ಅಡಿಕೆ ಮಾರುಕಟ್ಟೆ ಏರಿಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ಅಡಿಕೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಇದೆ, ಆದರೆ ಧಾರಣೆ ಏರಿಕೆ ಯಾವಾಗ ? ಹೀಗೊಂದು ಪ್ರಶ್ನೆ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಸಂಕ್ರಾಂತಿ ನಂತರ ಅಡಿಕೆ ಧಾರಣೆ ಏರುತ್ತದೆ ಎಂದು ಕ್ಯಾಂಪ್ಕೋ ಹೇಳಿದೆ. ಬಹುಶ: ಇನ್ನೂ ಒಂದು ತಿಂಗಳ ಕಾಲ ಇದೇ ಧಾರಣೆ ನಿರೀಕ್ಷೆಯನ್ನು ಈಗ ಗಟ್ಟಿಗೊಳಿಸಿದೆ. ಅಗತ್ಯಕ್ಕೆ ತಕ್ಕಂತೆ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಕ್ಯಾಂಪ್ಕೋ ಸಲಹೆ ನೀಡಿರುವುದು ಇದೇ ಕಾರಣಕ್ಕೆ. ಹಾಗಿದ್ದರೆ ಅಡಿಕೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಇರುವ ಸಮಸ್ಯೆಗಳು ಏನು ?
ಕಳೆದ ವಾರ ಮುಂಬಯಿಯಲ್ಲಿ ತೆರಿಗೆ ಇಲಾಖೆ ಧಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಪತ್ತೆ ಮಾಡಿತು. ತೆರಿಗೆ ತಪ್ಪಿಸಿದ ಸಂಗತಿ ತಿಳಿಯಿತು, ಅದರಾಚೆಗೆ ತನಿಖೆ ನಡೆಸಿದಾಗ ಬರ್ಮಾ ಅಡಿಕೆ ಅಪಾರ ಪ್ರಮಾಣದಲ್ಲಿ ಮುಂಬಯಿ ಪ್ರವೇಶ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಬರ್ಮಾ ಅಡಿಕೆ ದಾಸ್ತಾನು ಇದ್ದರೂ ತೆರಿಗೆ ಇಲಾಖೆಯ ದಾಳಿ ಹಾಗೂ ನಿಗಾದ ಕಾರಣದಿಂದ ಅಡಿಕೆ ಮಾರುಕಟ್ಟೆ ಹಿಡಿತದಲ್ಲಿದ್ದು, ಧಾರಣೆ ಇಳಿಕೆಯಾಗದೆ ಮುಂದುವರಿಯುತ್ತಿದೆ.
ಗುಟ್ಕಾ ಹಾಗೂ ಅಡಿಕೆಯ ಮೇಲೆ ಜಿಎಸ್‌ಟಿ ಇಲಾಖೆ ಕಣ್ಣು ಇರಿಸಿದೆ. ನಿರೀಕ್ಷಿತ ಪ್ರಮಾಣದಲ್ಲಿ ಈ ಬಾರಿ ಅಡಿಕೆಯಿಂದ ಜಿಎಸ್‌ಟಿ ಸಂಗ್ರಹವಾಗಿಲ್ಲ. ಹೀಗಾಗಿ ವಿವಿಧ ಕಂಪನಿಗಳ ಮೇಲೆ, ಅಡಿಕೆ ದಾಸ್ತಾನು ಮಳಿಗೆಗಳ ಮೇಲೆ, ವ್ಯಾಪಾರಿಗಳ ಮೇಲೆ ಮುಂಬಯಿ ಹಾಗೂ ಹಲವು ಕಡೆ ಜಿಎಸ್ ಟಿ ದಾಳಿ ನಡೆಸಿದೆ. ಹೀಗಾಗಿ ಅಡಿಕೆ ಸರಾಗವಾಗಿ ಸಾಗಾಟವಾಗುತ್ತಿಲ್ಲ. ಇಲಾಖೆಗಳು ಅಡಿಕೆ ಬೆಳೆಯುವ ಪ್ರದೇಶ, ಉತ್ಪಾದನೆ ಹಾಗೂ ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸಿದೆ. ತೋಟಗಾರಿಕೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ 