸಾಗಾಣಿಕೆ ಕಷ್ಟವಾಗುತ್ತಿದೆ. ಅಕ್ರಮ ಹಾದಿಯಲ್ಲಿ ಅಡಿಕೆ ಆಮದು ಸಾಧ್ಯವಾಗುತ್ತಿಲ್ಲ.
ಇದೀಗ ಮತ್ತೆ ಮಾನ್ಮಾರ್ ನಿಂದ ಅಡಿಕೆಯನ್ನು ಕಳ್ಳದಾರಿಯ ಮೂಲಕ ದೇಶದೊಳಕ್ಕೆ ಸಾಗಿಸುವಾಗ ಅಸ್ಸಾಂ ಗಡಿಭದ್ರತಾ ಪಡೆಯು ತಡೆದಿದೆ. ಖಚಿತ ಮಾಹಿತಿ ಮೇರೆಗೆ, 23 ಸೆಕ್ಟರ್ ನ ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ವಿಭಾಗದ 8 ನೇ ಬೆಟಾಲಿಯನ್ ಜಂಟಿ ತಂಡವು ಅಡಿಕೆ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ದಾಳಿ ನಡೆಸಿತು. ಈ ಸಂದರ್ಭ 3.52 ಕೋಟಿ ರೂ.ಗಳ ಮೌಲ್ಯದ 2,100 ಚೀಲ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದಾದ ಬೆನ್ನಲ್ಲೆ ಇನ್ನೊಂದು ದಾಸ್ತಾನು ಕೇಂದ್ರಕ್ಕೆ ದಾಳಿ ನಡೆಸಿದ ಅಸ್ಸಾಂ ಗಡಿ ಭದ್ರತಾ ಪಡೆಯು ಮಿಜೋರಾಂನ ಚಂಪೈ ಜಿಲ್ಲೆಯಲ್ಲಿ 21 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ಹಾಗೂ ಮಣಿಪುರದ ಚುರಚಾಂದ್ ಪುರದಿಂದ 31 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದೆ.
ಇದೇ ವೇಳೆ ಈ ಬಾರಿ ಅಡಿಕೆ ಫಸಲು ತೀರಾ ಕಡಿಮೆ ಇರುವುದರಿಂದ ಹೊಸ ಅಡಿಕೆ ಧಾರಣೆಯೂ ಇಳಿಕೆ ಕಾಣದು ಎಂಬುದು ಮಾರುಕಟ್ಟೆಯಲ್ಲಿನ ಸದ್ಯದ ಲೆಕ್ಕಾಚಾರ.
ಆದರೆ ಅಡಿಕೆ ಧಾರಣೆ ಏರಿಳಿಕೆಗೆ ವಿವಿಧ ಪ್ರಯತ್ನಗಳು ಆಗಾಗ ನಡೆಯುತ್ತಿರುವುದನ್ನು ಬೆಳೆಗಾರರು ಗಮನಿಸಿದರೆ ಅಡಿಕೆ ಮಾರುಕಟ್ಟೆ ಸ್ಥಿರತೆ ಹಾಗೂ ಧಾರಣೆ ಏರಿಕೆಗೆ ಹೆಚ್ಚು ಅನುಕೂಲವಾಗಲಿದೆ.