ವಿಶೇಷ ವರದಿಗಳು

ಅಡಿಕೆ ಧಾರಣೆ ಜಿಗಿತ | ಏನಿದು ಕರಾಮತ್ತು ? ಏನಾಗಬಹುದು ಧಾರಣೆ ? | ಧಾರಣೆಯ ಬೆಳವಣಿಗೆಯ ಬಗ್ಗೆ ಬೆಳೆಗಾರರಲ್ಲಿ ಎಚ್ಚರ ಅಗತ್ಯ |

Share

ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆ ಸೇರಿದಂತೆ ಎಲ್ಲಾ ಬಗೆಯ ಅಡಿಕೆಯ ಧಾರಣೆಯೂ ಈಗ ಏರಿಕೆ ಕಾಣುತ್ತಿದೆ. ಹೀಗಾಗಿ ಬೆಳೆಗಾರರಿಗೆಲ್ಲಾ ಸಂತಸ ಇದ್ದೇ ಇದೆ. ಅದರ ಜೊತೆಗೇ ಅಪಾಯಕಾರಿ ಧಾರಣೆಯ ಕಡೆಗೂ ಗಮನಹರಿಸಬೇಕಾದ್ದು ಅಗತ್ಯವಾಗಿದೆ. ಮಾರುಕಟ್ಟೆಯಲ್ಲಿ  ಬೇಡಿಕೆ ಹಾಗೂ ಪೂರೈಕೆಯ ರೇಶಿಯೋ ಕೂಡಾ ಸರಿಯಾಗಿಲ್ಲದೇ ಇರುವುದು ಕಾಣುತ್ತಿದೆ.

ಸದ್ಯ ದೇಶದಲ್ಲಿ  ಸುಮಾರು 10 ಲಕ್ಷ ಟನ್‌ ಅಡಿಕೆ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಆರಂಭದಲ್ಲಿ  ದ ಕ ಜಿಲ್ಲೆ ಅಡಿಕೆ ಹೆಚ್ಚು ಬೆಳೆಯುವ ಪ್ರದೇಶವಾಗಿದ್ದರೆ ಈಚೆಗೆ ದಾವಣಗೆರೆಯಲ್ಲೂ ಅಷ್ಟೇ ಪ್ರಮಾಣದ ಅಡಿಕೆ ಬೆಳೆಯಲಾಗುತ್ತಿದೆ. ಸದ್ಯ ಅಡಿಕೆಯಲ್ಲಿ  ಕೆಂಪಡಿಕೆ, ಚಾಲಿ ಅಡಿಕೆಯೇ ಪ್ರಮುಖವಾದ ಮಾರುಕಟ್ಟೆ. ಕಳೆದ ಒಂದು ವರ್ಷದಿಂದ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿಯೇ ಸಾಗಿದೆ. ಎರಡು ವರ್ಷಗಳ ಹಿಂದೆ ಇದೇ ಅವಧಿಯಲ್ಲಿ  ಇದ್ದ ಧಾರಣೆಗೂ ಈಗ ಇರುವ ಧಾರಣೆಗೂ ಸರಿಸುಮಾರು ಎರಡು ಪಟ್ಟು ಹೆಚ್ಚಿದೆ. ಇದಕ್ಕೆ ಕಾರಣ ಕೊರೋನಾ ಹಾಗೂ ದೇಶದ ಗಡಿಗಳಲ್ಲಿ  ಬಿಗಿಭದ್ರತೆ ಪ್ರಮುಖ ಕಾರಣವಾಗಿದೆ. ಅಡಿಕೆ ಆಮದು ಸಂಪೂರ್ಣ ತಡೆಯಾಗುತ್ತಿದೆ. ಬಾಂಗ್ಲಾ, ಅಸ್ಸಾಂ ಗಡಿ ಮೂಲಕ ಅಡಿಕೆ ಕಳ್ಳ ಸಾಗಾಣಿಕೆಗೆ ಬಹುತೇಕ ತಡೆಯಾಗಿದೆ, ಹೀಗಾಗಿ ಶ್ರೀಲಂಕಾ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಪ್ರಯತ್ನ ನಡೆದು ಅಲ್ಲೂ ತಡೆಯಾಗಿದೆ.