2020-21ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲಿ 1.2 ಲಕ್ಷ ಹೆಕ್ಟೇರ್ ಅಡಿಕೆ ತೋಟಗಳಲ್ಲಿ 1.28 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದೆ. ಇದೇ ಸಮಯದಲ್ಲಿ ಕೃಷಿ ಮಾರಾಟ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯ ಎಲ್ಲ ಎಪಿಎಂಸಿಗಳಿಗೆ 2020-21ರಲ್ಲಿ 68.70 ಸಾವಿರ ಟನ್ ಅಡಿಕೆ ಆವಕವಾಗಿದೆ. ಅಂದರೆ ಜಿಲ್ಲೆಯಲ್ಲಿ ಉತ್ಪಾದನೆಯಾದ ಅಡಿಕೆಯ ಅರ್ಧದಷ್ಟು ಪ್ರಮಾಣ ಮಾತ್ರ ಎಪಿಎಂಸಿಗಳಿಗೆ ಬಂದಿದೆ. ಎಲ್ಲಾ ಲೆಕ್ಕಾಚಾರದ ಬಳಿಕವೂ ಉತ್ಪಾದನೆಯಾದ ಅಡಿಕೆಯ ಅರ್ಧಪಾಲು ಅಡಿಕೆ ಕಳ್ಳಸಾಗಾಣಿಕೆಯ ಮೂಲಕ ಹೋಗಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಅಡಿಕೆ ಪ್ರಕಾರ ವಾರ್ಷಿಕ ಸುಮಾರು 500 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಬೇಕು. ಆದರೆ, ವಾರ್ಷಿಕ 5 ಕೋಟಿ ರೂ. ಸಹ ಜಿಎಸ್‌ಟಿ ಸಂಗ್ರಹವಾಗುತ್ತಿಲ್ಲ. ಹೀಗಾಗಿ ಜಿಎಸ್‌ಟಿ ದಾಳಿ ನಡೆಯುತ್ತಿದೆ. ಹೀಗಾಗಿ ಅಡಿಕೆ ಮಾರುಕಟ್ಟೆ ಸದ್ಯ ಸದ್ದಿಲ್ಲದೆ ಕುಳಿತಿದೆ. ಧಾರಣೆ ಇಳಿಕೆಯೂ ಆಗದೆ, ಏರಿಕೆಯೂ ಆಗದೆ ನಿಂತಿದೆ.
ಇದೇ ವೇಳೆ ಬರ್ಮಾನಿಂದ ಅಡಿಕೆಯು ತ್ರಿಪುರಾ, ಅಸ್ಸಾಂ ಮೂಲಕದೇಶದೊಳಗೆ ಅಡಿಕೆ ಮಾದು ಆಗುತ್ತಲೇ ಇದೆ. ಗುರುವಾರ ಅಸ್ಸಾಂ ಹೈಲಕಂಡಿಯಲ್ಲಿ ಬರ್ಮಾ ಅಡಿಕೆ ಸಾಗಿಸುತ್ತಿದ್ದ ಟ್ರಕ್ ವಶಪಡಿಸಿಕೊಳ್ಳಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 50 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯಲ್ಲಿ ಮಿಜೋರಾಂನ ಅಂತರರಾಜ್ಯ ಗಡಿ ಸಮೀಪದ ಹೈಲಕಂಡಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಬಿದಿರಿನ ಕೆಳಗೆ ಗೋಣಿಚೀಲಗಳಲ್ಲಿ ಅಡಿಕೆಯನ್ನು ಬಚ್ಚಿಟ್ಟಿದ್ದರು. ಶನಿವಾರ ಮತ್ತೆ ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ಲಾರಿಯಲ್ಲಿ ಪ್ರತ್ಯೇಕವಾದ ಚೇಂಬರ್ ರಚನೆ ಮಾಡಿ ಸುಮಾರು 1000 ಕೆಜಿ ಅಡಿಯನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಅದನ್ನು ಕೂಡಾ ಪೊಲೀಸರು ಪತ್ತೆ ಮಾಡಿದ್ದಾರೆ.
