Advertisement
Opinion

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

Share

ಕರಾವಳಿ ಕರ್ನಾಟಕ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಇಂದು ಅಡಿಕೆ ಆಧಾರಿತ ಆರ್ಥಿಕ ವ್ಯವಸ್ಥೆಯ ಮೇಲೆ ನಿಂತಿದೆ. ಸಾವಿರಾರು ಕುಟುಂಬಗಳ ಬದುಕು, ಶಿಕ್ಷಣ, ಕೃಷಿ ಕೆಲಸ.. ಹೀಗೇ ಎಲ್ಲವೂ ಅಡಿಕೆ ಧಾರಣೆಯ ಏರಿಳಿತದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಹೀಗಿರುವಾಗ ಕಳೆದ ಒಂದು ತಿಂಗಳಿನಿಂದ ಅಡಿಕೆ ಮಾರುಕಟ್ಟೆಯಲ್ಲಿ ಕಾಣುತ್ತಿರುವ ಅನಿಶ್ಚಿತತೆ ಸಹಜವಾಗಿಯೇ ಕೃಷಿಕರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ವರ್ಷದ ಇಳುವರಿ ಕುಸಿತ ಈ ಬಾರಿ ವಾಣಿಜ್ಯ ವ್ಯವಹಾರದಲ್ಲಿ ಕಾಣಿಸಿದೆ. ಅಂದು ಅಡಿಕೆ ಧಾರಣೆ ಏರಿಕೆಯ ಪರಿಣಾಮ ಸಾಲು ಸಾಲು ನೂತನ ಜೀಪ್‌ ಖರೀದಿ ಮೂಲಕವೂ ಕಂಡಿತ್ತು…!

ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಆರಂಭವಾಗುತ್ತದೆ. ಮಾರ್ಚ್‌ ನಂತರ ಹೊಸ ಅಡಿಕೆ ಮಾರಾಟ ಪ್ರಕ್ರಿಯೆ ಶುರುವಾಗುತ್ತದೆ. ಮೇ ವೇಳೆಗೆ ಉತ್ತಮ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಇದೇ ಸಮಯದಲ್ಲಿ ವ್ಯಾಪಾರಿಗಳು ಹಾಗೂ ಸ್ಟಾಕಿಸ್ಟ್‌ಗಳು ದಾಸ್ತಾನು ಪ್ರಕ್ರಿಯೆ ಆರಂಭಿಸುತ್ತಾರೆ. ಕಳೆದ ಹಲವು ವರ್ಷಗಳ ಮಾರುಕಟ್ಟೆ ಟ್ರೆಂಡ್‌ ಕೂಡಾ ಅದನ್ನೇ ಹೇಳುತ್ತದೆ. ಆದರೆ ಈ ಬಾರಿ ಚಿತ್ರಣ ವಿಭಿನ್ನವಾಗಿದೆ. ಈ ವರ್ಷ ಅಡಿಕೆ ಇಳುವರಿ ಕುಸಿತದ ವರದಿಗಳು ಇದ್ದರೂ ನಿರೀಕ್ಷಿತ ಮಟ್ಟದ ಧಾರಣೆ ಏರಿಕೆ ಕಂಡುಬರಲಿಲ್ಲ.

ವಿಶೇಷವಾಗಿ ಕ್ಯಾಂಪ್ಕೊ ಸೇರಿದಂತೆ ಸಹಕಾರಿ ಸಂಸ್ಥೆಗಳ ಮೇಲೂ ರೈತರಿಗೆ ವಿಶ್ವಾಸವಿತ್ತು. ವಾಸ್ತವವಾಗಿ ಇಂದು ಕ್ಯಾಂಪ್ಕೊ ಹಾಗೂ ಅದೇ ಮಾದರಿಯ ಸಂಸ್ಥೆಗಳು ಇರುವುದರಿಂದಲೇ ಮಾರುಕಟ್ಟೆಯಲ್ಲಿ ಒಂದು ಮಟ್ಟದ ಸ್ಥಿರತೆ ಮತ್ತು ಉತ್ತಮ ಧಾರಣೆ ಉಳಿದಿದೆ ಎಂಬುದನ್ನು ಯಾರೂ ನಿರಾಕರಿಸಲಾಗದು. ಆದರೆ ಈಗ ಕೃಷಿಕರ ದೊಡ್ಡ ಪ್ರಶ್ನೆ ಏನೆಂದರೆ “ಧಾರಣೆ ಏರಿಕೆ ಯಾಕೆ ಆಗಲಿಲ್ಲ?”

