ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದಂತೆಯೇ ಭಾರತ ಮಾತ್ರವಲ್ಲ ವಿವಿಧ ದೇಶಗಳಲ್ಲೂ ಅಡಿಕೆ ಮೇಲೆ ನಿಗಾ ಇಡಲಾಗಿದೆ. ಈಚೆಗೆ ಪಾಕಿಸ್ತಾನದಲ್ಲೂ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ 7 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಕಸ್ಟಮ್ಸ್ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಅಡಿಕೆ ಧಾರಣೆ ಏರಿಕೆಯಾಗಿರುವುದು ಹಾಗೂ ಆ ಬಳಿಕ ಅಡಿಕೆ ಕಳ್ಳಸಾಗಾಣಿಕೆ ಬಗ್ಗೆ ಎಲ್ಲೆಡೆಯೂ ನಿಗಾ ವಹಿಸಲಾಗಿತ್ತು. ಈಚೆಗೆ ಪಾಕಿಸ್ತಾನದಲ್ಲೂ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವ ಬಗ್ಗೆಯೂ ವರದಿಯಾಗಿದೆ. ಅಪ್ಘಾನ್ ಮೂಲಕವೂ ಅಡಿಕೆ ಸಾಗಾಟವಾಗುತ್ತಿರುವ ಬಗ್ಗೆಯೂ ಆಗಸ್ಟ್ ತಿಂಗಳಲ್ಲಿ ವರದಿಯಾಗಿತ್ತು. ಅದಾದ ನಂತರ ಬೇರೆ ಮಾರ್ಗಗಳ ಮೂಲಕ ಅಡಿಕೆ ಕಳ್ಳದಾರಿಯ ಮೂಲಕ ಪಾಕಿಸ್ತಾನಕ್ಕೆ ಆಮದು ಆಗುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಪಾಕಿಸ್ತಾನದ ಕಸ್ಟಮ್ಸ್ ಇಲಾಖೆಯು ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿತ್ತು. ಈ ಸಂದರ್ಭ ಸುಮಾರು ಏಳು ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಸೆ 18 ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 48 ಸಾವಿರ ಕೆಜಿ ಅಡಿಕೆ ವಶಪಡಿಸಿಕೊಂಡಿದ್ದರು. ಒಟ್ಟು 30 ದಿನಗಳಲ್ಲಿ 13 ಕೋಟಿ ರೂಪಾಯಿಗೂ ಮಿಕ್ಕಿದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹೀಗೆ ವಶಪಡಿಸಿಕೊಂಡ ಅಡಿಕೆಯ ವಿದೇಶಿ ಅಡಿಕೆ ಎಂದಷ್ಟೇ ದಾಖಲಾಗಿದ್ದು ಎಲ್ಲಿಯ ಅಡಿಕೆ ಎಂಬವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿಯಲ್ಲಿ ತಿಳಿಸಿವೆ. ಪಾಕಿಸ್ತಾನದಲ್ಲಿ ಅಡಿಕೆ ಬಳಕೆಯ ವಿವಿಧ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಗುಟ್ಕಾ ಮೊದಲಾದ ವಸ್ತುಗಳ ತಯಾರಿಕೆ ಅಲ್ಲಿ ನಡೆಯುತ್ತದೆ.