ಅಡಿಕೆ ಧಾರಣೆ ಏರುತ್ತಲೇ ಇದೆ. ಗುರುವಾರ ಚಾಲಿ ಅಡಿಕೆ ಧಾರಣೆ ಮತ್ತೆ ಖಾಸಗಿ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಚಾಲಿ ಹೊಸ ಅಡಿಕೆ 490-495 ರೂಪಾಯಿ ಹಾಗೂ ಹಳೆ ಅಡಿಕೆ 570-575 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಕ್ಯಾಂಪ್ಕೋ ಅಡಿಕೆ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ಹೊಸ ಅಡಿಕೆ 475 ರೂಪಾಯಿ ಹಾಗೂ ಹಳೆ ಅಡಿಕೆ 560 ರೂಪಾಯಿಗೆ ಖರೀದಿ ನಡೆಸುತ್ತಿದೆ.
ಚಾಲಿ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಹೊಸ ಅಡಿಕೆ ಧಾರಣೆ 500 ರೂಪಾಯಿ ತಲಪುತ್ತಿದೆ. ಇನ್ನು ಎರಡು ದಿನದಲ್ಲಿ ಹೊಸ ಚಾಲಿ ಅಡಿಕೆ ಧಾರಣೆ 500 ರೂಪಾಯಿ ತಲುಪಲಿದೆ. ಗಣೇಶ ಚೌತಿ ಹತ್ತಿರವಾಗುತ್ತಿದ್ದಂತೆಯೇ ಅಡಿಕೆ ಧಾರಣೆಯೂ ಏರುಗತಿಯಲ್ಲಿ ಸಾಗುತ್ತಿದೆ. ಈಗ ಎರಡು ದಿನಗಳಿಂದ ಧಾರಣೆ ಏರಿಕೆಯ ವೇಗಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ. ಅಡಿಕೆ ದಾಸ್ತಾನು ಕಾರಣದಿಂದ ಬೇಡಿಕೆ ಹೆಚ್ಚುತ್ತಲೇ ಇತ್ತು. ಹೊಸ ಅಡಿಕೆ ದಾಸ್ತಾನು ಹಲವು ವ್ಯಾಪಾರಸ್ಥರು ಚೌತಿಯ ಸಮಯದಲ್ಲಿ ಮಾಡುವುದು ಈ ಹಿಂದೆಯೂ ಕಂಡುಬಂದಿತ್ತು. ಇನ್ನು ಒಂದು ತಿಂಗಳು ದಾಸ್ತಾನು ಇರಿಸಿದರೆ ಕನಿಷ್ಟ 60- 70 ರೂಪಾಯಿ ಲಾಭ ಪಡೆಯಬಹುದು ಎನ್ನುವುದು ವ್ಯಾಪಾರದ ಲೆಕ್ಕಾಚಾರ. ಈಗ ಬೆಳೆಗಾರರು ಕೂಡಾ ಲಾಭ-ನಷ್ಟದ ಲೆಕ್ಕಾಚಾರ ಇರಿಸಿಕೊಂಡು ಅಗತ್ಯಕ್ಕೆ ತಕ್ಕಷ್ಟೇ ಮಾರುಕಟ್ಟೆಗೂ ಅಡಿಕೆ ಬಿಡುತ್ತಿದ್ದಾರೆ.
ಅಡಿಕೆ ಧಾರಣೆಯ ನಡುವೆಯೇ ಈಗ ಯಂತ್ರದ ಮೂಲಕ ಸುಲಿದ ಚಾಲಿ ಅಡಿಕೆಯ ಬಗ್ಗೆ ಚಿಂತೆ ಶುರುವಾಗಿದೆ. ಯಂತ್ರದ ಮೂಲಕ ಅಡಿಕೆ ಸುಲಿದಾಗ ಕೆಲವು ಅಡಿಕೆಗಳು ಹುಡಿಯಾಗುತ್ತವೆ, ಇನ್ನೂ ಕೆಲವು ಅಡಿಕೆಗಳಿಗೆ ಹಾನಿಯಾಗುತ್ತದೆ. ಇಂತಹ ಅಡಿಕೆಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಸಿಗುತ್ತಿದೆ. ಆದರೆ ಇದನ್ನು ಅಡಿಕೆ ಗ್ರೇಡ್ ಮಾಡುವ ವೇಳೆ ತುಕ್ಡಾ , ಚೋರ್ ಎಂದು ವಿಭಾಗ ಮಾಡಲಾಗುತ್ತದೆ. ಆದರೆ ಧಾರಣೆಯಲ್ಲಿ ಮಾತ್ರಾ ತೀರಾ ವ್ಯತ್ಯಾಸ ಇರುತ್ತದೆ. ಇದಕ್ಕಾಗಿ ಖಾಸಗಿ ವ್ಯಾಪಾರಿಗಳು ಸಹಿತ ಕ್ಯಾಂಪ್ಕೋ ಸೂಕ್ತವಾದ ದರ ನಿಗದಿ ಮಾಡಬೇಕು ಎನ್ನುವ ಒತ್ತಾಯ ಬೆಳೆಗಾರರಿಂದ ವ್ಯಕ್ತವಾಗಿದೆ. ಇಂದು ಬಹುಪಾಲು ಕೃಷಿಕರು ಯಂತ್ರದ ಮೂಲಕ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಕೊರತೆಯ ಕಾರಣದಿಂದ ಯಂತ್ರ ಬಳಕೆ ಅನಿವಾರ್ಯವಾಗಿದೆ. ಆದರೆ ಅಡಿಕೆ ಗುಣಮಟ್ಟ ಇದ್ದರೂ ಯಂತ್ರದ ಮೂಲಕ ಸುಲಿದ ಎಂಬ ಕಾರಣಕ್ಕೆ ಧಾರಣೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ಕೃಷಿಕರು ಹೇಳುತ್ತಾರೆ. ಇದಕ್ಕಾಗಿ ಕ್ಯಾಂಪ್ಕೋ ಗಂಭೀರವಾಗಿ ಪರಿಗಣಿಸಬೇಕು ಎಂಬುದು ಕೃಷಿಕರ ಒತ್ತಾಯ.