ಅಡಿಕೆ ಮಾರುಕಟ್ಟೆಯ ಒಳಹೊಕ್ಕಾಗ ಅಲ್ಲಿನ ಮಾಹಿತಿಗಳ ಪ್ರಕಾರ, ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಚುನಾವಣಾ ಸಂದರ್ಭ ಮ್ಯಾನ್ಮಾರ್‌ (ಬರ್ಮಾ) ಮತ್ತು ಇಂಡೋನೇಷ್ಯಾದಿಂದ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಆಮದಾಗಿದೆ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ನಿರೀಕ್ಷಿಸಿದ್ದ ಮಟ್ಟದ ಧಾರಣೆ ಏರಿಕೆ ಕಾಣಿಸಲಿಲ್ಲ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಸಲದ ಮತ್ತೊಂದು ಪ್ರಮುಖ ಅಂಶ ಅಂದರೆ ಆಮದು ಅಡಿಕೆಯ ಗುಣಮಟ್ಟ. ಹಿಂದಿನಂತೆ ಕಳಪೆ ಗುಣಮಟ್ಟದ ಅಡಿಕೆ ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಆಮದು ಅಡಿಕೆಯೂ ಮಾರುಕಟ್ಟೆಗೆ ಬಂದಿದೆ ಎನ್ನಲಾಗುತ್ತಿದೆ. ಆದರೂ ಮಂಗಳೂರು ಚಾಲಿ ಅಡಿಕೆಯ ಗುಣಮಟ್ಟಕ್ಕೆ ಅದು ಸಮವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಾಪಾರ ವಲಯದಲ್ಲಿದೆ. ಆದರೆ ಕೆಲವು ಕಡೆ ಮಿಶ್ರ ರೂಪದಲ್ಲಿ ಬಳಕೆ ನಡೆಯುತ್ತಿರುವುದು ಸ್ಥಳೀಯ ಮಾರುಕಟ್ಟೆಗೆ ಒತ್ತಡ ತಂದಿದೆ. ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆ ಇದೆ, ಮೇ ತಿಂಗಳ ಬದಲಾಗಿ ಇನ್ನೂ ಕೆಲವು ದಿನಗಳ ನಂತರ ಏರಿಕೆಯಾಗಬಹುದು. ಆ ಹೊತ್ತಿಗೆ ಸಾಮಾನ್ಯ ಬೆಳೆಗಾರರ ಅಡಿಕೆಯೂ ಅರ್ಧ ಖಾಲಿಯಾಗಿರುತ್ತದೆ..!

ಇದರ ನಡುವೆ ಕೃಷಿಕರಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತಿದೆ. ಹಿಂದೆಯೂ ಅಡಿಕೆ ಆಮದು ಆಗಿತ್ತು. ಆದರೆ ಆ ಸಂದರ್ಭದಲ್ಲಿಯೂ ಚಾಲಿ ಅಡಿಕೆ ಕೊರತೆ ಇದ್ದಾಗ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಕಂಡಿತ್ತು. ಆದರೆ ಈ ಬಾರಿ ಆ ಟ್ರೆಂಡ್‌ ಮರುಕಳಿಸಲಿಲ್ಲ. ಖಾಸಗಿ ವ್ಯಾಪಾರಿಗಳು ಖರೀದಿಗೆ ಆಸಕ್ತಿ ತೋರಿದ್ದರೂ ಧಾರಣೆಯ ವೇಗ ಯಾಕೆ ಸೃಷ್ಟಿಯಾಗಲಿಲ್ಲ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಇಂದಿನ ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ತುಂಬಾ ವೇಗವಾಗಿ ಬದಲಾಗುತ್ತಿದೆ. ಆಮದು, ಗುಣಮಟ್ಟ, ಮಾರುಕಟ್ಟೆ, ಅಡಿಕೆ ಬೆಳೆ ವಿಸ್ತರಣೆ ಇತ್ಯಾದಿ ಎಲ್ಲವೂ ಹೊಸ ರೂಪ ಪಡೆಯುತ್ತಿವೆ. ಆದರೆ ನಮ್ಮ ಸಹಕಾರಿ ವ್ಯವಸ್ಥೆಗಳು ಮತ್ತು ಸಂಘಟನೆಗಳು ಇನ್ನೂ ಹಳೆಯ ಮಾದರಿಯ ಚಿಂತನೆಗಳಲ್ಲೇ ಸಿಲುಕಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಖಾಸಗಿ ಮಾರುಕಟ್ಟೆಯಂತೆ ಅಸ್ಥಿರತೆ ಎದುರಾಗುವ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಂಸ್ಥೆಗಳಿ ಅಡಿಕೆಯಿಂದ ಬೇರೆ ವಹಿವಾಟಿಗೆ ಬದಲಾಯಿಸಿಕೊಳ್ಳಬಹುದು, ಅಡಿಕೆ ಬೆಳೆಗಾರಿನಿಗೆ ಈಗ ತಕ್ಷಣಕ್ಕೆ ಬೆಳೆ ಬದಲಾಯಿಸಿಕೊಳ್ಳಲೂ ಸಾಧ್ಯವಿಲ್ಲ..!. ಅದು ದೀರ್ಘಪ್ರಕ್ರಿಯೆ.

