ಅಡಿಕೆ ಮಾರುಕಟ್ಟೆಯಲ್ಲಿ(Arecanut Market) ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಸಹಜವಾದ ಏರಿಳಿದ ಕಂಡಿದೆ. ಗುರುವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಪಠೋರ ಹಾಗೂ ಇತರ ಅಡಿಕೆ ದರ 5 ರೂಪಾಯಿ ಇಳಿಕೆ ಮಾಡಿದೆ.ಸದ್ಯ 385 ರೂಪಾಯಿಗೆ ಖರೀದಿ ನಡೆಯುತ್ತಿದೆ. ಆದರೆ ಅಡಿಕೆ ಧಾರಣೆ ಕಳೆದ ಎರಡು ವಾರದಿಂದ ಸ್ಥಿರವಾಗಿದೆ. ಈ ನಡುವೆ ಸಹಕಾರಿ ಸಂಸ್ಥೆ ಮಾಸ್ , ವಿಟ್ಲದ ಪಿಂಗಾರ ಸಂಸ್ಥೆ ಬಾರಿ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋಗಿಂತ ಮುಂದಿದೆ. ಖಾಸಗಿ ವಲಯದಲ್ಲಿ ಅಡಿಕೆ ಧಾರಣೆ ಸ್ಥಿರವಾಗಿದೆ.
ಕ್ಯಾಂಪ್ಕೋದಲ್ಲಿ ಚಾಲಿ ಹೊಸ ಅಡಿಕೆ 475 ,ಮಾಸ್- 485 ,ಪಿಂಗಾರ ಸಂಸ್ಥೆಯಲ್ಲಿ 485 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 485 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಧಾರಣೆ ಮಾತ್ರಾ ಉಳಿದೆಲ್ಲಾ ಸಂಸ್ಥೆಗಳು, ಖಾಸಗಿ ಮಾರುಕಟ್ಟೆಗಿಂತ 10 ರೂಪಾಯಿ ಕಡಿಮೆ ಇದೆ. ಹಳೆ ಚಾಲಿ ಅಡಿಕೆಗೆ 560 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದ್ದರೆ ಮಾಸ್- 560 ,ಪಿಂಗಾರ ಸಂಸ್ಥೆಯಲ್ಲಿ 565 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 565-570 ರೂಪಾಯಿಗೆ ಖರೀದಿ ನಡೆಯುತ್ತಿದೆ.
ಚಾಲಿ ಪಠೋರಕ್ಕೆ ಸಹಜವಾಗಿಯೇ ಈಗ ಮಾರುಕಟ್ಟೆಯಲ್ಲಿ ಸ್ವಲ್ಪ ಬೇಡಿಕೆ ಕಡಿಮೆ ಇರುತ್ತದೆ. ಹಾಗೆಂದು ಧಾರಣೆ ಇಳಿಕೆ ಮಾಡುವಷ್ಟು ಬೇಡಿಕೆ ಕುಸಿತ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಇಂತಹ ವ್ಯತ್ಯಾಸಗಳು ಸಹಜವಾಗಿಯೇ ಇರುತ್ತದೆ. ಅಡಿಕೆ ಧಾರಣೆ ಇನ್ನಷ್ಟು ಸ್ಥಿರತೆಯತ್ತ ಸಾಗುತ್ತಿದೆ. ಚೌತಿ ಬಳಿಕ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಈ ಬಾರಿ ಮಳೆಯ ಕಾರಣದಿಂದ ಸ್ವಲ್ಪ ತಡವಾಗಿ ಅಡಿಕೆಯು ಮಾರುಕಟ್ಟೆ ಪ್ರವೇಶ ಮಾಡುತ್ತದೆ. ಈ ಸಂದರ್ಭದಲ್ಲಿ ಒಮ್ಮೆ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುವುದನ್ನು ಅಡಿಕೆ ಬೆಳೆಗಾರರು ಗಮನಿಸುವುದು ಉತ್ತಮ.