ಹೀಗಾಗಿ ದೇಶದ ಅಡಿಕೆ ಧಾರಣೆ ಏರಿಕೆಯಲ್ಲಿದೆ. ಆದರೆ ಬೇಡಿಕೆ ಹಾಗೂ ಪೂರೈಕೆ ಗಮನಿಸಿದರೆ ಈ ರೇಶೀಯೋ ಕೂಡಾ ಸರಿಯಾಗಿಲ್ಲ. ಅಡಿಕೆ ಬೇಡಿಕೆಯಷ್ಟು ಪೂರೈಕೆ ಇದೆ, ಆದರೆ ದಾಸ್ತಾನು ಮಾತ್ರಾ ಕಳೆದ ಆರು ತಿಂಗಳಿನಿಂದ ನಡೆಯುತ್ತಿಲ್ಲ. ಧಾರಣೆಯ ಏರಿಕೆ ಕಾರಣದಿಂದ ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನು ಇರಿಸಲು ವ್ಯಾಪಾರಿಗಳು, ದಾಸ್ತಾನುದಾರರು ಮನಸ್ಸು ಮಾಡಿಲ್ಲ, ಈಗಲೂ ಈ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಅಡಿಕೆ ತಿನ್ನುವ ಮಂದಿಯೂ ಪ್ರಮಾಣ ಕಡಿಮೆ ಮಾಡಿದ್ದಾರೆ. ಹಾಗಿದ್ದರೆ ಅಡಿಕೆ ಧಾರಣೆ ಏಕೆ ಏರಿಕೆಯಾಗುತ್ತಿದೆ ?ಇದೇ ಧಾರಣೆ ಉಳಿಯಬಲ್ಲುದೇ ? ಎಂಬುದು  ಬಹುದೊಡ್ಡ ಪ್ರಶ್ನೆಯಾಗಿದೆ.

ಕೆಂಪಡಿಕೆಯ ಧಾರಣೆ ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದೆ. ಕಳೆದ ವಾರದ ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಂಪಡಿಕೆಗೆ ಕ್ವಿಂಟಾಲ್‌ ಗೆ ಗರಿಷ್ಠ  53,500 ರೂ. ನಮೂದಾಗಿತ್ತು, ಈಗ ಈ ಧಾರಣೆ ಮತ್ತೆ ಏರಿಕೆಯ ಹಾದಿಯಲ್ಲಿದೆ.  ಒಮ್ಮೆಲೇ ಕ್ವಿಂಟಾಲ್‌ಗೆ ಮೂರು ಸಾವಿರ ರೂ. ಹೆಚ್ಚಳ ಆಗಿದ್ದು ಹೊಸ ದಾಖಲೆಯಾಗಿತ್ತು ಕೂಡಾ. ಈ ಮಾದರಿಯಲ್ಲಿ  ಈ ಹಿಂದೆ ಏರಿಕೆ ಆದ ಉದಾಹರಣೆಗಳಿಲ್ಲ.

ಹೀಗೆ ಧಾರಣೆ ಏರಿಕೆ ಮಾಡಿ ಯಾರು ಖರೀದಿ ಮಾಡುತ್ತಾರೆ ಹಾಗೂ ಎಲ್ಲಿ ಬಳಕೆಯಾಗುತ್ತದೆ ಎನ್ನುವುದೂ ದಾಖಲೆಗಳಿಲ್ಲ. ಆದರೆ ಧಾರಣೆಗೆ ಏರಿಕೆಗೆ ಒಂದೇ ಉತ್ತರ , ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು  ಬಹುತೇಕ ಕಡಿವಾಣ ಹಾಕಿದ್ದು ಕಾರಣ ಎಂದು ವ್ಯಾಪಾರಿ ಮೂಲಗಳು ತಿಳಿಸುತ್ತವೆ. ಆದರೆ ಎಲ್ಲಾ ವ್ಯಾಪಾರಿಗಳು ಈ ರೀತಿಯ ಧಾರಣೆಯಲ್ಲಿ  ಖರೀದಿಯೂ ಮಾಡುತ್ತಿಲ್ಲ. ಕೆಲವೇ ಕೆಲವು ಮಂದಿ ಮಾತ್ರಾ ಧಾರಣೆ ಏರಿಕೆ ಮಾಡಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಇದೊಂದು ಕೃತಕವಾಗಿ ಏರಿಕೆ ಮಾಡುವ ಧಾರಣೆ ಎನ್ನುವುದು  ಈಗ ಅನುಮಾನ ಮೂಡಿದೆ. ವಿಪರೀತ ಧಾರಣೆ ಏರಿಕೆಯ ಬಳಿಕ ಕೆಲ ವ್ಯಾಪಾರಿಗಳನ್ನು, ಸಂಸ್ಥೆಗಳನ್ನು  ಮಗಿಸುವ ವ್ಯವಸ್ಥಿತ ಹುನ್ನಾರವೂ ಇದರಲ್ಲಿದೆ ಎನ್ನುವುದು ಈಗ ಮೂಡಿರುವ ಸಂದೇಹವಾಗಿದೆ.