ತ್ರಿಪುರಾದಲ್ಲಿ ಅಡಿಕೆ ಬೆಳೆಗಾರರ ಗುಂಪುನ್ನು ಬಳಸಿಕೊಳ್ಳುತ್ತಿರುವ ಅಡಿಕೆ ಸಾಗಾಣಿಕಾ ತಂಡವು ಬರ್ಮಾ ಅಡಿಕೆಯನ್ನು ತ್ರಿಪುರಾ ಮೂಲಕ ತಂದು ಸ್ಥಳೀಯ ಅಡಿಕೆ ಎಂದು ದೇಶದಾದ್ಯಂತ ಸಾಗಾಟ ಮಾಡಲು ಪ್ರಯತ್ನ ಪಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಆದರೆ ಅಸ್ಸಾಂ ಸರ್ಕಾರವು ಅಡಿಕೆ ಸಾಗಾಣಿಕೆಗೆ ತೀರಾ ನಿರ್ಬಂಧ ಹೇರಿರುವುದು ಭಾರತದ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಸದ್ಯ ಕಾರಣವಾಗುತ್ತಿದೆ.
ಮಿಜೋರಾಂ ರಾಜ್ಯದಲ್ಲಿ ಕೂಡಾ ಅಡಿಕೆ ಸಾಗಾಟದ ಬಗ್ಗೆ ತೀವ್ರ ನಿಗಾ ಇರಿಸಲಾಗುತ್ತಿದೆ. ರಾಜ್ಯದಲ್ಲಿ ಮಾದಕ ದ್ರವ್ಯ ಮತ್ತು ಇತರ ನಿಷಿದ್ಧ ವಸ್ತುಗಳ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಿಜೋರಾಂ ಸರ್ಕಾರ ನಿರ್ಧರಿಸಿದೆ. ಈ ಸಭೆಯಲ್ಲಿ ಬರ್ಮಾ ಅಡಿಕೆ ಮತ್ತು ಇತರ ನಿಷಿದ್ಧ ಪದಾರ್ಥಗಳನ್ನು ಕಳ್ಳಸಾಗಣೆ ಚಟುವಟಿಕೆಗಳನ್ನು ತಡೆಯಲು ನಿರ್ಧರಿಸಿದೆ. ಪಶ್ಚಿಮ ಮಿಜೋರಾಂನ ಮಮಿತ್ ಜಿಲ್ಲೆಯಲ್ಲಿ ಕಳ್ಳಸಾಗಣೆ ಮಾಡಲಾದ ಬರ್ಮಾದ ಅಡಿಕೆಗಳನ್ನು ಸಾಗಿಸುತ್ತಿದ್ದ ಆರು ವಾಹನಗಳನ್ನು ಸುಟ್ಟುಹಾಕಿದ ನಂತರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬರ್ಮಾ ಅಡಿಕೆ ಕಳ್ಳಸಾಗಣೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಿಜೋರಾಂ ಮುಖ್ಯಮಂತ್ರಿಗಳನ್ನು ಸ್ಥಳೀಯರು ಒತ್ತಾಯಿಸಿದ್ದರು.
ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ತಡೆಯಲು ಅಸ್ಸಾಂ ಹಾಗೂ ಸ್ಥಳೀಯವಾಗಿ ಬೆಳೆದ ಅಡಿಕೆಯನ್ನು ಸಾಗಿಸಿ ಮಾರಾಟ ಮಾಡುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಕೃಷಿಕರು ಒತ್ತಾಯಿಸಿದ್ದಾರೆ. ಹೀಗಾಗಿ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಸ್ಥಳೀಯ ಅಡಿಕೆಯನ್ನು ಅಸ್ಸಾಂಗೆ ಸಾಗಿಸಲು ಸಾಧ್ಯವಾಗದ ಕಾರಣ ಕಳ್ಳಸಾಗಣೆ ಬರ್ಮಾ ಅಡಿಕೆಯಿಂದಾಗಿ ಅವರ ಮಾರುಕಟ್ಟೆಗಳು ಕೆಟ್ಟ ಪರಿಣಾಮ ಬೀರಿವೆ ಎಂದು ಅಸ್ಸಾಂ ಅಡಿಕೆ ಬೆಳೆಗಾರರು ಒತ್ತಾಯಿಸಿದ್ದಾರೆ.
ಇದೆಲ್ಲಾ ಕಾರಣದಿಂದ ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಬೇಡಿಕೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆ ಇದ್ದರೂ ಅಡಿಕೆ ಸೇಲ್ ಕಡಿಮೆಯಾಗಿರುವುದರಿಂದ ಸದ್ಯ ಧಾರಣೆಯಲ್ಲಿ ಸ್ಥಿರತೆ ಅಥವಾ ಇಳಿಮುಖದ ಹಾದಿಯಲ್ಲಿ ಸಾಗಿದೆ. ಈ ಸ್ಥಿತಿ ಇನ್ನು 15-20 ದಿನಗಳ ಕಾಲ ಇರಬಹುದು ಎನ್ನುವುದು ಮಾರುಕಟ್ಟೆಯ ಒಳಗಿನ ಅಭಿಪ್ರಾಯ. ಈ ಪರಿಸ್ಥಿತಿ ಬದಲಾದ ತಕ್ಷಣವೇ ಅಡಿಕೆ ಧಾರಣೆ ಏರಿಕೆಯಾಗಲಿದೆ ಎನ್ನುವುದು ನಿರೀಕ್ಷೆ. ಇದಕ್ಕಾಗಿ ಸುಮಾರು ಒಂದು ತಿಂಗಳು ನಿರೀಕ್ಷೆ ಬೇಕಾಗಬಹುದು. ಆದರೆ ಈ ಬಾರಿ ಅಡಿಕೆ ಧಾರಣೆ ವಿಪರೀತವಾಗಿ ಏರಿಕೆಯಾಗದಂತೆ ತಡೆಯುವ ಸಾಧ್ಯತೆ ಇದೆ. ವಿಪರೀತ ಏರಿಕೆಯಿಂದ ಕಳ್ಳಸಾಗಾಣಿಕೆ ಹೆಚ್ಚುತ್ತದೆ ಹಾಗೂ ಧಾರಣೆ ಅಸ್ಥಿರತೆಯು ಸಂಸ್ಥೆಗಳಿಗೆ, ವ್ಯಾಪಾರಿಗಳಿಗೂ ಸಮಸ್ಯೆಯಾಗುತ್ತದೆ. ವಿಪರೀತ ಧಾರಣೆ ಏರಿಕೆ ಬೆಳೆಗಾರರಿಗೂ ಸಂಕಷ್ಟವೇ. ಈ ಎಲ್ಲಾ ಕಾರಣದಿಂದ ಈ ಬಾರಿಯ ಹೊಸ ಅಡಿಕೆ 450 ರೂಪಾಯಿಗಿಂತ ಹೆಚ್ಚಿನ ನಿರೀಕ್ಷೆ ಸದ್ಯಕ್ಕೆ ಇಲ್ಲ. ಹಳೆ ಅಡಿಕೆ ಧಾರಣೆ 500 ರೂಪಾಯಿಗಿಂತ ಹೆಚ್ಚಿನ ನಿರೀಕ್ಷೆ ಸದ್ಯ ಇಲ್ಲ ಎಂದು ವ್ಯಾಪಾರಿ ವಲಯ ಹೇಳುತ್ತಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…