ರೈತರ ಹಿತದೃಷ್ಟಿಯಿಂದ ಈಗ ಕೆಲವು ಮಹತ್ವದ ಬದಲಾವಣೆಗಳು ಅಗತ್ಯವಾಗಿವೆ. ಮಾರುಕಟ್ಟೆಯ ನೈಜ ಮಾಹಿತಿ ವಿಶ್ಲೇಷಣೆ, ಆಮದು ಮೇಲಿನ ಅಧ್ಯಯನ, ಗುಣಮಟ್ಟ ಆಧಾರಿತ ಪ್ರೀಮಿಯಂ ಮಾರುಕಟ್ಟೆ ನಿರ್ಮಾಣ, ರೈತರಿಗೆ ಪಾರದರ್ಶಕ ಮಾಹಿತಿ, ದಾಸ್ತಾನು ಮತ್ತು ರಫ್ತು ಕುರಿತ ಹೊಸ ತಂತ್ರಗಳು ಹಾಗೂ ಸಹಕಾರಿ ಸಂಸ್ಥೆಗಳ ಆಧುನಿಕ ಮಾರುಕಟ್ಟೆ ಚಿಂತನೆ ಅತ್ಯಗತ್ಯವಾಗಿದೆ.

ಅಡಿಕೆಯ ಬಗ್ಗೆ ವೈಜ್ಞಾನಿಕ ದಾಸ್ತಾನು ನೀತಿ ರೂಪಿಸಬೇಕಿದೆ. ಮಾರುಕಟ್ಟೆಗೆ ಒಂದೇ ಸಮಯದಲ್ಲಿ ಅತಿಯಾಗಿ ಅಡಿಕೆ ಬಾರದಂತೆ ತಡೆಯಾಗಬೇಕು. ರೈತರಿಗೆ ಕಡಿಮೆ ಬಡ್ಡಿದರ ಸಾಲ ನೀಡಿ ಅಡಿಕೆ ತಕ್ಷಣ ಮಾರಾಟ ಮಾಡದಂತೆ ನೆರವು ನೀಡಬೇಕು. ಜೊತೆಗೆ ಬರ್ಮಾ, ಇಂಡೋನೇಷ್ಯಾ ಸೇರಿದಂತೆ ಯಾವ ದೇಶದಿಂದ ಎಷ್ಟು ಅಡಿಕೆ ಬರುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ವ್ಯವಸ್ಥೆ ನಿರ್ಮಾಣ ಅಗತ್ಯವಾಗಿದೆ.

“ಮಂಗಳೂರು ಚಾಲಿ” ಅಡಿಕೆಗೆ ಜಾಗತಿಕ ಬ್ರಾಂಡ್‌ ನಿರ್ಮಾಣದತ್ತ ಗಂಭೀರ ಪ್ರಯತ್ನಗಳು ನಡೆಯಬೇಕಿದೆ. ಜಿಐ ಟ್ಯಾಗ್‌ ಮಟ್ಟದ ಬ್ರಾಂಡಿಂಗ್‌, ರಫ್ತು ಗುಣಮಟ್ಟದ ಪ್ರೊಸೆಸಿಂಗ್‌, ಸಣ್ಣ ಪ್ಯಾಕೇಜ್‌ ಆಧಾರಿತ ಮೌಲ್ಯವರ್ಧನೆ ಮತ್ತು ನೇರ ರಫ್ತು ತಂತ್ರಗಳು ಮುಂದಿನ ದಿನಗಳಲ್ಲಿ ಅತ್ಯಂತ ಮುಖ್ಯವಾಗಲಿವೆ.