ಈಗ ಚಾಲಿ ಅಡಿಕೆ ಧಾರಣೆಯೂ ಏರಿಕೆ ಕಾಣುತ್ತಿದೆ. ಹಳೆ ಅಡಿಕೆ 505-510 ರೂಪಾಯಿ ಆಸುಪಾಸಿನಲ್ಲಿ  ಖರೀದಿಯಾದರೆ ಹೊಸ ಅಡಿಕೆ  470-475  ರೂಪಾಯಿಗೆ ಖರೀದಿಯಾಗುತ್ತಿದೆ. ಇಲ್ಲೂ ಕೂಡಾ ಸ್ಥಿರವಾಗಿದ್ದ ಧಾರಣೆ ಈಗ ಏರಿಕೆ ಕಾಣುತ್ತಿದೆ. ಈಗಿನ ಮಾರುಕಟ್ಟೆ ಟ್ರೆಂಡ್‌ ಪ್ರಕಾಋ ಗಣೇಶ ಚೌತಿ ಬಳಿಕ 480-490  ರೂಪಾಯಿವರೆಗೂ ತಲಪುವ ಸಾಧ್ಯತೆ ಇದೆ. ಇದು ಕೂಡಾ ಅಪಾಯಕಾರಿ ಮಾರುಕಟ್ಟೆ ಸ್ಥಿತಿಗೆ ತಲುಪುತ್ತಿದೆ. ನವೆಂಬರ್‌ ಬಳಿಕ ಅಡಿಕೆ ಧಾರಣೆ ಯಾವ ಸ್ಥಿತಿಗೆ ಬಂದು ನಿಲ್ಲುತ್ತದೆ ಎನ್ನುವ ಆತಂಕ ಮಾರುಕಟ್ಟೆ ವಲಯದಲ್ಲಿ ಆರಂಭವಾಗಿದೆ. ಹೀಗಾಗಿ ಅಡಿಕೆ ದಾಸ್ತಾನು ಮಾಡುವ ವ್ಯಾಪಾರಿಗಳು ಇಲ್ಲೂ ಕಡಿಮೆಯಾಗಿದ್ದು  ಬೇಡಿಕೆ-ಪೂರೈಕೆಯಲ್ಲೂ ವ್ಯತ್ಯಾಸ ಇದೆ. ಹೀಗಾಗಿ ಸದ್ಯ ಮಾರುಕಟ್ಟೆ ಏರಿಕೆಯಲ್ಲಿದೆ. ಒಂದು ವೇಳೆ ಅಡಿಕೆ ಆಮದು ವಹಿವಾಟು ನಡೆದರೆ ಚಾಲಿ ಅಡಿಕೆ ಧಾರಣೆ ಹಿಂದಿನ ಧಾರಣೆಯತ್ತ ಬರುವ ಆತಂಕವನ್ನು ವ್ಯಾಪಾರಿ ವಲಯ ವ್ಯಕ್ತಪಡಿಸಿದೆ. ಅಡಿಕೆ ಮಾರುಕಟ್ಟೆ ಯಾವತ್ತೂ ಸ್ಥಿರವಾಗಿದ್ದರೆ ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಅನುಕೂಲವಾಗಿರುತ್ತದೆ.

