ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾಗಿದೆ ಅಡಿಕೆ ಧಾರಣೆ. ಕ್ಯಾಂಪ್ಕೋ ಸೋಮವಾರದ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯನ್ನು ಒಮ್ಮೆಲೇ 10 ರೂಪಾಯಿ ಏರಿಸಿದೆ. ಹೀಗಾಗಿ ಹೊಸ ಅಡಿಕೆ ಧಾರಣೆ 475 ರೂಪಾಯಿಗೆ ಏರಿಕೆಯಾಗಿದೆ.
ಕ್ಯಾಂಪ್ಕೋ ಶುಕ್ರವಾರ ದ್ವಿತೀಯ ದರ್ಜೆಯ ಅಡಿಕೆ ಧಾರಣೆ ಏರಿಕೆ ಮಾಡಿದ ಬೆನ್ನಲ್ಲೇ ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆ ಮಾಡಿತ್ತು. ಖಾಸಗಿ ಮಾರುಕಟ್ಟೆ ಹೊಸ ಅಡಿಕೆ 480-482 ರೂಪಾಯಿ ಹಾಗೂ ಹಳೆ ಅಡಿಕೆ 573 -575 ರೂಪಾಯಿಗೆ ಖರೀದಿ ಮಾಡುತ್ತಿತ್ತು. ಶನಿವಾರದಂದು ಕ್ಯಾಂಪ್ಕೋ ಹೊಸ ಅಡಿಕೆ ಧಾರಣೆ 465 ರೂಪಾಯಿಗೆ ಹಾಗೂ ಹಳೆ ಅಡಿಕೆ 560 ರೂಪಾಯಿಗೆ ಖರೀದಿ ನಡೆಸುತ್ತಿತ್ತು. ಸೋಮವಾರ ಹೊಸ ಅಡಿಕೆ ಧಾರಣೆಯನ್ನು 10 ರೂಪಾಯಿ ಏರಿಕೆ ಮಾಡಿ 475 ರೂಪಾಯಿಗೆ ಖರೀದಿ ಮಾಡುತ್ತಿದೆ. ಇದರ ಜೊತೆಗೆ ಹಳೆ ಪಠೋರ ಹಾಗೂ ಹೊಸ ಪಠೋರ ದರವನ್ನೂ 10 ರೂಪಾಯಿ ಏರಿಕೆ ಮಾಡಿದ್ದು ಈಗ 380 ರೂಪಾಯಿಗೆ ಖರೀದಿ ಮಾಡುತ್ತಿದೆ. ಇದೀಗ ಖಾಸಗಿ ಮಾರುಕಟ್ಟೆಯಲ್ಲಿ ಕೂಡಾ ಸಂಚಲನ ಕಂಡುಬಂದಿದ್ದು ಹೊಸ ಅಡಿಕೆ ಧಾರಣೆ 485-487 ರೂಪಾಯಿಗೆ ಖರೀದಿಯ ವರದಿಗಳು ಬರುತ್ತಿವೆ.
ಇದೇ ವೇಳೆ ರಬ್ಬರ್ ಧಾರಣೆ ಸೋಮವಾರ ಸ್ಥಿರತೆ ಸಾಧಿಸಿದ್ದು ರಬ್ಬರ್ (RSS4)157 ರೂಪಾಯಿಗೆ ಖರೀದಿಯಾಗುತ್ತಿದೆ.