ಇಂದು ಅನೇಕ ರೈತರು ವದಂತಿ ಆಧಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ದೇಶೀಯ ಮಾರುಕಟ್ಟೆ ಸ್ಥಿತಿ, ಆಮದು ಪ್ರಮಾಣ, ರಫ್ತು ಮಾಹಿತಿ ಅಧಿಕೃತವಾಗಿ ಪ್ರಕಟಿಸುವ ವ್ಯವಸ್ಥೆ ಅಗತ್ಯವಾಗಿದೆ. ಕ್ಯಾಂಪ್ಕೊ, MAMCOS, MASS ಸೇರಿದಂತೆ ವಿವಿಧ ಸಂಸ್ಥೆಗಳು ಪರಸ್ಪರ ಸ್ಪರ್ಧಿಸುವ ಬದಲು ಸಮನ್ವಯದ ಖರೀದಿ ನೀತಿ ರೂಪಿಸಬೇಕಾಗಿದೆ.

ಅಡಿಕೆ ಬಗ್ಗೆ ಭಾವನಾತ್ಮಕ ಭಾಷಣಗಳಿಗಿಂತ ಡೇಟಾ ಆಧಾರಿತ ನಿರ್ಧಾರಗಳು ಈಗ ಮುಖ್ಯವಾಗಿವೆ. ಯಾವ ತಿಂಗಳಲ್ಲಿ ಬೇಡಿಕೆ ಎಷ್ಟು? ಬಳಕೆ ಕುಸಿತ ಎಲ್ಲಿದೆ? ಆಮದು ಏಕೆ ಹೆಚ್ಚುತ್ತಿದೆ? ಇಂತಹ ಅಧ್ಯಯನಗಳಿಲ್ಲದೆ ಮಾರುಕಟ್ಟೆ ಹಿಡಿತ ಸಾಧ್ಯವಿಲ್ಲ. ಅಷ್ಟೇ ಅಲ್ಲ ಇಂದಿನ ಅಡಿಕೆ ಮಾರುಕಟ್ಟೆ ಕೇವಲ ಸ್ಥಳೀಯ ವ್ಯವಹಾರ ಅಲ್ಲ; ಅದು ಜಾಗತಿಕ ಟ್ರೇಡ್‌, ಡಿಜಿಟಲ್‌ ಮಾರುಕಟ್ಟೆ ಮತ್ತು ಕಮೋಡಿಟಿ ವಿಶ್ಲೇಷಣೆಯ ಭಾಗವಾಗಿದೆ. ಇದಕ್ಕಾಗಿ ಹೊಸತಂತ್ರಜ್ಞಾನ, ತಂತ್ರಗಳೂ ಬೇಕಾಗಿದೆ.

ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕಿಂತ ಅಪಾಯಕಾರಿ ವಿಷಯ “ರೈತರ ವಿಶ್ವಾಸ ಕುಸಿತ”. ಒಮ್ಮೆ ರೈತರಿಗೆ ಸಹಕಾರಿ ವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾದರೆ ಅದನ್ನು ಮರುಸ್ಥಾಪಿಸುವುದು ಬಹಳ ಕಷ್ಟ. ಈಗ ಅಡಿಕೆ ಕೇವಲ ಒಂದು ಬೆಳೆ ಅಲ್ಲ. ಕರಾವಳಿಯ ಸಾವಿರಾರು ಕುಟುಂಬಗಳ ಉಸಿರು. ಹೀಗಾಗಿ ಮಾರುಕಟ್ಟೆಯ ಪ್ರತಿಯೊಂದು ಚಲನವಲನವನ್ನು ದೂರದೃಷ್ಟಿಯೊಂದಿಗೆ, ವೈಜ್ಞಾನಿಕವಾಗಿ ಮತ್ತು ರೈತರ ಬದುಕಿನ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ಸಮಯ ಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut farmers in coastal Karnataka are facing uncertainty as expected price hikes have not materialized despite lower production this year. Increased imports from Myanmar and Indonesia, changing market dynamics, and lack of coordinated strategies among cooperative institutions are being seen as major reasons. Experts stress the need for scientific storage policies, transparent market intelligence, branding of “Mangalore Chali” arecanut, export-oriented strategies, and data-driven decisions to protect farmers and stabilize the market.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ ಅವಶೇಷ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

3 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

6 hours ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

11 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

18 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

1 day ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago