ಅಡಿಕೆ ಆಮದು ಚರ್ಚೆಯ ನಡುವೆಯೂ ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಂಡಿದೆ. ಭಾರತದ ಅಡಿಕೆ ಮಾರುಕಟ್ಟೆಯು ಆಮದು ಕಾರಣದಿಂದ ಧಾರಣೆಯಲ್ಲಿ ಸದ್ಯ ಯಾವುದೇ ಪರಿಣಾಮವಾಗದು ಎಂಬುದನ್ನು ಕ್ಯಾಂಪ್ಕೋ ಸಂಸ್ಥೆ ಧಾರಣೆ ಏರಿಕೆಯ ಮೂಲಕ ತಿಳಿಸಿದೆ. ಇದೇ ವೇಳೆ ಹೊಸ ಚಾಲಿ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು ಅ.1 ರಿಂದ ಹೊಸ ಚಾಲಿ ಅಡಿಕೆ ಧಾರಣೆ ನಿಗದಿಯಾಗಿದೆ. ಆರಂಭದ ಧಾರಣೆ 380 ರೂಪಾಯಿ ನಿಗದಿಯಾಗಿದೆ. ಇದೇ ವೇಳೆ ರಬ್ಬರ್ ಧಾರಣೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ.
ಅಡಿಕೆ ಮಾರುಕಟ್ಟೆಯಲ್ಲಿ ಹೊಸದು – ಹಳೆಯದು ಕಾಲ ಆರಂಭವಾಗಿದೆ. ಪ್ರತೀ ವರ್ಷ ಚೌತಿಯ ಬಳಿಕ ಹೊಸ ಅಡಿಕೆ ಹಳೆಯದಾಗಿ ಈ ವರ್ಷದ ನೂತನ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಸಂಪೂರ್ಣ ಒಣಗಿ ದಾಸ್ತಾನು ಇರಿಸಿರುವ ಚಾಲಿ ಅಡಿಕೆ ಸುಮಾರು 180 ದಿನಗಳ ಬಳಿಕ ಒಳಗಿನ ಬಣ್ಣ ಬದಲಾಗಿ ಅಂತಹ ಅಡಿಕೆ ಹಳೆ ಅಡಿಕೆ ಎಂದು ಪರಿಗಣನೆಯಾಗುತ್ತದೆ. ಅಂದರೆ ಸುಮಾರು ಗಣೇಶ ಚೌತಿಯ ಬಳಿಕ ಹಳೆ ಅಡಿಕೆ ಎನ್ನುವುದು ಹಿಂದಿನಿಂದಲೂ ವಾಡಿಕೆ. ವೈಜ್ಞಾನಿಕವಾಗಿಯೂ ಅಡಿಕೆಯೊಳಗಿನ ತೇವಾಂಶ ಕಡಿಮೆಯಾಗುತ್ತಾ ಬಂದಂತೆ ಗುಣಮಟ್ಟವೂ ಏರಿಕೆಯಾಗುತ್ತದೆ. ಅಂತಹ ಅಡಿಕೆ ಹಳೆ ಅಡಿಕೆ ಎಂದು ಕರೆಯಲಾಗುತ್ತದೆ. ಇದೀಗ ಅ.1 ರಿಂದ ಹೊಸ ಅಡಿಕೆ ಧಾರಣೆ ನಿಗದಿಯಾಗುವುದರ ಮೂಲಕ ಹೊಸ ಅಡಿಕೆ ಹಳೆಯ ಅಡಿಕೆಯಾಗಿ ಬದಲಾಗಿದೆ. ಅಂತಹ ಹೊಸ ಅಡಿಕೆ ಧಾರಣೆ 380 ರೂಪಾಯಿ ಕ್ಯಾಂಪ್ಕೋ ನಿಗದಿ ಮಾಡಿದೆ. ಖಾಸಗಿ ವಲಯದಲ್ಲಿ ಹೊಸ ಅಡಿಕೆ ಮಾರುಕಟ್ಟೆ ಇನ್ನಷ್ಟೇ ನಿಗದಿಯಾಗಬೇಕಿದೆ. ಆದರೆ 390 ರೂಪಾಯಿ ಸದ್ಯ ಖರೀದಿ ನಡೆಸುವ ಬಗ್ಗೆ ಅನಧಿಕೃತ ಮಾಹಿತಿ ಇದೆ.
ಇದೇ ವೇಳೆ ಹಳೆ ಚಾಲಿ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿ 480 ರೂಪಾಯಿಗೆ ಖರೀದಿ ಮಾಡುತ್ತಿದೆ. ಚೋಲ್ ಅಡಿಕೆ 560 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿದೆ.
ರಬ್ಬರ್ ಧಾರಣೆಯಲ್ಲಿ ಸ್ವಲ್ಪ ಏರಿಕೆಯ ಲಕ್ಷಣ ಕಂಡಿದೆ. ಸದ್ಯ RSS4 ರಬ್ಬರ್ ಗೆ 146 ರೂಪಾಯಿ ಹಾಗೂ ಲಾಟ್ ರಬ್ಬರ್ ಗೆ 131 ರೂಪಾಯಿಗೆ ಖರೀದಿಯಾಗುತ್ತಿದೆ.