ಅಡಿಕೆ ಆಮದು ಆತಂಕ ತಾತ್ಕಾಲಿಕವಾಗಿದ್ದು ಯಾವುದೇ ರೈತರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅಡಿಕೆಗೆ ಬೇಡಿಕೆಯಲ್ಲಿನ ಹಿನ್ನಡೆ ತಾತ್ಕಾಲಿಕವಾಗಿದ್ದು , ರೈತರು ಆತಂಕಪಡಬೇಕಾಗಿಲ್ಲ. ಪ್ರತೀವರ್ಷ ವಿದೇಶದಿಂದ ಅಡಿಕೆ ಆಮದು ಆಗುತ್ತಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದ ಅಡಿಕೆ ಇದುವರೆಗೆ ಆಮದು ಆಗಿರುತ್ತದೆ. ಇದರಿಂದ ರೈತರು ಆತಂಕ ಪಡಬೇಕಾಗಿಲ್ಲ. ಆದರೆ ಅಡಿಕೆ ಆಮದು ತಡೆಗೆ ಕ್ಯಾಂಪ್ಕೋ ಸರ್ವರೀತಿಯಲ್ಲೂ ಪ್ರಯತ್ನಿಸುತ್ತಿದ್ದು ಕೇಂದ್ರ ಸರ್ಕಾರದ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಉತ್ತರಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ಇರುವುದರಿಂದ ಕರಾವಳಿ ಭಾಗದ ಅಡಿಕೆಯ ಬೇಡಿಕೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ ಅಷ್ಟೇ. ಮುಂದಿನ ಕೆಲದಿನಗಳಲ್ಲಿ ಸಮಸ್ಯೆ ಪರಿಹಾರದ ನಿರೀಕ್ಷೆಯಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆ ಸಮೀಕ್ಷೆ ಪ್ರಕಾರ, ಉತ್ತರ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಮುಂಗಾರು ಪ್ರಾರಂಭವಾಗಿ ಉತ್ತರ ಭಾರತಲ್ಲಿ ಉಷ್ಣತೆ ಕಡಿಮೆಯಾಗಲಿದ್ದು, ಅಡಿಕೆಗೆ ಉತ್ತಮ ಬೇಡಿಕೆ ಬರುವ ಎಲ್ಲಾ ಅವಕಾಶಗಳಿರುವುದರಿಂದ ಬೇಡಿಕೆಯಲ್ಲಿ ಚೇತರಿಕೆ ಕಾಣಲಿದೆ. ಹಾಗಾಗಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಮತ್ತು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ, ಅಗತ್ಯ ಖರ್ಚಿಗೆ ಬೇಕಾಗುವಷ್ಟೇ ಅಡಿಕೆ ಮಾರಾಟ ಮಾಡುವಂತೆ ಕ್ಯಾಂಪ್ಕೋ ಅಧ್ಯಕ್ಷರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.