ಭಾರೀ ಮಳೆಯ ನಡುವೆಯೇ ಇದೀಗ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ವಾರದಿಂದ 10 ರೂಪಾಯಿಯಷ್ಟು ಏರಿಕೆ ಕಾಣಲಿದೆ ಎಂಬುದು ಈಗಿನ ನಿರೀಕ್ಷೆ. ಹಳೆ ಅಡಿಕೆ 550 ಆಸುಪಾಸಿನಲ್ಲಿ ಹಾಗೂ ಹೊಸ ಅಡಿಕೆ 445 ರೂಪಾಯಿ ಆಸುಪಾಸಿಗೆ ಏರಿಕೆ ಸಾಧ್ಯತೆ ಇದೆ.
ಅಡಿಕೆ ಧಾರಣೆಯು ಕಳೆದ ಕೆಲವು ದಿನಗಳಿಂದ ಸ್ಥಿರತೆಯಲ್ಲಿತ್ತು. ಕ್ಯಾಂಪ್ಕೋ ಧಾರಣೆಯು ಹೊಸ ಅಡಿಕೆಗೆ 450 ರೂಪಾಯಿ ಗರಿಷ್ಠ ಧಾರಣೆ ಇದ್ದರೂ ಸದ್ಯ 430 ರೂಪಾಯಿಗೆ ಖರೀದಿ ನಡೆಯುತ್ತಿತ್ತು. ಹಳೆದ ಅಡಿಕೆಧಾರಣೆಯು 550 ರೂಪಾಯಿ ನಿಗದಿಯಾದರೂ 520 ರೂಪಾಯಿಗೆ ಖರೀದಿ ನಡೆಸಲಾಗುತ್ತಿತ್ತು. ಖಾಸಗಿ ಧಾರಣೆಯೂ ಹೊಸ ಅಡಿಕೆಗೆ 430-432 ರೂಪಾಯಿ ಇದ್ದರೆ ಹಳೆ ಅಡಿಕೆ 520-525 ರೂಪಾಯಿವರೆಗೂ ಖರೀದಿಯಾಗುತ್ತಿತ್ತು. ಇದೀಗ ಅಡಿಕೆ ಬೇಡಿಕೆ ವ್ಯಕ್ತವಾದರೂ ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಕಾಡುತ್ತಿದೆ. ಹೀಗಾಗಿ ಧಾರಣೆ ಏರಿಕೆ ನೀರೀಕ್ಷೆ ಇದೆ. ಇದೇ ವೇಳೆ ಅಸ್ಸಾಂ, ಮೇಘಾಲಯ ಸೇರಿದಂತೆ ಉತ್ತರದ ಭಾಗದಲ್ಲಿ ಭಾರೀ ಮಳೆಯ ಕಾರಣದಿಂದ ಅಡಿಕೆ ವಹಿವಾಟು ಬಹುಪಾಲು ದಕ್ಷಿಣದ ಕಡೆಗೆ ಮುಖ ಮಾಡಿದೆ. ಈ ನಡುವೆಯೇ ಅಡಿಕೆ ಮಾರುಕಟ್ಟೆಯಲ್ಲಿ ತೇಜಿ ವಾತಾವರಣ ಕಂಡುಬಂದಿದೆ. ಮುಂದಿನ ವಾರ ಅಡಿಕೆ ಮಾರುಕಟ್ಟೆಯಲ್ಲಿ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ.