ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯ ಸೂಚನೆ ಕಂಡುಬಂದಿದೆ. ಚಾಲಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದ್ದು ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಉತ್ಸಾಹದ ಕಡೆಗೆ ಸಾಗಿದೆ. ಕ್ಯಾಂಪ್ಕೋ ಅಡಿಕೆ ಧಾರಣೆಯಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಖಾಸಗಿ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೂಡಾ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಿದೆ.ಸದ್ಯ ಕ್ಯಾಂಪ್ಕೋ ಚಾಲಿ ಅಡಿಕೆಯ ಹೊಸ ಅಡಿಕೆಯನ್ನು 380 ಹಳೆ ಅಡಿಕೆ 490 ರೂಪಾಯಿಗೆ ಹಾಗೂ ಡಬಲ್ ಚೋಲ್ 545 ರೂಪಾಯಿಗೆ ಖರೀದಿ ನಡೆಸುತ್ತಿದೆ.
ಗುಜರಾತ್ ಚುನಾವಣೆಯ ಬಳಿಕ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಲಿದೆ. ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಅಡಿಕೆ ಬೆಳೆಗಾರರು ಇರಿಸಿಕೊಳ್ಳಬೇಕಾಗಿಲ್ಲ ಎಂಬುದು ಮಾರುಕಟ್ಟೆ ವರದಿ ಹೇಳುತ್ತದೆ.
ಹೊಸ ಅಡಿಕೆ ಧಾರಣೆ ಈಗ 380 ರೂಪಾಯಿ ಇದ್ದು ಈ ಧಾರಣೆ ಇನ್ನೂ ಸ್ವಲ್ಪ ಏರಿಕೆಯ ನಿರೀಕ್ಷೆ ಇದೆ. ಹಳೆ ಅಡಿಕೆ ಧಾರಣೆಯು ಸದ್ಯ 480 ರೂಪಾಯಿ ಆಸುಪಾಸಿನಲ್ಲಿಯೇ ಮುಂದುವರಿದು ನಂತರ 450 ರೂಪಾಯಿ ಆಸುಪಾಸಿನಲ್ಲಿ ಅಡಿಕೆ ಮಾರುಕಟ್ಟೆ ನಿಲ್ಲಲಿದೆ. ಭಾರೀ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆ ಏರಿಕೆಯಾದರೆ ಅಡಿಕೆ ವ್ಯಾಪಾರಿಗಳಿಗೂ, ಮಾರಾಟಗಾರರಿಗೂ ಸಮಸ್ಯೆಯಾಗುವುದರಿಂದ ಈ ಬಾರಿ ಅಡಿಕೆ ಮಾರುಕಟ್ಟೆ ನಿಯಂತ್ರಣಕ್ಕೆ ಬರಲಿದೆ. ಸಂಸ್ಥೆಗಳು ಕೂಡಾ ಅಡಿಕೆ ಮಾರುಕಟ್ಟೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗದಂತೆ ತಡೆಯುವ ಸಾಧ್ಯತೆ ಹೆಚ್ಚಿದೆ. ಹಿಂದೆ ಚಾಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆಗೆ 20-30 ರೂಪಾಯಿ ವ್ಯತ್ಯಾಸ ಇತ್ತು. ಈ ಬಾರಿ 100 ರೂಪಾಯಿ ವ್ಯತ್ಯಾಸ ಇದ್ದು ಈ ಅಂತರ ಕಡಿಮೆಯಾಗಲಿದೆ. 450 ರೂಪಾಯಿ ಧಾರಣೆಯಲ್ಲಿ ಸ್ಥಿರವಾಗುವ ನಿರೀಕ್ಷೆ ಇದೆ.