ಈಗಾಗಲೇ ಈ ಧಾರಣೆಯ ಸಂತಸದಿಂದ ಅಡಿಕೆ ತೋಟದ ವಿಸ್ತರಣೆಯೂ ನಡೆಯುತ್ತಿದೆ. ಮಲೆನಾಡಿನಲ್ಲಿ ಮಾತ್ರಾ ಬೆಳೆಯುತ್ತಿದ್ದ ಅಡಿಕೆ ಈಗ ಬಯಲು ಸೀಮೆಯಲ್ಲೂ ತಲಪಿದೆ. ಸಾಕಷ್ಟು ಕಡೆ ಅಡಿಕೆ ಬೆಳೆಯನ್ನು ಮಾಡಲಾಗುತ್ತಿದೆ. ಈ ಧಾರಣೆಯನ್ನು  ನಂಬಿ ಅಡಿಕೆ ಬೆಳೆದು ಕೈ ಸುಟ್ಟುಕೊಳ್ಳುವ ಸಾಹಸಕ್ಕೆ ಹೋಗಬೇಡಿ ಎಂದು ಅಡಿಕೆ ಬೆಳೆ ಅಧ್ಯಯನ ತಂಡಗಳು ಹೇಳುತ್ತವೆ. ಈಗಾಗಲೇ ಇಡೀ ದೇಶ ಬೇಡಿಕೆ ಪೂರೈಕೆ ಮಾಡುವಷ್ಟು ಅಡಿಕೆ ತೋಟಗಳು ವಿಸ್ತರಣೆ ಆಗಿವೆ. ಕೇವಲ ತಿಂದು ಉಗುಳುವ ಅಡಿಕೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಮುಂದೆ ಕೃಷಿಕರಿಗೇ ಸಂಕಷ್ಟ ಎನ್ನುವುದು  ಅಧ್ಯಯನ ತಂಡದ ಮಾಹಿತಿ. ಇದೇ ವೇಳೆ ಚಿತ್ರದುರ್ಗ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದ ಕಾರಣದ ಕಾರಣದಿಂದ ದಾಳಿಂಬೆ ಮತ್ತಿತರ ತೋಟಗಾರಿಕೆ ಬೆಳೆಗಳಿಂದ ಅಡಿಕೆ ಕೃಷಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

ಇಷ್ಟೆಲ್ಲಾ ಅಡಿಕೆ ಧಾರಣೆಯ ಏರಿಕೆ ನಡುವೆಯೂ ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಈಚೆಗೆ ನೀಡಿದ ಹೇಳಿಕೆಯಲ್ಲಿ  ಅಡಿಕೆಗೆ ಶಾಶ್ವತ ರಕ್ಷಣೆ ನೀಡುವುದು ಸಾಧ್ಯವಿಲ್ಲ. ಆಯಾ ಕಾಲಘಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಸಾಧ್ಯವಾದಷ್ಟು ಮಟ್ಟಿಗೆ  ಅಡಿಕೆ ಮತ್ತು ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ಧಾರಣೆಯ ಬಗ್ಗೆ ತೀರಾ ಗಮನ ವಹಿಸಬೇಕಾದ್ದು ಅವಶ್ಯವಾಗಿದೆ. ಅಡಿಕೆ ಮಾರುಕಟ್ಟೆಯು ಕೆಲವೊಮ್ಮೆ ಯಾವುದೇ ಸಂಸ್ಥೆಗಳ ಹಿಡಿತದಲ್ಲಿ  ಇಲ್ಲದೇ ಇರುವುದೂ ಸ್ಪಷ್ಟವಾಗಿದೆ. ಹೀಗಾಗಿ ಈಗಾಗಲೇ ಉತ್ತಮ ಅಡಿಕೆ ಧಾರಣೆ ಇರುವುದರಿಂದ ಅಡಿಕೆ ಬೆಳೆಗಾರರು  ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳುವುದಕ್ಕಿಂತ ಇರುವ ಮಾರುಕಟ್ಟೆ ಸ್ಥಿರತೆಯತ್ತಲೇ ಹೆಚ್ಚು ಗಮನಹರಿಸುವುದು ಹಾಗೂ ಅಗತ್ಯಕ್ಕೆ ತಕ್ಕಂತೆ ಅಿಕೆ ಮಾರಾಟ ಮಾಡುವುದು ಈಗಿನ ಬುದ್ದಿವಂತಿಕೆಯಾಗಿದೆ.
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ

ಗುಜ್ಜೆ ಶೇಂಗಾ ಪಲ್ಯ ಮಾಡುವ ವಿಧಾನ...

3 hours ago

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

11 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

11 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

12 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

1 day ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

1 day ago